-ಚಿದ್ರೂಪ ಅಂತಃಕರಣ

ನೂರಿಪತ್ಮೂರು ಪುಟಗಳ, ಎಂಟು ಪರದೆಯುಳ್ಳ ಕೈಲಾಸಂ ರಚಿತ ನಾಟಕದ ತಲೆಬರೆಹ ‘ಪೋಲೀ ಕಿಟ್ಟಿ’. ಪೋಲೀತನಗಳು ಒಂದೂ ಇರದಾತನಿಗೆ ಅವರಿವರು, ತಮ್ಮ ಪೋಲೀತನಗಳನ್ನು ಪಶ್ನಿಸಿದ ‘ಕೃಷ್ಣರಾವ್’ಗೆ ಕಟ್ಟಿಬಿಟ್ಟ ಅಡ್ಡ ಹೆಸರನ್ನು ಪ್ರಶ್ನೆತೀಕ್ಷ್ಣ ಮತ್ತು ಹಾಸ್ಯದ ಜಾಣಗಾರ (ಕನ್ನಡ ಪ್ರಹಸನ ಪಿತಾಮಹ) ಕೈಲಾಸಂ ಅವರು ರಂಗದ ಅಚ್ಚೊತ್ತಿ ಪೋಲೀ ಕಿಟ್ಟಿ ಏನೆಂಬುದನ್ನು ಸಹೃದಯಿಯ ಪ್ರಜ್ಞೆಯ ಕಿಸೆಗೆ ಸೇರಿಸಿದ್ದಾರೆ. ಒಗಟು ನಮ್ಮ ಕೈಲಾಸಂ. ಪೋಲೀ ಕಿಟ್ಟೀನ ಓದುವಾಗ ಓದಿದ ಸಾಲಿನಲ್ಲೇ ತಿರುವಿ ಸಾಗುವುದು ವಿಭಿನ್ನ ಬರೆಹ ಶೈಲಿಯ ಕೈಲಾಸಂರ ಮೇಲೆ ತುಸು ಕೋಪ ತರಿಸಿಬಿಡುತ್ತದೆ. ಇದಕ್ಕೆ ಅವರೇ ಕಾರಣ ಎನ್ನುವುದಕ್ಕಿಂತ ಕೆಲವು ಸಾಂಪ್ರದಾಯಿಕ ಕುಣಿಕೆಗಳಿಗೆ ಸಿಕ್ಕಿ ಕೊಂಡಿರುವುದು ಮತ್ತು ನಮ್ಮ ಅರಿವಿನ ಕೊರತೆ ಕಾರಣವೆಂದರೆ ಸೂಕ್ತದಲ್ಲಿ ಸೂಕ್ತ. ತಾಳ್ಮೆ ಜಾಣ್ಮೆ ಇಲ್ಲದವನ ಪಕ್ಕಕ್ಕೆ ಕೈಲಾಸಂ ಕೂರುವುದೇ ಇಲ್ಲವೆಂದು ನನಗೆ ಅವರ ಬರೆಹಗಳನ್ನು ಓದುತ್ತಾ ಹೋದಂತೆ ಗೊತ್ತಾಯ್ತು. ಅವರೇ ನಾಟಕದಲ್ಲಿ ಒಂದು ಪಾತ್ರದ ಮೂಲಕ ಈ ಮಾತನ್ನ ಹೇಳಿಸಿ ಬಿಟ್ಟಿದ್ದಾರೆ; “ಮನೆಯಾತ: ಅಪ್ಪಾ… ನಿನ್ನಡೆ, ನಿನ್ಬಾಷೆ, ನಿನ್ಮಾತು, ಒಂದಕ್ಕೊಂದು ಹೊಂದೋದೇ ಇಲ್ಲ. ಧೀರನ್ಹಾಗೆ ಬೆಂಕೀಗ್ ನುಗ್ತೀಯಾ! ಹೆಂಗಸಿನ್ಹಾಗೆ ಮಗೂನ ಲಾಲಿಸ್ತೀಯಾ; ತುರ್ಕು, ಸಂಸ್ಕೃತ, ಕನ್ನಡ, ಇಂಗ್ಲೀಷು ಕಲಸ್ಮೇಲೋಗ್ರ ಮಾಡಿ ಮಾತಾಡ್ತೀಯಾ! ಎಷ್ಟು ಯೋಚಿಸಿದ್ರೂನೂವೆ ಬಿಡಿಸ್ಲಾಗ್ದ ವಗ್ಟೆ ಆಗಿದ್ದೀಯಲ್ಲಪ್ಪಾ ನೀನು?”. 

ಈ ಕಂಪ್ಯೂಟರ್‌ನ ವರ್ಡ್ ಸಾಫ್ಟ್‌ವೇರ್ ತಂತ್ರಜ್ಞಾನದಲ್ಲಿ ಒಂದು ವಿಷಯದ ಬಗ್ಗೆ ವಿಶ್ಲೇಷಿಸುವ ವಿವರಣೆಯಲ್ಲಿ ಬರುವ ಮುಖ್ಯ ಪದಗಳಲ್ಲೇ ಆ ಪದಗಳ ಹಿನ್ನಲೆ ಮಾಹಿತಿಯ ವಿಸ್ತಾರತೆಯನ್ನು ಅವಿತಿಡುವುದು ಹೈಪರ್ ಲಿಂಕ್ ವ್ಯವಸ್ಥೆಯಾಗಿದೆ. ಇಂತಹ ಹೈಪರ್ ಲಿಂಕ್’ಗಳ ಬಳಕೆಯ ಜಾಣ್ಮೆ ಬುದ್ಧಿ ಜೀವಿಗಳ ಕಾರ್ಯಕ್ಷಮತೆಯಲ್ಲಿ ಬಳಕೆಯಾಗಿರುವುದಕ್ಕೂ ಮತ್ತು ತಂತ್ರಜ್ಞಾನ ಕ್ಷೇತ್ರ ಪ್ರಸ್ತುತದಲ್ಲಿ ಅಭಿವೃದ್ಧಿಗೊಂಡಿರುವ ರೀತಿಗೂ ಸಂಪರ್ಕವಿದೆ. ಕೈಲಾಸಂರ ಕೃತಿಯಲ್ಲಿ ಈ ಹೈಪರ್ ಲಿಂಕ್’ಗಳು ಬಹಳಷ್ಟಿವೆ. ಈ ಲಿಂಕ್’ಗಳ ಜಾಡು ಹಿಡಿದು ಓದುಗ ಸಾಗಬೇಕು. ಹಾಗಾಗಿ ಕೈಲಾಸಂರ ಕೃತಿಗಳನ್ನು ಕಡಿಮೆ ಪುಟಗಳ ವಿಶ್ವಕೋಶವೆಂದು ಕರೆಯಲು ಒಪ್ಪುತ್ತೇನೆ. ಅಷ್ಟೇಯಲ್ಲ! ನಾವು ತಿಳಿದುಕೊಳ್ಳುವುದಕ್ಕೆ ಒಂದಷ್ಟು ಈ ಮೊದಲು ತಿಳಿದೇ ಕೈಲಾಸಂರ ಚಿಂತನೆಗಳಿಗೆ ಕಣ್ತಾಗಿಸಬೇಕು. ಅದು ಭಾಷಾ ದೃಷ್ಟಿಯಿರಬಹುದು, ಸಾಂಸ್ಕೃತಿಕ, ವೈಚಾರಿಕ, ಮನೋ ವೈಜ್ಞಾನಿಕ ವಿಷಯಗಳೇ ಇರಬಹುದು!. ಸುಮ್ಮನೆ ಟೈಮ್ ಪಾಸ್ ರೀಡಿಂಗ್’ಗೆ ಅವರು ದೂರ ಅಥವಾ ಅರ್ಥವಾಗದ ಕಗ್ಗಂಟು.

ಹಳೆಗನ್ನಡವೇನೂ!? ಕೂಡಿಸಿ ಮಾತಾಡೋ ಲಿಪಿರಹಿತ ಆಡು ಭಾಷೆನಾ ಲಿಪಿಗೊಳಿಸಿದರೆ ಆಧುನಿಕ ಕನ್ನಡ ಕೂಡ ಕಬ್ಬಿಣದ ಕಡಲೆ, ಅನ್ನೋದನ್ನ ತಿಳಿಸಬೇಕು ಈ ಜನಕ್ಕೆ ಅನ್ನೋ ನಿಟ್ಟಿನಲ್ಲಿ ಬರೆದ ಹಾಗಿದೆ ಈ ನಾಟಕದ ಭಾಷೆ. ಇನ್ನೊಂದು ಬಗೆಯಾಗಿ ಹೇಳಬೇಕೆಂದರೆ ಅವರಿದ್ದ ಕಾಲದಲ್ಲಿ ಪರಿಚಿತವಾದ ಹೊಸತನದ ಪಡಿಯಚ್ಚುಗಳಿವು. ಆಂಗ್ಲ ಕನ್ನಡ ಈ ಹೊಸಬಗೆಯದು. ಆಂಗ್ಲ ಕನ್ನಡವನ್ನು ಇವರಿಗೂ ಮೊದಲು, ಅರುಣೋದಯ ಕಾಲದ ಆದ್ಯರೊಬ್ಬರಾದ ಕೆರೋಡಿ ಸುಬ್ಬರಾಯರು ಬಳಸಿರುವುದು ವಿಶೇಷ. ಜತೆಗೆ ಈ ಕೃತಿಯ ಪ್ರಸ್ತುತತೆ; ರಂಗಮಂದಿರದಲ್ಲಿ ನಾಟಕವೇರ್ಪಡುತ್ತಿರುವ ನೈಜತೆಯೇ ಎನಿಸಿ ಓದುಗನು ತನ್ನ ಮೆದುಳಿನ ರಂಗಮಂದಿರದಲ್ಲಿ ಸರ್ವಸಜ್ಜುಗೊಂಡು ಕೌತುಕದೊಳಗೆ ವೀಕ್ಷಿಸುವ ಸ್ಥಿತಿಗೆ ಬರದ ಹೊರತು, ಕೈಲಾಸಂ ಬಿಡದ ಹಠವಾದಿತನದಲ್ಲಿ ಪ್ರತಿಭಾನ್ವಿತ ಅದ್ಭುತ ಪ್ರಯತ್ನವನ್ನು ಎಸಗಿದ್ದಾರೆ.

ಕೃಷ್ಣರಾವ್ ಮೊದಲ ಪರದೆಯಲ್ಲಿ ಪುಂಡ ಉಂಡಾಡಿ ಗುಂಡ ಅಲಿಯಾಸ್ ಗೂಂಡಾ ರೀತಿಯಲ್ಲಿ ಭಾಸವಾಗಿ ಪರಿಚಯಗೊಳ್ಳುತ್ತಲೇ ನಾಟಕದ ಇತರ ಪಾತ್ರ ಸನ್ನಿವೇಶಗಳಿಗೆ ಈತನೇ ಗಮನವೆಂದು ತೋರುತ್ತ ರಂಗದಲ್ಲಿ ಗುರುತಾಗುತ್ತಾನೆ. ಸ್ಕೌಟ್ಸ್ ದಳದವರಾದ ರಾಘು, ಶಾಮಿ, ಅಪ್ಪೂ, ವಾಸು, ಲಂಬು, ರಾಮು, ಮಗೂ ಮತ್ತೆ ಸ್ಕೌಟು ಮಾಸ್ಟರ್ ಅವರುಗಳ ಜತೆ ರೇಗೋದು – ಏಗೋದು ಎರಡನೇ ದೃಶ್ಯದ ಅಂತ್ಯಕ್ಕೆ ಮುಗಿದು ಕೃಷ್ಣರಾವ್ ನಿಜಕ್ಕೂ ಪೋಲೀನೇ ಇವನು ಪೋಲೀ ಕಿಟ್ಟೀನೇ ಎಂದುಕೊಳ್ಳುವಷ್ಟರಲ್ಲೇ ಓದುಗನಿಗೆ ತಿರುವು. ಥಟ್ಟನೆ ಮೂರನೆಯ ಪರದೆಯಲ್ಲಿ “ಮುದುಕ: ಇದೇನುಚ್ಚೋ ಕಾಣೆ! (ಕಣ್ಣೀರೊರೆಸಿಕೊಳ್ಳುತ್ತಾ ಓಡಿದ ಕಿಟ್ಟಿಯನ್ನು ನೋಡಿ) ಮಿಕ್ಕವ್ರು ಬದ್ಕಿರೋರ್ ಮಕ್ಳೆಲ್ಲಾ ಇವಯ್ಯನಂಗಾನ ಇದ್ದ್ ಬಿಟ್ರೆ ನನ್ನಂತಾವ್ರು ಮಕ್ಕಳ್ನ ಕಳ್ಕಂಡದ್ದೂ ಮರೆತ್’ಬಿಡ್’ಬೈದು….ನೋಡಿದ್ರೆ ನಮ್ಮಯ್ಯ ಎದುರಿಗ್ ನಿಂತಂಗೈತೆ! ಯಾರುಡುಗ್ನೋ ಕಾಣೆ…ಯಾರಾದ್ರೇನು ಇವ್ನೆತ್ತೋರ್ ಒಟ್ಟೆ ತಣ್’ಗಿರ್ಲಿ….”. ನಾಲ್ಕನೇ ಪರದೆಯಲ್ಲಿ ಒಬ್ಬಾಕೆ; ಹೆಂಗಸು: ನೀನೇನ್ ಬೇಕಾದ್ರೂ ಬೈಕೋ…ನನ್ರಾಜ…ನನ್ ಭಾಗಕ್ ದೇವ್ರಹಾಗ್ ಬಂದು(ಮಗುವನ್ನು ತಬ್ಬಿಕೊಳ್ಳುತ್ತಾ) ನನ್ನ ಕಂದನ್ನ ಕಾಪಾಡಿದ್ಯಲ್ಲ…ಅಷ್ಟೇ ಸಾಕು(ನಗುವನ್ನು ಸೂಚಿಸುತ್ತಾ) ನನ್ನೇನ್ ಬೇಕಾದ್ರೂ ಅನ್ಕೋ ಮಗು” ಎನ್ನುವ ಎರಡು ದೃಶ್ಯಗಳ ಅಂತಿಮ ಅನಿಸಿಕೆಯ ಹಿಂದಿನ ಚಿತ್ರಣದಲ್ಲಿ ಕೃಷ್ಣರಾವ್ ತೋರಿದ ಮನುಷ್ಯ ಮೌಲ್ಯತನಗಳು  ಪೋಲೀ ಕಿಟ್ಟಿಯಲ್ಲ ಈತ ಎನ್ನುವುದು ಓದುಗರಿಗೆ ಮನದಟ್ಟಾಗಿ ಕಿಟ್ಟಿಯನ್ನು ಮತ್ತಷ್ಟು ಪರಿಚಯಗೊಳ್ಳುವ ಯತ್ನವಾಗುತ್ತದೆ. 

ಕೈಲಾಸಂ ತತ್ ಕಾಲದ ವಿಷಮ ಸ್ಥಿತಿಗಳ ಸುಧಾರಣೆಗಾಗಿ  ತಮ್ಮ ಪ್ರತಿಭಾ ಸಂಪತ್ತನ್ನು ದುಡಿಸಿರುವ ಬಗೆಗೆ ಈ ಕೃತಿಯ ವಸ್ತುಸ್ಥಿತಿಗಳು ಸಾಕ್ಷಿ. ‘ಇಂಫ್ಲೂನ್ಸಾ’ ಎನ್ನುವ ಉಸಿರಾಟದ ಸೋಂಕು ಕಾಯಿಲೆ ಆ ಕಾಲಕ್ಕೆ ತಂದೊಡಿದ್ದ ಸಂದಿಗ್ಧ ಸ್ವರೂಪಕ್ಕೆ ಪೂರಕವಾಗಿ ಈಗಿನ ಕರೋನಾ ನಮ್ಮ ಪ್ರಸ್ತುತದ ಅನುಭವ…ಸ್ವಾರ್ಥದ ಹಲವರು ತೋರುವ ನಿರ್ದಾಕ್ಷಿಣ್ಯ ವರ್ತನೆಗಳು ಈ ಸಮಯದಲ್ಲೇ ಗೋಚರವಾಗೋದು…ಒಂದು ರೀತಿ ಸತ್ಯ ದರ್ಶನವೆಂದೇ ಹೇಳಬಹುದು. ಮೆರೆಯುತ್ತಿರುವವರು ಮುರಿದು ಬೀಳಬಹುದು, ಮುರಿದು ಬಿದ್ದವರು ಮಣ್ಣಾಗಬಹುದು. ಹಣವಂತರ ಜಾತಿಗೆ ಸೇರಿದ ಕ್ಷಣಮಾತ್ರದಲ್ಲೇ ಮದುವೆಯಾಗಿ ಬೇರೆಡೆ ಇದ್ದ ಕಿಟ್ಟಿಯ ಅಣ್ಣನೇ ತನ್ನ ಅಕ್ಕ ಭಾವ ಇಬ್ಬರೂ ಈ ಇಂಫ್ಲೂನ್ಸಾ ಸೋಂಕಿಗೆ ಸಿಲುಕಿ ಗುಣವಾಗಲು ಹಪಹಪಿಸುವಾಗ ಮನೆ ಬಾಗಿಲಿಗೆ ಬಂದ ಸೋದರನಾದ ಕಿಟ್ಟಿಗೆ ಬಾಗಿಲು ಮುಚ್ಚವುದರ ಜತೆಗೆ ಮಾನವೀಯತೆಯನ್ನೂ ಮುಚ್ಚಿ  ಹೃದಯ ಹೀನನಾಗಿ ನಡೆದುಕೊಂಡ ಘಟನೆ ಈಗಲೂ ಇರುವ ರಾಕ್ಷಸ ಮನಸ್ಥಿತಿ. ಏನೇ ಆದರೂ ದೊಡ್ಡ ಹೊಡೆತಗಳಿಗೆ ದೀನ ನಿರ್ಗತಿಕರೇ ಹೆಚ್ಚು ನೋಯುವುದು. ಈ ನೊಂದವರ ಸಾಲಿನಲ್ಲಿ ಕಿಟ್ಟಿಯ ಸುತ್ತಲ‌ ಬಡ ಜಗತ್ತು ನಲುಗಿ ಹೋಗಿರುವ ಚಿತ್ರಣ ಸಾರ್ವಕಾಲಿಕ ಪ್ರಸ್ತುತ. 

ಕಿಟ್ಟಿ ನಗುತ್ತಲೇ ವ್ಯಂಗ್ಯವಾಡುತ್ತ ವ್ಯವಸ್ಥೆಯೊಳಗಿನ ಕೆಸರನ್ನು ಗುರುತಿಸಿ ಬಿಟ್ಟಿದ್ದಾನೆ; ಅವನ ವೈಚಾರಿಕತೆಗೆ ಸ್ಕೌಟ್ಸ್ ಮಾಸ್ಟರ್ ಜಾಣಪೆದ್ದನಾಗಿ ಸಂಭಾಷಿತಗೊಳ್ಳುವುದು ಒಂದು ಹಾಸ್ಯ ಪ್ರಸಂಗ. ಅಧಿಕಾರ, ಪದವಿ, ಹಣದ ದುರಾಸೆಗೆ ಉಳ್ಳವರ ಬೂಟನ್ನು ತಲೆಗೇರಿಸಿಕೊಳ್ಳುವ ಹೀನರನ್ನು ಮೂದಲಿಸಿ ಜಾಡಿಸಿರುವುದು ಸಾರ್ವತ್ರಿಕ ಸಾಮಾಜಿಕ ವ್ಯವಸ್ಥೆಯೊಳಗಿರುವ ನೈಜತೆ. “ಮಗೂ: (ವಿಸ್ಮಿತನಾಗಿ) ಶನಿಜಾತಿ!…ನಾವೂ ನಿಮ್ ಜಾತಿನೇ ಕಾಣೋ….ಬ್ರಾಹ್ಮಣ್ರು…ಸ್ಮಾರ್ತರು…ಕಮ್ಮೆಗಳು!”. “ಕಿಟ್ಟಿ: ನಾನು ಹೇಳೋ ಜಾತಿ ಆ ಜಾತಿ ಅಲ್ಲ ಕಣೋ….. ಈಗ ಸದ್ಯ ಇರೋ ಜಾತಿಗಳೆರಡೇ….. ದುಡ್ಡಿರೋರು, ದುಡ್ಡಿಲ್ದೋರು ಅಂತ…….. ನಮ್ಮಣ್ಣ ಕೂಡ ನಂಜಾತಿಲ್ಹುಟ್ಟಿದೌನು…. ಮಂಡೇಗೆ ಹಣದ್ಕೊಬ್ಬು ಏರೂತ್ಲೂನೂವೆ… ಜಾತಿ ಖರಾಬಾಗ್ಹೋದ…” ಇದು ಈ ಕೃತಿಯ ಆರನೆಯ ಪರದೆಯ ವರೆಗೆ ಇರುವ ನಾಟಕ ಸೂತ್ರ ಮತ್ತು ಮಾರ್ಮಿಕ ತಿಳಿವು.

ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವ ಬುದ್ಧಿ ಈ ಉಳ್ಳವರಿಗೇ ಅಲ್ವಾ..?!ಇರೋದು. ಈ ಏಳು ಮತ್ತು ಎಂಟನೇಯ ದೃಶ್ಯದಲ್ಲಿ ಒಬ್ಬಾಕೆ ಹೆಂಗಸು ಮತ್ತು ತಮ್ಮದೇ ಹಮ್ಮಿಂದ ಮನೆಗೆ ಬೆಂಕಿ ಬೀಳಿಸಿಕ್ಕೊಂಡ ಕುಟುಂಬಕ್ಕೆ  ಸಹಾಯ ಮಾಡಲೋಗಿ ಕಿಟ್ಟಿ ಸ್ನೇಹಿತ ಮಗೂ ಮಂಗವಾಗ್ತಾನೆ. ಈ ಮಗೂನನ್ನು ಉಳಿಸುವಲ್ಲಿ ಕಿಟ್ಟಿ ಬೆಂಕೀಗ್ ಬೀಳ್ತಾನೆ, ಹೊರಗ್ ಬರ್ತಾನೆ…ಬಾವಿಗ್ ನೂಕ್ದವರ ಮಾನ ಮುಕ್ಕಾಗೋ ಹಾಗೆ ಜನ್ಮ ಜಾಲಾಡ್ತಾನೆ…ಈಗ ಕಿಟ್ಟಿಗೆ ನಿಜಕ್ಕೂ ಪ್ರತಿಭಾವಂತ, ವಿಚಾರವಂತ, ಪ್ರಶ್ನೆ ತೀಕ್ಷ್ಣ ಬುದ್ಧಿವಂತ ಎನ್ನುವ ಹಣೆಪಟ್ಟಿಗಳೆಲ್ಲಾ ದೊರಕಿ ಪೋಲೀಕಿಟ್ಟಿ ಕೃಷ್ಣರಾವೇ ಆಗ್ತಾನೆ…ಆತನ ಸುತ್ತಲ ಜನರ ಪೋಲೀತನಗಳು ಬಣ್ಣಿತ ವಾಗ್ತಾವೆ……( ಮುಂದುವರೆಯುವುದು…..)

ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)

ಯುವಸಾಹಿತಿ, ಲೇಖಕ, ಸಂಶೋಧಕ.

ಎಚ್.ಡಿ.ಕೋಟೆ, ಮೈಸೂರು.

ದೂರವಾಣಿ ಸಂಖ್ಯೆ : 8884684726