: ಮಹೇಶ್, ಎಸ್
ಮೈಸೂರು: ಇತ್ತೀಚಿನ ದಿನಗಳಲ್ಲಿ ಸಿನಿಮಾ, ಮೋಜು ಮಸ್ತಿಯಲ್ಲೇ ಕಾಲ ಕಳೆಯುವ ಯುವ ಮನಸ್ಸುಗಳು ಹೆಚ್ಚಾಗುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಆದರೆ ಇದರ ನಡುವೆಯೂ ತಂದೆ?ತಾಯಿಯ ಸಂಸ್ಕಾರವನ್ನು ಉಳಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಯುವಕರೂ ನಮ್ಮ ನಡುವೆ ಇದ್ದಾರೆ ಎಂಬುದು ಹೆಮ್ಮೆಯ ಸಂಗತಿ.
ಇದಕ್ಕೆ ಉತ್ತಮ ಉದಾಹರಣೆ ಮೈಸೂರಿನ ಸುಣ್ಣದಕೇರಿ. ಪ್ರತಿ ಹಬ್ಬ, ಜಾತ್ರೆ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಿರಿಯರು ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದಾರೆ. ಇದೀಗ ಅದೇ ಸಂಪ್ರದಾಯವನ್ನು ಅಲ್ಲಿನ ಯುವಕರು ಅಚ್ಚುಕಟ್ಟಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಹಲವು ವರ್ಷಗಳಿಂದ ಸುಣ್ಣದಕೇರಿ ಭಾಗದಲ್ಲಿ ವರ್ಷಕ್ಕೊಮ್ಮೆ ನಡೆಯುವ ನಾಟಕ ಪ್ರದರ್ಶನದಲ್ಲಿ ಯುವಕರ ತಂಡ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆಲ್ಲುತ್ತಿದೆ. ನಾಟಕದ ಪಾತ್ರಗಳಿಗೆ ಜೀವ ತುಂಬುವ ಈ ಯುವಕರು ಕೇವಲ ಮನರಂಜನೆ ನೀಡುವುದಷ್ಟೇ ಅಲ್ಲದೆ, ನಮ್ಮ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಮಹತ್ವದ ಕೆಲಸವನ್ನೂ ಮಾಡುತ್ತಿದ್ದಾರೆ.

ಅದರಲ್ಲೂ ವಿಶೇಷವಾಗಿ ಲೋಕೇಶ್ ಅವರು ಯುವಕನ ಪಾತ್ರದಲ್ಲಿ ನೀಡುತ್ತಿರುವ ಅಭಿನಯಕ್ಕೆ ವಿಶೇಷ ಅಭಿಮಾನಿ ವರ್ಗವೇ ಸೃಷ್ಟಿಯಾಗಿದೆ. ಅವರ ಸಹಜ ಅಭಿನಯ, ಪಾತ್ರಕ್ಕೆ ತಕ್ಕಂತೆ ತಮ್ಮನ್ನು ತಾವು ತೊಡಗಿಸಿಕೊಳ್ಳುವ ರೀತಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.ಇಂತಹ ಯುವಕರೇ ನಮ್ಮ ನಾಡಿನ ಸಂಸ್ಕೃತಿಯ ಭವಿಷ್ಯದ ಭರವಸೆ. ಮೋಜು?ಮಸ್ತಿಯ ಜೊತೆಗೆ ನಮ್ಮ ಕಲೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಹಿರಿಯರ ಪರಂಪರೆಯನ್ನು ಉಳಿಸುವ ಜವಾಬ್ದಾರಿಯೂ ಯುವಕರ ಮೇಲಿದೆ.ಸುಣ್ಣದಕೇರಿ ಯುವಕರ ಬಳಗ ಪ್ರತಿವರ್ಷ ಸ್ಥಳೀಯರಿಗಾಗಿ ರಂಗೋಲಿ ಸ್ಪರ್ಧೆ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಹಬ್ಬದ ಸಂಭ್ರಮದ ಜೊತೆಗೆ ಪ್ರಸಾದ ವಿತರಣೆ ಕಾರ್ಯಕ್ರಮದಲ್ಲೂ ಭಾಗವಹಿಸಿ, ಅಗತ್ಯವಿರುವವರಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡುವುದು ಇವರ ಪ್ರಮುಖ ಕಾರ್ಯವಾಗಿದೆ.ಯಾವುದೇ ಕಾರ್ಯಕ್ರಮವಿದ್ದರೂ ಒಗ್ಗಟ್ಟಿನಿಂದ ಭಾಗವಹಿಸಿ, ತಮ್ಮದೇ ಆದ ರೀತಿಯಲ್ಲಿ ಸಹಕಾರ ನೀಡುತ್ತಿರುವ ಈ ಯುವಕರ ತಂಡ, ತಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಮಾದರಿಯಾಗಿದೆ.
