ಚಾಮರಾಜನಗರ: ಜನಪದ ಕಲಾ ಪ್ರಕಾರಗಳ ಅಗರವಾಗಿರುವ ಜಿಲ್ಲೆಯ ಕಲೆಗಳ ಸಂಸ್ಕೃತಿ ಪರಂಪರೆಯ ಜೀವಂತಿಕೆಗಾಗಿ ಜನಪರ ಉತ್ಸವಗಳನ್ನು ಹೆಚ್ಚಾಗಿ ನಡೆಸುವುದು ಅವಶ್ಯವಾಗಿದೆ ಎಂದು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು
ನಗರದ ಜೆ. ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜನಪರ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಾಮರಾಜನಗರ ಜಿಲ್ಲೆ ಜಾನಪದ ಕಲೆಗಳ ತವರೂರು. ಸೊಬಾನೆ, ರಾಗಿ ಬೀಸುವ ಪದ, ಗೀಗೀ, ಸುಗ್ಗಿ ಪದ, ತಂಬೂರಿ ಪದ, ನೀಲಗಾರರು, ಗೊರವರ ಕುಣಿತದಂತಹ ಹಲವಾರು ಜನಪದ ಕಲೆಗಳಿವೆ. ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಜನಪರ ಉತ್ಸವದಲ್ಲಿ ಕಲಾವಿದರು ಹೆಚ್ಚಿ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸರ್ಕಾರದ ಅನುದಾನವನ್ನು ಸಧ್ಭಳಕೆ ಮಾಡಿಕೊಳ್ಳಬೇಕು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು
ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಮಾತನಾಡಿ ಪರಿಶಿಷ್ಟಜಾತಿಯ ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಲಾವಿದರು ಪ್ರಸ್ತುತಪಡಿಸುವ ಕಲೆಗಳ ಅಭಿವ್ಯಕ್ತಿ ಹೆಚ್ಚಿನ ಜನರಿಗೆ ತಲುಪಬೇಕು. ಕಲಾವಿದರು ಸಾಂಸ್ಕೃತಿಕ ಕಲೆಗಳ ಅನಾವರಣ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಜಿಲ್ಲೆಗೆ ಕೀರ್ತಿ ತರಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾಂತಮೂರ್ತಿ ಕುಲಗಾಣ ಅವರು ಮಾತನಾಡಿ ಮನುಷ್ಯ ಸ್ನೇಹಜೀವಿ. ನಿರಂತರ ಚಟುವಟಿಕೆಯ ಮೂಲಕ ಈ ಸಮಾಜದಲ್ಲಿ ಬೆಳವಣಿಗೆ ಮತ್ತು ಅಸ್ಥಿತ್ವಗಳ ಮೂಲಕ ಸಂಭ್ರಮ ಪಡುವಂತಹ ಆಚರಣೆ. ಸಂಸ್ಕೃತಿ ನಮಗೆ ಪೂರ್ವಜರು ನೀಡಿದ ಕೊಡುಗೆಯಾಗಿದೆ. ಆಧುನಿಕತೆಯಿಂದ ಸಂಸ್ಕೃತಿ ನಶಿಸದಂತೆ ತಡೆದು ಅದನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಬೇಕು ದೇಶದ ಸಂಸ್ಕೃತಿಯನ್ನು ಕಲಾವಿದರು ಶ್ರೀಮಂತಗೊಳಿಸಬೇಕಾಗಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷರಾದ ಸಿ. ಎಂ. ಆಶಾ ಅವರು ಮಾತನಾಡಿ ಜನಪರ ಉತ್ಸವ ಕೇವಲ ಆಚರಣೆಯಾಗದೆ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಲಾವಿದರಲ್ಲಿ ಹೆಚ್ಚಿನವರು ಯುವಕರೇ ಆಗಿದ್ದು, ಪಾಶ್ಚಿಮಾತ್ಯ ಸಂಸ್ಕೃತಿಗಳಿಗೆ ಮಾರುಹೋಗದೆ ದೇಶೀಯ ಕಲೆ ಮತ್ತು ಸಂಸ್ಕೃತಿ, ಸಂಪ್ರದಾಯ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.
ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಸಿ. ಎಂ. ನರಸಿಂಹಮೂರ್ತಿ ಮಾತನಾಡಿ ಕಲೆ, ಸಂಸ್ಕ್ರತಿಗಳ ಉಳಿವಿಗಾಗಿ ನಾಡಿಗೆ ಹಲವಾರು ಕಲಾವಿದರನ್ನು ಜಿಲ್ಲೆ ಕೊಡುಗೆಯಾಗಿ ನೀಡಿದೆ. ಜಿಲ್ಲೆಯಲ್ಲಿ ಹೆಚ್ಚಿನ ಜನಪದ ಉತ್ಸವ ಕಾರ್ಯಕ್ರಮಗಳು ಆಯೋಜನೆಯಾಗಬೇಕು. ಜಿಲ್ಲಾಕೇಂದ್ರದಲ್ಲಿ ಅಪೂರ್ಣವಾಗಿರುವ ರಂಗಮಂದಿರ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಕಲಾವಿದರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತ, ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.