ಚಾಮರಾಜನಗರ:ಕನ್ನಡದ ಓದುಗರಿಗೆ ಮತ್ತು ಸಾಹಿತಿಗಳಿಗೆ ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಸ್ಫೂರ್ತಿ ತುಂಬಿದ್ದಾರೆ . ಬೇಂದ್ರೆಯವರು ಕನ್ನಡ ಸಾಹಿತ್ಯ ವನ್ನೂ ಶ್ರೀಮಂತಗೊಳಿಸಿದ ಶ್ರೇಷ್ಠ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು. ಇವರ ಕವನಗಳು , ನಾಟಕಗಳು, ವಿಮರ್ಶಾ ಗ್ರಂಥಗಳು ಪ್ರಬಂಧಗಳು ವಿಶ್ವದ ಕನ್ನಡಿಗರ ಹೃದಯ ಮತ್ತು ಮನಸ್ಸನ್ನು ಗೆದ್ದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಸಮನ್ವಯಾಧಿಕಾರಿಗಳಾದ ಲಕ್ಷ್ಮಿಪತಿ.ಆರ್ ತಿಳಿಸಿದರು.


ಅವರು ಜೈಹಿಂದ್ ಪ್ರತಿಷ್ಠಾನ ಋಗ್ವೇದಿ ಕುಟೀರದ ಜೈಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ದ ರಾ ಬೇಂದ್ರೆ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಮಾತನಾಡುತ್ತಾ, ಬೇಂದ್ರೆಯವರು ಸುಮಾರು ೨೭ಕವನ ಸಂಕಲನಗಳು, ೧೪ ನಾಟಕಗಳು ,ಹತ್ತಕ್ಕೂ ಹೆಚ್ಚು ವಿಮರ್ಶಾ ಗ್ರಂಥಗಳು ,೧೨೮ ಪ್ರಬಂಧಗಳು ಕನ್ನಡ ಸಾಹಿತ್ಯದ ಇಂದಿನ ಪೀಳಿಗೆಯವರಿಗೆ ಹಾಗೂ ಅಧ್ಯಯನಶೀಲರಿಗೆ ಮಹತ್ತರವಾದ ಭಾಷೆಯ ಸಂಪತ್ತನ್ನು, ಶಬ್ದ ಭಂಡಾರವನ್ನು ನೀಡುತ್ತದೆ.
ಧಾರವಾಡದ ಗೆಳೆಯರೊಡನೆ ಸಾಹಿತ್ಯದ ಗೆಳೆಯರ ಗುಂಪನ್ನು ಕಟ್ಟಿಕೊಂಡು ಸಾಹಿತ್ಯ ಚಟುವಟಿಕೆಗಳನ್ನು ಮತ್ತು ಸಾಹಿತ್ಯ ರಚನೆಯನ್ನು ನೀಡಿ ಕರ್ನಾಟಕಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯಕ್ಕೆ ಪಡೆಯುವಲ್ಲಿ ಅವರ ನಾಕುತಂತಿ ಕವನ ಸಂಕಲನ ಅಮೂಲಾಗ್ರವಾದ , ಶ್ರೇಷ್ಠ ಚಿಂತನೆಗಳ ಭಾವನೆಗಳ ಹೃದಯಸ್ಪರ್ಶಿ, ಅಂತರಾಳದ ಶಬ್ದಗಳಿವೆ ಎಂದು ತಿಳಿಸಿದರು.
ಚಾಮರಾಜನಗರದ ಸಂಸ್ಕೃತಿಯ ರಾಯಭಾರಿಗಳಾದ ಋಗ್ವೇದಿ ಯವರು ಜೈಹಿಂದ್ ಕಟ್ಟೆಯನ್ನು ನಿರ್ಮಿಸುವ ಮೂಲಕ ನೂರಾರು ಮಹಾತ್ಮರ ಹಾಗೂ ರಾಷ್ಟ್ರ ಚಿಂತಕರ ,ಅಲ್ಲದೆ ಕನ್ನಡ ನಾಡು ನುಡಿ ,ಜಲ, ಭಾಷೆಯ ಚಿಂತನೆಗೆ ಅವಕಾಶ ಮಾಡಿ ಸಹೃದಯ ಮನಸ್ಸಿನ ಜನರನ್ನು ಒಂದುಗೂಡಿಸುವ ಪ್ರಯತ್ನ ಮಾಡುತ್ತಿರುವುದು ಅತ್ಯಂತ ಅಭಿನಂದನೆಯ ಎಂದು ತಿಳಿಸಿದರು.
ಬರಹಗಾರರಾದ ಲಕ್ಷ್ಮಿನರಸಿಂಹ ಅವರು ಮಾತನಾಡಿ ಅವರ ಕವನಗಳು ನಾಡಿನ ಜನರ ನಾಲಿಗೆಯ ಮೇಲೆ ಇಂದಿಗೂ ಹರಿದಾಡುತ್ತಿದೆ ನೀ ಹಿಂಗ ನೋಡಬೇಡ ನನ್ನ, ಇಳಿದು-ಬಾ-ತಾಯಿ-ಇಳಿದು-ಬಾ, ಇನ್ನು ಯಾಕ ಬರಲಿಲ್ಲವಾ ಹುಬ್ಬಳ್ಳಿಯವ ಮುಂತಾದ ನೂರಾರು ಗೀತೆಗಳು ಜನಪ್ರಿಯಗೊಂಡು ಬೇಂದ್ರೆಯವರನ್ನು ಶಾಶ್ವತವಾಗಿ ಸಾಹಿತ್ಯ ಪ್ರಪಂಚದಲ್ಲಿ ನಿಲ್ಲಿಸಿದೆ. ಬೇಂದ್ರೆಯವರ ಜನ್ಮದಿನಾಚರಣೆಯ ಸಾರ್ಥಕ ಕೆಲಸವನ್ನು ಮಾಡಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಎಸ್ ಪಿ ಬಾಲಸುಬ್ರಹ್ಮಣ್ಯಂ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಗಾಯಕ ಗಂಧರ್ವ ಶಿವಣ್ಣ, ಗಾಯಕರಾದ ಮುತ್ತುರಾಜ ರವರು ದ ರಾ ಬೇಂದ್ರೆ ರವರ ಗೀತೆಗಳನ್ನು ಸುಮಧುರವಾಗಿ ಹಾಡಿ ಬೇಂದ್ರೆಯವರಿಗೆ ಗೌರವ ಸಲ್ಲಿಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಕೃತಿ ಚಿಂತಕರು ಹಾಗೂ ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಬೇಂದ್ರೆಯವರ ಸಾಹಿತ್ಯ ಮಾನವರ ಮನಸ್ಸು ಮತ್ತು ಹೃದಯವನ್ನು ಮುಟ್ಟುವಂತಹ ಶ್ರೀಮಂತ ಕನ್ನಡ ಸಾಹಿತ್ಯವಾಗಿದೆ. ಕವಿ, ನಾಟಕಕಾರ ವಾಗ್ಮಿ ,ಅವಧೂತ ,ರಸಋಷಿ ವಿಮರ್ಶಕ, ಅಲ್ಲದೆ ಇವರು ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರರು ಆಗಿರುವುದು ಹೆಮ್ಮೆಯ ವಿಷಯವೆಂದು. ಇವರ ನರಬಲಿ ಕವನ ಬ್ರಿಟಿಷ್ ಸರ್ಕಾರಕ್ಕೆ ಕೋಪಗೊಳ್ಳುವಂತೆ ಮಾಡಿತು. ದೇಶಕ್ಕಾಗಿ ಸೆರೆಮನೆ ವಾಸ ಅನುಭವಿಸಿದ ಶ್ರೇಷ್ಠ ಸಾಹಿತಿಯೂ ಹೌದು. ಅರವಿಂದ ಮಹರ್ಷಿಗಳ ಸಾಹಿತ್ಯ ಮತ್ತು ದೇಶಪ್ರೇಮ ಬೇಂದ್ರೆಯವರಲ್ಲಿ ಅಪಾರವಾಗಿ ಪ್ರಭಾವ ಬೀರಿತು ಕನ್ನಡದ ಟಾಗೋರ್ ಎಂದೇ ಜನಪ್ರಿಯರಾಗಿರುವ ಬೇಂದ್ರೆಯವರ ಸಾಹಿತ್ಯ ಯುವಕರಿಗೆ ಮತ್ತು ಯುವ ಸಾಲಿನ ಬರಹಗಾರರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ವಾಣಿಜ್ಯ ವಿದ್ಯಾ ಸಂಸ್ಥೆಯ ಪ್ರಾಚಾರ್ಯ ಮಹದೇವಪ್ಪ, ಓಂ ಶಾಂತಿ ನ್ಯೂಸ್ ಬಿಕೆ ಆರಾಧ್ಯ, ವಿದ್ಯಾವಿಕಾಸ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ರಾಜೇಂದ್ರ, ಮೈಸೂರು ವಿಶ್ವವಿದ್ಯಾನಿಲಯದ ಉಪನ್ಯಾಸಕ ಮಹದೇವಸ್ವಾಮಿ ಬಂಡಿಗೆರೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಉಮೇಶ್, ಶ್ರೀಗಂಧ ಕನ್ನಡ ಯುವ ವೇದಿಕೆಯ ರವಿಚಂದ್ರ ಪ್ರಸಾದ್, ಗಾಯಕರಾದ ಶಿವಣ್ಣ ಮುತ್ತುರಾಜು, ಹಿರಿಯ ಹಿರಿಯ ನಾಗರಿಕರು ಮತ್ತು ನಿವೃತ್ತ ಶಿಕ್ಷಕರಾದ ರಾಜಗೋಪಾಲ್, ಝಾನ್ಸಿ ಮಕ್ಕಳ ಪರಿಷತ್ತಿನ ಶ್ರಾವ್ಯ ಋಗ್ವೇದಿ ಉಪಸ್ಥಿತರಿದ್ದರು.