ಸಾಮಾನ್ಯವಾಗಿ ಲಿವರ್ ಅಥವಾ ಯಕೃತ್ತಿನ ಸಮಸ್ಯೆ ಎಂದಾಗ ಮೊದಲು ನೆನಪಿಗೆ ಬರುವುದು ಮದ್ಯಪಾನ. ಯಕೃತ್ತು ಹಾನಿಯಾಗಲು ಮದ್ಯಪಾನವೇ ಪ್ರಮುಖ ಕಾರಣ ಎಂದು ಬಹಳ ಕಾಲದಿಂದ ನಂಬಲಾಗಿತ್ತು. ಆದರೆ, ಭಾರತದ ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಒಂದು ಆರೋಗ್ಯ ಸಮಸ್ಯೆ ಈ ನಂಬಿಕೆಯನ್ನು ನಿಧಾನವಾಗಿ ಬದಲಿಸುತ್ತಿದೆ. ಮದ್ಯಪಾನ ಮಾಡದ ಅನೇಕ ಯುವಕರಲ್ಲಿಯೂ ಇಂದು ‘ಫ್ಯಾಟಿ ಲಿವರ್’ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.ಈ ಸ್ಥಿತಿಯನ್ನು ಈಗ ‘ಮೆಟಬಾಲಿಕ್ ಡಿಸ್ಫಂಕ್ಷನ್- ಅಸೋಸಿಯೇಟೆಡ್ ಸ್ಟೀಟೋಟಿಕ್ ಲಿವರ್ ಡಿಸೀಸ್’ (ಎಂ ಎ ಎಸ್ ಎಲ್ ಡಿ) ಎಂದು ಕರೆಯಲಾಗುತ್ತಿದ್ದು, ಈ ಸಮಸ್ಯೆ ನಾವು ಬದುಕುವ, ತಿನ್ನುವ ಮತ್ತು ಕೆಲಸ ಮಾಡುವ ವಿಧಾನದಿಂದ ಉಂಟಾಗುತ್ತಿರುವ ಜೀವನಶೈಲಿಯ ಸಮಸ್ಯೆಯಾಗಿ ಬದಲಾಗಿದೆ.
ನಗರಗಳು ಬೆಳೆಯುತ್ತಿದ್ದಂತೆ ಮತ್ತು ದೈನಂದಿನ ಜೀವನದ ಒತ್ತಡ ಹೆಚ್ಚಾದಂತೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮಗೆ ಕಷ್ಟವಾಗುತ್ತಿದೆ. ಇಂತಹ ವಾತಾವರಣದಲ್ಲಿ ಫ್ಯಾಟಿ ಲಿವರ್ ಸಮಸ್ಯೆ ಯಾವುದೇ ಸದ್ದಿಲ್ಲದೆ ಕಾಣಿಸಿಕೊಳ್ಳುತ್ತದೆ. ಇದು ತಕ್ಷಣಕ್ಕೆ ಯಾವುದೇ ನೋವು ಅಥವಾ ಅಸ್ವಸ್ಥತೆಯನ್ನು ಉಂಟುಮಾಡದ ಕಾರಣ, ಇದನ್ನು ನಿರ್ಲಕ್ಷಿಸುವುದು ಸುಲಭ. ಆದರೆ ಇದು ಪತ್ತೆಯಾಗುವ ವೇಳೆಗೆ, ಯಕೃತ್ತು ಈಗಾಗಲೇ ಸಾಕಷ್ಟು ಒತ್ತಡಕ್ಕೆ ಅಥವಾ ಹಾನಿಗೆ ಒಳಗಾಗಿರಬಹುದು. ಇದೇ ಕಾರಣಕ್ಕೆ ಇದು ಈ ಆಧುನಿಕ ಯುಗದಲ್ಲಿ ಸಾಂಕ್ರಾಮಿಕ ಸಮಸ್ಯೆಯಾಗಿದೆ ಮತ್ತು ಸಾಮಾನ್ಯವಾಗಿ ಕಂಡು ಬರುತ್ತಿದೆ. ಯಾರಿಗೂ ತಿಳಿಯದಂತೆ ಉಂಟಾಗುತ್ತದೆ ಮತ್ತು ಪ್ರಮುಖವಾಗಿ ಇದು ನಮ್ಮ ದೈನಂದಿನ ಅಭ್ಯಾಸಗಳಿಗೆ ಸಂಬಂಧಿಸಿದ್ದಾಗಿದೆ.
ನಗರ ಜೀವನದ ಅಗೋಚರ ಪರಿಣಾಮ
ನಾವು ಸೇವಿಸುವ ಪ್ರತಿಯೊಂದನ್ನೂ ಸಂಸ್ಕರಿಸುವ ಜವಾಬ್ದಾರಿ ಯಕೃತ್ತಿನದು. ಇದು ಆಹಾರವನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ, ಪೋಷಕಾಂಶಗಳನ್ನು ಸಂಗ್ರಹಿಸುತ್ತದೆ ಮತ್ತು ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕುತ್ತದೆ. ಆದಾಗ್ಯೂ, ದೇಹಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಕ್ಯಾಲೊರಿಗಳು ಸೇರಿದಾಗ, ಅದರಲ್ಲೂ ವಿಶೇಷವಾಗಿ ಸಕ್ಕರೆ ಅಂಶವಿರುವ ಮತ್ತು ಸಂಸ್ಕರಿಸಿದ ಆಹಾರಗಳ ಮೂಲಕ ಸೇರಿದಾಗ, ಆ ಹೆಚ್ಚುವರಿ ಕ್ಯಾಲೊರಿಗಳು ಕೊಬ್ಬಾಗಿ ಬದಲಾಗುತ್ತವೆ. ಕಾಲಕ್ರಮೇಣ, ಈ ಕೊಬ್ಬು ಯಕೃತ್ತಿನಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ.
ನಗರ ಜೀವನಶೈಲಿಯು ಈ ಪ್ರಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸುತ್ತಿದೆ. ದೀರ್ಘಕಾಲದ ಕೆಲಸದ ಅವಧಿ, ಸೀಮಿತ ದೈಹಿಕ ಚಟುವಟಿಕೆ ಮತ್ತು ಸುಲಭವಾಗಿ ಸಿಗುವ ಸಿದ್ಧ ಆಹಾರಗಳ ಮೇಲಿನ ಅವಲಂಬನೆಯು ಈಗ ದೈನಂದಿನ ಜೀವನದ ಭಾಗವಾಗಿದೆ. ಜನರು ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ದಿನದ ಬೇರೆ ಬೇರೆ ಸಮಯಗಳಲ್ಲಿ ಸೇವಿಸುತ್ತಾರೆ, ಜೊತೆಗೆ ಅವರ ನಿದ್ರೆಯ ಕ್ರಮವೂ ಏರುಪೇರಾಗುತ್ತಿದೆ. ಹೆಚ್ಚಿನ ಪ್ರಮಾಣದ ಫ್ರಕ್ಟೋಸ್ ಹೊಂದಿರುವ ಸಕ್ಕರೆ ಯುಕ್ತ ಪಾನೀಯಗಳು ಮತ್ತು ಪ್ಯಾಕ್ ಮಾಡಿದ ತಿಂಡಿಗಳು ಇತರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ.
ಯಕೃತ್ತು ಈ ಸಕ್ಕರೆಯನ್ನು ಸಂಸ್ಕರಿಸಿ ನೇರವಾಗಿ ಕೊಬ್ಬಾಗಿ ಪರಿವರ್ತಿಸುತ್ತದೆ, ಇದು ಫ್ಯಾಟಿ ಲಿವರ್ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯ ಆರೋಗ್ಯವು ಯಾವುದೇ ದೈಹಿಕ ಲಕ್ಷಣಗಳನ್ನು ತೋರಿಸದೆಯೇ ಕ್ಷೀಣಿಸಬಹುದು. ಒಬ್ಬ ವ್ಯಕ್ತಿಯ ತೂಕ ಫ್ಯಾಟಿ ಲಿವರ್ ಕಾಯಿಲೆಯನ್ನು ನಿಖರವಾಗಿ ಹೇಳುವುದಿಲ್ಲ. ಏಕೆಂದರೆ ಇದು ಅತಿಯಾದ ತೂಕ ಹೊಂದಿರುವವರನ್ನು ಮಾತ್ರವಲ್ಲದೆ, ತೆಳ್ಳಗೆ ಕಾಣುವವರನ್ನೂ ಸಹ ಬಾಧಿಸುತ್ತದೆ. ರೋಗನಿರ್ಣಯ ಮತ್ತು ಚಿಕಿತ್ಸೆಯ ನಡುವಿನ ಅವಧಿಯಲ್ಲೇ ಈ ಕಾಯಿಲೆಯು ಉಲ್ಬಣಗೊಳ್ಳುತ್ತದೆ. ಆದರೆ ಜನರು ತಮ್ಮ ಬಾಹ್ಯ ನೋಟವೇ ಉತ್ತಮ ಆರೋಗ್ಯದ ಸಂಕೇತವೆಂದು ಭಾವಿಸುತ್ತಾರೆ ಮತ್ತು ನಿಧಾನವಾಗಿ ದೇಹದಲ್ಲಿ ಉಂಟಾಗುವ ಬದಲಾವಣೆಗಳನ್ನು ನಿರ್ಲಕ್ಷಿಸುತ್ತಾರೆ.
ಕೊಬ್ಬು ಸಂಗ್ರಹದಿಂದ ಸಮಸ್ಯೆ
ಫ್ಯಾಟಿ ಲಿವರ್ ತನ್ನ ಆರಂಭಿಕ ಹಂತಗಳಲ್ಲಿ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ ಮತ್ತು ಯಕೃತ್ತು ತನ್ನ ಕಾರ್ಯವನ್ನು ಮುಂದುವರಿಸುತ್ತಿರುತ್ತದೆ. ಆದಾಗ್ಯೂ, ದೇಹವು ಸಂಗ್ರಹಿಸುವ ಈ ಕೊಬ್ಬು ಯಕೃತ್ತಿನ ಜೀವಕೋಶಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಇದು ಕಾಲಾನಂತರದಲ್ಲಿ ‘ನಾನ್-ಆಲ್ಕೋಹಾಲಿಕ್ ಸ್ಟೀಟೋಹೆಪಟೈಟಿಸ್’ (ಎನ್ಎಎಸ್ಎಚ್) ಎಂಬ ಗಂಭೀರ ಸಮಸ್ಯೆಯಾಗಿ ಬದಲಾಗುತ್ತದೆ.
ಈ ಹಂತದಲ್ಲಿ ಯಕೃತ್ತಿನ ಜೀವಕೋಶಗಳು ಮೊದಲ ಬಾರಿಗೆ ನಾಶವಾಗಲು ಪ್ರಾರಂಭಿಸುತ್ತವೆ. ಒಂದು ವೇಳೆ ಇದನ್ನು ಪತ್ತೆಹಚ್ಚದಿದ್ದರೆ ಅಥವಾ ಚಿಕಿತ್ಸೆ ನೀಡದೆ ಬಿಟ್ಟರೆ, ಇದು ‘ಫೈಬ್ರೋಸಿಸ್’ ಎಂಬ ಶಾಶ್ವತ ಹಾನಿಗೆ ಕಾರಣವಾಗುತ್ತದೆ. ಈ ಸ್ಥಿತಿಯು ಮುಂದೆ ಅತ್ಯಂತ ತೀವ್ರವಾದ ಹಂತವಾದ ‘ಸಿರೋಸಿಸ್’ಗೆ ತಲುಪುತ್ತದೆ, ಇದು ಯಕೃತ್ತಿನ ಸಂಪೂರ್ಣ ವೈಫಲ್ಯಕ್ಕೆ ಕಾರಣವಾಗಬಹುದು. ಕೆಲವು ಅಪರೂಪದ ಸಂದರ್ಭಗಳಲ್ಲಿ, ಫ್ಯಾಟಿ ಲಿವರ್ ಯಕೃತ್ತಿನ ಕ್ಯಾನ್ಸರ್ ಗೆ ಕಾರಣವಾಗುವ ಸಾಧ್ಯತೆಯೂ ಇರುತ್ತದೆ.
ಈ ಕಾಯಿಲೆಯು ಬಹಳ ನಿಧಾನಗತಿಯಲ್ಲಿ ಉಲ್ಬಣಗೊಂಡರೂ ಸಹ, ದೇಹದಲ್ಲಿ ಪ್ರಮುಖ ಬದಲಾವಣೆಗಳನ್ನು ಉಂಟು ಮಾಡುತ್ತದೆ. ದೀರ್ಘಕಾಲದವರೆಗೆ ಯಾವುದೇ ಪ್ರತ್ಯಕ್ಷ ಲಕ್ಷಣಗಳಿಲ್ಲದೆ ಈ ಸಮಸ್ಯೆಯು ಬೆಳವಣಿಗೆ ಹೊಂದುವುದರಿಂದ, “ನಾವು ಆರೋಗ್ಯವಾಗಿದ್ದೇವೆ” ಎಂಬ ಸುಳ್ಳು ಭರವಸೆಯನ್ನು ಉಂಟು ಮಾಡುತ್ತಾದೆ. ಇದೇ ಕಾರಣದಿಂದಾಗಿ ಕಾಯಿಲೆಯು ಪತ್ತೆಯಾಗದೆ ಮುಂದಿನ ಹಂತಗಳಿಗೆ ತಲುಪಲು ಅವಕಾಶವಾಗುತ್ತದೆ.
ಸಣ್ಣ ಅಭ್ಯಾಸಗಳು, ಶಾಶ್ವತ ರಕ್ಷಣೆ
ಫ್ಯಾಟಿ ಲಿವರ್ ಕಾಯಿಲೆಯು ಸಂಪೂರ್ಣವಾಗಿ ಗುಣಪಡಿಸಲಾಗದ ಕಾಯಿಲೆಯಲ್ಲ;
ಆರಂಭಿಕ ಹಂತಗಳಲ್ಲಿ ಇದನ್ನು ತಡೆಗಟ್ಟಬಹುದು ಮತ್ತು ಲಿವರ್ ಅನ್ನು ಮೊದಲಿನ ಸ್ಥಿತಿಗೆ ತರಬಹುದು. ನಾವು ಕಠಿಣ ಕ್ರಮಗಳಿಗಿಂತ ಹೆಚ್ಚಾಗಿ, ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಸ್ಥಿರವಾದ ಬದಲಾವಣೆಗಳ ಮೇಲೆ ಗಮನ ಹರಿಸಬೇಕು. ರೋಗ ತಡೆಗಟ್ಟುವಿಕೆ ಮತ್ತು ಚೇತರಿಕೆ ಎರಡರಲ್ಲೂ ಸಮತೋಲಿತ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ನೈಸರ್ಗಿಕ ಆಹಾರಗಳು, ತಾಜಾ ತರಕಾರಿಗಳು, ಹಣ್ಣುಗಳು ಮತ್ತು ನಾರಿನಂಶವಿರುವ ಊಟವು ದೇಹವು ಕೊಬ್ಬನ್ನು ಉತ್ತಮ ರೀತಿಯಲ್ಲಿ ಸಂಸ್ಕರಿಸಲು ಸಹಾಯ ಮಾಡುತ್ತದೆ. ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡಿದಾಗ ಯಕೃತ್ತಿನ ಮೇಲಿನ ಒತ್ತಡವು ಕಡಿಮೆಯಾಗುತ್ತದೆ. ಪ್ರತಿದಿನ ನಡಿಗೆ, ಈಜು ಅಥವಾ ಯೋಗದಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವುದಲ್ಲದೆ, ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿದ್ರೆ ಮತ್ತು ಒತ್ತಡದ ನಿರ್ವಹಣೆ ಎರಡೂ ಸಮಾನ ಪ್ರಾಮುಖ್ಯತೆಯನ್ನು ಹೊಂದಿವೆ. ಸಾಕಷ್ಟು ನಿದ್ರೆ ಮಾಡುವ ವ್ಯಕ್ತಿಯು ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲನು, ಏಕೆಂದರೆ ನಿದ್ರೆಯು ದೇಹವು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಯಾರು ಪ್ರತಿದಿನ ಉತ್ತಮ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುತ್ತಾರೋ, ಅವರು ತಮ್ಮ ಯಕೃತ್ತು ಸುಲಭವಾಗಿ ಚೇತರಿಸಿಕೊಳ್ಳಲು ಮತ್ತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ತಮಗೆ ತಾವೇ ಸಹಾಯ ಮಾಡುತ್ತಾರೆ.
ಗಮನ ಹರಿಸಬೇಕಾದ ಸಮಸ್ಯೆ
ಭಾರತದ ನಗರ ಪ್ರದೇಶಗಳಲ್ಲಿ ಮದ್ಯಪಾನ ರಹಿತ ಫ್ಯಾಟಿ ಲಿವರ್ ಕಾಯಿಲೆಯು ಹೆಚ್ಚುತ್ತಿರುವುದು, ಆಧುನಿಕ ಜೀವನಶೈಲಿಯು ನಮ್ಮ ಬದುಕನ್ನು ಹೇಗೆ ಬದಲಿಸಿದೆ ಎಂಬುದನ್ನು ತೋರಿಸುತ್ತದೆ. ಈ ಸ್ಥಿತಿಯು ಯುವಜನರು ತಮ್ಮ ಅತ್ಯಂತ ಕ್ರಿಯಾಶೀಲ ವಯಸ್ಸಿನಲ್ಲಿದ್ದಾಗಲೇ ಅವರನ್ನು ಬಾಧಿಸುತ್ತಿದೆ, ಆದರೆ ಇದರ ಬಗ್ಗೆ ಅವರಿಗೆ ಕಿಂಚಿತ್ತೂ ಅರಿವಿರುವುದಿಲ್ಲ. ಈ ಸಮಸ್ಯೆಯು ಕೇವಲ ವೈಯಕ್ತಿಕ ಆರೋಗ್ಯಕ್ಕೆ ಸೀಮಿತವಾಗದೆ, ಕುಟುಂಬಗಳು, ಕೆಲಸದ ವಾತಾವರಣ ಮತ್ತು ವೈದ್ಯಕೀಯ ವ್ಯವಸ್ಥೆಗಳ ಮೇಲೆಯೂ ಪ್ರಭಾವ ಬೀರುತ್ತಿದೆ.
ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸಲು ನಾವು ಕೊಂಚವೇ ಗಮನ ಮತ್ತು ಸಹಕಾರ ನೀಡಿದರೂ ಸಾಕು. ಹಾಗಾಗಿ ಸಾಮಾನ್ಯ ಜನರು ಮತ್ತು ವೈದ್ಯಕೀಯ ವ್ಯವಸ್ಥೆಯನ್ನು ನಡೆಸುವವರು ಯಕೃತ್ತಿನ ಆರೋಗ್ಯ ಪಾಲನೆ ಕಡೆಗೆ ಒಟ್ಟಾಗಿ ಕೆಲಸ ಮಾಡಬೇಕಿದೆ. ಎಲ್ಲಕ್ಕಿಂತ ಮೊದಲು ಈ ಸಾರ್ವಜನಿಕ ಆರೋಗ್ಯ ಸಮಸ್ಯೆಯನ್ನು ಗುರುತಿಸುವ ಕುರಿತು ಜಾಗೃತಿ ಮೂಡಿಸಬೇಕಿದೆ. ಗುರುತಿಸುವುದೇ ಚೇತರಿಕೆ ಹೊಂದುವ ಕಡೆಗೆ ಇಡುವ ಮೊದಲ ಹೆಜ್ಜೆಯಾಗಿದೆ. ಈ ನಿಟ್ಟಿನಲ್ಲಿ ಜನರು ತೆಗೆದುಕೊಳ್ಳುವ ನಿರ್ಧಾರಗಳೇ, ವೇಗವಾಗಿ ಹರಡುತ್ತಿರುವ ಈ ಕಾಯಿಲೆಯಿಂದ ದೂರ ಉಳಿಯಲು ನೆರವಾಗಲಿದೆ.
ಡಾ. ದೇವರಾಜ ಆರ್,
ವೈದ್ಯಕೀಯ ಸಲಹೆಗಾರರು,
ನಾರಾಯಣ ಆಸ್ಪತ್ರೆ, ಮೈಸೂರು.
