ಮೈಸೂರು, ಸೆ. 11: ವಿಶ್ವ ಅಲ್ಜೈಮರ್ಸ್ ತಿಂಗಳ ಅಂಗವಾಗಿ ಅಲ್ಜೈಮರ್ಸ್ ಅಂಡ್ ರಿಲೇಟೆಡ್ ಡಿಸಾರ್ಡರ್ಸ್ ಸೊಸೈಟಿ ಆಫ್ ಇಂಡಿಯಾ (ARDSI), ಮೈಸೂರು ಶಾಖೆ, ಶಾರದಾ ವಿಲಾಸ ಕಾಲೇಜ್ ಆಫ್ ಫಾರ್ಮಸಿ, ಮೈಸೂರು ಹಾಗೂ ವಿವೇಕ ಆಸ್ಪತ್ರೆ ಸಹಯೋಗದಲ್ಲಿ ಶುಕ್ರವಾರ ಚಾಮುಂಡಿ ಬೆಟ್ಟದ ಪಾದದಿಂದ ಬೆಟ್ಟದ ಮೇಲ್ಭಾಗದವರೆಗೆ ‘ನಮ್ಮ ನಡಿಗೆ ಆರೋಗ್ಯದೆಡೆಗೆ’ ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ಟ್ರೆಕ್ಕಿಂಗ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೈಸೂರು ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಶ್ರೀ ಕೆ. ವಿವೇಕಾನಂದ ಮಾತನಾಡಿ, ಅಲ್ಜೈಮರ್ಸ್ ಸೇರಿದಂತೆ ಸ್ಮರಣಶಕ್ತಿ ಸಂಬಂಧಿತ ಕಾಯಿಲೆಗಳ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದರು. ಈ ಕಾಯಿಲೆಯ ಆರಂಭಿಕ ಲಕ್ಷಣಗಳ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ಸ್ಮರಣಶಕ್ತಿ ಕುಂಠಿತವಾಗುವುದನ್ನು ಸಾಮಾನ್ಯ ವಯೋಸಹಜ ಸಮಸ್ಯೆ ಎಂದು ಭಾವಿಸಿ ನಿರ್ಲಕ್ಷಿಸುವುದರಿಂದ ಸೂಕ್ತ ಸಮಯದಲ್ಲಿ ವೈದ್ಯಕೀಯ ಸಲಹೆ ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಜೈಮರ್ಸ್ ಕಾಯಿಲೆಗೆ ಸಂಪೂರ್ಣ ಗುಣಪಡಿಸುವ ಚಿಕಿತ್ಸೆ ಸೀಮಿತವಾಗಿರುವುದರಿಂದ ಆರಂಭಿಕ ಹಂತದಲ್ಲೇ ಸಮಸ್ಯೆಯನ್ನು ಗುರುತಿಸುವುದು ಮುಖ್ಯ ಎಂದು ಹೇಳಿದರು.

ARDSI ಮೈಸೂರು ಶಾಖೆಯ ಅಧ್ಯಕ್ಷ ಹಾಗೂ ಶಾರದಾ ವಿಲಾಸ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲ ಡಾ. ಹನುಮಂತಾಚಾರ್ ಜೋಶಿ ಮಾತನಾಡಿ, ಅಲ್ಜೈಮರ್ಸ್ ಕಾಯಿಲೆಯ ನಿರ್ವಹಣೆಯಲ್ಲಿ ಜಾಗೃತಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು. ಪ್ರಸ್ತುತ ಕೆಲವು ಔಷಧಿಗಳು ಲಭ್ಯವಿದ್ದರೂ ಅವುಗಳ ಪರಿಣಾಮ ಸೀಮಿತವಾಗಿದ್ದು, ಕೆಲವು ಔಷಧಿಗಳಿಗೆ ಅಡ್ಡಪರಿಣಾಮಗಳೂ ಇವೆ. ಹೀಗಾಗಿ ಔಷಧ ಚಿಕಿತ್ಸೆಯ ಜೊತೆಗೆ ಕಾಯಿಲೆಯ ಲಕ್ಷಣಗಳು, ಆರಂಭಿಕ ಪತ್ತೆ ಹಾಗೂ ರೋಗಿಗಳ ಆರೈಕೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು.

ವಾಕಥಾನ್, ಟ್ರೆಕ್ಕಿಂಗ್, ಜಾಗೃತಿ ಸಭೆಗಳು ಹಾಗೂ ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ ಜನರಲ್ಲಿ ಅಲ್ಜೈಮರ್ಸ್ ಕಾಯಿಲೆಯ ಕುರಿತು ನಿರಂತರ ಅರಿವು ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಚಾಮುಂಡಿ ಬೆಟ್ಟದ ಮೇಲ್ಭಾಗದಲ್ಲಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಹಾಗೂ ವಿಶೇಷವಾಗಿ ಸ್ಮರಣಶಕ್ತಿ ತಪಾಸಣಾ ಪರೀಕ್ಷೆಗಳನ್ನು ನಡೆಸಲಾಯಿತು. ಇದರ ಮೂಲಕ ತಮ್ಮಲ್ಲಿ ಸ್ಮರಣಶಕ್ತಿಗೆ ಸಂಬಂಧಿಸಿದ ಸಮಸ್ಯೆಗಳಿವೆಯೇ ಎಂಬುದನ್ನು ಪ್ರಾಥಮಿಕವಾಗಿ ತಿಳಿದುಕೊಂಡು ಅಗತ್ಯವಿದ್ದಲ್ಲಿ ವೈದ್ಯಕೀಯ ಸಲಹೆ ಪಡೆಯಲು ನಾಗರಿಕರಿಗೆ ಅವಕಾಶ ಕಲ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಮೈಸೂರು ಕಾರ್ಯದರ್ಶಿ ಶ್ರೀ ಸಮೀರ್ ಕಶ್ಯಪ್, ಶಾರದಾ ವಿಲಾಸ ಎಜುಕೇಷನಲ್ ಇನ್‌ಸ್ಟಿಟ್ಯೂಷನ್ಸ್‌ನ ಗೌರವ ಕಾರ್ಯದರ್ಶಿ ಶ್ರೀ ಆರ್. ದಿನೇಶ್, ವಿವೇಕ ಆಸ್ಪತ್ರೆಯ ಪ್ರತಿನಿಧಿಗಳು, ಇನ್ನರ್ ವೀಲ್ ಅಧ್ಯಕ್ಷರಾದ ಚೈತ್ರ ಅರುಣ್ , ಶ್ರೀ ಅರುಣ್ ಕುಮಾರ್ ವಿವೇಕ ಚೇತನ್ಯ ಫೌಂಡೇಶನ್ ಮೈಸೂರು, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply