ಎಂ.ಎಸ್
ಮೈಸೂರು: ಬಡತನದಿಂದಾಗಿ ಶಾಲೆಯ ಮುಖವನ್ನೇ ನೋಡಲಾಗದ ಬಾಲ್ಯ, ಹನ್ನೆರಡನೇ ವಯಸ್ಸಿನಲ್ಲೇ ದುಡಿಮೆಯ ಬದುಕು. ಆದರೆ ಕಲಿಯಬೇಕೆಂಬ ಹಂಬಲ, ಸಾಧಿಸಬೇಕೆಂಬ ಛಲ ಮತ್ತು ನಿರಂತರ ಪರಿಶ್ರಮದಿಂದ ಇಂದು ಯೋಗ, ಜಲಯೋಗ, ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅಪರೂಪದ ಸಾಧಕ ಜಲಯೋಗಿ ರವಿ ಅವರ ಜೀವನ ಪಯಣ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ.
ಶ್ರೀಮತಿ ಕಮಲಮ್ಮ ಮತ್ತು ಶ್ರೀ ಮಲ್ಲಯ್ಯ ದಂಪತಿಗಳ ಮೂರನೇ ಪುತ್ರನಾಗಿ ಜನಿಸಿದ ರವಿ ಅವರು ಬಾಲ್ಯದಲ್ಲಿಯೇ ಅನೇಕ ಕಷ್ಟ-ನಷ್ಟಗಳನ್ನು ಎದುರಿಸಿದರು. ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಶಾಲೆಗೆ ಸೇರಲು ಸಾಧ್ಯವಾಗಲಿಲ್ಲ. ಸುಮಾರು ಹನ್ನೆರಡು ವರ್ಷದ ವಯಸ್ಸಿನಲ್ಲಿಯೇ ದುಡಿಮೆಗೆ ಇಳಿಯಬೇಕಾಯಿತು. ಆದರೂ ವಿದ್ಯಾಭ್ಯಾಸ ಮಾಡಬೇಕೆಂಬ ಆಸೆ ಮಾತ್ರ ಅವರಲ್ಲಿ ಜೀವಂತವಾಗಿತ್ತು.ಇವರ ಆಸಕ್ತಿಯನ್ನು ಗುರುತಿಸಿದ ಸಂಜೀವ್ ಅಣ್ಣ, ಕುಂದಾಪುರ, ಅವರು ಅಕ್ಷರಾಭ್ಯಾಸ ಮಾಡಿಸಿ ವಿದ್ಯೆಯ ಬೆಳಕಿಗೆ ದಾರಿ ತೋರಿದರು. ಕಲಿಸಿದ ಅಕ್ಷರಗಳನ್ನು ಶ್ರದ್ಧೆಯಿಂದ ಕಲಿತ ರವಿ ಅವರು ಸ್ವಯಂ ಕಲಿಕೆಯ ಮೂಲಕ ಸಾಹಿತ್ಯದತ್ತ ಒಲವು ಬೆಳೆಸಿಕೊಂಡರು. ಚುಟುಕು ಕವನಗಳು, ಲೇಖನಗಳ ರಚನೆ ಅವರ ನೆಚ್ಚಿನ ಹವ್ಯಾಸಗಳಾದವು.
ಯೋಗಾಭ್ಯಾಸದಿಂದ ಜಲಯೋಗದತ್ತ ವಿಶಿಷ್ಟ ಪಯಣಒಂದು ಸಣ್ಣ ಯೋಗ ಪುಸ್ತಕದಿಂದ ಪ್ರೇರಣೆ ಪಡೆದ ರವಿ ಅವರು ಯೋಗಾಭ್ಯಾಸ ಆರಂಭಿಸಿದರು. ಮೈಸೂರಿನ ಸ್ವತಂತ್ರ ಪರಕಾಲ ಮಠದ ಬಿ.ಎನ್,ಎಸ್ ಅಯ್ಯಂಗಾರ್ ಅವರ ಮಾರ್ಗದರ್ಶನದಲ್ಲಿ ಯೋಗವನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡಿದರು. ನಿರಂತರ ಪರಿಶ್ರಮದಿಂದ ಅನೇಕ ಕಠಿಣ ಯೋಗಾಸನಗಳನ್ನು ಕರಗತ ಮಾಡಿಕೊಂಡರು.
ಮೈಸೂರಿನಲ್ಲಿ ಜಲಯೋಗ ಕಲಿಸುವ ಗುರುಗಳು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಸ್ವಂತ ಪ್ರಯತ್ನದಿಂದಲೇ ಈ ವಿಶಿಷ್ಟ ವಿದ್ಯೆಯನ್ನು ಕಲಿಯಲು ಮುಂದಾದರು. ನೀರಿನಲ್ಲಿ ತೇಲುತ್ತಾ, ನೀರಿನ ಮೇಲೆ ಹಾಗೂ ನೀರಿನೊಳಗೆ ವಿವಿಧ ಯೋಗಾಸನಗಳನ್ನು ಪ್ರದರ್ಶಿಸುವ ಕೌಶಲವನ್ನು ಸತತ ಅಭ್ಯಾಸದಿಂದ ಬೆಳೆಸಿಕೊಂಡರು.ಆರಂಭದಲ್ಲಿ ದಿನಕ್ಕೆ ಸುಮಾರು ಎಂಟು ಗಂಟೆಗಳ ಕಾಲ ಜಲಯೋಗ ಅಭ್ಯಾಸ ಮಾಡುತ್ತಿದ್ದ ಇವರು, ಪ್ರಸ್ತುತ ಮೂರರಿಂದ ನಾಲ್ಕು ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದಾರೆ. ನೀರಿನಲ್ಲಿ ದೇಹದ ಸಮತೋಲನ, ಉಸಿರಾಟದ ನಿಯಂತ್ರಣ ಮತ್ತು ಏಕಾಗ್ರತೆಗೆ ವಿಶೇಷ ಆದ್ಯತೆ ನೀಡುತ್ತಾರೆ.
ಜಲ ಪ್ಲವನ,ಶ್ರೀಕೃಷ್ಣ ಮಹಾಮುದ್ರಾಸನ, ಜಲ ಪ್ಲವನ ಮಹಾರುದ್ರಾಸನ ಜಲ ಪ್ಲವನ ಕಾಳಿದಾಸಾಸನ,ಸೇರಿದಂತೆ ವಿವಿಧ ಆಸನಗಳನ್ನು ಜಲಯೋಗದ ಅಭ್ಯಾಸದಲ್ಲಿ ಅಳವಡಿಸಿಕೊಂಡಿದ್ದಾರೆ. ಸರೋವರ ಅಥವಾ ಈಜುಕೊಳದಲ್ಲಿ ಈಜಿನ ಅಭ್ಯಾಸವನ್ನೂ ಮಾಡುತ್ತಾರೆಯೋಗ ಶಿಕ್ಷಕರಾಗಿ ಸೇವೆಯೋಗ ಕ್ಷೇತ್ರದಲ್ಲಿ ತಮ್ಮ ಅನುಭವವನ್ನು ಇತರರಿಗೂ ಹಂಚಿಕೊಳ್ಳಬೇಕೆಂಬ ಉದ್ದೇಶದಿಂದ ರವಿ ಅವರು ವಿವಿಧ ಯೋಗ ಕೇಂದ್ರಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
೨೦೧೨ರಲ್ಲಿ ಮೈಸೂರಿನ ಟೆರೇಸಿಯನ್ ಪ್ರಾಥಮಿಕ ಶಾಲೆಯಲ್ಲಿ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ಮೈಸೂರಿನ ಮಾರುತಿ ಯೋಗ ಕೇಂದ್ರದಲ್ಲಿ ಜಲೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ಅನುಭವ ಪಡೆದಿದ್ದಾರೆ. ಶ್ರೀ ರಾಘವೇಂದ್ರ ಯೋಗ ಶಾಲೆಯಲ್ಲಿಯೂ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
ಮೈಸೂರು ಯೋಗ ಅಸೋಸಿಯೇಷನ್ನ ತಿರುಮಲೆ ಯೋಗ ಪ್ರಕಾಶ್ ಅವರ ಮಾರ್ಗದರ್ಶನದಲ್ಲಿರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆ ಯಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಮೈಸೂರಿನ ಕನಕ ಪುರಂದರ,ಯೋಗ ಶಿಕ್ಷಣ ಕೇಂದ್ರ ಮೈಸೂರು ಯರಗನಹಳ್ಳಿ, ೫೩೧,೪ ನೇ ತಿರುವು ಪ್ರದೇಶದಲ್ಲಿ ಯೋಗ ಶಿಕ್ಷಣ ನೀಡುತ್ತಿದ್ದು, ಆಸಕ್ತರಿಗೆ ಯೋಗಾಭ್ಯಾಸ ಮತ್ತು ತರಬೇತಿ ನೀಡುತ್ತಿದ್ದಾರೆ.ಜಲಯೋಗಿ ಎಂಬ ಗೌರವದ ಬಿರುದು ರವಿ ಅವರ ವಿಶಿಷ್ಟ ಜಲಯೋಗ ಸಾಧನೆಯನ್ನು ಗುರುತಿಸಿ ಆಧ್ಯಾತ್ಮಿಕ ಹಾಗೂ ಯೋಗ ಕ್ಷೇತ್ರದ ಗಣ್ಯರು ಗೌರವಿಸಿದ್ದಾರೆ.
ಅನಂತ ಹಿಮಾಲಯ ಫೌಂಡೇಶನ್, ಕೇಶವಮೂರ್ತಿ ಗುರುಗಳು, ಪತಂಜಲಿ ಯೋಗ ಅಧ್ಯಯನ ಕೇಂದ್ರದ ರಾಮಕೃಷ್ಣ ನಗರದ ಯೋಗ ಸಾಧಕರು ಹಾಗೂ ತಿರುಮಲೆ ಯೋಗ ಪ್ರಕಾಶ್ ಗುರುಗಳ ಸಹಕಾರದಿಂದ ರೋಟರಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಅವರಿಗೆ ’ಜಲಯೋಗಿ’ ಎಂಬ ಗೌರವದ ಬಿರುದನ್ನು ನೀಡಿ ಸನ್ಮಾನಿಸಲಾಯಿತು.ತಿರುಮಲೆ ಯೋಗ ಪ್ರಕಾಶ್ ಹಾಗೂ ಮುಕುಂದನ್ ಗುರೂಜಿಯವರು ’ಯೋಗರತ್ನ’ ಎಂಬ ಬಿರುದನ್ನು ನೀಡಿ ಗೌರವಿಸಿರುವುದು ಅವರ ಜೀವನದ ಮರೆಯಲಾಗದ ಕ್ಷಣಗಳಾಗಿವೆ.
ಇದಲ್ಲದೆ ’ಯೋಗ ನಕ್ಷತ್ರ’, ’ಯೋಗಭೂಷಣ’, ’ಯೋಗಸೇವಾ ರತ್ನ’ ಸೇರಿದಂತೆ ವಿವಿಧ ಬಿರುದು ಮತ್ತು ಪ್ರಶಸ್ತಿಗಳು ಅವರ ಯೋಗ ಕ್ಷೇತ್ರದ ಸಾಧನೆಗೆ ಸಂದ ಗೌರವಗಳಾಗಿವೆ.
ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆಯ ಹೆಜ್ಜೆಯೋಗದ ಜೊತೆಗೆ ಸಾಹಿತ್ಯದಲ್ಲಿಯೂ ರವಿ ಅವರಿಗೆ ವಿಶೇಷ ಆಸಕ್ತಿ ಇದೆ. ಚುಟುಕು ಕವನಗಳು ಮತ್ತು ಲೇಖನಗಳನ್ನು ರಚಿಸುವ ಮೂಲಕ ತಮ್ಮ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಇವರ ಅನೇಕ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
’ಮೂರುಹನಿ’ ಎಂಬ ಚುಟುಕು ಸಂಕಲನವನ್ನು ರಚಿಸಿದ್ದು, ೨೦೧೬,ನೇ ಇಸವಿಯಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿಡುಗಡೆಗೊಂಡಿತು.ಪುಸ್ತಕ ಬಿಡುಗಡೆ ಹಾಗೂ ಕವನ ವಾಚನ ಕಾರ್ಯಕ್ರಮದಲ್ಲಿ ಕವಿ ಸಿ. ಪಿ, ಕೆ
ಡಾ. ಲತಾ ರಾಜಶೇಖರ್, ಡಾ. ವೈ.ಡಿ. ರಾಜಣ್ಣ, ಮಡ್ಡಿಕೇರಿ ಗೋಪಾಲ್, ಚಂದ್ರಶೇಖರ್ ಹಾಗೂ ಪ್ರೊ ,ಬೈರವಮೂರ್ತಿ ಗುರುಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ವಿಶೇಷವಾಗಿ ಯೋಗ ಕ್ಷೇತ್ರದ ಸಾಧಕರ ಕುರಿತು ರಚಿಸಿದ ’ಯೋಗಿ ಬಂದರು ಯೋಗಿ’ ಎಂಬ ಕವನ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.
ಸಂಗೀತ ಕ್ಷೇತ್ರದಲ್ಲಿಯೂ ಆಸಕ್ತಿ ಬಾಲ್ಯದಿಂದಲೇ ಸಂಗೀತದ ಮೇಲೂ ಅಪಾರ ಒಲವು ಹೊಂದಿರುವ ರವಿ ಅವರು ಸುಗಮ ಸಂಗೀತವನ್ನು ಅಭ್ಯಾಸ ಮಾಡಿದ್ದಾರೆ. ತಬಲಾ ಮತ್ತು ಹಾರ್ಮೋನಿಯಂ ನುಡಿಸುವುದರಲ್ಲಿಯೂ ಆಸಕ್ತಿ ಬೆಳೆಸಿಕೊಂಡಿದ್ದಾರೆ.
ರಾಷ್ಟ್ರಗೀತೆ, ಭಾವಗೀತೆ ಹಾಗೂ ಚಿತ್ರಗೀತೆಗಳನ್ನು ವಿವಿಧ ಸಮಾರಂಭಗಳಲ್ಲಿ ಹಾಡುವುದು ಇವರ ನೆಚ್ಚಿನ ಹವ್ಯಾಸವಾಗಿದೆ. ಇವರ ಗಾಯನ ಪ್ರತಿಭೆಯನ್ನು ಗುರುತಿಸಿದ ಸ್ಟಾರ್ ಮೇಕರ್ ಕರೋಕೆ ಆರ್ಕೆಸ್ಟ್ರಾದವರು ’ಅತ್ಯುತ್ತಮ ಗಾಯಕ’ ಹಾಗೂ ’ಸ್ಟಾರ್ ಮೇಕರ್’ ಎಂಬ ಬಿರುದು ನೀಡಿ ಗೌರವಿಸಿದ್ದಾರೆ.
ಮುಂದಿನ ಗುರಿ ಮತ್ತು ಸಮಾಜಕ್ಕೆ ಸಂದೇಶಮಹಾಭಾರತದಲ್ಲಿ ದುರ್ಯೋಧನನ ಜಲಸ್ತಂಭನದ ಪ್ರಸಂಗದಿಂದ ಪ್ರೇರಣೆ ಪಡೆದಿರುವ ರವಿ ಅವರು, ಆಳವಾದ ಸರೋವರದ ನೀರಿನೊಳಗೆ ಯೋಗಾಸನ ಹಾಗೂ ಧ್ಯಾನ ಮಾಡುವ ವಿಶಿಷ್ಟ ಸಾಧನೆ ಮಾಡುವ ಆಸಕ್ತಿ ಯನ್ನು ಹೊಂದಿದ್ದಾರೆ.ಜಲಯೋಗ ಕಲಿಯಲು ಆಸಕ್ತಿ ಹೊಂದಿರುವವರಿಗೆ ತರಬೇತಿ ನೀಡಲು ಸಿದ್ಧರಿರುವ ಅವರು, ಮೊದಲು ಈಜುವುದನ್ನು ಕಲಿತು, ನೀರಿನಲ್ಲಿ ಸುರಕ್ಷಿತವಾಗಿ ಅಭ್ಯಾಸ ಮಾಡುವ ಸಾಮರ್ಥ್ಯ ಬೆಳೆಸಿಕೊಂಡ ನಂತರವೇ ಜಲಯೋಗದತ್ತ ಹೆಜ್ಜೆ ಇಡಬೇಕು ಎಂದು ಸಲಹೆ ನೀಡುತ್ತಾರೆ.
ಯುವಜನರು ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳಬೇಕು, ಗುರು,ಹಿರಿಯರನ್ನು ಗೌರವಿಸಬೇಕು. ಇತರರ ತಪ್ಪುಗಳನ್ನು ಹುಡುಕುವುದಕ್ಕಿಂತ ಮೊದಲು ನಮ್ಮ ತಪ್ಪುಗಳನ್ನು ಗುರುತಿಸಿ ತಿದ್ದಿಕೊಳ್ಳುವ ಪ್ರಯತ್ನ ಮಾಡಬೇಕು ಎಂಬುದು ಅವರ ಜೀವನದ ಸಂದೇಶವಾಗಿದೆ.ಶಾಲೆಯ ಮೆಟ್ಟಿಲನ್ನೇ ಹತ್ತದಿದ್ದರೂ ಸ್ವಯಂ ಕಲಿಕೆ, ಆತ್ಮವಿಶ್ವಾಸ, ನಿರಂತರ ಪರಿಶ್ರಮ ಮತ್ತು ಸಾಧನೆಯ ಛಲದಿಂದ ಯೋಗ, ಜಲಯೋಗ, ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಜಲಯೋಗಿ ರವಿ ಅವರ ಬದುಕು ನಿಜಕ್ಕೂ ಮಾದರಿಯಾಗಿದೆ.
ಬಡತನ ಸಾಧನೆಗೆ ಅಡ್ಡಿಯಾಗುವುದಿಲ್ಲ, ಮನಸ್ಸಿನಲ್ಲಿ ಗುರಿ ಮತ್ತು ಅದನ್ನು ಸಾಧಿಸುವ ಛಲವಿದ್ದರೆ ಬದುಕಿನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಬಹುದು ಎಂಬುದಕ್ಕೆ ಜಲಯೋಗಿ ರವಿ ಅವರ ಜೀವನವೇ ಸಾಕ್ಷಿ.ಈಜು ತಿಳಿಯದವರಿಗೆ ದೇಸೀಯ ಈಜು ಕಲಿಸಲಾಗುವುದು ದೇಸೀಯ ಈಜು ಎಂದರೆ ಪ್ರಕೃತಿ ದತ್ತವಾದ ಸರೋವರ, ಕೆರೆ ಮತ್ತು ಹರಿಯುವ ನದಿಗಳಲ್ಲಿ ಈಜುವುದು ಹಾಗೂ ನೀರಿನ ಮೇಲೆ ತೇಲುವುದು
ಈಜು ಕೊಳದಲ್ಲಿ ಕಲಿಯುವವರಿಗೆ ಫ್ರೀ ಸ್ಟೈಲ್, ಮತ್ತು ಬ್ಯಾಕ್ ಸ್ಟ್ರೋಕ್ ಸ್ವಿಮ್ಮಿಂಗ್ ಕಲಿಸಿ ನೀರಿನ ಮೇಲೆ ತೇಲುವುದನ್ನು ಕಲಿಸಿ ಕೊಡುತ್ತೇವೆ. ಆಸಕ್ತರು ಭಾಗವಹಿಸಬಹುದು.
