ಬೆಂಗಳೂರು: ಜೀ ವಾಹಿನಿಯ ಸರಿಗಮಪದಲ್ಲಿ ಸುಮಧುರ ಕಂಠದಲ್ಲಿ ಹಾಡುವ ಮೂಲಕ ರಾಜ್ಯದ ಜನರ ಗಮನಸೆಳೆದಿದ್ದ ಪೊಲೀಸ್ ಪೇದೆ ಸುಬ್ರಹ್ಮಣಿ ಅವರ ಪತ್ನಿ ಕೊರೋನಾದಿಂದ ಮೃತಪಟ್ಟಿದ್ದಾರೆ.
ಕೊರೋನಾ ಎರಡನೇ ಅಲೆ ಬಹಳಷ್ಟು ಮಂದಿಯನ್ನು ಬಲಿ ತೆಗೆದುಕೊಂಡಿದ್ದು ಬಾಳಿ ಬದುಕ ಬೇಕಾಗಿದ್ದವರೆಲ್ಲರೂ ಕೊರೋನಾಕ್ಕೆ ಬಲಿಯಾಗಿರುವುದು ಬೇಸರದ ಸಂಗತಿಯಾಗಿದೆ. ಸುಬ್ರಹ್ಮಣಿ ಅವರು ಪೊಲಿಸ್ ಹಿರಿಯ ಅಧಿಕಾರಿಗಳ ಸಹಕಾರದಿಂದ ಸರಿಗಮಪ ಶೋಗೆ ಪ್ರವೇಶಿಸುವ ಮೂಲಕ ನಾಡಿನ ಜನತೆಗೆ ಚಿರಪರಿಚಿತರಾಗಿದ್ದರು. ಕಾರ್ಯಕ್ರಮದ ವೇಳೆ ವೇದಿಕೆಗೆ ಪತ್ನಿಯನ್ನು ಕರೆಯಿಸಲಾಗಿತ್ತು.
ಆದರೆ ಬದುಕಿ ಬಾಳಬೇಕಾಗಿದ್ದ ಅವರು ಇಷ್ಟು ಬೇಗ ಇಹಲೋಕ ತ್ಯಜಿಸುತ್ತಾರೆ ಎಂದು ಭಾವಿಸಿರಲಿಲ್ಲ. ಅವರಿಗೆ ವಾರದ ಹಿಂದೆ ಕೊರೋನಾ ಸೋಂಕು ದೃಢಪಟ್ಟಿತ್ತು. ಎರಡು ದಿನದ ಹಿಂದೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆ ಕೊಡಿಸಲು ಸುಬ್ರಹ್ಮಣಿ ಬೆಂಗಳೂರಿನಲ್ಲಿ ಆಸ್ಪತ್ರೆಗಳಿಗಾಗಿ ಸುತ್ತಾಡಿದ್ದರು. ಆದರೆ, ಬೆಂಗಳೂರಿನ ಯಾವುದೇ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಬೆಡ್ ಸಿಕ್ಕಿರಲಿಲ್ಲ. ಕೊನೆಗೆ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಸೋಮವಾರ ಮೃತಪಟ್ಟಿದ್ದಾರೆ.