ಚಾಮರಾಜನಗರ: ಭೂಮಿಯಲ್ಲಿ ಲಭ್ಯವಿರುವ ನೀರಿನಲ್ಲಿ ಶೇ. ೩ಕ್ಕಿಂತಲೂ ಕಡಿಮೆ ನೀರು ಕುಡಿಯಲು ಯೋಗ್ಯವಾಗಿದೆ. ಈ ನಿಟ್ಟಿನಲ್ಲಿ ನೀರನ್ನು ಸಂರಕ್ಷಿಸುವ ಹಾಗೂ ಸದ್ಬಳಕೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಕಲುಷಿತ ನೀರಿನಿಂದ ಬೆಳೆದ ಬೆಳೆಗಳೂ ಕೂಡ ಕಡಿಮೆ ಗುಣಮಟ್ಟದಾಗಿರುತ್ತದೆ. ಈ ದೃಷ್ಠಿಯಿಂದ ರೈತರು ಪರಿಸರ ಸಂರಕ್ಷಣೆ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗೂಡೂರು ಭೀಮಸೇನ ಅವರು ಅಭಿಪ್ರಾಯಪಟ್ಟರು.  
ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಕೃಷಿ ಇಲಾಖೆ, ಗ್ರಾಮ ವಿಕಾಸ ಸ್ವ ಸಹಾಯ ಸಂಘಗಳ ಮಹಾ ಒಕ್ಕೂಟ, ದಿ ಆರ್ಗನೈಜೇಶನ್ ಫಾರ್ ದ ಡೆವಲಪ್‌ಮೆಂಟ್ ಆಫ್ ಪೀಪಲ್ (ಒ.ಡಿ.ಪಿ) ಮೈಸೂರು ಮತ್ತು ರೈತ ಉತ್ಪನ್ನ ಕೂಟದ ಸಹಯೋಗದೊಂದಿಗೆ ವಿಶ್ವ ಜಲ ದಿನಾಚರಣೆ ಅಂಗವಾಗಿ "ಸಂಘಟನೆ-ನಾಯಕತ್ವ ಮತ್ತು ಪರಿಸರ ಸಂರಕ್ಷಣೆ" ಕುರಿತು ಸಂಘದ ಸದಸ್ಯರಿಗೆ, ರೈತರಿಗೆ ನಡೆದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಸಂಘಟನೆಗಳ ಮುಖಾಂತರ ತಮ್ಮ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಬೇಕಿದೆ. ರೈತ ಸಂಘಟನೆಗಳು ಬಲಿಷ್ಠವಾದರಷ್ಟೆ ರೈತರ ಅಭಿವೃದ್ಧಿ ಸಾಧ್ಯ. ಇಸ್ರೇಲ್ ಮಾದರಿಯಂತೆ ಕಡಿಮೆ ಮಳೆಯಲ್ಲು ಅಧಿಕ ಇಳುವರಿ ಪಡೆಯುವ ಕೃಷಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಗೂಡೂರು ಭೀಮಸೇನ ಅವರು ತಿಳಿಸಿದರು. 
ಅಧ್ಯಕ್ಷತೆ ವಹಿಸಿ ಮಾತನಾಡಿದ ಒ.ಡಿ.ಪಿ ಸಂಸ್ಥೆಯ ನಿರ್ದೇಶಕರಾದ ಸ್ವಾಮಿ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ಅವರು ಹಲವು ವರ್ಷಗಳ ಹಿಂದೆ ಸಿಗುತ್ತಿದ್ದ ನೀರು ಕುಡಿಯಲು ಯೋಗ್ಯವಾಗಿತ್ತು, ಆದರೆ ಇಂದು ದುಡ್ಡು ಕೊಟ್ಟು ನೀರನ್ನು ಕುಡಿಯುವ ಪರಿಸ್ಥಿತಿ ಬಂದಿದೆ. ರೈತರು ಕೃಷಿ ಮಾಡುವಾಗ ನೀರನ್ನು ಮಿತವಾಗಿ ಹಾಗೂ ವೈಜ್ಞಾನಿಕವಾಗಿ ಬಳಸಬೇಕು. ಅಧಿಕ ಇಳುವರಿ ಉದ್ದೇಶದಿಂದ ರಾಸಾಯನಿಕ ಕೀಟನಾಶಕಗಳನ್ನು ಉಪಯೋಗಿಸಿ ನೀರು ಮತ್ತು ಮಣ್ಣನ್ನು ಮಲಿನಗೊಳಿಸಬಾರದು. ಪರ್ಯಾಯವಾಗಿ ಕೊಟ್ಟಿಗೆಯ ಸಾವಯವ ಗೊಬ್ಬರಗಳನ್ನು ಉಪಯೋಗಿಸಿ ಮಣ್ಣು ಮತ್ತು ನೀರಿನ ಶುದ್ದತೆಯನ್ನು ಕಾಪಾಡಬೇಕು ಎಂದರು. 
ನೀರನ್ನು ಶೇಖರಣೆಗಾಗಿ ನೀರಿನ ಮೂಲಗಳನ್ನು ಸಂರಕ್ಷಿಸಬೇಕು. ಕೆರೆಗಳಲ್ಲಿ ಹೂಳೆತ್ತುವುದು, ಚೆಕ್ ಡ್ಯಾಂಗಳ ನಿರ್ಮಾಣ ಮತ್ತು ದುರಸ್ಥಿಗೊಳಿಸುವುದರ ಮೂಲಕ ನೀರಿನ ಶೇಖರಣೆಯನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಒ.ಡಿ.ಪಿ. ಸಂಸ್ಥೆಯು ಗ್ರಾಮೀಣ ಪ್ರದೇಶಗಳಲ್ಲಿ ಜಲಾನಯನ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದೆ. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಉಪಯೋಗಿಸಿ ನೀರು ಮತ್ತು ಮಣ್ಣನ್ನು ಮಲಿನಗೊಳಿಸದೇ ಸಾಧ್ಯವಾದಷ್ಟು ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿ ಜಲವನ್ನು ಸಂರಕ್ಷಿಸಿ ಎಂದು ಪ್ರಶಾಂತ್ ಸಿಕ್ವೆರಾ ಅವರು ಸಲಹೆ ಮಾಡಿದರು. 
ಜಂಟಿ ಕೃಷಿ ನಿರ್ದೇಶಕರಾದ ಚಂದ್ರಕಲಾ ಅವರು ಮಾತನಾಡಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಉತ್ತಮ ಮಳೆಯಾಗಲಿದೆ. ಹಾಗಾಗಿ ಹೆಚ್ಚು ನೀರಿನ ಸಂರಕ್ಷಣೆಗೆ ರೈತರು ಮಹತ್ವ ಕೊಡಬೇಕು. ರೈತರು ಮಣ್ಣಿನಲ್ಲಿ ನೀರನ್ನು ಇಂಗಿಸಲು ಮಾಗಿ ಉಳಿಮೆ ಮತ್ತು ಇಳಿಜಾರಿಗೆ ಅಡ್ಡಲಾಗಿ ಉಳಿಮೆ ಮಾಡಬೇಕು. ಜಮೀನುಗಳಲ್ಲಿ ಕೃಷಿ ಹೊಂಡ ಮತ್ತು ಬದುಗಳ ನಿರ್ಮಾಣ ಮಾಡಬೇಕು. ಇದಕ್ಕೆ ನರೇಗಾ ಯೋಜನೆಯಡಿಯಲ್ಲಿ ಸಹಾಯಧನವನ್ನು ನೀಡಲಾಗಿದ್ದು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.  
ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ತಜ್ಞರಾದ ರಜತ್ ಅವರು ಮಾತನಾಡಿ ವಿಶ್ವಸಂಸ್ಥೆಯು ನೀರಿನ ಅಭಾವ ಉಂಟಾಗಬಹುದು ಎಂದು ಈ ಹಿಂದೆಯೇ ಅಭಿಪ್ರಾಯಪಟ್ಟಿತ್ತು. ಪ್ರಸ್ತುತ ಸಂದರ್ಭದಲ್ಲಿ ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ನೀರಿನ ಕೊರತೆ ಉಂಟಾಗಿದ್ದು, ನೀರು ಪೋಲಾಗದಂತೆ ಸಂರಕ್ಷಿಸುವುದು ಅನಿವಾರ್ಯವಾಗಿದೆ. ರೈತರು ಕೂಡ ಬೆಳೆಗಳಿಗೆ ಅನಾವಶ್ಯಕವಾಗಿ ನೀರು ಹಾಯಿಸುವುದನ್ನು ನಿಲ್ಲಿಸಬೇಕು. ಕೊಟ್ಟಿಗೆ ಮತ್ತು ಸಾವಯವ ಗೊಬ್ಬರಗಳನ್ನು ಮಾರಾಟ ಮಾಡದೇ ಸ್ವತಃ ತಮ್ಮ ಜಮೀನಿಗೆ ರೈತರು ಬಳಸಿಕೊಂಡು ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಬೇಕು ಎಂದರು. 
ಮೀನುಗಾರಿಕೆ ಉಪನಿರ್ದೇಶಕರಾದ ಗಿರೀಶ್, ಒ.ಡಿ.ಪಿ ಸಂಸ್ಥೆಯ ಯೋಜನಾಧಿಕಾರಿ ಗೀತಾ ಮಿತ್ರಾ, ಒ.ಡಿ.ಪಿ ಯ ರೈತ ಉತ್ಪಾದಕರ ಕೂಟದ ಸಂಯೋಜಕರಾದ ಜಯರಾಮು, ಗ್ರಾಮ ವಿಕಾಸ ಸ್ವ ಸಹಾಯ ಸಂಘಗಳ ಮಹಾ ಒಕ್ಕೂಟದ ಸಂಯೋಜಕರಾದ ಜಾನ್ ರಾಡ್ರಿಗಸ್, ಅಧ್ಯಕ್ಷರಾದ ಎಸ್. ಆರೋಗ್ಯ ಇನ್ನಿತರರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.