ತುಮಕೂರು: ತುಮಕೂರು ನಗರದ ಜನ ನೆಮ್ಮದಿಯುಸಿರು ಬಿಟ್ಟಿದ್ದಾರೆ. ಬೇಸಿಗೆಯ ಕಾಲವಾಗಿದ್ದರಿಂದ ನಗರಕ್ಕೆ ನೀರು ಒದಗಿಸುತ್ತಾ ಬಂದಿದ್ದ ಬುಗಡನಹಳ್ಳಿ ಕೆರೆಯಲ್ಲಿದ್ದ ನೀರು ಖಾಲಿಯಾಗುತ್ತಾ ಬಂದಿತ್ತು ಇದರಿಂದ ಎಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತೋ ಎಂಬ ಭಯ ಮನೆ ಮಾಡಿತ್ತು. ಆದರೀಗ ಗೊರೂರು ಜಲಾಶಯದಿಂದ ಹರಿದ ನೀರು ಕೆರೆ ತಲುಪಿದ್ದು, ಜನರ ಮೊಗದಲ್ಲಿ ಮಂದಹಾಸ ಮೂಡಿದೆ.
ಹಾಸನ ಜಿಲ್ಲೆಯ ಗೊರೂರು ಜಲಾಶಯದಿಂದ ಕುಡಿಯುವ ಉದ್ದೇಶಕ್ಕಾಗಿ ಸುಮಾರು 2000 ಕ್ಯುಸೆಕ್ ನೀರನ್ನು ಬಿಡಲಾಗಿದ್ದು ಅದು ಸೋಮವಾರ ತಡರಾತ್ರಿ 12 ಗಂಟೆ ವೇಳೆಗೆ ಕುಡಿಯುವ ನೀರಿನ ಜಲ ಸಂಗ್ರಹಾರ ಬುಗಡನಹಳ್ಳಿ ಕೆರೆಗೆ ಬಂದು ತಲುಪಿದೆ. ಈ ಕ್ಷಣಗಳನ್ನು ಬಹಳಷ್ಟು ಜನ ಎಂಜಾಯ್ ಮಾಡಿದ್ದಾರೆ.
ಗೊರೂರು ಜಲಾಶಯದಿಂದ ಹರಿಬಿಟ್ಟ 2000 ಕ್ಯುಸೆಕ್ ನೀರು ಜಿಲ್ಲೆಯ ಬಾಗೂರು ನವಿಲೆ ಗೇಟ್ ತಲುಪಿದ್ದು, ಅಲ್ಲಿಂದ 1100 ಕ್ಯುಸೆಕ್ ನೀರನ್ನು ಬುಗುಡನಹಳ್ಳಿ ಕೆರೆಯ ಕಾಲುವೆಗೆ ಬಿಡಲಾಗಿದ್ದು ಸದ್ಯ ಸರಾಸರಿ 400 ರಿಂದ 500 ಕ್ಯುಸೆಕ್ ನಷ್ಟು ನೀರು ಬುಗುಡನಹಳ್ಳಿ ಕೆರೆಯನ್ನು ತಲುಪಿದೆ. ಆದರೆ ಈ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಮಳೆ ಸುರಿದು ಕೆರೆ ತುಂಬಿದರೆ ನೀರಿನ ಸಮಸ್ಯೆ ಉಂಟಾಗಲಾರದು ಜತೆಗೆ ಹಾಸನ ವ್ಯಾಪ್ತಿಯಲ್ಲಿ ಮುಂಗಾರು ಪ್ರಗತಿದಾಯಕವಾದರೆ, ನೀರಿಗೆ ಸಮಸ್ಯೆ ಉದ್ಭವಿಸದು. ಆದರೆ ಇದೀಗ ಕೆರೆಗೆ ಬಿಡಲಾದ ನೀರನ್ನು ಕೇವಲ ಕುಡಿಯಲು ಮಾತ್ರ ಉಪಯೋಗಿಸಿಕೊಂಡರೆ ಒಳಿತು ಎಂಬುದರಲ್ಲಿ ಎರಡು ಮಾತಿಲ್ಲ.
ಇನ್ನು ಬುಗುಡನಹಳ್ಳಿ ಕೆರೆಗೆ ಭೇಟಿ ನೀಡಿದ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಮಾತನಾಡಿ, ಕೋವಿಡ್ ಸಮಸ್ಯೆ ಜತೆಗೆ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು, ಈ ವಿಷಮ ಪರಿಸ್ಥಿತಿಯಲ್ಲಿ ವಾಟರ್ ಟ್ಯಾಂಕರ್ ಮೂಲಕ ನೀರನ್ನು ವಾರ್ಡ್‌ಗಳಿಗೆ ನೀಡುವುದು ಮತ್ತಷ್ಟು ಕಷ್ಟದ ಕೆಲಸವಾಗಿತ್ತು. ಸಮಸ್ಯೆ ಅರಿತು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗೊರೂರು ಜಲಾಶಯದಿಂದ ಕೆರೆಗೆ ನೀರು ಹರಿಸಲು ಕ್ರಮಗೊಂಡಿದ್ದು ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಶಾಸಕರ ಜತೆಗೆ ತುಮಕೂರು ನಗರ ಮಹಾಪೌರರಾದ ಬಿ.ಜಿ.ಕೃಷ್ಣಪ್ಪ, ಮಹಾನಗರಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ನಯಾಜ್ ಅಹಮದ್, ಉಪಮೇಯರ್ ನಾಜೀಮಾಬಿ, ಪಾಲಿಕೆ ಸದಸ್ಯರಾದ ನಳಿನ ಇಂದ್ರಕುಮಾರ್, ಮಂಜುನಾಥ್, ಲಕ್ಷ್ಮೀನರಸಿಂಹರಾಜು, ದೀಪಶ್ರೀ ಮಹೇಶ್‌ಬಾಬು, ಗಿರಿಜಾ ಧನಿಯಾಕುಮಾರ್, ರೂಪಶ್ರೀ ಶೆಟ್ಟಳ್ಳಯ್ಯ, ಶಿವರಾಂ, ಮಂಜುಳ ಆದರ್ಶ್, ಚಂದ್ರಕಲಾ ಪುಟ್ಟರಾಜು, ವಿಷ್ಣುವರ್ಧನ್, ಸಿ.ಎನ್.ರಮೇಶ್, ನಾಮಿನಿ ಸದಸ್ಯರಾದ ಮೋಹನ್, ಶಿವರಾಜು, ವಿಶ್ವನಾಥ್, ತ್ಯಾಗರಾಜಸ್ವಾಮಿ, ನರಸಿಂಹಸ್ವಾಮಿ, ಪಾಲಿಕೆ ಆಯುಕ್ತರಾದ ರೇಣುಕಾ, ಹಾಗೂ ಪಾಲಿಕೆ ಅಧಿಕಾರಿಗಳು ಇದ್ದರು.