ಮಡಿಕೇರಿ: ಒಂದು ಕಾಲದಲ್ಲಿ ಮಳೆಗಾಲವನ್ನು ಪೂರ್ವ ಸಿದ್ಧತೆಯೊಂದಿಗೆ ಸಂಭ್ರಮದಿಂದಲೇ ಬರಮಾಡಿಕೊಳ್ಳುತ್ತಿದ್ದ ಕೊಡಗಿನ ಮಂದಿ ಕಳೆದ ಕೆಲವು ವರ್ಷಗಳಿಂದ ಮಳೆಗಾಲ ಬಂತೆಂದರೆ ಬೆಚ್ಚಿಬೀಳುವಂತಾಗಿದೆ.

ಕಾರಣ ಮಳೆಗಾಲ ತಂದೊಡ್ಡಿದ ಘೋರ ಅನಾಹುತಗಳು ಇಲ್ಲಿನ ಜನರ ಎದೆಯೊಳಗೆ ಅವಲಕ್ಕಿ ಕುಟ್ಟುವಂತೆ ಮಾಡಿದೆ. ಮಳೆ ಜೋರಾಗಿ ಬಂದರೆ ಎಲ್ಲಿ ಅನಾಹುತ ಸೃಷ್ಟಿಯಾಗಿ ಬಿಡುತ್ತೋ ಎಂಬ ಭಯವಂತು ಕಾಡುತ್ತಲೇ ಇದೆ. ಕಳೆದ ನಾಲ್ಕು ವರ್ಷಗಳಿಂದ ಉತ್ತಮವಾಗಿ ಮಳೆಯಾಗಿರುವುದು ಒಂದೆಯಾದರೆ, ಮೂರು ವರ್ಷಗಳ ಕಾಲ ಗುಡ್ಡಕುಸಿತ, ಪ್ರವಾಹ ಸಂಭವಿಸಿ ಜೀವ ಹಾನಿಯಾಗಿದೆ. ಪ್ರತಿವರ್ಷದ ಮಳೆಗಾಲವೂ ಅನಾಹುತ ಮತ್ತು ಪ್ರಾಣ ಬಲಿಯೊಂದಿಗೆ ಅಂತ್ಯವಾಗುತ್ತಿರುವುದು ದುರಂತದ ಸಂಗತಿಯಾಗಿದೆ.

ಅನಾಹುತಕ್ಕೆ ಮುನ್ನುಡಿಯಾದ 2018ರ ಮಹಾಮಳೆ

2018ರಲ್ಲಿ ಮಹಾಮಳೆ ಸುರಿಯುವುದರೊಂದಿಗೆ ಭಾರೀ ಪ್ರಮಾಣದ ಭೂಕುಸಿತವಾಗಿ ಯಾರು ಊಹಿಸಲಾರದ ದುರ್ಘಟನೆಯೊಂದು ನಡೆದು ಹೋಯಿತು. ಊರಿಗೆ ಊರೇ ಕಣ್ಮರೆಯಾಯಿತು. ಪ್ರಾಣ ಹಾನಿಯೊಂದಿಗೆ ಮನೆ, ಆಸ್ತಿ ಕಳೆದುಕೊಂಡು ಒಂದಷ್ಟು ಮಂದಿ ನಿರ್ಗತಿಕರಾದರು. ಸಾಮಾನ್ಯವಾಗಿ ಜೋರು ಮಳೆ ಬಂದು ಮರ ಮುರಿದು ಬೀಳುವುದು, ಸಣ್ಣಪುಟ್ಟ ಗುಡ್ಡ ಕುಸಿತ, ಪ್ರವಾಹ ಸೇರಿದಂತೆ ಸಣ್ಣಪುಟ್ಟ ಅನಾಹುತಗಳನ್ನಷ್ಟೆ ನೋಡಿ ಅದಕ್ಕಷ್ಟೆ ಹೊಂದಿಕೊಂಡಿದ್ದ ಇಲ್ಲಿನವರು ಭೀಕರ ಅನಾಹುತ ನೋಡಿ ಬೆಚ್ಚಿ ಬಿದ್ದಿದ್ದರು. ಸದಾ ತಮ್ಮ ಮನೆ ಹಿಂದಿನ ಪ್ರಕೃತಿದತ್ತ ಗುಡ್ಡಗಳನ್ನು ನೋಡಿ ಖುಷಿ ಪಡುತ್ತಿದ್ದವರು ಅದೇ ಗುಡ್ಡ ತಮ್ಮ ಬದುಕನ್ನು ಬಲಿತೆಗೆದುಕೊಳ್ಳಬಹುದೆಂದು ಕನಸು ಮನಸ್ಸಲ್ಲೂ ಊಹಿಸಿರಲಿಲ್ಲ.

ಭಯದಲ್ಲಿಯೇ ಬದುಕುತ್ತಿರುವ ಜನರು

ಪ್ರಕೃತಿ ಮೇಲಿನ ನಂಬಿಕೆಯೋ ? ಸ್ವಾರ್ಥವೋ ? ಅನಿವಾರ್ಯವೋ ? ಗುಡ್ಡದ ಮೇಲೆ, ನದಿ ದಡದಲ್ಲಿ ಬದುಕು ಕಟ್ಟಿಕೊಂಡವರು ಈಗ ಪ್ರತಿ ಮಳೆಗಾಲದಲ್ಲಿಯೂ ಜೀವ ಕೈಯ್ಯಲ್ಲಿಡಿದುಕೊಂಡು ಬದುಕುವಂತಾಗಿದೆ. ಕಳೆದ ವರ್ಷದಿಂದ ಇಲ್ಲಿ ತನಕ ಉತ್ತಮವಾಗಿ ಮಳೆಯಾಗುತ್ತಲೇ ಇದೆ. ಒಂದು ಕಡೆ ಕೃಷಿ ಚಟುವಟಿಕೆಗೆ ಇದು ಪೂರಕವಾಗಿದ್ದರೂ ಮುಂದಿನ ಮಳೆಗಾಲದಲ್ಲಿ ಭಾರೀ ಮಳೆ ಸುರಿದರೆ ಕಾಫಿ ಕರಿಮೆಣಸು, ಶುಂಠಿ ಫಸಲು ಕೊಳೆರೋಗದಿಂದ ನಾಶವಾಗುವ ಸಾಧ್ಯತೆ ಹೆಚ್ಚಿದೆ. ಇದಕ್ಕಿಂತ ಹೆಚ್ಚಾಗಿ ಪ್ರಕೃತಿ ವಿಕೋಪದ ಭಯ ಹೆಚ್ಚಾಗಿ ಕಾಡುತ್ತಿದ್ದು, ಇದನ್ನು ತಡೆಯುವ ಸಲುವಾಗಿ ಜಿಲ್ಲಾಡಳಿತ ಈಗಿನಿಂದಲೇ ಸಜ್ಜುಗೊಳ್ಳಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಮಳೆಹಾನಿ ಎದುರಿಸಲು ಸಜ್ಜಾದ ಜಿಲ್ಲಾಡಳಿತ

ಈಗಾಗಲೇ ಕೊಡಗಿನ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಜಿಲ್ಲೆಯ ಎಲ್ಲಾ ಹಿರಿಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ವಿಡಿಯೊ ಸಂವಾದ ನಡೆಸಿ ಹಲವು ಸೂಚನೆ ನೀಡಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಆಗಸ್ಟ್ ಮೊದಲ ಮತ್ತು ಎರಡನೇ ವಾರದಲ್ಲಿ ಸುರಿದ ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿ ಉಂಟಾಗಿರುವುದರಿಂದ ಪ್ರಾಕೃತಿಕ ಹಾನಿ ತಪ್ಪಿಸುವ ನಿಟ್ಟಿನಲ್ಲಿ ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕೆ ವಹಿಸುವಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತರಾಗಲು ನಿರ್ದೇಶನ ನೀಡಿದ್ದು, ಪ್ರಮುಖವಾಗಿ ಗುಡ್ಡಕುಸಿತ ಉಂಟಾಗುವ ಪ್ರದೇಶಗಳ ಮೇಲೆ ನಿಗಾವಹಿಸಿ. ಅಗತ್ಯವಿದ್ದಲ್ಲಿ ಸ್ಥಳೀಯ ಜನರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸುವ ಸಂಬಂಧ ಮುಂಚಿತವಾಗಿ ಮಾಹಿತಿ ನೀಡಿ, ಹಾಗೆಯೇ ತಾಲೂಕು ಮಟ್ಟದಲ್ಲಿ ತಹಸೀಲ್ದಾರರು, ಸ್ಥಳೀಯ ನೋಡಲ್ ಅಧಿಕಾರಿಗಳ ಸಹಾಯದೊಂದಿಗೆ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಘಟನೆ ಬಗ್ಗೆ ನೇರವಾಗಿ ದೂರವಾಣಿ ಮೂಲಕ ಮಾಹಿತಿ ನಿಡುವಂತೆ ಸೂಚಿಸಿದ್ದಾರೆ.

ಕೊಡಗಿನವರಿಗೆ ಸವಾಲಿನ ಬದುಕು !

ಇನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ನಿಯೋಜಿತ ನೋಡಲ್ ಅಧಿಕಾರಿಗಳು ಮತ್ತು ಎಲ್ಲಾ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು ಪರಿಸ್ಥಿತಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಸಕಲ ತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮಳೆಗಾಲದ ಅನಾಹುತ ತಡೆಗೆ ಜಿಲ್ಲಾಡಳಿತ ಯಾವುದೇ ರೀತಿಯ ಕ್ರಮ ಕೈಗೊಂಡರೂ ಗುಡ್ಡಪ್ರದೇಶ, ನದಿದಡ ಸೇರಿದಂತೆ ಗ್ರಾಮೀಣ ಭಾಗದಲ್ಲಿ ವಾಸವಿರುವ ಜನರು ಕೂಡ ಅಷ್ಟೇ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಒಂದೆಡೆ ಕೊರೋನಾ ಮತ್ತೊಂದೆಡೆ ಪ್ರಾಕೃತಿಕ ವಿಕೋಪ ಇದೆರಡನ್ನು ಎದುರಿಸಿ ಬದುಕುವುದು ಇಲ್ಲಿನವರಿಗೊಂದು ಸವಾಲ್ ಎಂದರೆ ತಪ್ಪಾಗಲಾರದು.

By admin