ಮೈಸೂರು: ವಯಸ್ಸು ಕೇವಲ ಸಂಖ್ಯೆಯಷ್ಟೇ ಹೊರತು ಜೀವನೋತ್ಸಾಹಕ್ಕಲ್ಲ ಎಂಬುದನ್ನು ಸಾಂಸ್ಕೃತಿಕ ನಗರಿಯ ಹಿರಿಯ ನಾಗರಿಕರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ವಿಶ್ವ ಹಿರಿಯ ನಾಗರಿಕರ ದಿನದ ಅಂಗವಾಗಿ ಮೈಸೂರಿನ ಮಣಿಪಾಲ್ ಆಸ್ಪತ್ರೆ ಆಯೋಜಿಸಿದ್ದ ‘ಸೀನಿಯರ್ ಸಿಟಿಜನ್ ಪ್ರೀಮಿಯರ್ ಲೀಗ್ 2026’ ಕ್ರೀಡಾಕೂಟದಲ್ಲಿ 150ಕ್ಕೂ ಹೆಚ್ಚು ಹಿರಿಯರು ಅತ್ಯಂತ ಲವಲವಿಕೆಯಿಂದ ಪಾಲ್ಗೊಂಡು ಗಮನ ಸೆಳೆದರು.
ನಗರದ ಡೀ ಸ್ಪೋರ್ಟ್ಸ್ ಮೈದಾನದಲ್ಲಿ ನಡೆದ ಈ ವಿನೂತನ ಕ್ರೀಡಾ ಹಬ್ಬ, ಹಿರಿಯರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಜೊತೆಗೆ ಜನರೊಂದಿಗೆ ಬೆರೆಯುವಿಕೆಯ ಮಹತ್ವವನ್ನು ಸಾರಿತು. ನಿವೃತ್ತ ಜೀವನದ ಬೇಸರದಿಂದ ಹೊರಬಂದ ಹಿರಿಯರು, ಕ್ರೀಡಾಂಗಣದಲ್ಲಿ ಬಾಲ್ಯದ ದಿನಗಳಿಗೆ ಮರಳಿದರು. ಬಾಲ್ ಪಾಸಿಂಗ್, ನಿಂಬೆಹಣ್ಣು – ಚಮಚ ಓಟ, ಪೆನಾಲ್ಟಿ ಫುಟ್ಬಾಲ್ ಕಿಕ್, ವಿಕೆಟ್ ಬೌಲಿಂಗ್ ಹಾಗೂ ಮ್ಯೂಸಿಕಲ್ ಚೇರ್ಸ್‌ನಂತಹ ಮನರಂಜನಾ ಆಟಗಳಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸುವ ಮೂಲಕ ಪರಸ್ಪರ ನಗು, ಸಂತೋಷವನ್ನು ಹಂಚಿಕೊಂಡರು. ಆರೋಗ್ಯಕರವಾಗಿರಲು ಹಾಗೂ ಖುಷಿಯಾಗಿರಲು ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ಈ ಕಾರ್ಯಕ್ರಮ ತೋರಿಸಿಕೊಟ್ಟಿತು.


ಕಾರ್ಯಕ್ರಮದಲ್ಲಿ ಮಾತನಾಡಿದ ಮೈಸೂರು ಮಣಿಪಾಲ್ ಹಾಸ್ಪಿಟಲ್ಸ್‌ನ ಆರ್ಥೋಪೆಡಿಕ್ಸ್ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ. ಅಜಯ್ ಹೆಗ್ಡೆ, “ವಯಸ್ಸಾದ ಮೇಲೂ ಯಾರ ಹಂಗಿಲ್ಲದೆ ಸುಲಭವಾಗಿ ಓಡಾಡಿಕೊಂಡಿರಲು ಪ್ರತಿನಿತ್ಯದ ದೈಹಿಕ ಚಟುವಟಿಕೆಯೇ ಅತ್ಯುತ್ತಮ ಸೂತ್ರ. ಮೂಳೆಗಳ ಗಟ್ಟಿತನ, ಮಾಂಸಖಂಡಗಳ ಬಲ ಮತ್ತು ಕೀಲುಗಳ ಆರೋಗ್ಯ ಕಾಪಾಡಿಕೊಳ್ಳಲು ಸದಾ ಚಟುವಟಿಕೆಯಿಂದಿರಬೇಕು. ಪ್ರತಿದಿನದ ನಡಿಗೆ, ಸರಳ ವ್ಯಾಯಾಮಗಳು ಹಾಗೂ ಇಂತಹ ವಿನೋದಭರಿತ ಆಟಗಳು ಹಿರಿಯರಿಗೆ ಹೊಸ ಚೈತನ್ಯ ನೀಡುತ್ತವೆ. ಗಾಯಗಳಾಗದಂತೆ ಫಿಟ್‌ನೆಸ್ ಕಾಯ್ದುಕೊಳ್ಳಲು ಜಾಣತನದಿಂದ ತರಬೇತಿ ಪಡೆಯುವುದೇ ಮುಖ್ಯ.” ಎಂದು ತಿಳಿಸಿದರು.


ಇದೇ ವೇಳೆ ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕುಲರ್ ಸರ್ಜರಿ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ. ಉಪೇಂದ್ರ ಶೆಣೈ ಹಾಗೂ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ವಿಭಾಗದ ಸೀನಿಯರ್ ಕನ್ಸಲ್ಟೆಂಟ್ ಡಾ. ಸಿ.ಬಿ. ಕೇಶವಮೂರ್ತಿ ಜಂಟಿಯಾಗಿ ಮಾತನಾಡಿ, “ವಯಸ್ಸಾದಂತೆ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಜಿಮ್‌ಗೆ ಹೋಗುವುದು ಅಥವಾ ಕಠಿಣ ವ್ಯಾಯಾಮಗಳೇ ಬೇಕಿಲ್ಲ. ಪ್ರತಿದಿನದ ನಡಿಗೆ ಹಾಗೂ ದೇಹಕ್ಕೆ ಆಯಾಸವಾಗದಂತಹ ಮಿತವಾದ ಚಟುವಟಿಕೆಗಳು ಹೃದಯವನ್ನು ಸದೃಢವಾಗಿರಿಸುತ್ತವೆ,” ಎಂದು ಸಲಹೆ ನೀಡಿದರು.


ಆಸ್ಪತ್ರೆಯ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ.ಜೆ. ಪ್ರತಿಕ್ರಿಯಿಸಿ, “ಕಾಯಿಲೆ ಬಂದಾಗ ಚಿಕಿತ್ಸೆ ನೀಡುವುದಕ್ಕಷ್ಟೇ ಆಸ್ಪತ್ರೆಯ ಕೆಲಸ ಸೀಮಿತವಾಗಿಲ್ಲ. ಸಮಾಜದಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವುದು ನಮ್ಮ ಉದ್ದೇಶ. ಹಿರಿಯರಲ್ಲಿ ದೈಹಿಕ ಸಾಮರ್ಥ್ಯ ಹಾಗೂ ಬಾಂಧವ್ಯ ಹೆಚ್ಚಿಸುವ ಉದ್ದೇಶದಿಂದ ಈ ಕ್ರೀಡಾಕೂಟ ಏರ್ಪಡಿಸಲಾಗಿದೆ,” ಎಂದರು.


ಆರೋಗ್ಯಕರ ಜೀವನ, ಫಿಟ್‌ನೆಸ್ ಮತ್ತು ಜನರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು, ಮಣಿಪಾಲ್ ಆಸ್ಪತ್ರೆಯ ವೈದ್ಯರ ಜೊತೆಗೆ ಸಾಹಸಿ ಕ್ರೀಡಾಪಟು ಹಾಗೂ ಪರ್ವತಾರೋಹಿ ಡಾ. ಉಷಾ ಹೆಗ್ಡೆ ಅವರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ 66 ವರ್ಷದ ರಾಮೇಗೌಡ ಅವರು ಮಾತನಾಡಿ, “ಕ್ರೀಡೆಗಳು ಕೇವಲ ಯುವಕರಿಗೆ ಮಾತ್ರ ಎಂಬ ತಪ್ಪು ಕಲ್ಪನೆಯನ್ನು ಈ ಕಾರ್ಯಕ್ರಮ ದೂರ ಮಾಡಿದೆ.” ಎಂದು ಸಂತಸ ವ್ಯಕ್ತಪಡಿಸಿದರು. ಮತ್ತೋರ್ವ ಸ್ಪರ್ಧಿ 62 ವರ್ಷದ ನಾಗಲಾಂಬಿಕಾ, “ಇಲ್ಲಿನ ಉತ್ಸಾಹಭರಿತ ವಾತಾವರಣವು ವಯಸ್ಸಾಯಿತು ಎಂದು ಮನೆಯಲ್ಲಿಯೇ ಕೂರದೇ ಸದಾ ಚಟುವಟಿಕೆಯಿಂದಿರಲು ಸ್ಫೂರ್ತಿ ನೀಡಿದೆ,” ಎಂದು ತಮ್ಮ ಖುಷಿ ಹಂಚಿಕೊಂಡರು.

Age is just a number! 

Manipal Hospital, Mysuru presents the “Senior Citizen Premier League 2026”, a special initiative celebrating the spirit, energy, and enthusiasm of senior citizens. ❤️

Because age never stops the game! 🙌

#SeniorCitizenPremierLeague2026 #ManipalHospitalMysuru #AgeIsJustANumber #SeniorCitizens #Mysuru

Leave a Reply