ಮಹಾನ್ ಮಾನವತವಾದಿ, ತತ್ವಜ್ಞಾನಿ, ವಚನಕಾರ, ಕವಿಪುಂಗವ, ಸ್ತ್ರೀ ಸಮಾನತಾವಾದಿ, ಸಮಾಜ ಉದ್ಧಾರಕ, ಕ್ರಾಂತಿಯೋಗಿ, ಅಸ್ಪೃಶ್ಯತೆಯ ನಿರ್ಮೂಲನ ಹರಿಕಾರ, ಸ್ವಾಸ್ಥ್ಯ ಸಮಾಜದ ನಿರ್ಮಾತೃ ಈ ಜಗತ್ತಿನ ಅದ್ಭುತಗಳಲ್ಲಿ ಮೇರುಪಂತಕ್ತಿಯಲ್ಲಿರುವ ಶರಣ ಸಂಸ್ಕೃತಿಯ, ಸಾಂಸ್ಕೃತಿಕ ರಾಯಭಾರಿ “ಶ್ರೀ ಬಸವೇಶ್ವರರು ಬಸವಣ್ಣ” ನೆಂದೇ ಪ್ರಖ್ಯಾತರು. ವಿಶ್ವ ಸಂಸ್ಕೃತಿಯ ಇತಿಹಾಸದಲ್ಲಿ ಮಹಾ ಉಜ್ವಲವು, ಪರಿಣಾಮಕಾರಿಯೂ, ವಿಶಿಷ್ಟವೂ, ಆದ ಕಾಲವೆಂದರೆ ಬಸವಯುಗ. ಸಹಸ್ರಮಾನಗಳಲ್ಲಿ ಅಹಿಂಸೆಯ ಪರಮಾವತಾರಿ ಎಂದು, ಸರ್ವಶ್ರೇಷ್ಠ ತಪಸ್ವಿ ಎಂದು, ಜಗತ್ತಿನ ಪ್ರಥಮ ವಿಚಾರವಾದಿ ಎಂದು, ಸತ್ಯ ಸಾಮ್ರಾಜ್ಯದ ಸಾರ್ವಭೌಮನೆಂದು,
ವಿಭೂತಿ ಪುರುಷನೆಂದು, ಸರಳ ಸಜ್ಜನಿಕೆಯ, ವಚನ ಕ್ರಾಂತಿಯಿಂದಲೇ ಸಮಾಜದ ಬದಲಾವಣೆಗೆ ಓಂಕಾರ ಹಾಡಿದ ಮಹಾನುಭವಿ ಎಂದು, ಸರ್ವಮಾನ್ಯತೆಗೆ ಪಾತ್ರರಾದ ಕ್ರಾಂತಿಕಾರರೇ ಬಸವೇಶ್ವರರು. ತಮ್ಮ ಮನೋಭಿಲಾಷೆಯನ್ನ ಸಾಮಾಜಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ತಲುಪಿಸುವ ಹಾದಿಯಲ್ಲಿ ಯಾರಿಗೆ ಬಲವಂತಿಕೆಯ ಮಾರ್ಗವನ್ನು ಹಿಡಿಯದೆ ಅತ್ಯಂತ ಶ್ರೇಷ್ಠ ಮಾಧ್ಯಮದಲ್ಲಿ ಅಭಿವ್ಯಕ್ತಪಡಿಸಿದ ಮಹಾನ್ ಪುರುಷ ಜ್ಯೋತಿ. ತಮ್ಮೊಳಗಿನ ಅಂತ ಕರಣದ ಮಹಾನ್ ದರ್ಶನವನ್ನು ತಾವು ಕಂಡು ಕೊಂಡು, ಅನ್ಯರಲ್ಲಿಯೂ ಆ ಸತ್ಯ ಜ್ಯೋತಿಯನ್ನು ಕಂಡುಕೊಂಡ ಕಾರಣಿಪುರುಷರಿವರು. ಲೋಕದ ಸಕಲ ವಸ್ತುಗಳ ಅಂತರ್ ಸೌಂದರ್ಯವನ್ನು ಕುಳಿತಲ್ಲಿಂತಲೇ ದರ್ಶಿಸಿದ ದರ್ಶನಾಕಾರರು. ಸಮಗ್ರ ಜನಾಂಗದ ಅಂತ ಸತ್ವವನ್ನು ಅತ್ಯಧಿಕ ಪ್ರಮಾಣದಲ್ಲಿ, ಸುಲಭವಾಗಿ ಸಿದ್ದ ಜಗತ್ತಿಗೆ ಪರಿಚಯಿಸಿದ ಶಾಂತಿದೂತರು. ತಾವು ಬೆಳೆಯುವುದು ಮಾತ್ರವಲ್ಲ ಲೋಕವೂ ತಮ್ಮಂತೆ, ತಮ್ಮೊಡನೆ ಬೆಳೆಯ ಬೇಕೆಂದು, ಸಂಕಲ್ಪ ತೊಟ್ಟು, ವಿಶ್ವ ಕುಟುಂಬದ ಕನಸನ್ನು ಹೊತ್ತು ಸಮಗ್ರ ಮನುಕುಲದ ಸಾಕಾರ ಸ್ವರೂಪರು, ಜಡಗಟ್ಟ ಮೌಲ್ಯರ ಸಂಪ್ರದಾಯದ ಹೆಸರಲ್ಲಿ ಮನುಷ್ಯರಿಗೂ ಪ್ರಾಣಿಗಳಿಗೂ ಹಿಂಸಿಸುತ್ತಿದ್ದ ಕಂದಾಚಾರಿಗಳ ಕಗ್ಗತ್ತಲೆಯ ನಾಡಿಗೆ ಕಾರ್ತಿಕ ಮಾಸದ ಜ್ಯೋತಿಯಾಗಿ ವಿಶ್ವಜ್ಯೋತಿಯಾದರು.
ಬಸವೇಶ್ವರರು ಐತಿಹಾಸಿಕ ವ್ಯಕ್ತಿಯಾದರೂ ಅವರ ಜೀವನ ಸಂಗತಿಗಳು, ಸಾಧನೆಗಳು, ಅವರ ಸಾಹಸಯಾತ್ರೆಗಳು ಬಸವಣ್ಣನವರನ್ನ ಪುರಾಣ ಪುರುಷರಾಗಿಸಿದೆ. ಬಸವಣ್ಣನವರ ವಚನಗಳೇ ಅವರ ಆತ್ಮಕಥೆಯನ್ನು ಸಾರುತ್ತವೆ. ಒಂದು ವಿಧದಲ್ಲಿ ಹೇಳುವುದಾದರೆ, ಕನ್ನಡಿಗರು ಪುಣ್ಯವಂತರು. ವಿಶ್ವಶಾಂತಿಗೆ ಹೆಸರುವಾಸಿಯಾದ ಮಹನೀಯರ ಸಾಲಿನಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದಿರುವ ಬಸವೇಶ್ವರರನ್ನು ಪಡೆದ ಈ ನಾಡು ಪುಣ್ಯಭೂಮಿಯೇ. ಬಸವಣ್ಣನವರ ವಚನಗಳಲ್ಲಿ ಆತ್ಮವೇದನೆ, ನಿವೇದನೆಗಳಿವೆ, ಜೀವನದ ಮಹಾಘಟನೆಗಳ ಸೂಚನೆಗಳಿಗೆ, ಧರ್ಮೋಪದೇಶಗಳಿವೆ, ನೀತಿ ಸೂತ್ರಗಳಿವೆ, ಲೋಕದ ಅನುಭಾವಗಳಿವೆ. ಬಸವಣ್ಣನವರು ಸಂತ ಶ್ರೇಷ್ಠರೂ, ಭಕ್ತರೂ, ಸಾಧಕರೂ ಅವರಿಗೆ ಆತ್ಮ ಕ್ಷೇಮ ಮುಖ್ಯವಲ್ಲ. ಸಮಷ್ಟಿ ಕ್ಷೇಮವಾದಿಗಳು ಅಂದರ ಆತ್ಮ ಕ್ಷೇಮವೆಂದರೆ ತನ್ನೊಬ್ಬನ ಕ್ಷೇಮವೇ ಮುಖ್ಯ ಎಂಬ ಭಾವನೆ, ಸಮಷ್ಟಿ ಕ್ಷೇಮವೆಂದರೆ ಸಾಮೂಹಿಕ ಅಥವಾ ಸಮಾಜದ ಪ್ರತಿಯೊಬ್ಬರ ಕ್ಷೇಮವನ್ನು ಬಯಸಿದ ಮನೋನಿಷ್ಟರು. ಲೌಕಿಕ ಜೀವನದಲ್ಲಿದ್ದು ಕೊಂಡು ಅಲೌಕಿಕ ಸಾಧನೆಯನ್ನು ಸಾಧಿಸುವ ಸಂಕಲ್ಪ ಹೊಂದಿದವರು. ಅಂಥಹಾ ವೈವಿಧ್ಯಮಯವಾದ ಜೀವನ ವೈಭವವನ್ನು ಬೇರಾವ ಸಂತರಲ್ಲಿಯೂ ಕಾಣಸಿಗಲು ಸಾಧ್ಯವಿಲ್ಲ. ಬಸವಣ್ಣನವರು ಲೌಕಿಕ ವ್ಯವಹಾರಗಳನ್ನ ಅಂಟಿಸಿಕೊಂಡೇ ಭೂಮಿಯಲ್ಲಿ ಸ್ವರ್ಗವನ್ನು ಸೃಷ್ಟಿಸಲು ಹೊರಟವರು. ಆ ಶತಮಾನದಲ್ಲಿ ಸಮಾಜದ ಕರಿನೆರಳಿನಲ್ಲಿ ಬದುಕಿದ್ದ ಜನರಿಗೆ, “ಲಿಂಗ ದೀಕ್ಷೆ” ನೀಡುವ ಮೂಲಕ ಒಂದು ಹೊಸ ಧರ್ಮದ ಉದಯವನ್ನು ಮಾಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತಂದು ನಿಲ್ಲಿಸಿ, “ಶರಣರ” ಸ್ಥಾನ ನೀಡಿದ ಮೇರು ವ್ಯಕ್ತಿತ್ವದ ಸಾಧಕರು.
ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಕಾರಣ, ಅವರು ಬಾಲ್ಯದಿಂದಲೇ ನೋಡುತ್ತಾ ಬಂದ ಸಾಮಾಜಿಕ ಕಂದಾಚಾರಗಳು, ಜಾತಿ ಪದ್ಧತಿ, ಅಸ್ಪೃಶ್ಯತೆ,ಸ್ತ್ರೀಯರಿಗೆ ಇದ್ದ ಸ್ಥಾನಮಾನ, ವ್ಯಕ್ತಿಗತ ತಾರತಮ್ಯ ಮಾನವ ಮತ್ತು ಪ್ರಾಣಿ ಬಲಿಗಳು, ಮೂಢನಂಬಿಕೆಯ ಹೆಸರಿನಲ್ಲಿ ಮುಗ್ಧ ಜನರನ್ನು ತಮ್ಮ ನಿಲುವುಗಳಿಂದ ಕಟ್ಟಿ ಹಾಕಿದ್ದನ್ನು ಗಮನಿಸುತ್ತಾ ಬಂದಿದ್ದರು. ಆದರೆ ಅದನ್ನೆಲ್ಲ ಹೋಗಲಾಡಿಸಿ ಒಂದು ಸುಂದರ ಸಮಾಜದ ನಿರ್ಮಾಣದ ಕನಸನ್ನು ತಮ್ಮ ಮನಸ್ಸಿನಲ್ಲಿ ನಿರ್ಮಿಸಿಕೊಂಡಿದ್ದರು, ಅದನ್ನು ಸಾಕ್ಷಾತ್ಕಾರ ಗೊಳಿಸುವ ಹಾದಿಯಲ್ಲಿ ಒಂದು ದೊಡ್ಡ ಸಾಮಾಜಿಕ ಕ್ರಾಂತಿಗೆ ಕಾರಣೀಭೂತರಾದರು. ಬಸವಣ್ಣನವರು ಹುಟ್ಟಿದ್ದು ೧೯೩೧ ರಲ್ಲಿ. “ಬಸವನ ಬಾಗೇವಾಡಿ” ಎಂಬ ಗ್ರಾಮದಲ್ಲಿ. ಅವರ ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಇವರು ತಮ್ಮ ವಿದ್ಯಾಭ್ಯಾಸವನ್ನು ಕೂಡಲಸಂಗಮದಲ್ಲಿ ಮಾಡುತ್ತಾರೆ. ಅವರ ಗುರುಗಳು ಜಾತವೇದ ಮುನಿಗಳು. ಬಸವಣ್ಣನವರು ಶಿವಭಕ್ತರಾಗಿದ್ದು, ಶಿವನ ಆರಾಧಕರಾಗಿದ್ದರು. ಅವರು ಕಲ್ಯಾಣದಲ್ಲಿ ವಿದ್ಯಾಭ್ಯಾಸ ಮಾಡುವಾಗ, ಕನಸಿನಲ್ಲಿ ಶಿವ ಸಾಕ್ಷಾತ್ಕಾರವಾಗಿ “ಇಷ್ಟಲಿಂಗ” ದರ್ಶನ ನೀಡುವುದನ್ನು, ತಮ್ಮ ಗುರುಗಳ ಬಳಿ ಹೇಳಿ, ಜಾತವೇದ ಮುನಿಗಳಿಂದ “ಲಿಂಗ ದೀಕ್ಷೆ” ಪಡೆಯುತ್ತಾರೆ. ತಮ್ಮ ತಾಯಿಯ ಸಂಬಂಧಿ ಗಂಗಾಂಬಿಕೆಯನ್ನ ಮದುವೆಯಾಗಿ ಕಲ್ಯಾಣಕ್ಕೆ ಬರುತ್ತಾರೆ. ಕಲ್ಯಾಣದಿಂದಲೇ ಬಸವಣ್ಣನವರು ತಮ್ಮ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದರು. ತಮ್ಮೊಳಗಿನ ಆಲೋಚನೆಗಳಿಗೆ ಒಂದು ಹೊಸ ರೂಪವನ್ನು ನೀಡುವುದರ ಮೂಲಕ ಅಲ್ಲಿಯ ತನಕ ಇದ್ದ ಜಾತಿ ಪದ್ಧತಿಗೆ ಇತಿಶ್ರೀ ಹಾಡಲು ನಿಂತರು. ಮೇಲ್ವರ್ಗ ಮತ್ತು ಕೆಳವರ್ಗದ ಅಂತರ ಕಾಯ್ದಿರಿಸಿದ್ದ, ಸಮಾಜದಲ್ಲಿ ಸರ್ವರಿಗೂ ಸಮಾನವಾದ ಸ್ಥಾನಮಾನ ಕಲ್ಪಿಸುವ ದೃಷ್ಟಿಯಿಂದ ಅವರು ತಮ್ಮ “ಮನೋಧರ್ಮದ ಶ್ರೇಷ್ಠತೆ”ಯನ್ನ ಎತ್ತಿ ಹಿಡಿದು, ಸಾಮಾಜಿಕ ಕ್ರಾಂತಿಗೆ ಮೊದಲ ಹೆಜ್ಜೆಯನ್ನು ಇಟ್ಟರು. ಕೆಳವರ್ಗದ ಹಾಗೂ ಅವರು ಮಾಡುತ್ತಿದ್ದ ಕಾಯಕಗಳನ್ನ ಗೌರವಿಸುವುದರ ಮೂಲಕ ಒಂದು ಹೊಸ ಧರ್ಮವನ್ನು “ಲಿಂಗ ದೀಕ್ಷೆ” ನೀಡಿ “ಲಿಂಗಾಯತ ಧರ್ಮ”ವನ್ನು ಸ್ಥಾಪಿಸಿದರು.
ಲಿಂಗ ದೀಕ್ಷೆ ಪಡೆದ ಪ್ರತಿಯೊಬ್ಬರನ್ನು “ಶರಣ”ರೆಂದು, ಲಿಂಗ ದೀಕ್ಷೆ ಪಡೆದ ಪ್ರತಿಯೊಬ್ಬ ಹೆಣ್ಣು ಮಕ್ಕಳನ್ನು “ಶರಣೆ” ಎನ್ನುವುದರ ಮೂಲಕ ಅವರಿಗೂ, ಸಾಮಾಜಿಕ ಸ್ಥಾನಮಾನ ಕಲ್ಪಿಸುವುದರ ಮೂಲಕ ಪ್ರಪ್ರಥಮ “ಸ್ತ್ರೀ ವಾದಿ ಹಾಗೂ ಸ್ತ್ರೀ ಸಮಾನತ”ವಾದಿಯಾದರು. “ಕಾಯಕವೇ ಕೈಲಾಸ” ಎನ್ನುವುದರ ಮೂಲಕ ಮೂಲ ವೃತ್ತಿಗಳಿಂದ ಅಳೆಯಲ್ಪಡುತ್ತಿದ್ದ ವರ್ಗಕ್ಕೆ ಒಂದು ಹೊಸ ನಾಮಕರಣದ ಮೂಲಕ ಎಲ್ಲರೂ ಭಾವನೆಗಳಿಂದ ನೋಡುವ, ಕಾಣುವ “ನವ ಸಮಾಜದ ನಿರ್ಮಾತೃ”ವಾದರೂ. ಸಾಮಾಜಿಕವಾಗಿ “ಹೆಣ್ಣು ಮಕ್ಕಳ ಸ್ನಾನಮಾನ ತುಂಬಾ ಹೀನವಾಗಿದ್ದನ್ನು ಮನಗಂಡಿದ್ದ ಬಸವಣ್ಣನವರು ಅವರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳನ್ನ ವಿರೋಧಿಸಿ” ಸ್ತ್ರೀಯರಿಗೂ ಪುರುಷರಂತೆ ಸಮಾನವಾಗಿ “ಲಿಂಗ ದೀಕ್ಷೆ” ನೀಡುವುದರ ಮೂಲಕ ಹೆಣ್ಣು ಮಕ್ಕಳಿಗೂ ಇಷ್ಟಲಿಂಗದಾರಣೆ ಮಾಡಿಸಿ, ಸಾಮೂಹಿಕವಾಗಿ ಪೂಜೆ ಪುನಸ್ಕಾರ ಮಾಡಿಸಿದ್ದರು. ಅವರ ವಚನಗಳ ಮೂಲಕ ಆಗಿನ ಕಾಲದಲ್ಲೇ ಪ್ರಸಿದ್ಧಿ ಪಡೆದರು. ಕಲ್ಯಾಣಕ್ಕೆ ಜನಸಾಗರವೇ ಹರಿದು ಬರುವ ಮೂಲಕ ಅವರ ಜನಪ್ರಿಯತೆಯು ಬರಿ ಬಾಯಿಂದ ಬಾಯಿಗೆ ಹರಡುವುದರ ಮೂಲಕ ಬಸವಣ್ಣನವರ ಜೀವನ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಆದರ್ಶ ಪ್ರಾಪ್ತವಾಗಿತ್ತು.

ಕಲ್ಯಾಣದಲ್ಲಿ ಬಸವಣ್ಣನವರು ಸ್ಥಾಪಿಸಿದ “ಅನುಭವ ಮಂಟಪ” ಪ್ರಪಂಚದ ಮೊದಲ ಧಾರ್ಮಿಕ ಮತ್ತು ಸಾಮಾಜಿಕ ಸಂಸತ್ತು. ಇದರ ಮೊದಲ ಅಧ್ಯಕ್ಷರು ಅಲ್ಲಮಪ್ರಭುಗಳು. ಇದರಲ್ಲಿ ಹಲವಾರು ಮಂದಿ ಶರಣರು ಭಾಗವಹಿಸಿ ಮತ್ತು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಳ್ಳಲು ಅವಕಾಶ ಕಲ್ಪಿಸಿ ಕೊಟ್ಟಿದ್ದರು. ಅನುಭವ ಮಂಟಪದಲ್ಲಿ ಸುಮಾರು ೭೭೯ ಸಭೆಗಳು ನಡೆದಿದ್ದವು. ಇಲ್ಲಿ ಸಾವಿರಾರು ವಚನಗಳು ಮತ್ತು ವಚನಕಾರರು ಉದಯವಾಗಲು ಕಾರಣವಾಯಿತು. ಇಲ್ಲಿ ಜಾತಿ ಧರ್ಮ ಲಿಂಗ ಭೇದವಿಲ್ಲದೆ ಶರಣ-ಶರಣೆಯರು ಪಾಲ್ಗೊಳ್ಳುತ್ತಿದ್ದರು. ಇದು ಭಾರತದಾದ್ಯಂತ ಪ್ರಚಾರಗೊಂಡು “ಕಲ್ಯಾಣದ ಜನಪ್ರಿಯತೆಯು” ಉತ್ತುಂಗಕ್ಕೇರಿತ್ತು.
೧೨ನೇ ಶತಮಾನದಲ್ಲಿ ತಮ್ಮ ಇಚ್ಛಾಶಕ್ತಿ ಅನುಸಾರ ಸಾಮಾಜಿಕ ಕಳಕಳಿಯಿಂದ, ಒಂದು ಪವಾಡವನ್ನೇ ಸೃಷ್ಟಿಸಿದ “ಮಹಾತ್ಮ”. ಬಸವಣ್ಣನವರು ಜಗದ ಒಳಿತಿಗಾಗಿ ತನ್ನ ಮನಸ್ಸಾಕ್ಷಿಗೆ ನ್ಯಾಯ ಒದಗಿಸಿಕೊಟ್ಟ “ಯುಗಪುರುಷರು”. ಜಗದ ಕತ್ತಲೆಯನ್ನ ನೀಗಿಸಿ ಜಗತ್ತಿಗೆ ತಮ್ಮ ಅರಿವಿನ ದಾರಿಯನ್ನು ಎರೆಯುವುದರ ಮೂಲಕ “ಹೊಸ ಜ್ಯೋತಿಯನ್ನು ನೀಡಿ ವಿಶ್ವದ ಬೆಳಕಾದರು”. ಅವರ ವಚನದ ಸಾಲುಗಳೇ ಹೇಳುವಂತೆ “ಬ್ರಹ್ಮ ಪದವಿಯಾಗಲಿ, ವಿಷ್ಣು ಪದವಿಯಾಗಲಿ, ಬೇರೆ ಯಾವುದೇ ಪದವಿಯಾಗಲಿ ಬೇಕಿಲ್ಲ, ಸದ್ಭಕ್ತರ ಪಾದವನರಿಯುವ ಪದವಿಯೇ ಸಾಕು”. “ತಾವು ಶರಣರ ಪಾದಕ್ಕೆ ಆದರೆ ಚಮ್ಮಾವುಗೆಯಾದರೆ ಸಾಕೆಂಬ ವಿನಯ ಮೂರ್ತಿ”. ಅವರಿಗೆ ಶರಣರೆ ಮನೆದೈವ, ಕುಲದೈವ, ಶರಣರಿಗೆ ಅವರ ತನು ಮೀಸಲು, ಮನ ಮೀಸಲು, ನಯನ ಮೀಸಲು, ಅವರ ನಡೆ ನುಡಿಗಳಲ್ಲಿ ಅಂತರ ಇಟ್ಟು ಕೊಳ್ಳದೆ, ಸಹಜ ಜೀವನದ ಮೇರು ವ್ಯಕ್ತಿತ್ವದ ಬಸವಣ್ಣನವರು ಜಗತ್ತಿನ “ಆದರ್ಶ ಪುರುಷರು”. ಅತಿ ಕಡಿಮೆ ಸಮಯದಲ್ಲಿ ಅಂದರೆ ಅವರು ಬದುಕಿದ್ದು ಸುಮಾರು ೩೬ ವರ್ಷಗಳು, ಆದರೆ ಅವರ ಸಾಧನೆ, ತತ್ವ ವಿಮರ್ಶೆ, ವಚನಗಳು, ಅವರ ಆಲೋಚನೆಗಳನ್ನ ಜನರಿಗೆ ತಲುಪಿಸಿದರೆ ರೀತಿ, ಇಂದಿಗೂ ಮಾರ್ಗದರ್ಶನವೇ. ಅವರ ನಿಸ್ವಾರ್ಥ ಸೇವೆಯಿಂದ ಜಗದ್ವಿಖ್ಯಾತಿಯಾಗಿದ್ದಾರೆ. ನವ ಸಮಾಜದ ನಿರ್ಮಾಣ ಮಾಡಿದ ಬಸವಣ್ಣನವರು ಮನುಕುಲದ ಉದ್ದಾರಕ್ಕಾಗಿ ಬಾಳನ್ನ ಸವಿಸಿದ ಶ್ರೇಷ್ಠರು.
ಲೇಖಕರು
ಪುಣ್ಯವತಿ ನಾಗಲಿಂಗಸ್ವಾಮಿ.
ಕನ್ನಡ ಕ್ರಾಂತಿದಳ. ಮೈಸೂರು
