ದೇಶದ ಆಯ್ದ ೧೭ ನಗರಗಳ ಪೈಕಿ ಮೈಸೂರಿಗೂ ಗೌರವ: ಪಿಎಂ ಸ್ವನಿಧಿ ಸ್ಟ್ರೀಟ್ ಫುಡ್ ಹಬ್ಗೆ ಆಯ್ಕೆ
ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ MoHUA) ವತಿಯಿಂದ ಪಿಎಂ ಸ್ವನಿಧಿ (PM SVANidhi)ಯೋಜನೆಯಡಿ ದೇಶದಾದ್ಯಂತ ಆಯ್ಕೆಯಾದ ೧೭ ನಗರಗಳಲ್ಲಿ ಮೈಸೂರು ನಗರವೂ ಒಂದಾಗಿ ಆಯ್ಕೆಯಾಗಿರುವುದು ನಗರಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಉಪಕ್ರಮದಡಿ ಮೈಸೂರಿನಲ್ಲಿ ಸ್ಟ್ರೀಟ್ ಫುಡ್ ಹಬ್ (Street Food Hub)ಸ್ಥಾಪಿಸಲಾಗುತ್ತಿದ್ದು, ನಗರದ ಶ್ರೀಮಂತ ಆಹಾರ ಪರಂಪರೆ, ಪ್ರವಾಸೋದ್ಯಮ ಸಾಮರ್ಥ್ಯ ಹಾಗೂ ಬೀದಿ ಆಹಾರ ವ್ಯಾಪಾರಿಗಳ ಜೀವನೋಪಾಯ ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಲಿದೆ.
ಈ ಆಯ್ಕೆಯು ಮೈಸೂರಿನ ಶ್ರೀಮಂತ ಆಹಾರ ಸಂಸ್ಕೃತಿ, ಪರಂಪರೆ, ಪ್ರವಾಸೋದ್ಯಮ ಮಹತ್ವ ಹಾಗೂ ಸ್ವಚ್ಛ ನಗರ ಎಂಬ ಹೆಗ್ಗಳಿಕೆಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಿರುವುದನ್ನು ಪ್ರತಿಬಿಂಬಿಸುತ್ತದೆ.
ಸ್ಟ್ರೀಟ್ ಫುಡ್ ಹಬ್ ಉಪಕ್ರಮದ ಉದ್ದೇಶವು ಆಹಾರ ಮಾರಾಟಗಾರರಿಗೆ ಸುಸಜ್ಜಿತ, ಸುರಕ್ಷಿತ, ಸ್ವಚ್ಛ ಹಾಗೂ ಆಕರ್ಷಕ ವ್ಯಾಪಾರ ವಾತಾವರಣವನ್ನು ಕಲ್ಪಿಸುವುದರ ಜೊತೆಗೆ ಅವರ ಜೀವನೋಪಾಯವನ್ನು ಬಲಪಡಿಸುವುದಾಗಿದೆ. ಈ ಯೋಜನೆಯ ಮೂಲಕ ಸಾಂಪ್ರದಾಯಿಕ ಆಹಾರ ಮಾರಾಟ ವಲಯಗಳನ್ನು ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಸುಸಂಘಟಿತ ಆಹಾರ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗುತ್ತದೆ.
ಮೈಸೂರಿನಲ್ಲಿ ಸ್ಥಾಪನೆಯಾಗಲಿರುವ ಸ್ಟ್ರೀಟ್ ಫುಡ್ ಹಬ್ ಸ್ಥಳೀಯ ಆಹಾರ ಮಾರಾಟಗಾರರಿಗೆ ಮೈಸೂರು ಹಾಗೂ ಕರ್ನಾಟಕದ ವಿಶಿಷ್ಟ ಸಾಂಪ್ರದಾಯಿಕ ಆಹಾರಗಳನ್ನು ಪರಿಚಯಿಸಲು ಮತ್ತು ಮಾರಾಟ ಮಾಡಲು ಸಮರ್ಪಿತ ವೇದಿಕೆಯನ್ನು ಒದಗಿಸಲಿದೆ. ಈ ಹಬ್ನಲ್ಲಿ ಗುಣಮಟ್ಟದ ಆಹಾರ ಮಳಿಗೆಗಳು, ಆಸನ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ, ಸಮರ್ಪಕ ಬೆಳಕು, ಸೂಚನಾ ಫಲಕಗಳು, ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ಆಹಾರ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾದ ಸೌಲಭ್ಯಗಳು ಹಾಗೂ ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುವುದು.
ಈ ಯೋಜನೆಯು ಬೀದಿಬದಿ ಆಹಾರ ಮಾರಾಟಗಾರರ ಆದಾಯವನ್ನು ಹೆಚ್ಚಿಸುವುದರೊಂದಿಗೆ ಆಹಾರದ ಗುಣಮಟ್ಟ ಮತ್ತು ಸ್ವಚ್ಛತೆಯನ್ನು ಸುಧಾರಿಸುತ್ತದೆ. ಜೊತೆಗೆ ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ಸುರಕ್ಷಿತ ಹಾಗೂ ಉತ್ತಮ ಗುಣಮಟ್ಟದ ಸ್ಥಳೀಯ ಆಹಾರದ ಅನುಭವವನ್ನು ಒದಗಿಸುತ್ತದೆ. ಇದು ನಗರದ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗುವುದರ ಜೊತೆಗೆ ಸ್ವಚ್ಛ ಭಾರತ ಮಿಷನ್, ಸುಸ್ಥಿರ ನಗರಾಭಿವೃದ್ಧಿ ಹಾಗೂ ಸಮಗ್ರ ಆರ್ಥಿಕ ಬೆಳವಣಿಗೆಯ ಗುರಿಗಳಿಗೆ ಸಹಕಾರಿಯಾಗಲಿದೆ.
ವಿಶ್ವವಿಖ್ಯಾತ ಪರಂಪರೆ ಹಾಗೂ ಪ್ರವಾಸಿ ತಾಣವಾದ ಮೈಸೂರಿನಲ್ಲಿ ಸ್ಟ್ರೀಟ್ ಫುಡ್ ಹಬ್ ಸ್ಥಾಪನೆಯಿಂದ ನಗರದ ಸ್ಥಳೀಯ ಆಹಾರ ಪರಂಪರೆಯನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ಅವಕಾಶ ದೊರೆಯಲಿದೆ. ಈ ಯೋಜನೆಯು ಬೀದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣ, ನಗರ ಸೌಂದರ್ಯವರ್ಧನೆ, ಪ್ರವಾಸೋದ್ಯಮ ಉತ್ತೇಜನ ಹಾಗೂ ಸಾರ್ವಜನಿಕ ಸೌಲಭ್ಯ ವೃದ್ಧಿಗೆ ಮಾದರಿ ಯೋಜನೆಯಾಗಿ ಕಾರ್ಯನಿರ್ವಹಿಸಲಿದೆ.
ಮೈಸೂರು ನಗರವನ್ನು ಸ್ಟ್ರೀಟ್ ಫುಡ್ ಹಬ್ ಸ್ಥಾಪನೆಗಾಗಿ ಆಯ್ಕೆ ಮಾಡಿರುವುದು ನಗರದ ಅಭಿವೃದ್ಧಿ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಸ್ಥಳೀಯ ಆಹಾರ ಸಂಸ್ಕೃತಿಯ ಸಂರಕ್ಷಣೆ, ಬೀದಿ ವ್ಯಾಪಾರಿಗಳ ಜೀವನೋಪಾಯ ಸುಧಾರಣೆ ಹಾಗೂ ನಗರ ಪ್ರವಾಸೋದ್ಯಮಕ್ಕೆ ಹೊಸ ಆಯಾಮವನ್ನು ನೀಡುವ ಉತ್ತಮ ಅವಕಾಶವಾಗಿದೆ.
