ಬೇಲೂರು: ಐತಿಹಾಸಿಕ ಬೇಲೂರು ಪಟ್ಟಣದ ಜೆ.ಪಿ.ನಗರ ಬಡಾವಣೆಯ ಯುಜಿಡಿ ನೀರು ಖಾಸಗಿ ಜಮೀನಿನ ಮೇಲೆ ಹರಿದು ಗ್ರಾಮದೇವತೆ ದುರ್ಗಮ್ಮ ಗುಡಿಯ ಸಮೀಪದ ಕಟ್ಟೆಯಲ್ಲಿ ಶೇಖರಣೆಗೊಳ್ಳುತ್ತಿರುವುದರಿಂದ ಸುತ್ತಮುತ್ತಲಿನ ಪರಿಸರ ಸಂಪೂರ್ಣ ಮಾಲಿನ್ಯಗೊಳ್ಳುತ್ತಿರುವುದಲ್ಲದೆ ದುರ್ನಾತ ಬೀರುತ್ತಾ ಸಾಂಕ್ರಾಮಿಕ ರೋಗಕ್ಕೆ ಆಹ್ವಾನ ನೀಡುತ್ತಿದೆ.
ಬೇಲೂರು ಪಟ್ಟಣದ ಜೆ.ಪಿ.ನಗರದ12 ಮತ್ತು 13 ವಾರ್ಡುಗಳಲ್ಲಿನ ಮಲ, ಮೂತ್ರ ಮಾಂಸ ತ್ಯಾಜ್ಯಗಳು ಸಮರ್ಪಕವಾಗಿ ಯುಜಿಡಿ ಮೂಲಕ ಹರಿಯದೇ ಸಂತೆ ಮೈದಾನದ ಬಳಿ ಚರಂಡಿ ಮೂಲಕ ಹೊರ ಬಂದು ಖಾಸಗಿ ವ್ಯಕ್ತಿಗಳ ಜಮೀನಿನ ಮೇಲೆ ಹರಿಯುತ್ತಿದೆಯಲ್ಲದೆ, ನಂತರ ಇಲ್ಲಿಂದ ಮುಂದಕ್ಕೆ ಗ್ರಾಮ ದೇವತೆ ದುರ್ಗಮ್ಮ ದೇವಿಯ ರಸ್ತೆ ಸಮೀಪ ಇರುವ ಪುರಾತನ ಕಾಲದ ಕಟ್ಟೆಗೆ ಸೇರುತ್ತಿದೆ. ಇದರಿಂದ ಇಡೀ ಪ್ರದೇಶ ಗಬ್ಬುನಾತ ಬೀರುತ್ತಿದ್ದು, ಸುತ್ತಮುತ್ತಲಿನ ಪ್ರದೇಶ ಕೊಳಕುಮಯವಾಗಿ ನೀರು ಕೂಡ ಮಲೀನಗೊಂಡಿದೆ. ಇದರಿಂದ ಬಿಳಿ ನೊರೆಗಳು ಉಕ್ಕಿ ಹರಿಯುತ್ತಿದ್ದು ಈ ವ್ಯಾಪ್ತಿಯ ಜನ ಮೂಗು ಮುಚ್ಚಿಕೊಂಡು ಜೀವನ ಮಾಡುವಂತಾಗಿದೆ.


ಇನ್ನು ಕೊಳಚೆ ನೀರು ಹರಿಯುತ್ತಿರುವುದರಿಂದಾಗಿ ಜಮೀನಿನ ಮಾಲೀಕರಿಗೆ ದಿಕ್ಕು ತೋಚದಂತಾಗಿದೆ. ಪಟ್ಟಣದ ಪುರಸಭೆ ಹಾಗೂ ಸನ್ಯಾಸಿಹಳ್ಳಿ ಗ್ರಾಪಂ ಸಮರ್ಪಕ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದ್ದರೂ ಅದನ್ನು ಕಾರ್ಯರೂಪಕ್ಕೆ ತರದಿರುವುದೇ ಇವತ್ತಿನ ಸ್ಥಿತಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.ಈ ಕಲುಷಿತ ನೀರನ್ನೇ ದನಕರುಗಳು ಕುಡಿದು ರೊಗಗಳಿಂದ ಬಳಲಿ ಸಾಯುತ್ತಿವೆ. ಮಲೀನ ನೀರಿನಿಂದ ಸುತ್ತಮುತ್ತಲಿನ ಜನರಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಕೊಳಚೆ ನೀರು ಶೇಖರಣೆಯಾಗಿರುವ ಕಟ್ಟೆಯ ಕೆಳಗೆ ತರಕಾರಿ, ಸೊಪ್ಪು ಬೆಳೆಯುವ ರೈತರ ಕಾಲಿನಲ್ಲಿ ನವೆ ತುರಿಕೆ ಶುರುವಾಗಿದೆ ಎಂದು ಜನರು ದೂರಿದ್ದಾರೆ. ಸಂಬಂಧಿಸಿದವರು ಇತ್ತ ಗಮನಹರಿಸಿ ಸಮಸ್ಯೆಗೆ ಆದಷ್ಟು ಪರಿಹಾರ ಕಂಡು ಹಿಡಿಯಬೇಕಾಗಿದೆ. ಇಲ್ಲದೆ ಹೋದರೆ ಜನ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ದಿನಗಳು ದೂರವಿಲ್ಲ.

By admin