ಮೈಸೂರು: ಜೆಎಸ್‌ಎಸ್ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವತಿಯಿಂದ ಡಿಸೆಂಬರ್ 7ರಂದು ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್‌ನ ಇನ್ಸಿಟ್ಯೂಟ್ ಆಫ್ ಮದರ್ ಅಂಡ್ ಡೆಫ್ ಚೈಲ್ಡ್ ಸಂಸ್ಥೆಯಲ್ಲಿ ವಿಶೇಷಚೇತನ ಮಕ್ಕಳು ಮತ್ತು ಅವರ ಪೋಷಕರಿಗಾಗಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಯಿತು.

ಜೆಎಸ್‌ಎಸ್ ದಂತ ವೈದ್ಯಕೀಯ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಡಾ. ಬಿ. ನಂದಲಾಲ್ ಮಾತನಾಡಿ, ಜೆಎಸ್‌ಎಸ್ ದಂತ ಆಸ್ಪತ್ರೆ ಕಳೆದ 35 ವರ್ಷಗಳಿಂದ ಅನುಭವಿ ತಜ್ಞರ ತಂಡದೊಂದಿಗೆ ಉತ್ತಮ ಸೇವೆ ಒದಗಿಸುತ್ತಿದೆ ಎಂದು ಹೇಳಿದರು. ಮಕ್ಕಳ ದಂತಸ್ವಾಸ್ಥ್ಯ ಕಾಪಾಡಲು ‘ಗೋಲ್ಡನ್ ರೂಲ್ಸ್’‌ಗಳನ್ನು ಪಾಲಿಸುವುದು ಅಗತ್ಯ. ವಯಸ್ಸಿಗೆ ತಕ್ಕ ಟೂತ್‌ಬ್ರಶ್ ಮತ್ತು ಫ್ಲೋರೈಡ್ ಹೊಂದಿರುವ ಟೂತ್‌ಪೇಸ್ಟ್ ಬಳಸಿ, ದಿನಕ್ಕೆ ಎರಡು ಬಾರಿ ಕನಿಷ್ಠ ಎರಡು ನಿಮಿಷಗಳ ಕಾಲ ಹಲ್ಲು ತೊಳೆಯಬೇಕು. ಅನಾವಶ್ಯಕ ಸಿಹಿ ಪದಾರ್ಥಗಳ ಸೇವನೆ ತಪ್ಪಿಸಿ, ಊಟದ ವೇಳೆಯಲ್ಲಿ ಮಾತ್ರ ಸಿಹಿ ತಿನುವ ಅಭ್ಯಾಸ ರೂಢಿಸಿಕೊಂಡರೆ ಹಲ್ಲು ಕೊಳೆಯುವುದನ್ನು ತಡೆಗಟ್ಟಬಹುದು ಎಂದು ಅವರು ಸಲಹೆ ನೀಡಿದರು. ಮಕ್ಕಳಲ್ಲಿ ಉಂಟಾಗುವ ದಂತ ಸಮಸ್ಯೆಗಳನ್ನು ಬೇಗನೆ ಗುರುತಿಸಿ ತಕ್ಷಣ ದಂತ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದರು.

ಪುತ್ತೂರು ದೈಪಿಲ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಆರ್. ಗೌಡ ಮಾತನಾಡಿ, ಐನ್‌ಸ್ಟೀನ್ ಮತ್ತು ಸ್ವಾಮಿ ವಿವೇಕಾನಂದರ ಉದಾಹರಣೆಯನ್ನು ನೀಡುತ್ತಾ, ಮಕ್ಕಳ ಸಕಾರಾತ್ಮಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದುದೇ ಎಂದು ಹೇಳಿದರು. ವಿಶೇಷಚೇತನ ಮಕ್ಕಳನ್ನು ಹೆಚ್ಚಿನ ಕಾಳಜಿಯಿಂದ ಬೆಳೆಸಬೇಕಿದೆ ಎಂದರು.

ಇನ್ಸಿಟ್ಯೂಟ್ ಆಫ್ ಮದರ್ ಅಂಡ್ ಡೆಫ್ ಚೈಲ್ಡ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಹಾಗೂ ಖಜಾಂಚಿ ಶ್ರೀ ಎ. ದಿನಕರ ಶೆಟ್ಟಿ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ವಿವರಿಸಿ, ಜೆಎಸ್‌ಎಸ್ ಸಂಸ್ಥೆಗಳ ಸೇವೆಯನ್ನು ಪ್ರಶಂಸಿಸಿದರು.

ಶಿಬಿರದಲ್ಲಿ 100ಕ್ಕೂ ಹೆಚ್ಚು ಮಕ್ಕಳು ಹಾಗೂ ಪೋಷಕರಿಗೆ ದಂತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಯಿತು. ಜೆಎಸ್‌ಎಸ್ ದಂತ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ಶಾನಭೋಗ್ ವಿಶೇಷ ಕ್ಲಿನಿಕ್‌ಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು. ವೈದ್ಯರಾದ ಡಾ. ಪ್ರಭುಲಿಂಗಸ್ವಾಮಿ, ಡಾ. ಮೌರ್ಯ, ಡಾ. ವಿದ್ಯಾಲಕ್ಷ್ಮೀ, ಡಾ. ಶಾಲಿನಿ ಪ್ರಕಾಶ್, ಡಾ. ಮಧುಮಿತಾ, ಡಾ. ಮಾನಿಕ್, ಡಾ. ದೇಬೋಸ್ಮಿತಾ, ಡಾ. ಅಭಿನಯ, ಡಾ. ಕೊಚುತೆರಸಿ ಹಾಗೂ ಸಿಬ್ಬಂದಿವರ್ಗದವರು ತಪಾಸಣಾ ಕಾರ್ಯದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಶ್ರೀಮತಿ ಪರಿಮಳ ಮೂರ್ತಿ ಪ್ರಾರ್ಥಿಸಿ ಸ್ವಾಗತಿಸಿದರು. ಶ್ರೀಮತಿ ಅಶ್ವಿನಿ ವಂದಿಸಿದರು. ಕಾರ್ಯಕ್ರಮವನ್ನು ಶ್ರೀ ಎಂ. ಜಯಶಂಕರ್ ನಿರೂಪಿಸಿದರು.