ಚುನಾವಣಾ (ಕು)ತಂತ್ರ : ಒಂದು ವಿಶ್ಲೇಷಣೆ
ಅಂದು:-
ಭಾರತದ ಸ್ವಾತಂತ್ರ್ಯಾ ನಂತರ ಪ್ರಾರಂಭಿಕ ಚುನಾವಣೆಗಳಲ್ಲಿ ಮಹತ್ವ ಇದ್ದುದು ಗಾಂಧೀಜಿ ಸರ್ದಾರ್‌ಪಟೇಲ್ ಶಾಸ್ತ್ರೀಜಿ ಮುಂತಾದ ಮಹನೀಯರ ಮೌಲ್ಯಾಧಾರಿತ ತತ್ವಗಳ ಆದರ್ಶದ ಮೇಲೆ. ದೇಶದ ಆರ್ಥಿಕ ಶೈಕ್ಷಣಿಕ ಕೈಗಾರಿಕಾ ಮತ್ತು ನೀರಾವರಿ ಯೋಜನೆಗಳ ಅನುಷ್ಠಾನ ಬುನಾದಿಯ ಮೇಲೆ. ಜತೆಗೆ ಸಾಮಾಜಿಕ ನೈತಿಕ ಪ್ರಜಾಪ್ರಭುತ್ವದ ತಳಹದಿಮೇಲೆ ಅವಲಂಬಿತವಾಗಿತ್ತು. ಪ್ರಗತಿಪರ ಸಿದ್ಧಾಂತಕ್ಕೆ ನಾಂದಿ ಹಾಡುವುದು ಅನಿವಾರ್ಯಗಾಗಿತ್ತು. ಅಂದು ಭಾರತೀಯರಲ್ಲಿ ರಕ್ತಗತವಾಗಿದ್ದುದು ದೇಶದ ಸರ್ವತೋಮುಖಬೆಳವಣಿಗೆ ಮತ್ತು ಸರ್ವಧರ್ಮಅಭ್ಯುದಯ ಸರ್ಕಾರದ ಕೆಲಸ ದೇವರ ಕೆಲಸ ಎಂಬ ಮಂತ್ರಗಳಿಂದ ತುಂಬಿತ್ತು. ತ್ಯಾಗ ಬಲಿದಾನದ ಶಿರಸ್ಸಿಗೆ ಸ್ವಾತಂತ್ರ್ಯ ಸಮಾಧಾನದ ಶರೀರವಿತ್ತು. ಚುನಾವಣಾ ಕಣದಲ್ಲಿ ಬೆರಳೆಣಿಕೆಯಷ್ಟು ಪಕ್ಷಗಳು ಮಾತ್ರ ಸ್ಫರ್ಧಿಸುತ್ತಿದ್ದವು. ಪ್ರಾಂತೀಯ ಪಕ್ಷವಾಗಲಿ ರಾಷ್ಟ್ರೀಯ ಪಕ್ಷವಾಗಲಿ ಸ್ವಾರ್ಥ ಜಾತಿ ದ್ವೇಷ ಅಸೂಯೆ ಇಲ್ಲದೆ ಜನಸೇವೆಯೆ ಜನಾರ್ಧನ ಸೇವೆ ಮನೋಭಾವದಿಂದ ರಾಜಕೀಯ ಕಾರ್ಯ ಪ್ರಾಮಾಣಿಕವಾಗಿ ಕೈಗೊಳ್ಳುತ್ತಿದ್ದರು ಯಾವುದೆ ಬಗೆಯ ಚುನಾವಣೆಯಾಗಲಿ ಜನಮನದಲ್ಲಿ ಸಂತೃಪ್ತಿ ತರುತ್ತಿತ್ತು.

 ಅಂದಿನ ಕಾಲದಲ್ಲಿ ಚುನಾವಣೆ ಬಂತೆಂದರೆ ಪ್ರಜೆಗಳಿಗೆ ಎಲ್ಲಿಲ್ಲದ ಸಂಭ್ರಮ ಸಡಗರ ಗೌರವ ಭಯಭಕ್ತಿ ಆಕರ್ಷಣೆ ಕುತೂಹಲ ತುಂಬಿತುಳುಕುತ್ತಿತ್ತು! ಪ್ರತಿಧರ್ಮದ ಪ್ರಜೆಗಳ ನಡುವೆ ಪರಸ್ಪರ ಪ್ರೀತಿ ಗೌರವಾದರಗಳು ಮನೆಮಾಡಿದ್ದವು. ಗಣರಾಜ್ಯದ ನಂತರ ಜನರಿಂದ ಜನರಿಗಾಗಿ ಜನರಿಗೋಸ್ಕರ ಮತ ಚಲಾಯಿಸುವ ಮೂಲಕ ಜನಪ್ರತಿನಿದಿ ಚುನಾಯಿಸಬೇಕಾದ ಸುವರ್ಣಾವಕಾಶವು ಸಂವಿಧಾನಾತ್ಮಕವಾಗಿ ದೊರಕಿತ್ತು. ಇಡೀ ಚುನಾವಣಾ ಪ್ರಕ್ರಿಯೆ ಉತ್ಸಾಹದಿಂದ ಯಶಸ್ವಿಯಾಗಿ ಪೂರ್ಣಗೊಳ್ಳುತ್ತಿತ್ತು. ಉತ್ತಮ ಫ಼ಲಿತಾಂಶದಿಂದ ಮಂತ್ರಿಮಂಡಲ ರಚನೆಯಾಗಿ ಆರ್ಥಿಕ ಸಾಮಾಜಿಕ ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳ ಯೋಜನೆ ಬಗ್ಗೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಜತೆ ಗೂಡಿ ಆರೋಗ್ಯಕರ ಅಜೆಂಡಾ ಮಂಡಿಸುತ್ತಿದ್ದವು. ಶಾಸಕರೆಲ್ಲ ಒಮ್ಮತದಿಂದ ಕೂಡಿ ಪ್ರಾಮಾಣಿಕ ಚರ್ಚೆ ನಡೆಸಿ ಸಾರ್ಥಕ ನಿಟ್ಟಿನ ಸಮರ್ಪಕ ಆಯವ್ಯಯ ಮಂಡಿಸಿ ಸಾವಕಾಶವಾಗಿ ಕಾರ್ಯಗತಗೊಳಿಸುವಂತೆ ಆದೇಶಿಸುತ್ತಿದ್ದರು. ಭ್ರಷ್ಟಾಚಾರ ತಾಂಡವವಾಡದಂತೆ ಯೋಜನೆಗಳೆಲ್ಲಾ ಚಾಚೂತಪ್ಪದಂತೆ ಅನುಷ್ಠಾನಗೊಳ್ಳುತ್ತಿತ್ತು. ಒಂದುವೇಳೆ ನಿಗಧಿತ ಯೋಜನಾವಧಿಯಲ್ಲಿ ಕಾರ್ಯಗತವಾಗದೆ ಉಳಿದಂಥ ಕಾಮಗಾರಿಗಳನ್ನು ಮುಂದಿನ ಆಯವ್ಯಯ ವರ್ಷದಲ್ಲಿ ಕಾರ್ಯಗತವಾಗುವಂತೆ ನಿಗಾವಹಿಸುತ್ತಿದ್ದರು. 

    ಉತ್ತಮ ರಾಜಕಾರಣಕ್ಕೆ ಇರಬೇಕಾದ ಅನೇಕ ಶ್ರೇಷ್ಠ ಲಕ್ಷಣಗಳ ಪೈಕಿ ದೇಶಸೇವೆಯೆ ಈಶಸೇವೆಎಂಬ ರಾಜಕಾರಣವೂ ಇತ್ತು. ಪ್ರಮುಖವಾಗಿ ಚುನಾವಣಾ ಆಯೋಗದ ನೀತಿಸಂಹಿತೆ ಅನ್ವಯ ಚುನಾವಣಾ ಕಾಯಿದೆ ಮೀರದಂತೆ ಕಾನೂನು ಚೌಕಟ್ಟಿನಲ್ಲೆ ಇಡೀ ಚುನಾವಣಾ ಪ್ರಕ್ರಿಯೆ ಸಾಗುತ್ತಿತ್ತು. ಪ್ರತಿಯೊಬ್ಬ ಅಭ್ಯರ್ಥಿ ತಂತಮ್ಮ ಮತದಾರನನ್ನು ಆಸೆ ಆಮಿಷಗಳಿಂದ ಖರೀದಿಸುವುದನ್ನು ಹೊರತು ಪಡಿಸಿ ಕೇವಲ ತನ್ನ ಹೆಸರು ಚಿಹ್ನೆ ಸೇವೆ ಯೋಗ್ಯತೆ ಆಧಾರದಮೇಲೆ, ಆಸ್ತಿಪಾಸ್ತಿ ಘೋಷಣೆ, ಅಪರಾಧ ರಹಿತ ಹಿನ್ನೆಲೆ, ಜಾಹಿರಾತು ಪ್ರಚಾರ ಓಲೈಸುವಿಕೆ ಇತ್ಯಾದಿಗೆ ಮಾತ್ರ ನಿಗಧಿಪಡಿಸಿದ ಚುನಾವಣಾವೆಚ್ಚ ಖರ್ಚುಮಾಡುವ ಬಗ್ಗೆ ಅರಿತು ಎಚ್ಚರಿಕೆಯಿಂದ ನಿಭಾಯಿಸೋದು ಕಡ್ಡಾಯವಾಗಿತ್ತು. ಅಭ್ಯರ್ಥಿಗೆ ತನ್ನ ಸ್ಫರ್ಧಾಕಣ ಕ್ಷೇತ್ರದ ಬಗ್ಗೆ ಕನಿಷ್ಠಜ್ಞಾನ ಇರಬೇಕಾಗಿತ್ತು. ಚುನಾವಣಾ ನಿಯಮಾವಳಿ ತಪ್ಪದೆ ಅನುಸರಿಸ ಬೇಕಿತ್ತು. ಇವೆಲ್ಲ ಕಟ್ಟಳೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಚುನಾವಣಾ ಆಯೋಗವು ದೇಶಾದ್ಯಂತ ಪ್ರತಿಯೊಬ್ಬ ಚುನಾವಣಾ ಅಧಿಕಾರಿಯು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಾರಿಗೊಳಿಸಿತ್ತು! ಈ ಎಲ್ಲಾ ಶಿಸ್ತಿನ ಪ್ರಕ್ರಿಯೆ ೧೯೭೫ ರವರೆಗೆ ಶೇ.೯೦ರಷ್ಟು ಊರ್ಜಿತವಾಗಿತ್ತು! ಕಾಲಕ್ರಮೇಣ ತುರ್ತುಪರಿಸ್ಥಿತಿ ರೌಡಿಸಂ ಮತಗಟ್ಟೆ ದಾಂಧಲೆ ಗೂಂಡಾಯಿಸಂ ಆಕ್ರಮಣ ಸರ್ವಾಧಿಕಾರಿ ಆಡಳಿತ ಇತ್ಯಾದಿಗಳ ಇತಿಹಾಸ?!   

ಇತ್ತೀಚಿನ ಚುನಾವಣೆಗಳಲ್ಲಿ ದುರದೃಷ್ಟವಶಾತ್ ಕಂಡು ಬರುತ್ತಿರುವ ಕೊಲೆ ಸುಲಿಗೆ ಲಂಚ ಭ್ರಷ್ಟಾಚಾರ ವ್ಯಭಿಚಾರ ಪಕ್ಷಾಂತರ ಓಟಿಗೆನೋಟು ಸೀಟಿಗೆಏಟು ಕುರ್ಚಿಗಾಗಿಕುಯುಕ್ತಿ ಪದವಿಗಾಗಿಪರಮನೀಚತನ ಮುಂತಾದವು ಸರ್ವೆಸಾಮಾನ್ಯ! ಆದರೆ ಚುನಾವಣಾ ನೀತಿಸಂಹಿತೆ ಪ್ರಕಾರ ಇವೆಲ್ಲ ಇರಲೇಬಾರದು? ಇಂಥ ದುರಂತ ದುಷ್ಕೃತ್ಯಗಳು ಜರುಗಬಾರದೆಂಬ ಉದ್ದೇಶದಿಂದಲೆ ಅಪರಾಧಿಗಳಾಗಲೀ ಅಪರಾಧ ಮನೋಭಾವ ಉಳ್ಳವರಾಗಲಿ ಅಥವ ಅಪರಾಧ ಹಿನ್ನೆಲೆ ಉಳ್ಳವವರಾಗಲೀ ಚುನಾವಣಾ ಅಭ್ಯರ್ಥಿಯಾಗಿ ಸ್ಫರ್ಧಿಸುವ ಅವಕಾಶ ಇಲ್ಲವೆಂಬ ಕಾನೂನು ಜಾರಿಯಲ್ಲಿರುವಾಗ ಇಂಥವರು ಗೆದ್ದುಆಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ! ಆದ್ದರಿಂದ ಯಾವ ಕಾರಣಕ್ಕು ಯಾವುದೆ ಧನಧಾನ್ಯಹಾನಿ ಪ್ರಾಣಮಾನಹಾನಿ ಶೀಲಮರ್ಯಾದೆಹರಣ ನೀತಿನ್ಯಾಯಹರಣ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆ ಜರುಗಲೇಬಾರದು?! ಇಷ್ಟಾದರೂ ಇವುಗಳೇ ಯಥೇಚ್ಚವಾಗಿ ನಡೆಯುತ್ತಿದೆ. ಕ್ರಮೇಣ ರೀತಿನೀತಿ ನಿಷ್ಠೆಪ್ರತಿಷ್ಠೆ ಪ್ರೀತಿವಿಶ್ವಾಸ ನ್ಯಾಯಧರ್ಮ ಇವೆಲ್ಲವು ಮಾಯ! ಪ್ರಭುಗಳೂ-ಪ್ರಜೆಗಳೂ ಪಠ್ಯಪ್ರಕಾರ: ಅಂದಿನ ಮತದಾರನೇ ಪ್ರಭುವಾಗಿದ್ದು ಚುನಾಯಿತ ಪ್ರತಿನಿಧಿಯು ಪ್ರಜಾಸೇವಕನಾಗಿದ್ದ. ಆದರೆ ಇಂದು ಮತ ಮಾರಿಕೊಳ್ಳುವ ಕೇವಲಪ್ರಜೆಯೂ ಸರ್ವಾಧಿಕಾರದ ಚುನಾಯಿತ ಪ್ರಭುವೂ ಇದ್ದಾರೆ?! ಹೀಗಾಗಲು ಮತದಾರನ ಪಾತ್ರ ಬಹಳ ಇದೆ? ಇನ್ನಾದರೂ ನೀತಿಯುತ ಚುನಾವಣೆ ನಡೆದು ಸಂವಿಧಾನಾತ್ಮಕವಾಗಿ ಪ್ರಜೆಗಳು ಚುನಾಯಿಸಲಿ ಪ್ರಭುಗಳು ಆಡಳಿತ ನಡೆಸಲಿ?! ಮತ್ತೊಮ್ಮೆ ಲಾಲಬಹದ್ದೂರ್‌ಶಾಸ್ತ್ರೀಜಿ ಸರ್ದಾರಪಟೇಲ್ ಕೆಂಗಲ್‌ಹನುಮಂತಯ್ಯ ಮುಂತಾದವರು ಹುಟ್ಟಿಬರಲಿ ಆಳಲಿಬಾಳಲಿ!

ಇಂದು:-
ಇಂದಿನ ಚುನಾವಣಾ ಕಾಲ ಎಂದರೆ ಎಲ್ಲರ ಮನೆ-ಮನದಲ್ಲಿ ಭಯ ಕ್ರೌರ್ಯ ಅಪವ್ಯಯ ಕೊಲೆ ಸುಲಿಗೆ ಮುಂತಾದವುಗಳನ್ನು ನೆರವೇರಿಸಿಕೊಳ್ಳಲು ರಾತ್ರೋರಾತ್ರಿ ಅನೇಕ ಲೀಡರ್‌ಗಳು ಕಿಡಿಗೇಡಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಅಪರಾಧವನ್ನು ಎಸಗಲೆಂದೆ ನೂರಾರು ದುಷ್ಟ ಕುನ್ನಿಗಳು ಒಟ್ಟಿಗೇ ವಕ್ಕರಿಸುತ್ತವೆ. ಪಾರ್ಥೇನಿಯಂನಂತೆ ಸಮಾಜಘಾತುಕ ಶಕ್ತಿಗಳು ಹರಡಿಕೊಳ್ಳುತ್ತವೆ. ಇಂಥವುಗಳ ಸಾಂಘಿಕ ಚಟುವಟಿಕೆ ಯಿಂದಾಗಿ ಸಾಮಾಜಿಕ ಸ್ವಾಸ್ತ್ಯ ಕೆಡುವುದರ ಜತೆಗೆ ದೇಶದ ಆರ್ಥಿಕ ಶೈಕ್ಷಣಿಕ ನೆಲೆಗಟ್ಟು ಕುಲಗೆಟ್ಟುಹೋಗಿದೆ. ಅಷ್ಠಾನಿಷ್ಟಗಳು ಉದ್ಭವಿಸಿ ಕೇವಲ ದುರಾಡಳಿತ ನಡೆಸುವಂಥವರ ಗೆಲುವಿನ ಫ಼ಲಿತಾಂಶ ಬರುತ್ತ್ತಿದೆ. ಹಳ್ಳಿಯಿಂದ ದಿಲ್ಲಿಯವರೆಗೆ ಅರಾಜಕತೆ ರಾರಾಜಿಸುತ್ತಿದೆ, ದೇಶವು ವಿನಾಶದ ಅಂಚಿಗೆ ಸಾಗುತ್ತ್ತಿದೆ?!

    ತತ್ಪರಿಣಾಮವಾಗಿ ಲೀಡ್ ಮಾಡುವ ಲೀಡರ್ ಇಲ್ಲದಂತಾಗಿ ಎಲ್ಲರೂ (ಸ್ವಯಂ ಘೋಷಿತ) ನಾಯಕರಾಗುವ ಹಠ ಚಟ ಹಿಮಾಲಯದ ಎತ್ತರಕ್ಕೆ ಬೆಳೆದು ತಾಯಿ-ನಾಡು ಸಮೇತ ಎಲ್ಲವನ್ನು ಹರಾಜು ಹಾಕುವ ಹುನ್ನಾರ ನಡೆದಿದೆ. ಸ್ವಂತದವರನ್ನೆ ಹತ್ಯೆ ಮಾಡುವ ಷಡ್ಯಂತ್ರ ಅವ್ಯಾಹತವಾಗಿ ನಡೆದು ಅರಾಜಕತೆ ತಾಂಡವವಾಡುತ್ತಿದೆ. ಪರಂಪರಾನುಗತ ಸಂಪತ್‌ಭರಿತ ಭಾರತ ದೇಶವು ಅವಸಾನದತ್ತ  ಸಾಗುತ್ತಿದೆ. ಒಳಿತೆಲ್ಲವೂ ಆತ್ಮಹತ್ಯೆ ಮಾಡಿಕೊಂಡು ಸಂಸ್ಕೃತಿ ನಾಗರಿಕತೆ ಪತನವಾಗುತ್ತಿದೆ. ಭವಿಷ್ಯದಲ್ಲಿ ಕೊನೆಗೊಂದಿನ ಸ್ಮಶಾನ ವೈರಾಗ್ಯ ಕಾಡುತ್ತ ಐರಾವತದಂಥ ಚುನಾವಣೆಯು ಮಾತ್ರವಲ್ಲ ಕರಿಯಾನೆಯಂಥ ಕ್ರೌರ್ಯಚುನಾವಣೆಯೂ ಬೇಡವೇಬೇಡ! ಎಂಬ ಮಂತ್ರವು ಜಪಿಸಲ್ಪಡುತ್ತದೆ. ಆದ್ದರಿಂದ ಓ...ಮತದಾರರೇ.... ನಮ್ ದೇಶದ್ ಕತೆ ಇಷ್ಟೇ ಕಣಪ್ಪೋ..... ಎಂದು ಕೈ ಕಟ್ಟಿ ಬಾಯ್ ಮುಚ್ಚಿ ತೆಪ್ಪಗಿರಬೇಡಿ ಇನ್ನಾದರೂ ದುಷ್ಟರನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸಿ ಭವ್ಯ ಭವಿತವ್ಯ ನೆಮ್ಮದಿ ಸಮೃದ್ಧಿಯ ನಾಡು ಉದಯಿಸುವಂತೆ ಎಚ್ಚೆತ್ತುಕೊಂಡು ಎಚ್ಚರವಹಿಸಿ ಮತ ಚಲಾಯಿಸಿರಿ. ಇವತ್ತು ಮಾಡುವ ನಿಮ್ಮ ಸ್ವಯಂಕೃತ ಅಪರಾಧಕ್ಕೆ ನಾಚಿಕೆಗೇಡು ಅವಿವೇಕಕ್ಕೆ;  ನಾಳೆಯದಿನ ಇತರನ್ನು ಸುಖಾಸುಮ್ಮನೆ ದೂಷಿಸುವಿರೇಖೆ? ಅವರಿವರನ್ನು ಅನ್ಯಾಯವಾಗಿ ಬಲಿಪಶು ಮಾಡುವಿರೇಕೆ? ಈಗಲೂ ಕಾಲಮಿಂಚಿಲ್ಲ ಆಯ್ಕೆ ನಿಮ್ಮದೇ....! ನಿಮ್ಮ ಮಕ್ಕಳು ಮೊಮ್ಮಕ್ಕಳ ಹಾಗೂ ಸುಭದ್ರ ದೇಶದ ಭವಿಷ್ಯಕ್ಕಾಗಿ...ಯೋಚಿಸಿ ತೀರ್ಮಾನಿಸಿ ಮತಚಲಾಯಿಸಿ ಉತ್ತಮರನ್ನೇ ಆರಿಸಿರಿ?! 

ಕೊನೇ ಗುಟುಕು: ಭಾರತೀಯ ಶ್ರೀಸಾಮಾನ್ಯನ ಕನವರಿಕೆ ಜೈ ಚುನಾವಣೆ, ಜೈ ಮತದಾರ!

         ಕುಮಾರಕವಿ ಬಿ.ಎನ್.ನಟರಾಜ್ 
         ೯೦೩೬೯೭೬೪೭೧
         ಬೆಂಗಳೂರು ೫೬೦೦೭೨