ಮೈಸೂರು: ಎಚ್‌ಐವಿ/ಏಡ್ಸ್ ಅರಿವಿನ ಮಾಸಾಚರಣೆ-೨೦೨೬ರ ಅಂಗವಾಗಿ ಸಾರ್ವಜನಿಕರಲ್ಲಿ ಎಚ್‌ಐವಿ/ಏಡ್ಸ್ ಸೋಂಕು ಹರಡುವಿಕೆ, ತಡೆಗಟ್ಟುವಿಕೆ, ಚಿಕಿತ್ಸೆ, ಪರೀಕ್ಷೆಯ ಮಹತ್ವ, ಆರೋಗ್ಯ ಸೇವೆಗಳು ಹಾಗೂ ಕಳಂಕ ಮತ್ತು ತಾರತಮ್ಯದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮೈಸೂರಿನಲ್ಲಿ ಬೈಕ್ ರ‍್ಯಾಲಿ ಜಾಗೃತಿ ಜಾಥಾ ಆಯೋಜಿಸಲಾಯಿತು.
ನಗರದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಬೈಕ್ ರ‍್ಯಾಲಿಗೆ ಚಾಲನೆ ನೀಡಲಾಯಿತು. ದೇವಸ್ಥಾನದಿಂದ ಆರಂಭಗೊಂಡ ರ‍್ಯಾಲಿಯು ದೇವರಾಜ ಅರಸು ರಸ್ತೆ, ಜೆ.ಎಲ್.ಬಿ ರಸ್ತೆ, ರೈಲ್ವೆ ನಿಲ್ದಾಣದ ವೃತ್ತ, ಕಮಾನಗೇಟ್, ಮಿನಿ ವಿಧಾನಸೌಧ, ಥಿಯೋಪಾಲ್‌ಡ್ ರಸ್ತೆ ಹಾಗೂ ಎಸ್.ಪಿ. ಸರ್ಕಲ್ ಮಾರ್ಗವಾಗಿ ಸಾಗಿತು. ಬಳಿಕ ಎನ್‌ಪಿಸಿ ಆಸ್ಪತ್ರೆ ಆವರಣ, ನಜರ್‌ಬಾದ್‌ನಲ್ಲಿ ರ‍್ಯಾಲಿ ಮುಕ್ತಾಯಗೊಂಡಿತು.
ಜಾಗೃತಿ ಜಾಥಾದ ಉದ್ಘಾಟನಾ ಸಮಾರಂಭದಲ್ಲಿ ಡಾ. ಬೃಂದಾ ಬಿ., ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ, ಮೈಸೂರು; ಡಾ. ಗೋಪಿನಾಥ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ, ಮೈಸೂರು; ಡಾ. ನಾಗೇಶ್ ಆರಾಧ್ಯ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ, ಮೈಸೂರು ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಂಚಾರಿ ಪೊಲೀಸರು ಉಪಸ್ಥಿತರಿದ್ದರು.
ಡಾ. ಮೊಹಮದ್ ಶಿರಾಜ್ ಅಹಮದ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ, ಮೈಸೂರು ಅವರು ಹಸಿರು ನಿಶಾನೆ ತೋರಿಸುವ ಮೂಲಕ ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು.ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಶ್ರೀಮತಿ ಮುನೀಂದ್ರಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ, ಮೈಸೂರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
