ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಸಾವಿನ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವುದರಿಂದ ಸೋಂಕಿನ ಸರಪಳಿಯನ್ನು ತುಂಡರಿಸುವ ಸಲುವಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು ಇನ್ನು ಮುಂದೆ ಸೋಮವಾರ, ಮಂಗಳವಾರ ಹಾಗೂ ಬುಧವಾರಗಳಂದು ಮಾತ್ರ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು ಉಳಿದ ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರದ ನಾಲ್ಕು ದಿನಗಳು ಸಂಪೂರ್ಣ ಲಾಕ್ ಡೌನ್ ಗೆ ಕ್ರಮ ಕೈಗೊಳ್ಳಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಪರಿಣಾಮಕಾರಿಯಾಗಿ ಲಾಕ್ ಡೌನ್ ಜಾರಿಗೊಳಿಸುವ ಸಂಬಂಧ ನಿರ್ಧಾರ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಆಯಾ ಜಿಲ್ಲಾಡಳಿತಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯಲು ಜಿಲ್ಲೆಯಲ್ಲಿ ಲಾಕ್ ಡೌನ್ ಅನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿ ಮಾಡಲು ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಲಾಕ್ ಡೌನ್ ಅವಧಿಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಅನಗತ್ಯ ಓಡಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗುತ್ತದೆ. ಸೋಂಕು ತಡೆಗೆ ಸದುದ್ದೇಶದಿಂದ ಕೈಗೊಂಡಿರುವ ನಿರ್ಧಾರ ಇದಾಗಿದೆ. ಈಗಾಗಲೇ ಕೋವಿಡ್ ನಿಯಂತ್ರಣ ಸಂಬಂಧ ಹಲವಾರು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕೋವಿಡ್ ಲಕ್ಷಣ ಇರುವವರು ಆಸ್ಪತ್ರೆಗೆ ಬಂದ ಕೂಡಲೇ ತುರ್ತಾಗಿ ಸ್ಪಂಧಿಸಿ ಕೋವಿಡ್ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ಆರಂಭಿಸಲು ಸೂಚಿಸಲಾಗಿದೆ. ಜಿಲ್ಲೆಗೆ 39 ಆಕ್ಸಿಜನ್ ಕಾನ್ಸಟ್ರೇಂಟರ್‌ಗಳು ಬಂದಿದ್ದು ಗಾಳಿಯನ್ನು ಉಪಯೋಗಿಸಿಕೊಂಡು ಆಮ್ಲಜನಕ ಬಳಕೆ ಮಾಡುವ ಈ ಕಾನ್ಸಟ್ರೇಂಟರ್‌ಗಳನ್ನು ಜಿಲ್ಲಾ ಆಸ್ಪತ್ರೆಯ ಆರಂಭ ತಪಾಸಣಾ ಪರೀಕ್ಷಾ ಘಟಕದಲ್ಲಿ ಬಳಸಲಾಗುತ್ತಿದೆ. ಕೊಳ್ಳೇಗಾಲಕ್ಕೆ 12 ಕಾನ್ಸಟ್ರೇಂಟರ್‌ಗಳನ್ನು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಗೆ 2ಆಕ್ಸಿಜನ್ ಜನರೇಟರ್ ಗಳು ಬರಲಿವೆ. 750 ಲೀ. ಆಮ್ಲಜನಕ ಉತ್ಪಾದಿಸುವ 1 ಆಕ್ಸಿಜನ್ ಜನರೇಟರನ್ನು ಇನ್ನೂ 10 ರಿಂದ 12 ದಿನಗಳೊಳಗೆ ಅಳವಡಿಸಲಾಗುವುದು. ಮತ್ತೊಂದನ್ನು 4-5 ವಾರಗಳ ಬಳಿಕ ಅಳವಡಿಸಲಾಗುತ್ತದೆ. ಅಲ್ಲದೇ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರದ ಪ್ರಾಯೋಜನೆಯಿಂದ 1ಸಾವಿರ ಲೀ ಆಮ್ಲಜನಕ ಜನರೇಟರ್ ಸೌಲಭ್ಯವೂ 8 ವಾರದಲ್ಲಿ ಲಭ್ಯವಾಗಲಿದೆ. ಜಿಲ್ಲೆಯಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಶೇಖರಣೆ ಹೆಚ್ಚು ಅವಶ್ಯಕತೆ ಇದೆ. ಹೆಚ್ಚುವರಿ ಸಿಲಿಂಡರ್ ಗಳನ್ನು ಒದಗಿಸುವುದು ಹಾಗೂ ಜಿಲ್ಲೆಗೆ ನಿಗದಿ ಪಡಿಸಿರುವ ಆಕ್ಸಿಜನ್ ಪ್ರಮಾಣವನ್ನು 4.5 ಸಾವಿರ ಲೀಟರ್ ನಿಂದ 7.15 ಸಾವಿರ ಲೀಟರ್‌ಗೆ ನಿಗದಿ ಪಡಿಸಲು ಮನವಿ ಮಾಡಲಾಗಿದೆ.
ಮರಣದ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಅಧ್ಯಯನ ಮಾಡಲು ಜಿಲ್ಲಾಸ್ಪತ್ರೆಗೆ ಇತ್ತೀಚೆಗೆ ಭೇಟಿ ನೀಡಿದ್ದ ಪರಿಣಿತರ ತಂಡ ತನ್ನ ವರದಿಯನ್ನು ಈಗಾಗಲೇ ಆರೋಗ್ಯ ಇಲಾಖೆಗೆ ಸಲ್ಲಿಸಿದೆ. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಪ್ರತಿನಿಧಿಗಳು ಈ ವರದಿಯ ಹಿನ್ನೆಲೆಯಲ್ಲಿ ವೈದ್ಯಕೀಯ ವ್ಯವಸ್ಥೆಗೆ ಮುಂದಿನ ದಿನಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿಡಿಯೋ ಸಂವಾದದ ಮೂಲಕ ಮನವರಿಕೆ ಮಾಡಿಕೊಡಲಿದೆ ಎಂದು ಸಚಿವರು ತಿಳಿಸಿದ್ದಾರೆ.

 

By admin