ಬೆಂಗಳೂರು: ‘ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನಾಯಕ ಸಮಾಜದ ಮತಗಳು ನಿರ್ಣಾಯಕವಾಗಿವೆ. ಸಮಾಜದ ಹಿರಿಯ ಮುಖಂಡ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಬಸವರಾಜು ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ನಾಯಕ ಸಮಾಜದ ಋಣ ತೀರಿಸಬೇಕು’ ಎಂದು ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷ ದೇವರಾಜ್ ಟಿ. ಕಾಟೂರು ಆಗ್ರಹಿಸಿದರು.
ನಗರದ ಶಾಸಕರ ಭವನದಲ್ಲಿ ಮಾಜಿ ಸಚಿವರಾದ ಕೆ.ಎನ್ .ರಾಜಣ್ಣ ನೇತೃತ್ವದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ನಾಯಕ ಸಮಾಜದ ಮುಖಂಡರೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ಕಳೆದ 15 ವರ್ಷಗಳಿಂದ ಎಸ್.ಸಿ. ಬಸವರಾಜು ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವಂತೆ ಸಮಾಜದ ವತಿಯಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ಹಲವು ಬಾರಿ ಮನವಿ ಮಾಡಲಾಗಿದೆ. ಪ್ರತಿಬಾರಿಯೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರುವಂತೆ ಹೇಳಲಾಗುತ್ತಿದೆ. ಸಿದ್ದರಾಮಯ್ಯ ಅವರು ಮನಸ್ಸು ಮಾಡಿದರೆ ಮಾತ್ರ ಬಸವರಾಜು ಅವರಿಗೆ ಎಂಎಲ್‌ಸಿ ಸ್ಥಾನ ದೊರೆಯಲಿದೆ ಎಂದು ಪಕ್ಷದ ಮುಖಂಡರು ಹೇಳುತ್ತಿದ್ದಾರೆ’ ಎಂದು ದೇವರಾಜ್ ಟಿ. ಕಾಟೂರು ಹೇಳಿದರು.
‘ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಸುಮಾರು 40 ವರ್ಷಗಳಿಂದ ಬೆಂಬಲಿಗರಾಗಿ ನಿಷ್ಠೆಯಿಂದ ದುಡಿದಿರುವ ಹಾಗೂ ವರುಣ ಕ್ಷೇತ್ರದಲ್ಲಿ ಎತ್ತೇಚ್ಚವಾಗಿ ನಾಯಕ ಸಮಾಜದ ಮತವನ್ನು ಕೊಡಿಸಿ ಗೆಲ್ಲಲು ಕಾರಣಕರ್ತರಲ್ಲಿ ಒಬ್ಬರಾಗಿರುವ ಎಸ್.ಸಿ ಬಸವರಾಜು ಅವರಿಗೆ ಸೂಕ್ತ ರಾಜಕೀಯ ಸ್ಥಾನಮಾನ ನೀಡದಿರುವುದು ಅನ್ಯಾಯ. ಈ ವಿಚಾರದಲ್ಲಿ ಇನ್ನು ವಿಳಂಬ ಮಾಡಬಾರದು’ ಎಂದು ಒತ್ತಾಯಿಸಿದರು.
‘2023ರ ವಿಧಾನಸಭಾ ಚುನಾವಣೆಯಲ್ಲಿ ನಾಯಕ ಸಮಾಜದ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದ ಗೆಲ್ಲಿಸುವಂತೆ ಪ್ರಚಾರ ಮಾಡಿ ತನು,ಮನ,ಧನವನ್ನು ಧಾರೆ ಎರೆದು ರಾಜ್ಯಾದ್ಯಂತ ಪಕ್ಷ ಪರವಾಗಿ ಕೆಲಸ ಮಾಡಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾಗಿರುವ ಇವರಿಗೆ ಉಪ ಮುಖ್ಯಮಂತ್ರಿ ಅಥವಾ ಕೆಪಿಸಿಸಿ ಅಧ್ಯಕ್ಷರು ನೀಡದೆ ಕಡೆಗಣಿಸಿದ್ದಾರೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ನಮ್ಮ ಸಮಾಜದ ಮತ ಹಾಕಲು ಇವರ ಕೊಡುಗೆ ಇದೆ. ಆದರೂ ಸಮಾಜದ ಪ್ರಮುಖ ನಾಯಕರಿಗೆ ಸೂಕ್ತ ರಾಜಕೀಯ ಸ್ಥಾನಮಾನ ನೀಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ರಾಜ್ಯದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ನಾಯಕ ಸಮಾಜದ ಮತಗಳು ನಿರ್ಣಾಯಕವಾಗಿವೆ. ಸಮಾಜವನ್ನು ರಾಜಕೀಯವಾಗಿ ಕಡೆಗಣಿಸಿದರೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಬಹುದು’ ಎಂದು ಎಚ್ಚರಿಸಿದರು.
ಎಸ್.ಸಿ. ಬಸವರಾಜು ಅವರಿಗೆ ವಿಧಾನ ಪರಿಷತ್ ಸದಸ್ಯತ್ವ, ಮೈಸೂರು ಭಾಗದ ನಾಯಕ ಸಮಾಜಕ್ಕೆ ಆರು ನಿಗಮ–ಮಂಡಳಿ ಅಧ್ಯಕ್ಷ ಸ್ಥಾನಗಳು ಹಾಗೂ ವಿವಿಧ ನಿಗಮ–ಮಂಡಳಿಗಳಲ್ಲಿ ನಿರ್ದೇಶಕ ಸ್ಥಾನಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.
ಈ ಎಲ್ಲ ಬೇಡಿಕೆಗಳನ್ನು ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾಂಗ್ರೆಸ್‌ನ ಕೇಂದ್ರ ನಾಯಕರ ಗಮನಕ್ಕೆ ತರಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಒತ್ತಾಯಿಸಿದರು.
ಸಭೆಯಲ್ಲಿ ಹನೂರು ಶಾಸಕ ಮಂಜುನಾಥ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಸಿ. ಬಸವರಾಜು, ಎಂಡಿಸಿಸಿ ಉಪಾಧ್ಯಕ್ಷ ಜಯರಾಮ್, ನಗರ ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ, ಹೊಂಗನೂರು ಚಂದ್ರು, ಕೊಪ್ಪಳಿ ಮಹದೇವ್, ತಲಕಾಡು ಮಂಜುನಾಥ್, ಉದ್ಬೂರು ಕೃಷ್ಣ, ಹೊಸೂರು ಕಲ್ಲಹಳ್ಳಿ ಶ್ರೀನಿವಾಸ್, ಹೊಸಕೋಟೆ ಬಸವರಾಜು, ಹೆಡತಲೆ ನಾಗರಾಜು, ಕುರಹಟ್ಟಿ ಅರುಣ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
