ಚಾಮರಾಜನಗರ: ಕೋವಿಡ್-೧೯ರ ಒಮಿಕ್ರಾನ್ ೩ನೇ ಅಲೆ ತಡೆಗಾಗಿ ಮುಂಚೂಣಿ ಕಾರ್ಯಕರ್ತರು ಹಾಗೂ ೬೦ ವರ್ಷ ಮೇಲ್ಪಟ್ಟವರಿಗೆ ನೀಡಲಾಗುವ ಬೂಸ್ಟರ್ (ಮುನ್ನೆಚ್ಚರಿಕಾ) ಲಸಿಕಾ ಅಭಿಯಾನಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ನಗರದಲ್ಲಿಂದು ಚಾಲನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಒಳಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಬೂಸ್ಟರ್ (ಮುನ್ನೆಚ್ಚರಿಕಾ) ಕೋವಿಡ್ ಲಸಿಕಾ ಅಭಿಯಾನ ಆಯೋಜಿಸಲಾಗಿತ್ತು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ೩ನೇ ಅಲೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಮುಂಚೂಣಿ ಕಾರ್ಯಕರ್ತರಾದ ಆರೋಗ್ಯ, ಪೊಲೀಸ್, ರೆವಿನ್ಯೂ ಸೇರಿದಂತೆ ಜಿಲ್ಲೆಯಲ್ಲಿ ೬೦ ವರ್ಷ ಮೇಲ್ಪಟ್ಟವರಿಗೆ ಇಂದಿನಿಂದ ಬೂಸ್ಟರ್ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿವೆ. ಈ ಪ್ರಯುಕ್ತ ಜಿಲ್ಲೆಯಲ್ಲಿಯೂ ಸಹ ಬೂಸ್ಟರ್ ಲಸಿಕಾ ಅಭಿಯಾನ ಆಯೋಜಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ೧೦ ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದು, ಈ ಪೈಕಿ ೮,೨೩,೪೭೪ ಜನರಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಕೋವಿಡ್-೧೯ರ ಪ್ರಕರಣಗಳು ಹೆಚ್ಚಾಗುತ್ತಿದ್ದು, ೩ನೇ ಅಲೆ ಪರಿಣಾಮಕಾರಿ ನಿಯಂತ್ರಣಕ್ಕಾಗಿ ಮೊದಲನೇ ಹಾಗೂ ಎರಡನೇ ಡೋಸ್ ಲಸಿಕೆಯನ್ನು ಇನ್ನೂ ಪಡೆಯದಿರುವವರು ನಿಗದಿತ ಅವಧಿಯಲ್ಲಿ ಲಸಿಕೆ ಪಡೆಯುವ ಮೂಲಕ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಯವರು ಮನವಿ ಮಾಡಿದರು.

ಲಸಿಕಾಕರಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯ ಶೇ. ೯೬ರಷ್ಟು ಗುರಿ ನಿಗದಿಪಡಿಸಿತ್ತು. ಪ್ರಸ್ತುತ ಜಿಲ್ಲೆಯು ಲಸಿಕೆ ನೀಡಿಕೆಯಲ್ಲಿ ಶೇ. ೯೭ರಷ್ಟು ಪ್ರಗತಿ ಸಾಧಿಸಿದೆ. ಲಸಿಕಾಕರಣದ ನೋಡಲ್ ಅಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕುಮಟ್ಟದ ಎಲ್ಲಾ ಅಧಿಕಾರಿಗಳಿಂದ ಈ ಯಶಸ್ಸು ಸಾಧ್ಯವಾಗಿದೆ. ಒಮಿಕ್ರಾನ್ ವೈರಾಣು ವೇಗವಾಗಿ ಹರಡುತ್ತಿದ್ದು, ಎಲ್ಲರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸ್ಯಾನಿಟೈಸರ್ ಬಳಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಟೆಸ್ಟಿಂಗ್, ಟ್ರ್ಯಾಕಿಂಗ್, ಟ್ರೀಟ್‌ಮೆಂಟ್ ಹಾಗೂ ಲಸಿಕಾಕರಣ ಕಾರ್ಯಕ್ರಮಗಳನ್ನು ಕ್ರಮಬದ್ಧವಾಗಿ ಅನುಷ್ಟಾನಗೊಳಿಸಲಾಗುತ್ತಿದೆ. ರಾಜ್ಯವು ಪ್ರತಿದಿನ ೨೨೦೦ ಟೆಸ್ಟಿಂಗ್ ನಿಗದಿ ಮಾಡಿದ್ದು, ಜಿಲ್ಲೆಯಲ್ಲಿ ಪ್ರಸ್ತುತ ೧೫೦೦-೧೬೦೦ ಟೆಸ್ಟಿಂಗ್ ನಡೆಯುತ್ತಿದೆ ಮುಂದಿನ ದಿನಗಳಲ್ಲಿ ತ್ವರಿತವಾಗಿ ನಿಗದಿತ ಗುರಿ ಸಾಧಿಸಲಾಗುವುದು. ಸರ್ಕಾರದ ನಿರ್ದೇಶನಗಳು ಹಾಗೂ ಮಾರ್ಗಸೂಚಿಗಳನ್ನು ಅನುಸರಿಸಿ ಅಧಿಕಾರಿಗಳಿಗೆ ಕಾಲಕಾಲಕ್ಕೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಅವರು ಮಾತನಾಡಿ ಕೋವಿಡ್-೧೯ರ ೩ನೇ ಅಲೆ ತಡೆಗೆ ಮುನ್ನೆಚ್ಚರಿಕೆಯಾಗಿ ಹಮ್ಮಿಕೊಳ್ಳಲಾಗಿರುವ ಬೂಸ್ಟರ್ ಡೋಸ್ ಲಸಿಕೆ ಅಭಿಯಾನದಲ್ಲಿ ಮೊದಲ ದಿನ ಚಾಮರಾಜನಗರ ತಾಲೂಕಿನ ೨೩೭೯, ಗುಂಡ್ಲುಪೇಟೆ ೧೧೩೫, ಹನೂರು ೮೧೨, ಕೊಳ್ಳೇಗಾಲ ೧೦೩೧ ಹಾಗೂ ಯಳಂದೂರು ತಾಲೂಕಿನ ೪೨೮ ಮಂದಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೫೭೮೫ ಮಂದಿಗೆ ಬೂಸ್ಟರ್ ಡೋಸ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಮೊದಲ ಹಾಗೂ ಎರಡನೇ ಡೋಸ್ ಪಡೆದ ೬೦ ವರ್ಷ ಮೇಲ್ಪಟ್ಟವರು ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಲಸಿಕೆ ಪಡೆಯಬಹುದು ಎಂದರು. 

ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಇದ್ದರು.