ಮೈಸೂರು: ನಗರದ ಚಿಕ್ಕ ಗಡಿಯಾರ ಸಮೀಪ ಹಣ್ಣು ಮಾರಾಟ ಮಾಡುವ ಕೆಲ ತಳ್ಳುಗಾಡಿ ವ್ಯಾಪಾರಿಗಳು ಕಡಿಮೆ ತೂಕದ ಹಣ್ಣು ನೀಡಿ ಪೂರ್ಣ ತೂಕದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದಿವೆ. ದಿನನಿತ್ಯ ನೂರಾರು ಮಂದಿ ಹಣ್ಣು ಖರೀದಿಸುವ ಈ ಪ್ರದೇಶದಲ್ಲಿ ಇಂತಹ ಬೆಳವಣಿಗೆ ಗ್ರಾಹಕರಲ್ಲಿ ಆತಂಕ ಮೂಡಿಸಿದೆ.
ಹಲವು ಗ್ರಾಹಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದಾಗ, ಕೆಲ ವ್ಯಾಪಾರಿಗಳು ನಿಗದಿತ ಪ್ರಮಾಣಕ್ಕಿಂತ ಕಡಿಮೆ ತೂಕದ ಹಣ್ಣು ನೀಡಿ ಗ್ರಾಹಕರಿಂದ ಪೂರ್ಣ ಪ್ರಮಾಣದ ಹಣ ಪಡೆಯುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು. ಒಂದು ಕೆ.ಜಿ. ಹಣ್ಣು ಖರೀದಿಸಿದರೂ ಪೂರ್ಣ ಪ್ರಮಾಣದ ತೂಕ ಸಿಗುತ್ತಿಲ್ಲ. ಇದರಿಂದ ಪ್ರತಿನಿತ್ಯ ಹಣ್ಣು ಖರೀದಿಸುವ ಗ್ರಾಹಕರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಸ್ಥಳೀಯರ ಪ್ರಕಾರ, ಈ ಹಿಂದೆ ಸಂಬಂಧಪಟ್ಟ ಅಧಿಕಾರಿಗಳು ದಾಳಿ ನಡೆಸಿ ತೂಕದ ಯಂತ್ರಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸಿದ ಕೆಲ ವ್ಯಾಪಾರಿಗಳ ವಿರುದ್ಧ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದರು. ಆದಾಗ್ಯೂ, ಕೆಲವರು ಮತ್ತೆ ಅದೇ ರೀತಿಯ ಅಕ್ರಮವನ್ನು ಮುಂದುವರಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಒಂದೆರಡು ದಿನಗಳ ತಪಾಸಣೆಯಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ನಿರಂತರ ಮತ್ತು ಅನಿರೀಕ್ಷಿತ ತಪಾಸಣೆ ನಡೆದರೆ ಮಾತ್ರ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ತೂಕದ ಬಗ್ಗೆ ಗ್ರಾಹಕರು ಪ್ರಶ್ನಿಸಿದರೆ ಕೆಲ ವ್ಯಾಪಾರಿಗಳು ವಾಗ್ವಾದ ನಡೆಸುತ್ತಾರೆ ಎನ್ನುವುದು ಸ್ಥಳೀಯರ ಮತ್ತೊಂದು ಆರೋಪ. ಇದರಿಂದ ಅನೇಕ ಗ್ರಾಹಕರು ಮೋಸವಾಗುತ್ತಿದೆ ಎಂಬ ಅನುಮಾನ ಇದ್ದರೂ ಪ್ರಶ್ನಿಸಲು ಹಿಂದೇಟು ಹಾಕುತ್ತಿದ್ದಾರೆ. ವಿಶೇಷವಾಗಿ ವಯೋವೃದ್ಧರು, ಮಹಿಳೆಯರು ಹಾಗೂ ಹೊರ ಊರುಗಳಿಂದ ಬರುವ ಗ್ರಾಹಕರು ಇಂತಹ ಪರಿಸ್ಥಿತಿಯಿಂದ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.
ಚಿಕ್ಕ ಗಡಿಯಾರ ಪ್ರದೇಶವು ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾಗಿದ್ದು, ಪ್ರತಿದಿನ ಸಾವಿರಾರು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಇಂತಹ ಸ್ಥಳದಲ್ಲಿ ಗ್ರಾಹಕರ ವಿಶ್ವಾಸಕ್ಕೆ ಧಕ್ಕೆಯಾಗುವ ರೀತಿಯ ಆರೋಪಗಳು ಕೇಳಿಬರುತ್ತಿರುವುದು ಸಂಬಂಧಪಟ್ಟ ಇಲಾಖೆಗಳ ಗಮನ ಸೆಳೆಯಬೇಕಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾನೂನು ಮಾಪನ ಶಾಸ್ತ್ರ (ಲೀಗಲ್ ಮೆಟ್ರಾಲಜಿ) ಇಲಾಖೆಯ ಅಧಿಕಾರಿಗಳು ತೂಕದ ಯಂತ್ರಗಳ ಪರಿಶೀಲನೆ ನಡೆಸಿ, ಅವು ಪ್ರಮಾಣೀಕೃತವಾಗಿವೆಯೇ ಎಂಬುದನ್ನು ಖಚಿತಪಡಿಸಬೇಕು. ನಿಯಮ ಉಲ್ಲಂಘನೆ ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಮರುಕಳಿಸದಂತೆ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದೇ ವೇಳೆ, ಗ್ರಾಹಕರ ದೂರುಗಳನ್ನು ಸ್ವೀಕರಿಸಲು ಸುಲಭ ವ್ಯವಸ್ಥೆ ರೂಪಿಸುವುದು ಹಾಗೂ ಯಾವ ಇಲಾಖೆಗೆ ದೂರು ಸಲ್ಲಿಸಬೇಕು ಎಂಬ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಗ್ರಾಹಕರು ಹಣ್ಣು ಖರೀದಿಸುವಾಗ ತೂಕವನ್ನು ಸ್ವತಃ ಪರಿಶೀಲಿಸಿಕೊಂಡು, ಅನುಮಾನ ಕಂಡುಬಂದರೆ ಕೂಡಲೇ ಸಂಬಂಧಪಟ್ಟ ಇಲಾಖೆಗೆ ದೂರು ನೀಡಬೇಕು ಎಂದು ಗ್ರಾಹಕ ಹಿತರಕ್ಷಣಾ ಕಾರ್ಯಕರ್ತರು ಸಲಹೆ ನೀಡಿದ್ದಾರೆ.ಈ ಸಂಬಂಧ ಅಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಿ, ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
“೨೦೨೬ರ ಜೂ,೧೬ ರಂದು ಹಣ್ಣು ಮಾರಾಟಗಾರರು ಮತ್ತು ವ್ಯಾಪಾರಿಗಳ ವಿರುದ್ಧ ವಿಶೇಷ ತಪಾಸಣೆ ನಡೆಸಲಾಗಿತ್ತು. ಈ ವೇಳೆ ನಿಯಮ ಉಲ್ಲಂಘನೆ ಕಂಡುಬಂದ ೯ ಪ್ರಕರಣಗಳನ್ನು ದಾಖಲಿಸಿ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಹಣ್ಣು ಮಾರಾಟಗಾರರು ಮತ್ತು ವ್ಯಾಪಾರಿಗಳಿಗೆ ಸರಿಯಾದ ತೂಕದ ಮಹತ್ವ, ಕಾನೂನುಬದ್ಧ ತೂಕದ ಯಂತ್ರಗಳ ಬಳಕೆ ಹಾಗೂ ಗ್ರಾಹಕರಿಗೆ ಮೋಸವಾಗದಂತೆ ವ್ಯಾಪಾರ ನಡೆಸುವ ಕುರಿತು ಜಾಗೃತಿ ಮೂಡಿಸಲಾಗಿದೆ. ಮುಂದೆಯೂ ಇಂತಹ ತಪಾಸಣೆಗಳನ್ನು ನಿರಂತರವಾಗಿ ನಡೆಸಲಾಗುವುದು. ನಿಯಮ ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.”
ಸರಳಾ ನಾಯರ್ ಸಹಾಯಕ ನಿಯಂತ್ರಕರು (ಗ್ರೇಡ್-೧), ಕಾನೂನು ಮಾಪನ ಶಾಸ್ತ್ರ ಇಲಾಖೆ, ಮೈಸೂರು
“ನಗರ ಪ್ರದೇಶದಲ್ಲಿ ಹಣ್ಣುಗಳು ಕಡಿಮೆ ಬೆಲೆಗೆ ಸಿಗುತ್ತವೆ ಎಂಬ ಕಾರಣಕ್ಕೆ ನಾವು ಇಲ್ಲಿಗೆ ಖರೀದಿಗೆ ಬರುತ್ತೇವೆ. ಆದರೆ ಕೆಲವರು ಕಡಿಮೆ ತೂಕದ ಹಣ್ಣು ನೀಡಿ, ಪೂರ್ಣ ತೂಕದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಅನುಭವ ಆಗಿದೆ. ಇದರಿಂದ ಗ್ರಾಹಕರು ಮೋಸ ಹೋಗುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವ್ಯಾಪಾರ ನಡೆಯುವ ಸ್ಥಳದಲ್ಲಿಯೇ ಧ್ವನಿವರ್ಧಕದ ಮೂಲಕ ಗ್ರಾಹಕರ ಹಕ್ಕುಗಳು, ಸರಿಯಾದ ತೂಕದ ಬಗ್ಗೆ ಅರಿವು ಮೂಡಿಸಬೇಕು. ಅಲ್ಲದೆ, ಯಾರಿಗಾದರೂ ಮೋಸವಾದರೆ ಕೂಡಲೇ ದೂರು ನೀಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಬೇಕು. ದೂರು ಬಂದ ತಕ್ಷಣ ಸ್ಥಳದಲ್ಲೇ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡರೆ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬಹುದು.”