
ಚಾಮರಾಜನಗರ: ಸಾಮಾಜಿಕ ತಾರತಮ್ಯ, ಜಾತೀಯತೆ ಹೋಗಲಾಡಿಸಿ, ಸಮ ಸಮಾಜ ನಿರ್ಮಾಣದ ಮೂಲಕ ಇಡೀ ಮನುಕುಲದ ಶ್ರೇಯಸ್ಸಿಗೆ ದುಡಿದ ಮಹಾನ್ ಮಾನವತಾವಾದಿ ಬಸವಣ್ಣನವರು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಅಭಿಪ್ರಾಯಪಟ್ಟರು.
ನಗರದ ಪೇಟೆ ಪ್ರೈಮರಿ ಶಾಲಾ ಅವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾನ್ ಮಾನವತಾವಾದಿ, ಸಮಾಜ ಸುಧಾರಕರಾದ ಜಗಜ್ಯೋತಿ ಬಸವೇಶ್ವರರ ೮೮೯ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಯಕವೇ ಕೈಲಾಸದಡಿ ಪ್ರತಿಯೊಬ್ಬರು ತಾವು ಮಾಡುವ ಕೆಲಸ-ಕಾರ್ಯದಲ್ಲಿ ದೇವರನ್ನು ಕಾಣಬೇಕೆಂದ ಬಸವಣ್ಣನವರ ಆದರ್ಶ ತತ್ವಸಿದ್ದಾಂತಗಳನ್ನು ದಿನನಿತ್ಯದ ಕಾಯಕದಲ್ಲಿ ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ. ನುಡಿದಂತೆ ನಡೆದ ಬಸವಣ್ಣನವರ ಕಾಲದಲ್ಲಿ ಹೇಳುವವರು, ಕೇಳುವವರು ಇಬ್ಬರು ಪ್ರಾಮಾಣಿಕರಾಗಿದ್ದರು. ಪರಿಸ್ಥಿತಿ ಬದಲಾಗಿರುವುದು ಈಗಿನ ದುರಂತವಾಗಿದೆ ಎಂದರು.
ಎಲ್ಲಾ ಸಮಾಜ, ಸಮುದಾಯಗಳ ಮುಕ್ತ ಚರ್ಚೆ, ಭಾಗವಹಿಸುವಿಕೆಗಾಗಿ ಬಸವಣ್ಣ ಅವರು ಸ್ಥಾಪಿಸಿದ ಅನುಭವಮಂಟಪ ಇಂದಿನ ಕಾಲಘಟ್ಟಕ್ಕೆ ಪ್ರಸ್ತುತವಾಗಿದೆ. ಅನುಭವಮಂಟಪದ ಲಕ್ಷಾಂತರ ಶರಣರು ಅಂದಿನ ಸಮಾಜದಲ್ಲಿದ್ದ ಅಂಕು ಡೊಂಕು ತಿದ್ದಲು ತಮ್ಮ ಜೀವನನ್ನೆ ಮುಡಿಪಾಗಿಟ್ಟಿದ್ದರು ಎಂದು ಶಾಸಕರಾದ ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ವಸತಿ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ನೀಡಿರುವ ಸಂದೇಶವನ್ನು ವಾಚನ ಮಾಡಲಾಯಿತು.
ಕನ್ನಡನಾಡಿನ ಮಹಾನ್ ಕ್ರಾಂತಿಯ ಮೂಲಪುರುಷ ಬಸವಣ್ಣ ಕರ್ನಾಟಕದ ಪುಣ್ಯಭೂಮಿ ಕಂಡ ಶ್ರೇಷ್ಠ ಮಾನವತಾವಾದಿ. ಎಲ್ಲರನ್ನೊಳಗೊಳ್ಳುವ ಮಾನವ ತತ್ವವವನ್ನು ಅನುಸರಿಸುವ ಮೂಲಕ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಯುಗಪುರುಷ. ಸುಮಾರು ೮೦೦ ವರ್ಷಗಳ ಹಿಂದೆಯೇ ಸಮ ಸಮಾಜವನ್ನು ನಿರ್ಮಿಸುವ ಪಣತೊಟ್ಟು ಕ್ರಾಂತಿ ಮೊಳಗಿಸಿದ ಬಸವಣ್ಣನವರ ದಾರ್ಶನಿಕತ್ವದ ಅಡಿಪಾಯವೇ ಕಾಯಕತತ್ವ ಆಗಿದೆ. ಕಾಯಕವೇ ಕೈಲಾಸ ಎಂದು ಹೇಳುವ ಮೂಲಕ ಕಾಯಕಕ್ಕೆ ಕೈಲಾಸದ ಪಟ್ಟಕಟ್ಟಿ ಅದಕ್ಕೊಂದು ದೈವಿಕ ಸ್ಪರ್ಶ ನೀಡಿದವರು ವಿಶ್ವಗುರು ಬಸವಣ್ಣ ಎಂದು ಉಸ್ತುವಾರಿ ಸಚಿವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಲಿಂಗ ಸಮಾನತೆ, ಸಾಮಾಜಿಕ ತಾರತಮ್ಯ, ಅಸ್ಪೃಶ್ಯತೆ, ಕಂದಾಚಾರ, ಮೂಢನಂಬಿಕೆಗಳನ್ನು ಬುಡಸಮೇತ ಕಿತ್ತುಹಾಕಲು ಅವಿರತವಾಗಿ ಶ್ರಮಿಸಿದರು. ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಮಹಾನ್ ಗುರು. ಜಾತಿ ಧರ್ಮಗಳ ನಡುವೆ ಅಶಾಂತಿಯ ವಾತಾವರಣ ಸೃಷ್ಠಿಯಾಗುತ್ತಿರುವ ಪ್ರಸ್ತುತ ದಿನಮಾನಗಳಲ್ಲಿ ಬಸವಣ್ಣನವರ ಆದರ್ಶಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ. ಬದುಕಿಗೆ ದಾರಿದೀಪವಾಗಿ ನೊಂದವರಿಗೆ ಸಾಂತ್ವನ ನೀಡುವ ಮಾನವನ ಆತ್ಮೋದ್ಧಾರಕ್ಕೆ ಬೇಕಾದ ಎಲ್ಲವನ್ನು ಒಳಗೊಂಡ ವಚನಗಳನ್ನು ಸಮಾಜಕ್ಕೆ ಬಳುವಳಿಯಾಗಿ ನೀಡಿದ ಅವರ ತತ್ವ ಆದರ್ಶ, ಸಂದೇಶಗಳು ನಮ್ಮೆಲ್ಲರ ಜೀವನಕ್ಕೆ ಪ್ರೇರಣೆಯಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ದಯೆಯೇ ಧರ್ಮದ ಮೂಲ ಎಂದು ಸಾರಿ ಮಾನವೀಯ ಮೌಲ್ಯಗಳಿಗೆ ಬೆಳಕು ಚೆಲ್ಲಿ ಅರಿವು ಮೂಡಿಸಿದ ಭಕ್ತಿ ಭಂಡಾರಿ ಬಸವಣ್ಣನವರ ಆದರ್ಶಗಳನ್ನು ಜೀವನzಲ್ಲಿ ಅಳವಡಿಸಿಕೊಂಡು ಅವರ ಆಶಯದಂತೆ ಸಮಗ್ರ ನಾಡನ್ನು ಕಟ್ಟಲು ಮುನ್ನೆಡೆಯೋಣ ಎಂಬ ಆಶಯದೊಂದಿಗೆ ಬಸವೇಶ್ವರರ ಜಯಂತಿಯ ಹಾರ್ದಿಕ ಶುಭಾಷಯಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರು ಕೋರಿದ್ದಾರೆ.
ನಗರಸಭಾ ಅಧ್ಯಕ್ಷರಾದ ಆಶಾನಟರಾಜು ಅವರು ಮಾತನಾಡಿ ಬಸವೇಶ್ವರರ ಜಯಂತಿಯನ್ನು ಆಚರಣೆಗೆ ಸೀಮಿತಗೊಳಿಸದೇ ಅವರ ಮೌಲ್ಯಯುತ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿದ್ದ ಅಸ್ಪೃಶ್ಯತೆ ಹೋಗಲಾಡಿಸಿ ಸ್ತ್ರೀಸ್ವಾತಂತ್ರ್ಯಕ್ಕೆ ಹೆಚ್ಚಿನ ಮಹತ್ವವನ್ನು ಬಸವಣ್ಣನವರು ನೀಡಿದ್ದರು. ಅವರ ದೂರದೃಷ್ಠಿತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾಮತಮೂರ್ತಿ ಕುಲಗಾಣ ಅವರು ಮಾತನಾಡಿ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದವರು ವಿಶ್ವಗುರು ಬಸವಣ್ಣ. ಸಮಾನತೆಯ ಆಶಾಕಿರಣವಾಗಿದ್ದ ಬಸವಣ್ಣನವರ ವೈಚಾರಿಕ ಚಿಂತನೆಗಳನ್ನು ಅರಿತು ಸಮಾಜ ಸುಧಾರಣೆಗೆ ಎಲ್ಲರೂ ಮುಂದಾಗಬೇಕಿದೆ. ಕಾಯಕತತ್ವ ಹಾಗೂ ದಾಸೋಹ ತತ್ವಗಳ ಮಹತ್ವವನ್ನು ಪ್ರತಿಪಾದಿಸಿದವರು ಬಸವಣ್ಣನವರು ಎಂದರು.
ಮುಖ್ಯ ಭಾಷಣ ಮಾಡಿದ ಬಸವತತ್ವ ಪ್ರಚಾರಕರಾದ ಎಲ್. ಬಸಪ್ಪ ಬೊಮ್ಮಲಾಪುರ ಬಸವಣ್ಣ ಅವರು ಬಸವೇಶ್ವರರ ಜಯಂತಿಯನ್ನು ಇಂದು ಆಚರಿಸಿ ನಾಳೆ ಮರೆಯುತ್ತಿದ್ದೇವೆ. ಇದು ದುರಂತದ ಸಂಗತಿಯಾಗಿದೆ. ಸಮಾಜದ ಎಲ್ಲಾ ವರ್ಗದ ಜನರ ಸಂಕಷ್ಟ ನಿವಾರಣೆಗೆ ಶ್ರಮಿಸಿದ ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಮಾನವೀಯ ಧರ್ಮ ಜಗತ್ತಿಗೆ ನೀಡಿದ್ದಾರೆ. ಸಾಮಾಜಿಕ, ರಾಜಕೀಯ ಹಾಗೂ ಸಂಸ್ಕೃತಿಯ ಕ್ರಾಂತಿಯನ್ನು ಸಮಾಜದಲ್ಲಿ ಬಿತ್ತಿದ ಬಸವೇಶ್ವರರು ಮಹಾನ್ ಸುಧಾರಕರಲ್ಲಿ ಒಬ್ಬರು ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಚಾಮರಾಜನಗರದ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠಧ್ಯಾಕ್ಷರಾದ ಚನ್ನಬಸವಸ್ವಾಮಿಯವರು ಬಸವೇಶ್ವರರ ಕಾಯಕ ತತ್ವದ ಕುರಿತು ಮಾತನಾಡಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚನ್ನಪ್ಪ ಇತರರು ಕಾರ್ಯಕ್ರಮದಲ್ಲಿ ಇದ್ದರು.
ಕಾರ್ಯಕ್ರಮ ಆರಂಭದಲ್ಲಿ ಕದಳಿ ಮಹಿಳಾ ವೇದಿಕೆ ವತಿಯಿಂದ ಎರ್ಪಡಿಸಲಾಗಿದ್ದ ಬಸವಣ್ಣನವರ ವಚನ ಗಾಯನ ಗಮನ ಸೆಳೆಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಶಾಸಕರಾದ ಪುಟ್ಟರಂಗಶೆಟ್ಟಿ ಅವರು ನಗರದ ಪ್ರವಾಸಿ ಮಂದಿರದಲ್ಲಿ ಆರಂಭವಾದ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು.
