ಮೈಸೂರು: ಕೊರೊನಾ ಸೋಂಕನ್ನು ತಡೆಗಟ್ಟುವ ಸಲುವಾಗಿ ಮೈಸೂರು ಜಿಲ್ಲಾಡಳಿತ ಸಂಪೂರ್ಣ ಲಾಕ್ ಡೌನ್ ಜಾರಿ ಆದೇಶ ಹೊರಡಿಸಿದ್ದು, ಅಗತ್ಯ ವಸ್ತುಗಳ ಖರೀದಿಗೆ ವಾರದಲ್ಲಿ ಸೋಮವಾರ ಮತ್ತು ಗುರುವಾರ ಹೀಗೆ ಎರಡು ದಿನಗಳ ಕಾಲ ಅವಕಾಶ ಮಾಡಿಕೊಟ್ಟಿದೆ ಅದರಂತೆ ಗುರುವಾರ (ಜೂ.3) ದಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದರೂ ಈ ವೇಳೆ ಕೋವಿಡ್ ನಿಯಮವನ್ನು ಪಾಲಿಸುವಂತೆ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಸೂಚನೆ ನೀಡಿದ್ದಾರೆ.
ಕಳೆದ ಸೋಮವಾರ ಅವಶ್ಯಕ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟ ವೇಳೆ ನಗರದಲ್ಲಿ ಜನ ಕೋವಿಡ್ ನಿಯಮವನ್ನು ತೂರಿ ಜಾತ್ರೆಯಂತೆ ಮಾರುಕಟ್ಟೆಗಳಲ್ಲಿ ಸೇರಿದ್ದರು. ಆದ್ದರಿಂದ ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಪೊಲೀಸರು ಈ ಸಂಬಂಧ ನಿಗಾವಹಿಸಿದ್ದಾರೆ. ಸದ್ಯ ಅಗತ್ಯ ವಸ್ತುಗಳಾದ ದಿನಸಿ, ಹಣ್ಣು, ತರಕಾರಿ ಅಂಗಡಿಗಳನ್ನು ಮಾತ್ರ ತೆರೆಯಲು ಅನುಮತಿ ನೀಡಿದ್ದು, ಇತರೇ ಅಂಗಡಿಗಳನ್ನು ತೆರೆಯಲು ಯಾವುದೇ ಅನುಮತಿ ಇರುವುದಿಲ್ಲ. ಅವಶ್ಯಕ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಇತರೇ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಿರುವುದು ಕಂಡು ಬಂದಲ್ಲಿ, ಅಂತಹವರ ವಿರುದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಹಾಗೂ ಈ ಅಂಗಡಿಗಳನ್ನು ಮುಚ್ಚಿಸಿ, ಅಂಗಡಿಯ ಪರವಾನಗಿಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಸಾರ್ವಜನಿಕರು ಅನವಶ್ಯಕವಾಗಿ ಹೊರಗಡೆ ಓಡಾಡದೇ, ಕೇವಲ ಅವಶ್ಯಕ ವಸ್ತುಗಳಾದ ದಿನಸಿ, ಹಣ್ಣು, ತರಕಾರಿಗಳ ಖರೀದಿ ಸಂಬಂಧ ಮಾತ್ರ ಸಾರ್ವಜನಿಕರು ಹೊರಗಡೆ ಬರಬೇಕು. ಸಾರ್ವಜನಿಕರು ದಿನಸಿ, ಹಣ್ಣು, ತರಕಾರಿಗಳ ಖರೀದಿಗೆ ದೂರದ ಅಂಗಡಿಗಳಿಗೆ ಹೋಗದೆ, ತಮ್ಮ ಮನೆಯ ಸಮೀಪ ಇರುವ ಅಂಗಡಿಗಳಿಗೆ ಮಾತ್ರ ತೆರಳಿ ಖರೀದಿ ಮಾಡಬೇಕು. ನಗರ ಪೊಲೀಸರು ಎಲ್ಲಾ ಸ್ಥಳಗಳಲ್ಲಿ ಸಾರ್ವಜನಿಕರ ವಾಹನಗಳನ್ನು ಪರಿಶೀಲಿಸಲಿದ್ದು, ಅನಗತ್ಯವಾಗಿ ಓಡಾಡುವುದು ಕಂಡು ಬಂದಲ್ಲಿ ಅಂತಹವರ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಿದ್ದಾರೆ.
ಇನ್ನು ಕೋವಿಡ್-19 ನಿರ್ಬಂಧಗಳ ಹಿನ್ನೆಲೆಯಲ್ಲಿ ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರು ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಕಲಾವಿದರು ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿ, ಸರ್ಕಾರದ ಪರಿಹಾರದ ಧನವನ್ನು ಪಡೆದುಕೊಳ್ಳುವ ಸಂಬಂಧ ಸೇವಾ ಸಿಂಧು ಕೇಂದ್ರಗಳನ್ನು ಈ ಸಮಯದಲ್ಲಿ ತೆರೆಯಲು ಅನುಮತಿ ನೀಡಲಾಗಿದೆ. ಸಾರ್ವಜನಿಕರು ಸರ್ಕಾರದ ಕೋವಿಡ್ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಕೋವಿಡ್ ಹರಡುವಿಕೆ ನಿಯಂತ್ರಣದಲ್ಲಿ ನಗರದ ಪೊಲೀಸರಿಗೆ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.