ಚಾಮರಾಜನಗರ: ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮದಡಿ ಜಿಲ್ಲೆಗೆ ಅರಿಶಿಣ ಬೆಳೆಯನ್ನು ಆಯ್ಕೆ ಮಾಡಲಾಗಿದ್ದು, ಅರಿಶಿಣ ಬೆಳೆಯ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ಒತ್ತು ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರಾದ ಹೆಚ್.ಟಿ ಚಂದ್ರಕಲಾ ಅವರು ತಿಳಿಸಿದರು.  
ನಗರದ ಜಿಲ್ಲಾಡಳಿತ ಭವನದ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆತ್ಮ ನಿರ್ಭರ ಭಾರತ ಅಭಿಯಾನದಡಿ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯ ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮದಡಿಯಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಯೋಜಿತ ಯೋಜನೆಯಾಗಿದೆ. ಈ ಯೋಜನೆಯಡಿ ಜಿಲ್ಲೆಗೆ ಅರಿಶಿಣ ಬೆಳೆಯನ್ನು ಆಯ್ಕೆ ಮಾಡಲಾಗಿದ್ದು, ಜಿಲ್ಲೆಯ ರೈತರು ಅರಿಶಿಣವನ್ನು ಅತಿ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಅರಿಶಿಣದ ಉತ್ಪನ್ನಗಳನ್ನು ಕಿರು ಉದ್ದಿಮೆಗಳ ಮೂಲಕ ತಯಾರಿಸಿ, ಸಂಸ್ಕರಿಸಿ ಆರ್ಥಿಕವಾಗಿ ಸಧೃಡರಾಗಲೂ ಮುಂದಾಗಬೇಕು. ಈ ನಿಟ್ಟಿನಲ್ಲಿ ರೈತರು ಕಾರ್ಯಗಾರದಲ್ಲಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಕುರಿತು  ತಾಂತ್ರಿಕ ಮಾಹಿತಿ ಪಡೆದು  ಕಾರ್ಯಗಾರವನ್ನು ಯಶಸ್ವಿಗೊಳಿಸಬೇಕು ಎಂದು ಚಂದ್ರಕಲಾ ಅವರು ತಿಳಿಸಿದರು.   
ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಕೆಪೆಕ್‌ನ ವ್ಯವಸ್ಥಾಪಕ ನಿರ್ದೇಶಕರಾದ ಮಹಮ್ಮದ್ ಪರ್ವೇಜ್ ಬಂತ್‌ನಾಳ್ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಸ್ಥಾಪನೆಗೆ ಶೇ. ೫೦ ರಷ್ಟು ಸಹಾಯಧನ ನೀಡುತ್ತಿದ್ದು ಜಿಲ್ಲೆಯ ಅರಿಶಿಣ ಬೆಳೆಯುವ ರೈತರು ಯೋಜನೆಯ ಸದುಪಯೋಗ ಪಡೆಯಬೇಕು. ಅರಿಶಿಣದಿಂದ ತಯಾರಿಸಬಹುದಾದ ಉತ್ಪನ್ನಗಳ ಕುರಿತು ಸರ್ಕಾರದಿಂದ ತರಬೇತಿ ಪಡೆದು ಉದ್ದಿಮೆ ಪ್ರಾರಂಭಿಸಬಹುದು ಎಂದರು.
ಆತ್ಮ ನಿರ್ಭರ ಭಾರತ ಅಭಿಯಾನದ ಒಂದು ಜಿಲ್ಲೆ ಒಂದು ಉತ್ಪನ್ನ ಕಾರ್ಯಕ್ರಮದಡಿ ಸ್ವಸಹಾಯ ಸಂಘಗಳು ಈಗಾಗಲೇ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಿದ್ದರೆ ಹಾಗೂ ಹೊಸದಾಗಿ ಉದ್ದಿಮೆ ಆರಂಭಿಸುವಂತಿದ್ದರೆ ಅರಿಶಿಣ ಉತ್ಪನ್ನ ಕುರಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಪ್ರಾರಂಭಿಸಿ ಸರ್ಕಾರದ ಸಹಾಯಧನವನ್ನು ಪಡೆಯಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಅಥವಾ ತರಬೇತಿ ಪಡೆಯಲು ಕೃಷಿ ವಿಶ್ವವಿದ್ಯಾನಿಲಯಗಳ ಮೂಲಕ ಜಿಲ್ಲೆಯಲ್ಲಿ ಕಾಮನ್ ಸರ್ವೀಸ್ ಸೆಂಟರ್ ಅನ್ನು ತೆರೆಯಲಾಗಿದೆ  ಎಂದು ಮಹಮ್ಮದ್ ಪರ್ವೇಜ್ ಬಂತ್‌ನಾಳ್ ಅವರು ಸಲಹೆ ಮಾಡಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಗುಡೂರು ಭೀಮಸೇನ ಅವರು ಮಾತನಾಡಿ ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಜಿಲ್ಲೆಯಲ್ಲಿ ಅರಿಶಿಣ ಬೆಳೆಯ ವ್ಯಾಪಕತೆ ಹೆಚ್ಚಿದೆ. ಅರಿಶಿಣದ ಕಿರು ಸಂಸ್ಕರಣಾ ಉದ್ದಿಮೆ ಸ್ಥಾಪನೆಗೆ ಅರ್ಜಿ ಸಲ್ಲಿಕೆ ಆಗಿರುವುದು ಬೆರಳೆಣಿಕೆಯಷ್ಟೇ. ರೈತರಿಗೆ ಹೊರೆ ಕಡಿಮೆ ಅಗುವ ಉದ್ದೇಶದಿಂದ ಸರ್ಕಾರ ಸಹಾಯಧನ ನೀಡುತ್ತಿದೆ. ಈ ಯೋಜನೆಗಳು ಸಫಲವಾಗಬೇಕಾದರೆ ರೈತರ ಸಹಭಾಗಿತ್ವ ಬಹುಮುಖ್ಯವಾಗಿದೆ. ಅರಿಶಿಣ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಬೇಡಿಕೆಯಿದೆ. ರೈತರು ಯೋಜನೆ ಸದುಪಯೋಗ ಪಡೆದು ಕಿರು ಆಹಾರ ಸಂಸ್ಕರಣಾ ಉದ್ದಿಮೆ ಸ್ಥಾಪಿಸಲು ಮುಂದೆ ಬರಬೇಕು. ಇಸ್ರೇಲ್ ಕೃಷಿ ಪದ್ದತಿಯನ್ನು ಮಾದರಿಯಲ್ಲಿ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದರು.
ಕೃಷಿ ಇಲಾಖೆಯ ಉಪನಿರ್ದೇಶಕರಾದ ಸೋಮ್‌ಶೇಖರ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಶಿವಪ್ರಸಾದ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರಾದ ರಾಜೇಂದ್ರ ಪ್ರಸಾದ್ ,ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ವ್ವವಸ್ಥಾಪಕರಾದ ಶ್ರೀಕಾಂತ್, ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷರಾದ ಚಿಕ್ಕಸ್ವಾಮಿ, ಮೈಸೂರಿನ ಸಿ.ಎಫ್.ಟಿ.ಆರ್.ಐ. ತರಬೇತಿ ಸಂಯೋಜಕರಾದ ಡಾ. ಹೃಷಿಕೇಶ್ ಎ. ತವನಂದಿ, ನಬಾರ್ಡ್ ಬ್ಯಾಂಕ್‌ನ ವ್ಯವಸ್ಥಾಪಕರಾದ ಸುವರ್ಣ, ಕೆಪೆಕ್ ನ ಚೈತ್ರಾ ಬಿ, ಕಿರು ಆಹಾರ ಸಂಸ್ಕರಣಾ ಉದ್ದಿಮೆಯ ಸಲಹೆಗಾರರಾದ ಅಭಿಷೇಕ್, ರೈತ ಮುಖಂಡರುಗಳು ಮತ್ತಿತರು ಉಪಸ್ಥಿತರಿದ್ದರು.