ಚಾಮರಾಜನಗರ: ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಕೆಲವು ಖಾಸಗಿ ಲ್ಯಾಬೋರೇಟರಿಗಳು ಅಧಿಕ ಹಣ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದ್ದರಿಂದ ತಹಸೀಲ್ದಾರ್ ಭೇಟಿ ನೀಡಿ ಎಚ್ಚರಿಕೆ ನೀಡಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ಕೊಳ್ಳೇಗಾಲ ಪಟ್ಟಣದ ಎಂ.ಜಿ.ಎಸ್.ವಿ ಜೂನಿಯರ್ ಕಾಲೇಜು ಬಳಿಯ ಪ್ರಸಾದ್ ಡಯೋಗ್ನಾಸ್ಟಿಕ್ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಸಿ.ಟಿ ಸ್ಕ್ಯಾನಿಂಗ್ ಗೆ ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಕೋವಿಡ್ ಸಮಯದಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಸಿಟಿ ಸ್ಕ್ಯಾನಿಂಗ್‌ಗೆ 1500 ರೂ, ಎಪಿಎಲ್ ಕಾರ್ಡ್‌ದಾರರಿಗೆ 2500 ರೂ ಪಡೆಯುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಇಲ್ಲಿನ ಪ್ರಸಾದ್ ಡಯಾಗ್ನಸ್ಟಿಕ್ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಈ ಆದೇಶವನ್ನು ಗಾಳಿಗೆ ತೂರಿ ಮಹಿಳೆಯೊಬ್ಬರಿಂದ ಸಿ.ಟಿ ಸ್ಕ್ಯಾನ್ ಗೆ ಎಂದು ಬಿಲ್ ಕೊಟ್ಟು 2500 ರೂ ತೆಗೆದುಕೊಂಡಿದಲ್ಲದೆ, ಇತರ ದರ ಎಂದು 1500 ಹಣ ವಸೂಲಿ ಮಾಡಿದ್ದರು ಎನ್ನಲಾಗಿದೆ.
ಈ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ತಹಸೀಲ್ದಾರ್ ಕುನಾಲ್ ಹಾಗೂ ತಾಲೂಕು ವೈದ್ಯಾಧಿಕಾರಿ ಗೋಪಾಲ್ ಸ್ಕ್ಯಾನಿಂಗ್ ಸೆಂಟರ್ ಗೆ ಭೇಟಿ ನೀಡಿ, ವೈದ್ಯ ನಾಗಪ್ರಸಾದ್ ಅವರಿಂದ ಮಾಹಿತಿ ಪಡೆದಿದ್ದಾರೆ. ಅಧಿಕಾರಿಗಳ ಪರಿಶೀಲನೆ ವೇಳೆ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದು, ಈ ಬಗ್ಗೆ ತಹಸೀಲ್ದಾರ್ ಕುನಾಲ್, ವೈದ್ಯರನ್ನು ತರಾಟೆಗೆ ತೆಗೆದುಕೊಂಡು ಇನ್ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಿದ್ದಾರೆ.

By admin