
ಚಾಮರಾಜನಗರ: ಜಲ ಜೀವನ್ ಮಿಷನ್ ಒಂದು ಉತ್ತಮ ಯೋಜನೆಯಾಗಿದ್ದು ಬರಪೀಡಿತ ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದು ಶಾಸಕರಾದ ಆರ್. ನರೇಂದ್ರ ಅವರು ತಿಳಿಸಿದರು.
ಜಲ ಜೀವನ್ ಮಿಷನ್ ಉದ್ದೇಶ, ನೀರಿನ ಸದುಪಯೋಗ, ಮಿತ ಬಳಕೆ ಹಾಗೂ ನೈರ್ಮಲ್ಯದ ಕುರಿತು ಹನೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಸಿಂಗಲ್ ವಿಲೇಜ್ ಯೋಜನೆಯಡಿ ಕಾರ್ಯತ್ಮಕ ನಳ ಸಂಪರ್ಕ ಕಲ್ಪಿಸಲಾಗುತ್ತಿದೆ. ಜೊತೆಗೆ ಮೀಟರ್ ಸಹ ಅಳವಡಿಕೆ ಮಾಡಲಾಗುತ್ತಿದೆ. ಮೀಟರ್ ಅಳವಡಿಕೆ ಕುರಿತು ಸಾಮಾನ್ಯ ಜನರಲ್ಲಿ ತಪ್ಪು ತಿಳಿವಳಿಕೆ ಇದೆ. ನೀರಿನ ದುರ್ಬಳಕೆ ಮಾಡುವವರ ವಿರುದ್ಧ ಕಡಿವಾಣ ಹಾಕಲು ಮೀಟರ್ ಅಳವಡಿಸಲಾಗುತ್ತಿದೆ ಎಂದರು.
ಯೋಜನೆಯಡಿಯಲ್ಲಿ ಪೈಪ್‌ಲೈನ್ ಅಳವಡಿಸುವ ವೇಳೆ ಹಾನಿಯಾಗಿರುವ ರಸ್ತೆಗಳನ್ನು ಕಾಮಗಾರಿ ಪೂರ್ಣವಾದ ನಂತರ ಮೊದಲಿನ ಸ್ಥಿತಿಗೆ ದುರಸ್ಥಿ ಮಾಡಲಾಗುತ್ತದೆ ಎಂದು ಶಾಸಕರಾದ ಆರ್. ನರೇಂದ್ರ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್À ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಕೆ.ಎಂ. ಗಾಯತ್ರಿ ಅವರು ಮಾತನಾಡಿ ಜಲ ಜೀವನ್ ಮಿಷನ್ ಯೋಜನೆಯ ಉದ್ದೇಶ, ನೀರಿನ ಸುಸ್ಥಿರತೆ, ಮಿತ ಬಳಕೆ ಹಾಗೂ ಸಮುದಾಯದ ಸಹಭಾಗಿತ್ವದ ಕುರಿತ ಮನವರಿಕೆ ಮಾಡಿಕೊಟ್ಟರು.
ವಿಶೇಷ ಉಪನ್ಯಾಸ ನೀಡಿದ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಸಲಹೆಗಾರರು ಹಾಗೂ ಸಂಪನ್ಮೂಲ ಅಧಿಕಾರಿಗಳಾದ ಡಾ. ಶೀಲಾಖರೆ ಹಾಗೂ ಡಾ. ಅಚ್ಯುತರಾವ್ ಅವರು ಕುಡಿಯವ ನೀರು ಪೂರೈಕೆಯಲ್ಲಿನ ಸಮಸ್ಯೆಗಳು, ನೀರಿನ ಗುಣಮಟ್ಟ, ಗ್ರಾಮಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಜಲ ಜೀವನ್ ಮಿಷನ್ ಯೋಜನೆಯ ಹಿನ್ನೆಲೆ, ಉದ್ದೇಶ, ಜನರ ಭಾಗವಹಿಸುವಿಕೆ, ಜಲ ಮೂಲಗಳ ಬಲವರ್ಧನೆ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಜವಾಬ್ದಾರಿಗಳು ಮತ್ತು ಕರ್ತವ್ಯಗಳು, ಯೋಜನೆಯ ಅನುಷ್ಠಾನದಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು ಹಾಗೂ ಸಾಧಕ ಬಾಧಕಗಳ ಕುರಿತು ಸಮಗ್ರವಾಗಿ ತಿಳಿಸಿಕೊಟ್ಟರು.
ಜಲ ಜೀವನ್ ಮಿಷನ್ ಯೋಜನೆಯ ತಾಂತ್ರಿಕ ವಿಷಯದ ಕುರಿತು ನಿವೃತ್ತ ಕಾರ್ಯಪಾಲಕ ಅಭಿಯಂತರರಾದ ಶಿವಶಂಕರಯ್ಯ ಅವರು ಮಾತನಾಡಿ ಹನೂರು ತಾಲ್ಲೂಕಿನ ೨೯೧ ಗ್ರಾಮಗಳ ಪೈಕಿ ಈಗಾಗಲೇ ಮೊದಲನೇ ಹಂತದಲ್ಲಿ ೭೩ ಗ್ರಾಮಗಳಲ್ಲಿ ಮೇ ತಿಂಗಳ ಅಂತ್ಯದಲ್ಲಿ ಯೋಜನೆ ಪೂರ್ಣಗೊಳಿಸುವ ನಿರೀಕ್ಷೆ ಇದೆ. ಪೊನ್ನಾಚ್ಚಿ, ಗೋಪಿನಾಥಂ ಹಾಗೂ ಮಹದೇಶ್ವರ ಬೆಟ್ಟದ ಗ್ರಾಮಗಳಿಗೆ ಸೋಲಾರ್ ಅಳವಡಿಕೆಯಿಂದ ಅಲ್ಲಿನ ಸುಸ್ಥಿರ ಜಲ ಮೂಲಗಳಿಂದಲೆ ನೀರೊದಗಿಸಲು ಕ್ರಮವಹಿಸಲಾಗಿದೆ ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿಗಳು ಧರಣೇಶ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಗಂಗಾಧರಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಆನಂದಮೂರ್ತಿ, ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
