ಚಾಮರಾಜನಗರ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಶನಿವಾರ ಸಂಜೆ ಹನೂರು ಭಾಗದ ಅಂತರರಾಜ್ಯ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ವ್ಯಾಪಕವಾಗಿ ಪರಿಶೀಲನೆ ನಡೆಸಿದರು.
ಅಂತರರಾಜ್ಯ ಚೆಕ್‌ಪೋಸ್ಟ್ ನಾಲ್ ರೋಡ್ (ಗರಿಕೆಕಂಡಿ)ಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ವಾಹನಗಳ ಓಡಾಟ, ತಪಾಸಣೆ ನಡೆಸಿರುವ ಬಗ್ಗೆ ಚೆಕ್‌ಪೋಸ್ಟ್ ನಿಯೋಜಿತರಾಗಿರುವ ಅಧಿಕಾರಿಗಳಿಂದ ವಿವರವಾಗಿ ಮಾಹಿತಿ ಪಡೆದರು.
ನಾಲಾ ರೋಡ್ ಚೆಕ್‌ಪೋಸ್ಟ್ ನಲ್ಲಿ ನಿರ್ವಹಿಸಲಾಗಿರುವ ವಹಿ ದಾಖಲು ಪುಸ್ತಕಗಳನ್ನು ವೀಕ್ಷಿಸಿದರು. ತಪಾಸಣಾ ಕಾರ್ಯ ಹೇಗೆ ಮಾಡಲಾಗುತ್ತಿದೆ ಎಂಬ ಬಗ್ಗೆ ಪ್ರಶ್ನಿಸಿದರು. ವಾಹನಗಳನ್ನು ವ್ಯಾಪಕವಾಗಿ ಪರಿಶೀಲಿಸಿದ ನಂತರವೇ ಮುಂದಿನ ಸಂಚಾರಕ್ಕೆ ಅನುಮತಿಸಬೇಕು. ಯಾವುದೇ ಅಕ್ರಮಕ್ಕೆ ಅವಕಾಶವಾಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ವಾಹನ ತಪಾಸಣಾ ವೇಳೆ ಪಾಲನೆ ಮಾಡಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಸೂಚನೆ ನೀಡಿದರು.
ಪಾಲಾರ್ ಚೆಕ್‌ಪೋಸ್ಟ್ ಗೆ ಭೇಟಿ ಕೊಟ್ಟು ಅಲ್ಲಿನ ತಪಾಸಣಾ ಕಾರ್ಯದ ವಿವರ ಪಡೆದರು. ಇಲ್ಲಿಯೂ ಸಹ ಪ್ರತಿನಿತ್ಯ ಎಷ್ಟು ವಾಹನಗಳು ಸಂಚರಿಸುತ್ತಿವೆ? ಪರಿಶೀಲನಾ ಕಾರ್ಯ ಹೇಗೆ ನಡೆಸಲಾಗುತ್ತಿದೆ ಎಂಬ ಬಗ್ಗೆ ವಿವರ ಪಡೆದರು.
ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿಯೇ ಕಳುಹಿಸಬೇಕು. ಕಂಟೈನರ್ ವಾಹನಗಳನ್ನು ಸಹ ಅಮೂಲಾಗ್ರವಾಗಿ ಪರಿಶೀಲಿಸಬೇಕು. ಯಾವುದೇ ಲೋಪಕ್ಕೆ ಅವಕಾಶವಾಗದ ಹಾಗೆ ಚೆಕ್‌ಪೋಸ್ಟ್ ಗಳಲ್ಲಿ ೨೪*೭ ಅವಧಿಯಲ್ಲಿ ನಿಗಾ ವಹಿಸಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಕಟ್ಟುನಿಟ್ಟಿನ ನಿರ್ದೆಶನ ನೀಡಿದರು.
ಅಬಕಾರಿ ಇಲಾಖೆಯ ಉಪ ಆಯುಕ್ತರಾದ ನಾಗಶಯನ ಅವರು ಈ ಸಂದರ್ಭದಲ್ಲಿ ಇದ್ದರು.