ಚಾಮರಾಜನಗರ: ರೈತರ ಉತ್ಪನ್ನಗಳಿಗೆ ನೇರವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಹಾಗೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಹೆಚ್ಚಳಕ್ಕೆ ಮುಂದಾಗುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ರೈತ ಉತ್ಪಾದಕ ಸಂಸ್ಥೆಗಳ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಒಟ್ಟುಗೂಡಿಸಿ ಕೃಷಿಸ ಉತ್ಪಾದಕತೆಯನ್ನು ಹೆಚ್ಚಿಸಿ ಆದಾಯವನ್ನು ವೃದ್ಧಿಸುವ ಮೂಲಕ ಯಾವುದೇ ಮದ್ಯವತಿಗಳಿಗೂ ಅವಕಾಶವಾಗದಂತೆ ಕೃಷಿ ಆಧಾರಿತ ಸುಸ್ಥಿರ ಜೀವನಕ್ರಮಗಳನ್ನು ಬಲಪಡಿಸಲು ರೈತ ಉತ್ಪಾದಕ ಸಂಸ್ಥೆಗಳನ್ನು ನಿಗದಿತ ಗುರಿಗಿಂತ ಹೆಚ್ಚಳ ಮಾಡಿ ಕಾರ್ಯಕ್ರಮ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಸಕ್ರಿಯರಾಗಬೇಕು ಎಂದರು.
ಜಲಾನಯನ ಅಭಿವೃದ್ಧಿ ಇಲಾಖೆ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಕೈಮಗ್ಗ ಮತ್ತು ಜವಳಿ ಹಾಗೂ ಮೀನುಗಾರಿಕೆ ಇಲಾಖೆಗಳು ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಲು ನಿಯೋಜಿತ ಇಲಾಖೆಗಳಾಗಿದ್ದು, ರೈತರ ಸುಸ್ಥಿರ ಅಭಿವೃದ್ಧಿಗಾಗಿ ನಿಗದಿತ ಗುರಿ ಸಾಧನೆಗೆ ಮುಂದಾಗಬೇಕು. ರೈತರನ್ನು ಸಂಘಟಿಸಿ ರೈತರ ಅಸಕ್ತ ಗುಂಪುಗಳನ್ನು ಒಗ್ಗೂಡಿಸಿ ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಬೇಕು ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚಿಸಿದರು.
ರೈತ ಉತ್ಪಾದಕ ಸಂಸ್ಥೆಗಳ ರಚನೆಗಾಗಿ ಎನ್.ಜಿ.ಒ ಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಆಯ್ಕೆಯಾಗುವ ಎನ್.ಜಿ.ಒ ಗಳಿಗೆ ಕೃಷಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಲಾಗುತ್ತದೆ. ರೈತ ಉತ್ಪಾದಕ ಸಂಸ್ಥೆಗಳ ರಚನೆಗಾಗಿ ಮೈರಾಡ ಸಂಸ್ಥೆ, ಎಲ್.ಟಿ.ಜಿ ಮೈಸೂರು ಗ್ರೀನ್ ಎಕ್ಸ್‌ಪೋಟ್ಸ್ ಪ್ರೈ.ಲಿ, ಮೈರಾಡ ಕಾವೇರಿ ಪ್ರಾದೇಶಿಕ ಸಂಸ್ಥೆ ಮತ್ತು ಸ್ಟೆಪ್ಸ್ ಸಂಸ್ಥೆಗಳನ್ನು ಜಿಲ್ಲೆಯಲ್ಲಿ ರೈತ ಉತ್ಪಾದಕ ಸಂಸ್ಥೆಗಳ ರಚನೆಗಾಗಿ ಆಯ್ಕೆಯಾಗಿರುವ ಸಂಪನ್ಮೂಲ ಸಂಸ್ಥೆಗಳಾಗಿವೆ. ಈ ಸಂಸ್ಥೆಗಳು ತರಬೇತಿ ನೀಡುವ ರೈತರಿಗೆ ಅಗತ್ಯ ನೆರವು ನೀಡಲಿವೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಕಲಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಶಿವಪ್ರಸಾದ್, ಎಸ್.ಬಿ.ಐ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀಕಾಂತ್, ಇತರರು ಸಭೆಯಲ್ಲಿ ಹಾಜರಿದ್ದರು.
