ಗುಂಡ್ಲುಪೇಟೆ: ಪಕ್ಷದ ಬಲವರ್ಧನೆಗೆ ಗ್ರಾಮ ಪಂಚಾಯಿತಿ ಚುನಾವಣೆಯೇ ಅಡಿಪಾಯವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಭಿನ್ನಮತ ಬದಿಗಿಟ್ಟು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಕಾಂಗ್ರೆಸ್ ಯುವ ಮುಖಂಡ ಗಣೇಶ್ ಪ್ರಸಾದ್ ಮನವಿ ಮಾಡಿದರು.
ತಾಲ್ಲೂಕಿನ ಕಬ್ಬಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಪಂ ಚುನಾವಣಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಎಚ್.ಎಸ್. ಮಹದೇವಪ್ರಸಾದ್ ಅಭಿವೃದ್ಧಿ ಕೆಲಸಗಳು ಮುಂದುವರಿಯಬೇಕಾದರೆ ಕಾಂಗ್ರೆಸ್ ಕಾರ್ಯಕರ್ತರು ಈಗಿನಿಂದಲೇ ಸಂಘಟಿತರಾಗಿ ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯುವಂತೆ ಕೆಲಸ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಕಳೆದ ಉಪ ಚುನಾವಣೆಯಲ್ಲಿ ಗೀತಾ ಮಹದೇವಪ್ರಸಾದ್ ಗೆದ್ದ ನಂತರ ಸಿದ್ದರಾಮಯ್ಯ ಅವರು ನೂರಾರು ಕೋಟಿ ಅನುದಾನವನ್ನು ಕ್ಷೇತ್ರಕ್ಕೆ ನೀಡಿದ್ದರು. ಅದರ ಅನುದಾನ ಈಗ ಬಿಡುಗಡೆಯಾಗುತ್ತಿದ್ದು, ಇದನ್ನು ಶಾಸಕ ನಿರಂಜನಕುಮಾರ್ ತಮ್ಮದೆಂದು ಹೇಳಿಕೊಳ್ಳುತ್ತಿರುವುದು ಸರಿಯಲ್ಲ. ಅವರು ಶಾಸಕರಾದ ನಂತರ ಯಾವುದೇ ರೀತಿಯ ಅನುದಾನ ತಂದಿಲ್ಲ ಎಂದು ಕುಟುಕಿದರು.
ಗುಂಡ್ಲುಪೇಟೆ ಅಭಿವೃದ್ಧಿಗೆ ಕೆ.ಎಸ್. ನಾಗರತ್ನಮ್ಮ, ನಜೀರ್ ಸಾಬ್, ಶಿವರುದ್ರಪ್ಪ, ಮಹದೇವಪ್ರಸಾದ್ ಕೊಡುಗೆ ಅಪಾರ. ಇದರಲ್ಲಿ ಈಗಿನ ಶಾಸಕರ ಪಾತ್ರ ಏನು ಇಲ್ಲ. ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ನಿರಂಜನಕುಮಾರ್ ಕೆಲಸ ನಿರ್ವಹಿಸುತ್ತಿದ್ದು, ಸಾಮಾನ್ಯ ಕಾರ್ಯಕರ್ತರಿಗೆ ಪಕ್ಷದಲ್ಲಿ ಬೆಲೆಯೇ ಇಲ್ಲದಂತಾಗಿದೆ. ಅಧಿಕಾರಿಗಳಿಗೂ ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡಿದೆ ಶಾಸಕರ ಕೆಲವು ಬೆಂಬಲಿಗರು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದರು.
ನಿವೇಶನ ಹಂಚಿಕೆ ಪಟ್ಟಿ ಚುನಾವಣಾ ಗಿಮಿಕ್: ಗ್ರಾಪಂ ಚುನಾವಣೆ ಹೊಸ್ತಿಲಿನಲ್ಲಿ ನಿವೇಶನ ಹಂಚಿಕೆ ಹೆಸರು ಹೇಳಿಕೊಂಡು ವಸತಿ ರಹಿತರ ಪಟ್ಟಿಯನ್ನು ಹಲವು ಗ್ರಾಮ ಪಂಚಾಯಿತಿಗಳಲ್ಲಿ ಶಾಸಕರು ಅವರ ಬೆಂಬಲಿಗರಿಂದ ಮಾಡಿಸುತ್ತಿದ್ದಾರೆ. ಜೊತೆಗೆ ಪ್ರತಿಯೊಬ್ಬರಿಂದ 20 ಸಾವಿರ ಹಣವನ್ನು ಸಹ ಪಡೆಯುತ್ತಿದ್ದಾರೆ. ಇದಕ್ಕೆ ಕೆಲವು ಪಿಡಿಓಗಳು ಬೆಂಬಲ ನೀಡುತ್ತಿದ್ದಾರೆ. ಇದೆಲ್ಲ ಕೇವಲ ರಾಜಕೀಯ ಗಿಮಿಕ್. ಸರ್ಕಾರ ಯಾವುದೇ ರೀತಿಯ ಮನೆಗಳ ಮಂಜೂರಾತಿಯನ್ನು ಸಹ ಮಾಡಿಲ್ಲ. ಈ ಹಿಂದೆ ನಿರ್ಮಾಣವಾಗಿರುವ ಮನೆಗಳಿಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ ಎಂದು ತಿಳಿಸಿದರು.
ತಂದೆ ಹಣದಿಂದ ಸ್ಕೂಲ್, ಕಾಲೇಜು ಶುಲ್ಕ: ತಂದೆ ಹಣವನ್ನ ಖರ್ಚು ಮಾಡುತ್ತಿದ್ದಾರೆ ಎಂದು ಶಾಸಕ ನಿರಂಜನಕುಮಾರ್ ಹೇಳುತ್ತಿದ್ದಾರೆ. ಹಾಗಾದರೆ ಚುನುವಣೆಗು ಮುನ್ನ ಅವರು ಯಾರ ಹಣ ಖರ್ಚು ಮಾಡಿದ್ದರು. ಸ್ಕೂಲು, ಕಾಲೇಜು ಶುಲ್ಕವನ್ನು ಮಕ್ಕಳು ಅಪ್ಪನ ಹಣದಿಂದಲೇ ಕಟ್ಟುವುದು. ಇದರ ಸಾಮಾನ್ಯ ಪರಿಜ್ಞಾನವೂ ಇಲ್ಲದೆ ಶಾಸಕರು ಮಾತನಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕುಟುಕಿದರು.
ಈ ವೇಳೆ ಕಬ್ಬಹಳ್ಳಿ, ಬನ್ನಿತಾಳಪುರ, ಹೆಗ್ಗಡಹಳ್ಳಿ ಸೇರಿದಂತೆ ಇತರೆ ಗ್ರಾಮದ 50ಕ್ಕು ಹೆಚ್ಚು ಹಲವು ಮಂದಿ ಬಿಜೆಪಿ ಪಕ್ಷ ತೊರೆದು ಗಣೇಶ ಪ್ರಸಾದ್ ಸಮ್ಮುಖದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಧು ಶಂಕರ್, ಜಿಲ್ಲಾ ಪಂಚಾಯಿತಿ ಸದಸ್ಯ ಕಬ್ಬಹಳ್ಳಿ ಮಹೇಶ್, ಗುಂಡ್ಲುಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್, ಬೇಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ. ಮುನಿರಾಜು, ಚಾಮುಲ್ ಅಧ್ಯಕ್ಷ ನಂಜುಂಡ ಪ್ರಸಾದ್, ತಾಪಂ ಸದಸ್ಯರಾದ ಸುಗುಣ ನಾರಾಯಣ್, ಸಹಕಾರ ಬ್ಯಾಂಕ್ ನಿರ್ದೇಶಕ ಮಲ್ಲಿಶೆಟ್ಟಿ, ಅಣ್ಣೂರುಕೇರಿ ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್, ತಾಪಂ ಮಾಜಿ ಸದಸ್ಯ ಕೆಂಪರಾಜು, ವಿಷಕಂಠ ಮೂರ್ತಿ, ಬಸವರಾಜಪ್ಪ, ಮೃತ್ಯಂಜಯ, ಮಾದಪ್ಪ, ಮರಿಶೆಟ್ಟಿ ಸೇರಿದಂತೆ ಹಲವು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.