(ಡಿ.29 ಕುವೆಂಪು ಜನ್ಮದಿನ. ಅವರ ಬಗ್ಗೆ ಸುವಿಚಾರ ಒಂದನ್ನು ಕುಮಾರಕವಿ ನಟರಾಜ್ ಓದುಗರ ಮುಂದೆ ತೆರೆದಿಟ್ಟಿದ್ದಾರೆ.)

“ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಬರೆಯದ ಸಾಹಿತ್ಯವಿಲ್ಲ” ಕತೆ, ಕವನ, ನಾಟಕ, ವಿಮರ್ಶೆ, ಮಹಾಕಾವ್ಯ, ಖಂಡಕಾವ್ಯ, ಕಾದಂಬರಿ, ಕಾವ್ಯಮೀಮಾಂಸೆ, ಪ್ರಬಂಧ, ಅಂಕಣ, ಭಾಷಣ, ಲೇಖನ, ಶಿಶುಸಾಹಿತ್ಯ, ಅನುವಾದ, ವಿಮರ್ಶೆ, ಆತ್ಮಕಥೆ, ಸಿನಿಮಾ ಕಥೆ, ಚಿತ್ರಕಥೆ, ಹಾಡು, ಸಂಭಾಷಣೆ, ಜೀವನಚರಿತ್ರೆ, ರಗಳೆ ಭಾವಗೀತೆ, ಪದಕೋಶ, ಪತ್ರಿಕೋದ್ಯಮ, ರಾಜಕಾರಣ, ಆರ್ಥಿಕಜ್ಞಾನ, ಇಂಗ್ಲಿಷ್‌ ಸಾಹಿತ್ಯ ಮುಂತಾದ ಪ್ರಾಕಾರಗಳಲ್ಲಿ ಒಟ್ಟು 75 ಕೃತಿ ಸೃಜಿಸಿ ಯಶಸ್ವಿಯಾದ ಪ್ರಪಂಚದ ಏಕಮೇವಾದ್ವಿತೀಯ ವರಕವಿ. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ತೀರ್ಥಹಳ್ಳಿ ಬಳಿ ಕುಪ್ಪಳ್ಳಿಯ ಶ್ರೀಮತಿ ಸೀತಮ್ಮ ಶ್ರೀ ವೆಂಕಟಪ್ಪಗೌಡರ ಪುತ್ರರತ್ನರಾಗಿ 29.12.1904ರಂದು ಹಿರೀಕೊಡಿಗೆಯಲ್ಲಿ ಜನಿಸಿದರು. ಐಗಳಮಠ ಗ್ರಾಮೀಣಶಾಲೆ ಶಿಕ್ಷಣ ಮುಗಿಸಿ 1929ರಲ್ಲಿ ಮೈ.ವಿ.ವಿ. ಇಂದ ಎಂ.ಎ. ಪದವಿಗಳಿಸಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಾಪಕ ಸೇವೆ ಆರಂಭ. ನಂತರ ಮೈಸೂರು ಯುವರಾಜ ಕಾಲೇಜಿನಲ್ಲಿ ಪ್ರವಾಚಕರಾಗಿದ್ದು ಶೀಘ್ರದಲ್ಲೆ ಮಹಾರಾಜ ಕಾಲೇಜಿನ ಪ್ರಾಧ್ಯಾಪಕ- ಪ್ರಾಂಶುಪಾಲರಾಗಿ ವೃತ್ತಿಜೀವನ ಕೈಗೊಂಡರು.

ಬಾಲ್ಯದಿಂದಲೆ ಪ್ರಕೃತಿ ಆರಾಧಕರಾಗಿ ರಾಮಕೃಷ್ಣಪರಮಹಂಸ ವಿವೇಕಾನಂದ ಮುಂತಾದ ಮಹಾತ್ಮರ ಆ[ವಿ]ಚಾರಗಳಿಂದ ಪ್ರಭಾವಿತರಾದರು. ಪದ್ಮ[ವಿ]ಭೂಷಣ, ಅಭಿನವಪಂಪ, ರಾಷ್ಟ್ರಕವಿ, ನಾಡೋಜ,
ಜಗದಕವಿ-ಯುಗದಕವಿ, ಕರ್ನಾಟಕರತ್ನ, 4ವಿ.ವಿ.ಯಿಂದ ಡಿ.ಲಿಟ್-ಗೌ.ಡಾಕ್ಟರೇಟ್‌ ಪುರಸ್ಕೃತ ಏಕೈಕ ಸಾಹಿತಿ! ಕುವೆಂಪು ಕುರಿತು ಬೇರೆ ಲೇಖಕರು ಬರೆದ 22 ವಿವಿಧ ಕೃತಿಗಳಿವೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರ ಮಟ್ಟದ 24ಪ್ರಶಸ್ತಿ ಪುರಸ್ಕಾರ ಬಿರುದುಗಳು ಸಂದಿರುವುದು ವಿಶ್ವದಾಖಲೆ!

ಅಖಿಲ ಭಾರತ 39ನೇ ಕನ್ನಡ ಸಾಹಿತ್ಯ ಸಮ್ಮೇಳನ[1957] ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸರ್ಕಾರವು ಇವರ ಜನ್ಮದಿನ ವನ್ನು “ವಿಶ್ವಮಾನವ ದಿನ” ಎಂದು ಘೋಷಿಸಿ ಆಚರಣೆ ಮಾಡುತ್ತಿದೆ. ರಾಜ್ಯದ 8 ವಿ.ವಿ.ಗಳ ವಿಶ್ವಕೋಶದಲ್ಲಿ ಮತ್ತು ಗ್ರಂಥಸೂಚಿಯಲ್ಲಿ ಕುವೆಂಪುರವರ ಬಗ್ಗೆ ಉಲ್ಲೇಖವಿದೆ
ಜಗತ್ತಿನ 32 ಭಾಷೆಗಳಲ್ಲಿ ಇವರ ಕೃತಿಗಳು ಅನುವಾದಗೊಂಡಿದೆ ಬಹುಶಃ ರಾಜಕೀಯ ಇಲ್ಲದಿದ್ದರೆ ಮತ್ತು ಇನ್ನೊಂದೆರಡು ವರ್ಷ ಬದುಕಿದ್ದಿದ್ದರೆ ನೋಬೆಲ್ ಪ್ರಶಸ್ತಿ ದೊರಕುತ್ತಿತ್ತು?ಎಂಬುದರಲ್ಲಿ ಸಂಶಯವಿಲ್ಲ!  

1956-60 ಅವಧಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆಯ ಗದ್ದುಗೆ ಏರಿ, ರಾಜ್ಯ, ರಾಷ್ಟ್ರ, ಯುಜಿಸಿ ನಿಬ್ಬೆರಗಾಗುವಂಥ ನೂರಾರು ಶೈಕ್ಷಣಿಕ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿದರು.  ವಿ.ವಿ.ಆಡಳಿತದಲ್ಲಿ ಹಗಲಿರುಳು ತೊಡಗಿಸಿಕೊಂಡು ಅಧ್ಯಾಪಕರ, ಸಂಶೋಧಕರ ಹಾಗೂ ಅಧ್ಯಾಪಕೇತರರ ವಿಶ್ವಾಸ-ಗೌರವ ಗಳಿಸಿದರು. 1960ರಲ್ಲಿ ಅಂದಾಜು 800 ಎಕರೆ ವಿಸ್ತೀರ್ಣವುಳ್ಳ  ರಾಜ್ಯದ ಪ್ರಪ್ರಥಮ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ವಿಭಾಗಗಳ ಕೇಂದ್ರ ’ಮಾನಸ ಗಂಗೋತ್ರಿ’ ಎಂಬ ಕನಸಿನ ಕೂಸಿನ ಜನಕ!

ಅಧ್ಯಯನಾಂಗ, ಸಂಶೋಧನಾಂಗ, ಪ್ರಸಾರಾಂಗ, ಮುದ್ರಣಾಲಯ, ಆಡಳಿತಾಂಗ ರೂವಾರಿ ಹಾಡುಗಾರಿಕೆ ಮತ್ತು ವಾದ್ಯ ಸಂಗೀತ-ನೃತ್ಯ-ನಾಟಕ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ, ಪದವಿ, ಬೋಧನೆ- ಸಂಶೋಧನೆಗೆಂದು ಲಲಿತ ಕಲೆಗಳ ಕಾಲೇಜು ಸ್ಥಾಪಿಸಿದ ಪಿತಾಮಹ! ಮಾನವಿಕ, ವಿಜ್ಞಾನ, ವಾಣಿಜ್ಯ ನಿಖಾಯಗಳನ್ನು ಪ್ರತ್ಯೇಕಿಸಿ ಆಡಳಿತ+ಅಧ್ಯಯನ ವಿಕೇಂದ್ರೀಕರಣ ಗೊಳಿಸಿದ [ವಿ]ಜ್ಞಾನಿ! ಕನ್ನಡ ವಿಶ್ವಕೋಶ, ಕನ್ನಡ ಗ್ರಂಥಸೂಚಿ, ಎಪಿಗ್ರಾಫಿ ಕರ್ನಾಟಕ, ಮಾನವಿಕ ಕರ್ನಾಟಕ, ವಿಜ್ಞಾನಕ ರ್ನಾಟಕ, ಪ್ರಬುದ್ಧ ಕರ್ನಾಟಕ, ನಾಲ್ಕಾಣೆ ಪುಸ್ತಕ ಮುಂತಾದ ನೂರಾರು ನೂತನ ಮಾದರಿ ಪ್ರಕಟಣೆಗಳಿಗೆ ನಾಂದಿಹಾಡಿದ ಸರಸ್ವತಿಪುತ್ರ! ತತ್‌ಫಲವಾಗಿ ಉನ್ನತಾಧ್ಯಯನ ಮತ್ತು ಸಂಶೋಧನ ಕ್ಷೇತ್ರದಲ್ಲಿ ರಾಷ್ಟ್ರ- ಅಂತರ್‌ರಾಷ್ಟ್ರ ಮಟ್ಟದ ವಿದ್ವಾಂಸರುಗಳು ತಯಾರಾಗಿ ಅವರ ಅಧಿಕಾರಾವಧಿಯಲ್ಲಿ ಪ್ರಪಂಚಖ್ಯಾತಿ ಪಡೆಯಿತು ಮೈಸೂರು ವಿಶ್ವವಿದ್ಯಾನಿಲಯ! ಭುವನೇಶ್ವರಿಯ ಮಾನಸಪುತ್ರರಾಗಿ ಸಹಸ್ರಾರು ಕನ್ನಡ ಸೇವೆಸಲ್ಲಿಸಿದರು.

ವೃತ್ತಿ- ಪ್ರವೃತ್ತಿ ಸರಿಸಮವಾಗಿಸಿ ಎರಡೂ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದರು. 1949ರಲ್ಲಿ ’ರಾಮಾಯಣ ದರ್ಶನಂ’ ಮಹಾಕಾವ್ಯ ರಚಿಸಿ, 1968ರಲ್ಲಿ ಕನ್ನಡ ಸಾಹಿತ್ಯಕ್ಕೆ ಮೊಟ್ಟಮೊದಲ ’ಜ್ಞಾನಪೀಠಪ್ರಶಸ್ತಿ’ ತಂದುಕೊಟ್ಟರು!
ಉತ್ತಮ ಶಿಷ್ಯವೃಂದ ತಯಾರು ಗೊಳಿಸುವಲ್ಲಿ ಸಿದ್ಧಹಸ್ತರು ಎನಿಸಿದ್ಧವರಲ್ಲಿ ಪ್ರಮುಖರು ದೇಜಗೌ, ಎಚ್ಚೆಸ್ಕೆ, ಸಿಪಿಕೆ, ಹಂಪನಾ, ಹಾ.ಮಾ.ನಾಯಕ್, ಪ್ರಭುಶಂಕರ್, ಪ್ರಹ್ಲಾದರಾವ್, ಜಿ.ಟಿ.ನಾರಾಯಣರಾವ್, ಉ.ಕಾ.ಸುಬ್ರಾಯಾಚಾರ್, ತಿಪ್ಪೇರುದ್ರಸ್ವಾಮಿ, ಮಲೆಯೂರು ಗುರುಸ್ವಾಮಿ, ಮುಂತಾದ ನೂರಾರು ವಿದ್ವಾಂಸರು!

ಸಾಹಿತ್ಯದ ವಿವಿಧ ಮಜಲುಗಳು:
ಕುವೆಂಪು ತಮ್ಮ ಚೊಚ್ಚಲ ಕವಿತೆ ಬರೆದದ್ದು ಇಂಗ್ಲಿಷ್ ಭಾಷೆಯಲ್ಲಿ. ಇವರ ಪ್ರಪ್ರಥಮ ಕವನ ಸಂಕಲನ: ’ದಿ ಬಿಗಿನರ್ಸ್ ಮ್ಯುಸ್’ ಓದಿದ ಕಸಿನ್ಸ್‌ಎಂಬ ಐರಿಷ್‌ಕವಿ ನೀಡಿದ ಸಲಹೆಯಂತೆ ಕನ್ನಡದಲ್ಲಿ ಕವಿತೆ ಬರೆಯಲು ಪ್ರಾರಂಭಿಸಿ ಕನ್ನಡವನ್ನೆ ಪ್ರಾಣವಾಗಿಸಿ ತಮ್ಮ ಬದುಕನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟರು. ಇವರ ಪ್ರಥಮ ಕವನಸಂಕಲನ; ಚೈತ್ರವೈಶಾಖ, ವಸಂತಾಗಮನ. ಕಥಾಸಂಕಲನ;- ಅಮಲನಕತೆ, ಕೊಳಲು.  ಕಾದಂಬರಿಗಳು;  ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡಿತಿ.  ಇತರೆ: ಪಾಂಚಜನ್ಯ, ನವಿಲು, ಪಕ್ಷಿಕಾಶಿ, ಚಂದ್ರಮಂಚಕೆ ಬಾಚಕೋರಿ, ಕಿಂದರಿಜೋಗಿ ಯಮನಸೋಲು, ರಕ್ತಾಕ್ಷಿ, ಮಹಾರಾತ್ರಿ, ಬೆರಳ್‌ಗೆಕೊರಳ್, ಶೂದ್ರತಪಸ್ವಿ, ಜಲಗಾರ, ಚಿತ್ರಾಂಗದ, ಮುಂತಾದವು ನವರತ್ನಗಳಂತೆ ಆ ಚಂದ್ರಾರ್ಕ ಮಿನುಗುತ್ತವೆ!

ಈ ಕೃತಿಗಳಲ್ಲಿ ಅವೆಷ್ಟೊ ನವನವೀನ ಪದಪುಂಜಗಳು ಕಾಣಸಿಗುತ್ತವೆ. ವೈವಿಧ್ಯಮಯ ಬಣ್ಣನೆ, ಮನೋಲ್ಲಾಸ ಗೊಳಿಸುತ್ತವೆ. ಅಸಂಖ್ಯಾತ ಮನುಷ್ಯ ಸಹಜ ಭಾವನೆ, ಪ್ರೀತಿ, ರಾಷ್ಟ್ರಪ್ರೇಮ, ನಾಡಪ್ರೇಮ, ರೈತಪ್ರೇಮ, ಕನ್ನಡಪ್ರೇಮ, ಆಧ್ಯಾತ್ಮಿಕತೆ, ಸತ್ ಸಾಕ್ಷಾತ್ಕಾರ ತುಂಬಿತುಳುಕುತ್ತವೆ. 
ದಾಂಪತ್ಯ ಜೀವನಕ್ಕೆ ವೈದಿಕ ಧರ್ಮದ ಪರ್ಯಾಯವಾಗಿ ’ಮಂತ್ರಮಾಂಗಲ್ಯ’ ನವ್ಯಪದ್ಧತಿ ಸೃಷ್ಟಿಸಿ ಸರಳವಿವಾಹ ಪ್ರತಿಪಾದಿಸಿ ಕ್ರಾಂತಿಯೋಗಿಯಾದರು. ’ಕನ್ನಡವೆನೆ ಕುಣಿದಾಡುವುದೆನ್ನೆದೆ’ ’ಬಾರಿಸು ಕನ್ನಡ ಡಿಂಡಿಮವ..’ ’ಮನುಜಮತ ವಿಶ್ವಪಥ’ ಎಲ್ಲಕ್ಕೂ ಮಿಗಿಲಾಗಿ ಸರ್ಕಾರದಿಂದ ಮಾನ್ಯತೆಗೊಂಡ ಅಧಿಕೃತ ನಾಡಗೀತೆ ’ಜೈಭಾರತಜನನಿಯತನುಜಾತೆ’ ಮುಂತಾದವು ಆಚಂದ್ರಾರ್ಕ ಮೊಳಗುತಿರುತ್ತವೆ!

ಕುವೆಂಪು ತಮ್ಮ ’ರಾಮಾಯಣ ದರ್ಶನಂ’ ಮಹಾನ್ ಕೃತಿ ರಚನೆಯ ಪ್ರಾರಂಭದಲ್ಲಿ ಜಗತ್ತಿನ ಕೆಲವು ಕವಿಶ್ರೇಷ್ಠರಿಗೆ, ಅಗ್ರಜರಿಗೆ, ಗುರುವೃಂದಕ್ಕೆ ಭಕ್ತಿ ಗೌರವಗಳಿಂದ ಪ್ರಥಮ
ನಮನ ಸಲ್ಲಿಸಿದ್ದಾರೆ:-
ಹೋಮರ್‌ಗೆ ವರ್ಜಿಲ್‌ಗೆ ಡಾಂಟೆ ಮೇಣ್ ಮಿಲ್ಟನ್‌ಗೆ, ನಾರಣಪ್ಪಂಗೆ ಮೇಣ್ ಪಂಪನಿಗೆ ಋಷಿವ್ಯಾಸ, ಭಾಸ ಭವಭೂತಿ ಮೇಣ್ ಕಾಳಿದಾಸ ಆದ್ಯರಿಗೆ, ನರಹರಿ ತುಲಸೀದಾಸ ಮೇಣ್ ಕೃತ್ತಿವಾಸಾದಿ, ನನ್ನಯ್ಯ ಫ಼ಿರ್ದೂಸಿ ಕಂಬ ಅರವಿಂದರಿಗೆ. ಇಡೀ ಕೃತಿಯನ್ನು ತಮ್ಮ ನೆಚ್ಚಿನ ಗುರು ಟಿ.ಎಸ್.ವೆಂಕಣ್ಣಯ್ಯನವರಿಗೆ ಅರ್ಪಿಸಿರುವ ಜತೆಗೆ ಇನ್ನಿತರ ಗುರು, ಸಹೋದ್ಯೋಗಿ, ಬಂಧು-ಮಿತ್ರರಿಗೂ ಕೃತಜ್ಞತೆಸಲ್ಲಿಸಿದ್ದಾರೆ. ಇದು ಅವರಲ್ಲಿದ್ದ ಅಪೂರ್ವಗುಣ ಅಮೋಘ ಮನಸ್ಥಿತಿ ಪ್ರತಿ ಬಿಂಬಿಸುತ್ತದೆ. ಅವರೊಬ್ಬ ಸಾಹಿತ್ಯಚಕ್ರವರ್ತಿ, ಮಹಾಜ್ಞಾನಿ, ಬರಹಬ್ರಹ್ಮ, ವಿಶ್ವಮಾನವ, ಕನಸುಗಾರ, ವರ್ಣರಂಜಿತ ವ್ಯಕ್ತಿ-ಶಕ್ತಿ! ಆದ್ದರಿಂದಲೆ ’ಜಗದಕವಿ  ನೀ  ಯುಗದಕವಿ!’ ಎಂದು ವರಕವಿ ದ.ರಾ.ಬೇಂದ್ರ (ಅಂಬಿಕಾತನಯದತ್ತ ) ಬಣ್ಣಿಸಿದ್ದಾರೆ!

ಹಿಮಾಲಯದೆತ್ತರ ಕನ್ನಡ ಬೆಳೆಸಿದ ನುಡಿ ನಿರ್ಮಾತೃ ಎಂದು ಪ್ರೊ.ದೊಡ್ಡರಂಗೇಗೌಡರು  ಹೊಗಳಿದ್ದರೆ.
1969ರಲ್ಲಿ ಕುವೆಂಪುರವರು ಯಾರೀ… ಕುಮಾರಕವಿ..? ಎಂದು ಉದ್ಘರಿಸಿದ ಆ ಹುಡುಗ ಮುಂದೆ 1977ರಲ್ಲಿ ಬರೆದ ತನ್ನ ಚೊಚ್ಚಲ “ಕವನಸುಧೆ” ಸಂಕಲನಕ್ಕೆ ಆಶೀರ್ವಚನ ಬರೆಸಿಕೊಂಡರು. ಕುವೆಂಪು ಎಂಬುದರರ್ಥ ಕನ್ನಡ ಕಾವ್ಯಸಂಸ್ಕೃತಿ; ಅವರ ಸಾಹಿತ್ಯ ಅನಂತತೆ ಕ್ಷಿತಿಜದಷ್ಟಿದ್ದರೆ, ಅಸ್ಮಿತೆಯ ವರ್ಣನೆಯು ಸಾಗರದಷ್ಟಿದೆ: ಎಂದು ಬಿ.ಎನ್.ನಟರಾಜ್ ತಮ್ಮ ’ಕನ್ನಡ ಡಿಂಡಿಮ’ ಕವನ ಸಂಕಲನದಲ್ಲಿ ಬರೆದುಕೊಂಡಿದ್ದಾರೆ. ಕುವೆಂಪುರವರ ಬಾಯಿಂದ ಹೊರಟ ಕುಮಾರಕವಿ ಎಂಬ ಕಾವ್ಯನಾಮದಿಂದ 42ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ!

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ವಾಗುವುದು, ಕನ್ನಡಕ್ಕಾಗಿ ಕೊರಳೆತ್ತು ನಿನ್ನ ಕೊರಳು ಪಾಂಚಜನ್ಯ ಆಗುವುದು, ಝೇಂಕಾರವನ್ನು ಸ್ವಯಂ ಪುಟ್ಟಪ್ಪನವರೆ ಅಳವಡಿಸಿಕೊಂಡು ಪ್ರಪಂಚದಾದ್ಯಂತ ಕನ್ನಡ ಭಾಷೆ-ಸಾಹಿತ್ಯ ಪಸರಿಸಲು ಬೇಕಾದ ಸೂಕ್ತ ಕ್ರಮ  ಕೈಗೊಂಡರು. ಆಸ್ತಿಕ, ನಿರಹಂಕಾರಿ, ನಿಸ್ವಾರ್ಥಿ, ಸಾತ್ವಿಕ ಆಹಾರ, ತಾತ್ವಿಕ ವಿಚಾರದ ಶ್ರೇಷ್ಠಮಾನವ. ಇವರನ್ನು ಪಡೆದ ಭಾರತೀಯರು/ಕನ್ನಡಿಗರು ಧನ್ಯರು! ಈ ಮಹಾಕವಿಯ ಬಗ್ಗೆ ಹಾಗೂ ಇವರ ಸಾಹಿತ್ಯದ ಬಗ್ಗೆ ಅನೇಕ ಸಂಶೋಧನಾ ವಿದ್ಯಾರ್ಥಿಗಳು ಹಲವಾರು ಬಗೆಯಲ್ಲಿ ಪ್ರೌಢಪ್ರಬಂಧ ಮಂಡಿಸಿ ಡಾಕ್ಟರೇಟ್ (PhD) ಗಳಿಸಿದ್ದಾರೆ!

ಗಣ್ಯರು ಕಂಡಂತೆ ಕುವೆಂಪು:-
*ಭಾರತದ ಅಂದಿನ ರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್:- ಕುವೆಂಪುರವರು ರವೀಂದ್ರನಾಥ ಟಾಗೂರರ ಉತ್ತರಾಧಿಕಾರಿ.

*ಕನ್ನಡದ ಕಣ್ವ ಪ್ರೊ.ಬಿ.ಎಂ.ಶ್ರೀ:-
ಕುವೆಂಪುರವರ ಪ್ರತಿಭೆ, ವ್ಯಕ್ತಿತ್ವ ಪ್ರತಿಯೊಬ್ಬ ಗುರುವನ್ನೂ ಆಕರ್ಷಿಸುತ್ತವೆ.

*ಆಚಾರ್ಯ ತೀ.ನಂ.ಶ್ರೀ:-
ಕುವೆಂಪುರವರಿಂದಾಗಿ ಕನ್ನಡ ಸಾಹಿತ್ಯವು ಶ್ರೀಮಂತವಾಗುತ್ತಿದೆ.

*ತತ್ವಶಾಸ್ತ್ರಜ್ಞ ಪ್ರೊ.ಎ.ಆರ್.ವಾಡಿಯ:-
ಎಲ್ಲಗುರುಗಳ ಅಪೇಕ್ಷೆಯಂತೆ ನಾನೂ ಪುಟ್ಟಪ್ಪನಂಥ ಶಿಷ್ಯೋತ್ತಮನನ್ನೆ ಪಡೆಯಬಯಸುತ್ತೇನೆ.

*ವಿಮರ್ಷಾಭೀಷ್ಮ ಪ್ರೊ.ತ.ಶು.ಶಾಮರಾಯ:-
ಕುವೆಂಪು ಅವರ ಪ್ರತಿಯೊಂದು ನಾಟಕವೂ ದಿವ್ಯಭಾವಗಳ ಹೆಗ್ಗುರಿಯಲ್ಲಿ ಮುನ್ನಡಿ ಇಟ್ಟಿದೆ.

*ಕನ್ನಡದ ಅಶ್ವಿನಿ ದೇವತೆಗಳೆನಿಸಿದ್ದ ಕುವೆಂಪು ಗುರುದ್ವಯರು ಪ್ರೊ.ಟಿ.ಎಸ್.ವೆಂಕಣ್ಣಯ್ಯ- ಪ್ರೊ.ಎ.ಆರ್.ಕೃಷ್ಣ ಶಾಸ್ತ್ರಿ:-
ನಮ್ಮ ಇಡೀ ಪ್ರಾಧ್ಯಾಪಕ ವೃತ್ತಿಜೀವನದಲ್ಲಿ ನಾವು ಕಂಡ ಅಸಾಧಾರಣ ಮತ್ತು ಅಪ್ರತಿಮ ಶಿಷ್ಯೋತ್ತಮ!   
        
*ಪ್ರೊ.ಟಿ.ಎಸ್.ವೆಂಕಣ್ಣಯ್ಯನವರು:-
ಒಮ್ಮೆ ಕುವೆಂಪು ಕವನ ಪಂಕ್ತಿಗಳನ್ನು ಅವರಿಂದಲೇ ಓದಿಸಿ ಕೇಳಿದ ನಂತರ ಹೇಳಿದ್ದು: “ಏನಯ್ಯಾ ಪುಟ್ಟಪ್ಪ, ಪ್ರಪಂಚದ ಬೇರಾವ ಕವಿ ಇಂಥ ಪದ್ಯವನ್ನು ಬರೆದಿದ್ದಾನೆ ಹೇಳು?”ಎಂದು ಕೇಳಿದಾಗ ಕುವೆಂಪು ರೋಮಾಂಚನಗೊಂಡರಂತೆ!

*ಕನ್ನಡಕ್ಕೆ ಹಾಸ್ಯದ ಉಸಿರು ನೀಡಿದ ಪ್ರೊ.ನಾ.ಕಸ್ತೂರಿ:-
ಆಕೃತಿಯಲ್ಲಿ ‘ಪುಟ್ಟಅಪ್ಪ’ ನಾದರೂ ಸಾಹಿತ್ಯದಲ್ಲಿ ‘ಬಲುದೊಡ್ಡಅಪ್ಪ’ ನನ್ನ ಪ್ರಿಯ ಮಿತ್ರ ಕೆ.ವಿ.ಪುಟ್ಟಪ್ಪ.

*ನಾಡೋಜ ಪ್ರೊ.ದೇಜಗೌ:-
ಕುವೆಂಪು ಸಾಹಿತ್ಯದಲ್ಲಿ ಪಾರಮಾರ್ಥಿಕ ಲೌಕಿಕಗಳೆರಡೂ ಪರಸ್ಪರ ಹೆಣೆದುಕೊಂಡಿವೆ, ಅವರ ಕಾವ್ಯ ಜೀವನ ಲೋಕ ಜೀವನ ಎರಡರಲ್ಲೂ ಸಾಮರಸ್ಯವಿದೆ

*ಪ್ರೊ.ಎಚ್ಚೆಸ್ಕೆ,ಸುಧಾ ಪತ್ರಿಕೆ ಅಂಕಣಕಾರ:- 
ವಾಮನನಾಗಿ ಬಂದವನು ತ್ರಿವಿಕ್ರಮನಾದಂತೆ, ಬಿಡಿಯಿಂದ ಬ್ರಹ್ಮಾಂಡಕ್ಕೂ ಜಿಗಿಯುವುದು ಕುವೆಂಪುರವರ ಸಾಮರ್ಥ್ಯ

*ಪ್ರೊ.ಪ್ರಭುಶಂಕರ, ಖ್ಯಾತ ಬರಹಗಾರ:-
20ನೇ ಶತಮಾನದ ಕನ್ನಡ ಸಾಹಿತ್ಯದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ ಒಬ್ಬ ಯುಗಪುರುಷ ಕುವೆಂಪು

*ಪ್ರೊ.ಪು.ತಿ.ನ.: ಕುವೆಂಪುರವರು ಪುರೋಹಿತಶಾಹಿ ವಿರೋಧಿಯಾಗಿದ್ದರೇ ಹೊರತು ಬ್ರಾಹ್ಮಣ ವಿರೋಧಿಯಾಗಿರಲಿಲ್ಲ.

*ಕೇರಳ ರಾಜಮನೆತನದ ಸ್ವಾಮಿ ಶ್ರೀಸಿದ್ಧೇಶ್ವರಾನಂದ: ಪುಟ್ಟಪ್ಪನನ್ನು ನನ್ನ ಮಾನಸ ಪುತ್ರನನ್ನಾಗಿ ಸ್ವೀಕರಿಸಿರುವೆ.

*ಸ್ವಾಮಿವೀತಮೋಹಾನಂದಜೀ,ರಾಮಕೃಷ್ಣಮಠ,ಕಲ್ಕತ್ತ: ವಿವೇಕಾನಂದವಾಣಿ ಕುವೆಂಪು ಮೂಲಕ ಕನ್ನಡದಲ್ಲಿ ಅಸ್ತಿತ್ವ ಕಂಡು ರೂಪಾಂತರ ಹೊಂದಿದೆ

*ಡಾ.ರಾಜ್: ಕನ್ನಡಕ್ಕೆ ಹೋರಾಡು ಕನ್ನಡದ ಕಂದಾ…, ಎಲ್ಲಾದರು ಇರು ಎಂಥಾದರು ಇರು, ಮುಂತಾದ ಕನ್ನಡ ಮಂತ್ರಗಳನ್ನು ಹೇಳಿಕೊಟ್ಟ ಕನ್ನಡ ಕುಲಪುರೋಹಿತರು!

*ಕುಮಾರಕವಿ ಬಿ.ಎನ್.ನಟರಾಜ