ಗುಂಡ್ಲುಪೇಟೆ: ತಾಲೂಕಿನಲ್ಲಿ ಬೇಸಿಗೆ ಬರಗಾಲವಾಗಿರುವ ಹಿನ್ನಲೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಆದ್ದರಿಂದ ಕೂಡಲೇ ಸಮರ್ಪಕ ಮೇವು ಪೂರೈಕೆಗೆ ಕ್ರಮ ವಹಿಸಬೇಕೆಂದು ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಹಸೀಲ್ದಾರ್ ತನ್ಮಯ್ ರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದ ರೈತ ಮುಖಂಡರು, ತಾಲೂಕಿನ ಭೀಮನಬೀಡು, ಮಾಡ್ರಹಳ್ಳಿ, ದೇಶಿಪುರ, ಕೋಡಹಳ್ಳಿ, ಹೊನ್ನೇಗೌಡನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆ ಇಲ್ಲದ ಕಾರಣ ಮೇವಿನ ಕೊರತೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಇದರ ಬಗ್ಗೆ ಕೂಡಲೇ ಕ್ರಮ ವಹಿಸಿ ಸಮರ್ಪಕವಾಗಿ ಮೇವು ಪೂರೈಕೆಗೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ತಾಲೂಕಿನಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರು ಮನೆಯಿಂದ ಹೊರ ಬರಲಾರದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಜಮೀನುಗಳಿಗೆ ತೆರಳಲು ಸಾಧ್ಯವಾಗದ ಸಂದರ್ಭ ಎದುರಾಗಿದೆ. ಆದ್ದರಿಂದ ಜಾನುವಾರುಗಳಿಗೂ ಕೂಡ ಮೇವಿಗೂ ಕೊರತೆ ಉಂಟಾಗಿದೆ. ಸಮಸ್ಯೆ ಬಿಗಡಾಯಿಸುವ ಮುನ್ನ ಎಚ್ಚೇತ್ತುಕೊಂಡು ಜಾನುವಾರುಗಳನ್ನು ಹೊಂದಿರುವ ರೈತರಿಗೆ ಮೇವು ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷೀಯ ಮಂಡಳಿ ಸದಸ್ಯರಾದ ಮಾಡಹಳ್ಳಿ ಪಾಪಣ್ಣ, ಬರಗಿ ಮಹೇಶ್, ತಾಲೂಕು ಅಧ್ಯಕ್ಷೀಯ ಮಂಡಳಿ ಸದಸ್ಯರಾದ ಭೀಮನಬೀಡು ರಾಜು, ಬೇರಂಬಾಡಿ ಶಶಿ, ಸಿದ್ದಪ್ಪ, ದೇಶಿಪುರ ಆರಾಧ್ಯ ಇತರರು ಹಾಜರಿದ್ದರು.

Leave a Reply