ಗುಂಡ್ಲುಪೇಟೆ: ರಾಜ್ಯದ ಗಡಿ ಚೆಕ್ ಪೋಸ್ಟ್ ಗಳಲ್ಲಿ ಸರಕು ಸಾಗಣೆ ವಾಹನಗಳಿಂದ ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹಣ ವಸೂಲಿಗೆ ಇಳಿದಿದ್ದು, ಕಾಂಚಾಣ ನೀಡಿದರೆ ವಾಹನಗಳ ತಪಾಸಣೆಯೇ ಇಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಮೂಲಕ ಅಧಿಕಾರಿಗಳು ಶಾಮೀಲಾಗಿ ಹಣ ವಸೂಲಿಗೆ ಇಳಿದಿದ್ದಾರೆಯೇ ಎಂಬ ಅನುಮಾನ ಮೂಡಿದೆ.
ತಾಲೂಕಿನ ಗಡಿ ಕೇರಳಕ್ಕೆ ಹೊಂದಿಕೊಂಡಂತ್ತಿರುವ ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಪೆÇಲೀಸ್ ಇಲಾಖೆ ಮೂಲಕ ಹೋಂ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬ ಸಮವಸ್ತ್ರ ಧರಿಸದೆ ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದಾರೆ. ಹಣ ಪಡೆದ ಬಳಿಕ ಯಾವುದೇ ಅಧಿಕೃತ ರಸೀದಿ ಕೊಡದೆ ಜೊತೆಗೆ ವಾಹನಗಳ ತಪಾಸಣೆಯನ್ನು ನಡೆಸದೆ ಬಿಡಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸಿಬ್ಬಂದಿಯೊಬ್ಬರು ಚಾಲಕರಿಂದ ಹಣ ಪಡೆಯತ್ತಿರುವ ವಿಡಿಯೋ ಹರಿದಾಡುತ್ತಿದೆ.
ಗುಂಡ್ಲುಪೇಟೆಯು ಕೇರಳ ಮತ್ತು ತಮಿಳುನಾಡು ಎರಡು ಅಂತರಾಜ್ಯ ಗಡಿ ಹಂಚಿಕೊಂಡಿರುವ ಸೂಕ್ಷ್ಮ ಪ್ರದೇಶವಾಗಿದೆ. ಕೇರಳದ ಕಡೆ ಮೂಲೆಹೊಳೆ ಚೆಕ್ ಪೋಸ್ಟ್ ಹಾಗೂ ತಮಿಳುನಾಡು ಕಡೆಗೆ ಕೆಕ್ಕನಹಳ್ಳ ಚೆಕ್ ಪೋಸ್ಟ್ ನಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ತಪಾಸಣೆ ನಡೆಸುತ್ತಿದೆ. ಆದರೆ ತಾಲೂಕಿನಿಂದ ಹೊರ ರಾಜ್ಯ ಮತ್ತು ಬೇರೆಡೆಯಿಂದ ಇಲ್ಲಿಗೆ ಬರುವ ಸರಕು ಸಾಗಣೆ ವಾಹನ ಮತ್ತು ತರಕಾರಿ, ಖನಿಜ ಸಂಪತ್ತು ತುಂಬಿಕೊಂಡು ತೆರಳುವ ಟಿಪ್ಪರ್ ಲಾರಿಗಳನ್ನು ತಪಾಸಣೆ ನಡೆಸದೆ ಇಂತಿಷ್ಟು ಹಣ ಪಡೆದು ಕಳುಹಿಸಲಾಗುತ್ತಿದೆ. ಇದರ ಮಧ್ಯೆ ರಾತ್ರಿ 9 ಗಂಟೆ ನಂತರ ಚೆಕ್ ಪೆÇೀಸ್ಟ್ ಬಂದ್ ಮಾಡಿದ ಬಳಿಕವೂ ಕೆಲ ವಾಹನಗಳನ್ನು ಹಣ ಪಡೆದು ಬಿಡಲಾಗುತ್ತಿದೆ ಎಂದು ಜಾರಕಿಹೊಳಿ ಬ್ರಿಗೇಡ್ ಸಂಸ್ಥಾಪಕ ಗೋವಿನಾಯಕ ಆರೋಪಿಸಿದ್ದಾರೆ.
ಹಣ ನೀಡಿದರೆ ತಪಾಸಣೆಯೇ ಇಲ್ಲ: ತಾಲೂಕಿನಿಂದ ಪ್ರತಿನಿತ್ಯ 200ಕ್ಕೂ ಅಧಿಕ ಟಿಪ್ಪರ್ ಲಾರಿಗಳಲ್ಲಿ ಜಲ್ಲಿ ಕಲ್ಲು, ಖನಿಜ ಸಂಪತ್ತು ಕೇರಳಕ್ಕೆ ಸಾಗಣೆಯಾಗುತ್ತಿದೆ. ಚೆಕ್ ಪೋಸ್ಟ್ ಗಳಲ್ಲಿ ಓವರ್ ಲೋಡ್, ಪರ್ಮಿಟ್ ಯಾವುದನ್ನು ಪರಿಶೀಲನೆ ಮಾಡದೆ ಹಣ ಪಡೆದು
ಬಿಡಲಾಗುತ್ತಿದೆ. ಇದರ ಮಧ್ಯೆ ಜಾನುವಾರು ಸಾಗಣೆ, ಕಪ್ಪು ಮಣ್ಣು ರವಾನೆ ಮಾಡುವ ಜಾಲವೂ ಕೂಡ ಆಕ್ಟಿವ್ ಆಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕೆಲ ತಿಂಗಳ ಹಿಂದೆ ಕಪ್ಪು ಮಣ್ಣು ತುಂಬಿಕೊಂಡು ಕೇರಳಕ್ಕೆ ತೆರಳುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿ ಅಕ್ರಮ ಬಯಲಾಗಿತ್ತು ಎಂದು ಪಟ್ಟಣದ ನಿವಾಸಿ ಮೋನಿಶ್ ದೂರಿದರು.
ಮೂಲೆಹೊಳೆ ಚೆಕ್ ಪೋಸ್ಟ್ ಮೂಲಕ ಕೇರಳಕ್ಕೆ ತೆರಳಬೇಕಾದರೆ ಹಣ ನೀಡಬೇಕು. ಇಲ್ಲದಿದ್ದರೆ ಅಲ್ಲಿನ ಸಿಬ್ಬಂದಿ ತಪಾಸಣೆ ನೆಪದಲ್ಲಿ ತೊಂದರೆ ನೀಡುತ್ತಾರೆ. ಇದರಿಂದ ನಿಗಧಿತ ವೇಳೆಗೆ ಸರಕು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ವಾಹನ ಚಾಲಕರೊಬ್ಬರು ಅಸಮಾಧಾನ ಹೊರ ಹಾಕಿದರು.
ಸರಕು ಸಾಗಣೆ ವಾಹನಗಳಿಂದ ವ್ಯಕ್ತಿ ಹಣ ಪಡೆಯುತ್ತಿರುವ ವಿಡಿಯೋ ಗಮನಕ್ಕೆ ಬಂದಿದೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು.
– ಸ್ನೇಹಾರಾಜ್, ಡಿವೈಎಸ್ಪಿ.
