ರಾಜ್ಯಕ್ಕೆ ಮೈಸೂರು ಅರಸರ ಕೊಡುಗೆ ಅಪಾರ: ಸಚಿವ ಎಸ್.ಟಿ. ಸೋಮಶೇಖರ್
ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಚಾಲನೆ, ವರ್ಷದ 365 ದಿನವೂ ಪೊಲೀಸ್ ಬ್ಯಾಂಡ್

ಮೈಸೂರು ಮಹಾರಾಜರು ಈ ರಾಜ್ಯಕ್ಕೆ ನೀಡಿದ ಕೊಡುಗೆಗಳು ಅಪಾರ. ಅವರ ಕಾರ್ಯಗಳನ್ನು ಇಂದು ನಾವು ನೆನೆಸಿಕೊಳ್ಳಬೇಕಿದೆ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಅರಮನೆ ಆವರಣದಲ್ಲಿ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಮೈಸೂರು ರಾಜ ಮನೆತನದವರು ಈ ರಾಜ್ಯಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಛಾಯಾಚಿತ್ರ ಪ್ರದರ್ಶನದ ಮೂಲಕ ಜನರಿಗೆ ತಲುಪಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಒಡವೆ ಮಾರಿ ಕೆಆರ್ ಎಸ್ ನಿರ್ಮಿಸಿದ್ದರಿಂದ ಕೋಟ್ಯಂತರ ರೈತರಿಗೆ ಅನುಕೂಲ ಆಗಿದೆ ಜೊತೆಗೆ ಕೋಟ್ಯಂತರ ಜನರಿಗೆ ಕುಡಿಯುವ ನೀರು ಸಿಗುವಂತಾಯಿತು. ಮೈಸೂರು ಮಹಾರಾಜರ ಕೊಡುಗೆಗಳು ಒಂದೆರೆಡಲ್ಲ. ಅವರ ಕಾರ್ಯ ಎಷ್ಟು ಬಣ್ಣಿಸಿದರು ಸಾಲದು ಎಂದರು.
ಪುನೀತ್ ಅವರ ಜನಪರ ಕಾರ್ಯಕ್ರಮಗಳು ಈಗ ತಿಳಿಯುತ್ತಿವೆ. ಅವರ ಅಂತಿಮ ಸಂಸ್ಕಾರಕ್ಕೆ ಸರ್ಕಾರ ಸಾಕಷ್ಟು ಮುತುವರ್ಜಿ ವಹಿಸಲಾಯಿತು. ಪುನೀತ್ ಅಂತಿಮ ದರ್ಶನ ಪಡೆಯಲು ಬಂದ ಜನಸಾಗರವನ್ನು ನಾನು ಹಿಂದೆಂದೂ ನೋಡಿರಲಿಲ್ಲ ಎಂದರು.
ಇಂದಿನಿಂದ ಒಂದು ವಾರಗಳ ಕಾಲ ಫಲಪುಷ್ಪ ಪ್ರದರ್ಶನ ಇರಲಿದೆ. ನಾನಾ ರೀತಿಯ ಪುಷ್ಪಗಳನ್ನು ಜನತೆ ಕಣ್ತುಂಬಿಕೊಳ್ಳಬಹುದಾಗಿದೆ. ಹೊಸ ವರ್ಷದಿಂದ ಪ್ರತಿನಿತ್ಯ ಸಂಜೆ 6.30ಕ್ಕೆ ಪೊಲೀಸ್ ಬ್ಯಾಂಡ್ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ ಎಂದರು.
ಕೋವಿಡ್ ಮಾರ್ಗಸೂಚಿಗಳಂತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಎರಡು ಡೋಸ್ ಲಸಿಕೆ ಪಡೆದವರಿಗೆ ಪ್ರವೇಶಕ್ಕೆ ಅವಕಾಶವಿದೆ. ಜಿಲ್ಲಾಡಳಿತ ಮತ್ತು ಅರಮನೆ ಆಡಳಿತ ಮಂಡಳಿ ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದೆ ಎಂದು ಹೇಳಿದರು.
ಶಾಸಕರಾದ ಎಲ್. ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರ, ವಿವಿಧ ನಿಗಮ ಮಂಡಳಿ ಅಧ್ಯಕ್ಷರಾದ ಕೋಟೆ ಎಂ ಶಿವಣ್ಣ, ಹೆಚ್.ವಿ.ರಾಜೀವ್, ಅಪ್ಪಣ್ಣ, ಕೃಷ್ಣಪ್ಪಗೌಡ, ಹೇಮಂತ್‌ಕುಮಾರ್ ಗೌಡ, ಫಣೀಶ್, ಮಹದೇವಸ್ವಾಮೀ, ಶಿವಲಿಂಗಯ್ಯ, ಮಹದೇವಯ್ಯ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಸಿಇಒ ಎ.ಎಂ.ಯೋಗೀಶ್, ಅಪರ ಜಿಲ್ಲಾಧಿಕಾರಿ ಡಾ. ಬಿ.ಎಸ್.ಮಂಜುನಾಥಸ್ವಾಮಿ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.