ಚಾಮರಾಜನಗರ: ಕೆಲವು ದಿನಗಳ ಹಿಂದೆಯಷ್ಟೆ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿ ಅದರಿಂದ ಗುಣಮುಖವಾಗಿದ್ದರೂ ಮತ್ತೆ ತಮ್ಮ ಕುಟುಂಬಕ್ಕೆ ತಗುಲಬಹುದೆಂದು ಹೆದರಿ ಆತ ಸೇರಿದಂತೆ ಪತ್ನಿ, ಮಕ್ಕಳು ಹೀಗೆ ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಹೆಚ್.ಮೂಕಳ್ಳಿ ಗ್ರಾಮದಲ್ಲಿ ನಡೆದಿದೆ.
ಹೆಚ್. ಮೂಕಳ್ಳಿ ಗ್ರಾಮದ ಮಹದೇವಪ್ಪ (46) ಮತ್ತು ಈತನ ಪತ್ನಿ ಮಂಗಳಮ್ಮ (36) ಪುತ್ರಿಯರಾದ ಜ್ಯೋತಿ (14) ಹಾಗೂ ಗೀತಾ (12) ಎಂಬುವರೇ ನೇಣು ಬಿಗಿದುಕೊಂಡು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡವರು.
ಮಹದೇವಪ್ಪನಿಗೆ ಕಳೆದ 20 ದಿನಗಳ ಹಿಂದೆ ಕೊರೊನಾ ಸೋಂಕು ದೃಢವಾಗಿತ್ತಲ್ಲದೆ, ಚಿಕಿತ್ಸೆಯ ಬಳಿಕ ಅವರು ಗುಣಮುಖರಾಗಿದ್ದರು. ಆದರೆ ಮತ್ತೆ ಎಲ್ಲಿ ಕೊರೊನಾ ಸೋಂಕು ತಮ್ಮ ಕುಟುಂಬಕ್ಕೆ ತಗುಲಿ ಬಿಡುತ್ತದೆಯೋ ಎಂಬ ಭಯದಲ್ಲಿ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಮಾಡಿದ್ದಾರೆ.
ಅದರಂತೆ ಮಂಗಳವಾರ ರಾತ್ರಿ ಮಹದೇವಪ್ಪ ಮನೆಯಲ್ಲಿ ಎಲ್ಲರಿಗೂ ನೇಣು ಹಾಕಿ ತಾನೂ ಸಹ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಬೆಳಿಗ್ಗೆ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ರಾಮಸಮುದ್ರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆನಂದ್ ಭೇಟಿ ನೀಡಿ ಮಹಜರು ನಡೆಸಿ ನೇಣು ಹಾಕಿಕೊಂಡವರ ಮೃತದೇಹವನ್ನು ಕೆಳಗಿಳಿಸಿ ಮುಂದಿನ ಕ್ರಮ ಕೈಗೊಂಡರು. ಈ ಸಂಬಂಧ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.