-ಚಿದ್ರೂಪ ಅಂತಃಕರಣ

ಸಾಹಿತ್ಯದಲ್ಲಿ ಅಭಿಜಾತ ಪರಂಪರೆಗೆ ಒಳಪಟ್ಟ ಭಾರತೀಯ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಭಾರತ ಸರ್ಕಾರವು ಯೋಜನೆ ಹಾಕಿಕೊಂಡ ಸಂದರ್ಭಕ್ಕೆ ಮೊದಲಿಗೆ 2003ರಲ್ಲಿ ತಮಿಳುನಾಡಿನ ಸರ್ಕಾರವು ಧ್ವನಿ ಎತ್ತಿತು. ಇದನ್ನು ಗಮನವಾಗಿ ಪರಿಶೀಲಿಸಿದ ಭಾರತ ಸರ್ಕಾರವು ‘ಗ್ರೋಲಿಯರ್ ವಿಶ್ವಕೋಶ’ ಮತ್ತು ‘ಬ್ರಿಟಾನಿಕ್ ವಿಶ್ವಕೋಶಗಳು’ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನಗಳನ್ನು ಅರ್ಥೈಸಿದ ಮಾನದಂಡಗಳಾದ ಸಾಹಿತ್ಯಿಕ ವಿಚಾರ, ಕಾವ್ಯವಸ್ತು, ಮಾನವೀಯ ಸಂವೇದನಾ ದೃಷ್ಟಿ, ಭಾಷೆಯ ನಿಚ್ಚಳತೆಯನ್ನು ಪರಿಗಣಿಸಿ ಮುಂದುವರೆದು ಭಾರತ ಸರ್ಕಾರ ನಿಯೋಜಿಸಿದ ಸಂಸ್ಕೃತಿ ಸಚಿವಾಲಯ ಸಮಿತಿಯು ಭಾಷೆಯ ಶಾಸ್ತ್ರೀಯ ಸ್ಥಾನಮಾನಕ್ಕೆ ಈ ಕೆಳಕಂಡ ಮಾನದಂಡಗಳನ್ನು ನಿರ್ಧರಿಸಿದೆ.

1500 ರಿಂದ 2000 ವರ್ಷಗಳ ಅವಧಿಯಲ್ಲಿ ಅದರ ಆರಂಭಿಕ ಪಠ್ಯಗಳು ಅಥವಾ ದಾಖಲಿತ ಇತಿಹಾಸದ ಹೆಚ್ಚಿನ ಪ್ರಾಚೀನತೆ; ಪುರಾತನ ಸಾಹಿತ್ಯ ಗ್ರಂಥಗಳ ರಚನೆ. ಆ ಭಾಷೆಯನ್ನು ಮಾತನಾಡುವವರ ತಲೆಮಾರುಗಳಿಂದ ಬಂದ ಅಮೂಲ್ಯವಾದ ಪರಂಪರೆ. ಆ ಭಾಷೆಗೆ ಸಾಹಿತ್ಯಿಕ ಸಂಪ್ರದಾಯವು ಮೂಲವಾಗಿರಬೇಕು ಮತ್ತು ಇನ್ನೊಂದು ಭಾಷಾ ಸಮುದಾಯದಿಂದ ಎರವಲು ಪಡೆದಿರಬಾರದು; ಶಾಸ್ತ್ರೀಯ ಭಾಷೆಯೆನಿಸುವುದರ ಸಾಹಿತ್ಯವು ಆಧುನಿಕಕ್ಕಿಂತ ಭಿನ್ನವಾಗಿರಬೇಕು. ಈ ಅಂಶಗಳನ್ನು ಆಧಾರವಾಗಿಟ್ಟುಕ್ಕೊಂಡು 2004ರ ಸೆಪ್ಟೆಂಬರ್ 2ರಂದು ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನವನ್ನು ಘೋಷಿಸಲಾಯಿತು. ನಂತರ ಸಂಸ್ಕೃತ(2005) ಕನ್ನಡ ಮತ್ತು ತೆಲುಗು(2008), ಮಲಯಾಳಂ(2013), ಒಡಿಯಾ(2014) ಭಾಷೆಗಳಿಗೂ ಕ್ರಮವಾಗಿ ಅಭಿಜಾತ ಕಿರೀಟ ಮುಡಿಗೇರಿತು.

ನವೆಂಬರ್ 2004ರ ಭಾರತ ಸರ್ಕಾರದ ನಿರ್ಣಯ ಸಂಖ್ಯೆ. 2-16/2004-US (ಅಕಾಡೆಮಿಗಳು) ಪ್ರಕಾರ, “ಶಾಸ್ತ್ರೀಯ ಭಾಷೆ” ಎಂದು ಘೋಷಿಸಲಾದ ಭಾಷೆಗೆ ಉಂಟಾಗುವ ಪ್ರಯೋಜನಗಳು: [11 ]

ಶಾಸ್ತ್ರೀಯ ಭಾರತೀಯ ಭಾಷೆಗಳಲ್ಲಿ ಶ್ರೇಷ್ಠ ವಿದ್ವಾಂಸರಿಗೆ ಎರಡು ಪ್ರಮುಖ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ವಾರ್ಷಿಕವಾಗಿ ನೀಡಲಾಗುತ್ತದೆ. ಶಾಸ್ತ್ರೀಯ ಭಾಷೆಗಳಲ್ಲಿ ಅಧ್ಯಯನಕ್ಕಾಗಿ ಅತ್ಯುನ್ನತ ಕೇಂದ್ರವನ್ನು ಸ್ಥಾಪಿಸಲು ಅವಕಾಶ ಕಲ್ಪಿಸಲಾಗುತ್ತದೆ. ಭಾರತೀಯ ಶಾಸ್ತ್ರೀಯ ಭಾಷೆಗಳಲ್ಲಿ ಶ್ರೇಷ್ಠ ವಿದ್ವಾಂಸರಿಗೆ ಶಾಸ್ತ್ರೀಯ ಭಾಷೆಗಳಿಗೆ ನಿರ್ದಿಷ್ಟ ಸಂಖ್ಯೆಯ ವೃತ್ತಿಪರ ಪೀಠಗಳನ್ನು ಕನಿಷ್ಠ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪ್ರಾರಂಭಿಸಲು ವಿಶ್ವವಿದ್ಯಾಲಯ ಅನುದಾನ ಆಯೋಗವನ್ನು ಕೋರಲಾಗುವುದು. [12]

ಈ ರೀತಿ ಅಭಿಜಾತ ಪರಂಪರೆಗೆ ಒಳಪಟ್ಟ ಭಾಷೆಗಳ ಪೈಕಿ ತಮಿಳು ಮತ್ತು ತೆಲುಗು ಭಾಷೆಗಳು ಉನ್ನತ ಅಧ್ಯಯನ ಕೇಂದ್ರ ರಚಿಸಿಕೊಂಡು ಕೇಂದ್ರದಿಂದ ಹಲವಾರು ಬಾರಿ ಅನುದಾನಗಳನ್ನು ಪಡೆದು ಭಾಷಾ ಕಾರ್ಯತತ್ಪರತೆಯಲ್ಲಿ ಮುಂಚೂಣಿ ಸಾಧಿಸಿವೆ. ಈ ಬಗೆಯಾಗಿ ಸಂವೃದ್ಧ ಸಾಹಿತ್ಯ ಸಂಸ್ಕೃತಿಯನ್ನು ಒಳಗೊಂಡ ಕನ್ನಡ ಭಾಷೆಯು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕಾಗಿ ಶ್ರೇಷ್ಠ ವಿದ್ವಾಂಸರಾದ ಡಾ.ಎಂ.ಚಿದಾನಂದಮೂರ್ತಿ ಮತ್ತು ಪ್ರೊ.ಎಲ್. ಶೇಷಗಿರಿರಾವ್ ಅವರುಗಳು ಕನ್ನಡ ಭಾಷೆಯ ಇತಿಹಾಸ ಸಂಪ್ರದಾಯ ಮತ್ತು ಶಾಸ್ತ್ರೀಯ ಸ್ಥಾನಮಾನವನ್ನು ಪಡೆಯುವ ಶಕ್ತಿಯ ಬಗ್ಗೆ ಎಲ್ಲಾ ಸಂಬಂಧಿತ ಮತ್ತು ಅಧಿಕೃತ ಮಾಹಿತಿಯನ್ನು ಸಂಗ್ರಹಿಸಿ ಮತ್ತು ಸಿದ್ಧಪಡಿಸಿ ಕನ್ನಡ ಶಾಸ್ತ್ರೀಯ ಸ್ಥಾನಮಾನಕ್ಕೆ ಮುನ್ನುಡಿ ಬರೆದರು. ತದನಂತರ 2008ರಿಂದ ಸತತ ಏಳು ವರ್ಷಗಳ ಸುದೀರ್ಘ ಆಗ್ರಹಿಸುವಿಕೆಯಿಂದಾಗಿ 2015ರಲ್ಲಿ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಅಧೀನದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರವು ಕಾರ್ಯವನ್ನು ಆರಂಭಿಸಲು ಚಾಲನೆ ಪಡೆಯಿತು. 

ಈ ನಡುವೆ ಹಲವರು ಮುಂಚೂಣಿ ಕನ್ನಡಪರ ಹೋರಾಟಗಾರರು ಮತ್ತು ಸಾಹಿತಿಗಳು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಭಾರತೀಯ ಭಾಷಾ ಸಂಸ್ಥಾನದ ಅಧೀನದಲ್ಲಿ ಕಾರ್ಯನಿರ್ವಹಿಸುವುದು ಕ್ಷೋಭೆಯಲ್ಲ ಎಂದು ಮನಗಂಡು ಅದರ ಸ್ವಾಯತ್ತತೆಗೆ ಬಯಸಿ ಆಂದೋಲನ ಕೈಗೊಂಡರು. ಈ ಆಂದೋಲನಕ್ಕೆ ವಿರುದ್ಧವಾಗಿ ಶಾಸ್ತ್ರೀಯ ಕನ್ನಡ ಉನ್ನತ ಅಧ್ಯಯನ ಕೇಂದ್ರವು ಸ್ವಾಯತ್ತತೆಗೊಳ್ಳಬಾರದೆಂದು ಭಾರತೀಯ ಭಾಷಾ ಸಂಸ್ಥಾನದ ಪ್ರಭಾರ ನಿರ್ದೇಶಕರಾಗಿದ್ದ ಪ್ರೊ. ಡಿ. ಜಿ ರಾವ್ ಅವರು ಕೇಂದ್ರ ಸರ್ಕಾರಕ್ಕೆ “ಶಾಸ್ತ್ರೀಯ ಕನ್ನಡವು ಸ್ವಾಯತ್ತತೆ ಪಡೆಯುವಷ್ಟು ಬೆಳವಣಿಗೆ ಕಂಡಿಲ್ಲ” ಎಂದು ಪತ್ರ ಬರೆದು ಸ್ವಾಯತ್ತತೆಯ ಹಿನ್ನಡೆಗೆ ಕಾರಣರಾಗಿದ್ದರು. ಈ ಕುತಂತ್ರದ ಹೇಳಿಕೆಯ ಕುರಿತು ಒಮ್ಮತವಾಗಿ ಪ್ರತಿಭಟಿಸಿ 2018ರಲ್ಲಿ ಭಾರತೀಯ ಭಾಷಾ ಸಂಸ್ಥಾನದ ಅಧೀನದಿಂದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರವನ್ನು ಸ್ವತಂತ್ರಗೊಳಿಸಿ ಮೈಸೂರಿನ ಸರಸ್ವತಿಪುರಂನಲ್ಲಿರುವ ವಿಶ್ವ ವಿದ್ಯಾನಿಲಯಕ್ಕೆ ಸೇರಿದ ಕಟ್ಟಡದಲ್ಲಿ ಸ್ಥಳಾವಕಾಶ ಕಲ್ಪಿಸಲಾಯಿತು‌.

ಈ ರೀತಿ ಸ್ವತಂತ್ರಗೊಂಡ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಆಗಿನ ರಾಜ್ಯ ಸರ್ಕಾರ ಬೆಂಗಳೂರಿಗೆ ವರ್ಗಾಯಿಸುವುದಕ್ಕೆ ತೀರ್ಮಾನಿಸಿತ್ತು. ಈ ತೀರ್ಮಾನದ ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಸಿ. ಟಿ. ರವಿ ಅವರು ತಡೆವೊಡ್ಡಿ ಮೈಸೂರಿನ ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ಚಾಮುಂಡಿ ಬೆಟ್ಟದ ತಪ್ಪಲಿನ 4ಎಕರೆ ಜಾಗವನ್ನು ಒದಗಿಸಿ ಮೈಸೂರಿನಲ್ಲೇ ಅಧ್ಯಯನ ಕೇಂದ್ರವು ಉಳಿಯುವಂತೆ ಮಾಡಲಾಯಿತು. ತದನಂತರ ಆ ಸ್ಥಳ ಹೊರವಲಯಕ್ಕಾಯಿತೆಂದು ನಿರ್ಧರಿಸಿ ಮೈಸೂರು ವಿಶ್ವವಿದ್ಯಾನಿಲಯದೊಂದಿಗೆ ಚರ್ಚಿಸಿ ಸಮ್ಮತಿ ಪಡೆದು ಸ್ನಾತಕೋತ್ತರ ವಿದ್ಯಾರ್ಥಿ ನಿಲಯದ ಹಿಂಭಾಗದಲ್ಲಿ 4 ಎಕರೆ 2 ಗುಂಟೆ ಜಾಗವನ್ನು ಮೀಸಲಿರಿಸಲಾಯಿತು.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರದ ಸ್ಥಾಪನೆ, ಸ್ವಾಯತ್ತತೆಗೆ ಇಷ್ಟು ವರ್ಷಗಳ ಕಾಲ ಈ ಪರಿಯಾದ ಅಡ್ಡಿಗಳ ವಿರುದ್ಧ ಯಶಸ್ಸು ಕಂಡ ನಂತರವೂ  ಸ್ವಂತ ಕಟ್ಟಡವೊಂದು ನಿರ್ಮಾಣವಾಗಿಲ್ಲ ಎಂಬುದೊಂದು ಕೊರಗಾಗಿದೆ. 

ಈ ಹಿನ್ನಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲ್ ಕುಮಾರ್ ಮತ್ತು ಸಂಸದರಾದ ಪ್ರತಾಪ್ ಸಿಂಹ ಅವರು ಹೊಸ ಕಟ್ಟಡ ನಿರ್ಮಾಣ ಈ ಸದ್ಯಕ್ಕೆ ದುಬಾರಿ ಮತ್ತು ತಡೆಯಾಗಬಹುದೆಂದೂ ಹಾಗೂ ಅಲ್ಲಿವರೆಗೂ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಕಾರ್ಯವೈಖರಿಗಳು ಈ ಹಿಂದೆ ನಾನಾ ಕಾರಣಗಳಿಂದ ಕುಂಠಿತವಾದಂತೆ ಈಗಲೂ ಆಗಬಹುದೆಂದು ಕಾರಣ ತಿಳಿಸಿ ಮಾನಸ ಗಂಗೋತ್ರಿಯ ಶಿಥಿಲವಾಗಿರುವ ಜಯಲಕ್ಷ್ಮೀ ವಿಲಾಸ ಅರಮನೆಯನ್ನು ದುರಸ್ತಿ ಮಾಡಿಕೊಂಡು ಕಟ್ಟಡ ಬಳಕೆ ಮಾಡಿಕೊಳ್ಳುವ ಬಗೆಯಾಗಿ ನಿರ್ಧರಿಸಿ 27.5 ಕೋಟಿಯ ಅನುದಾನವನ್ನೂ ಸಹ ಸಿದ್ಧಪಡಿಸಿಕೊಂಡು ಮೈಸೂರು ವಿಶ್ವವಿದ್ಯಾನಿಲಯವನ್ನು ಓಲೈಸುವ ಪ್ರಯತ್ನದಲ್ಲಿದ್ದಾರೆ.

ಆದರೆ ವಿಶ್ವವಿದ್ಯಾನಿಲಯದ ಕುಲಸಚಿವೆ ಶೈಲಜಾ ಅವರು ಈಗಾಗಲೇ ಜಯಲಕ್ಷ್ಮೀ ವಿಲಾಸ ಅರಮನೆಯಲ್ಲಿ ಜಾನಪದ ವಸ್ತು ಸಂಗ್ರಹಾಲಯವಿದ್ದು ಅದರ ಸಂರಕ್ಷಣೆಗಾಗಿ ಡೆಕ್ಕನ್ ಹೆರಿಟೇಜ್ ನಿಂದ ಅನುದಾನವನ್ನು ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ ಮತ್ತು ಸಿಂಡಿಕೇಟ್ ನಲ್ಲಿ ಈ ವಿಷಯವಾಗಿ ಚರ್ಚಿಸುವಾಗ ಕಾನೂನು ಸಲಹೆಯನ್ನು ಪಡೆದಿಲ್ಲ ಹಾಗಾಗಿ ಕಟ್ಟಡವನ್ನು ಇತರ ಉಪಯೋಗಗಳಿಗೆ ಅವಕಾಶ ಕೊಡದೆ ಜಾನಪದ ವಸ್ತು ಸಂಗ್ರಹಾಲಯಕ್ಕೆ ಮೀಸಲಿಡಲಾಗಿದೆ ಎಂದು ಸೂಕ್ತ ಕಾರಣವನ್ನು ನೀಡಿ ಒಳ್ಳೆಯ ರೀತಿಯಲ್ಲೇ ತಡೆ ಒಡ್ಡಿದ್ದಾರೆ. ಈ ವಿಷಯವನ್ನು ಸಚಿವರಾದ ಸುನೀಲ್ ಕುಮಾರ್ ಮತ್ತು ಸಂಸದರಾದ ಪ್ರತಾಪ್ ಸಿಂಹ ಅವರು ಗಮನವಾಗಿ ಪರಿಶೀಲಿಸಿ ಜಯಲಕ್ಷ್ಮೀ ವಿಲಾಸ ಅರಮನೆಯಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರವನ್ನು ನೆಲೆಗೊಳಿಸುವ ಯೋಜನೆಯನ್ನು ಕೈ ಬಿಡುವುದು ಒಳಿತು. ಅದಕ್ಕೆಂದೇ ಮಾನಸ ಗಂಗೋತ್ರಿಯಲ್ಲಿ ಬೇರೆ ಕಟ್ಟಡಗಳಿವೆ ಮತ್ತು ಜಾಗವಿದೆ ಅದನ್ನು ಒಳ್ಳೆಯ ರೀತಿಯಲ್ಲಿ ಯೋಜಿಸಿಕೊಳ್ಳುವುದು ಸೂಕ್ತವೆಂದು ಕನ್ನಡ ವಿದ್ವಾಂಸರ, ಸಾಹಿತಿಗಳ, ಕನ್ನಡ ಹೋರಾಟಗಾರರ ಅಭಿಪ್ರಾಯ.

ಸದ್ಯಕ್ಕೆ ಸ್ವಂತ ಕಟ್ಟಡದ ಸಮಸ್ಯೆಯಲ್ಲಿರುವ ಶಾಸ್ತ್ರೀಯ ಕನ್ನಡ ಉನ್ನತ ಅಧ್ಯಯನ ಕೇಂದ್ರ ವಿಶ್ವವಿದ್ಯಾನಿಲಯದ ನ್ಯಾಷನಲ್ ಹಿಸ್ಟರಿ ಕಟ್ಟಡದಲ್ಲಿ ತನ್ನ ಕಾರ್ಯ ಕಲಾಪಗಳನ್ನು ಮುಂದುವರೆಸಿಕೊಂಡು ಬರುತ್ತಿದೆ‌. ಪ್ರಸ್ತುತ ಇದರ ಗೌರವ ನಿರ್ದೇಶಕರಾಗಿ ಪ್ರೊ. ಎನ್ ಎಮ್ ನೀಲಗಿರಿ ತಳವಾರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. 

ಶಾಸ್ತ್ರೀಯ ಕನ್ನಡ ಉನ್ನತ ಅಧ್ಯಯನ ಕೇಂದ್ರದ ಶಾಶ್ವತ ಸ್ಥಾಪನೆಗೆ ಏಕಿಷ್ಟು ಮುತುವರ್ಜಿ ಮತ್ತು ಅದರ ಉಪಯೋಗವೆಂದರೆ; ಕನ್ನಡ ಭಾಷೆಯನ್ನು ಸಂಶೋಧನೆಗೆ ಒಡ್ಡುವುದಕ್ಕೆ, ಕನ್ನಡ ಭಾಷೆಯನ್ನು ಆಮೂಲಾಗ್ರವಾಗಿ ಅಭಿವೃದ್ಧಿಗೊಳಿಸುವುದಕ್ಕೆ, ಕನ್ನಡ ಭಾಷೆಯನ್ನು ಮನೆಮನೆಗೆ ತಲುಪಿಸುವುದಕ್ಕೆ, ಕನ್ನಡ ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುವುದಕ್ಕೆ, ʻಕನ್ನಡಂಗಳʼ ಮಹತ್ತನ್ನು ಜಾಗತೀಕರಣಗೊಳಿಸುವುದಕ್ಕೆ, ಜಗತ್ತನ್ನು ಕನ್ನಡದ ಮುಷ್ಟಿಯೊಳಕ್ಕೆ ತಂದು ಜೀರ್ಣಿಸುವುದಕ್ಕೆ, ಕನ್ನಡಕ್ಕೆಂದೇ ಸ್ವತಂತ್ರ ಸಂಸ್ಥೆ ರೂಪಿಸುವುದಕ್ಕೆ ಶಾಸ್ತ್ರೀಯ ಸ್ಥಾನಮಾನದ ಬಾಹುಗಳು ಚಾಚಲ್ಪಡಬೇಕು. ಆಗ ಮಾತ್ರವೇ ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಕನ್ನಡ ಜಾಗತಿಕ ಮಟ್ಟದಲ್ಲಿ ಎತ್ತರದ ಸ್ಥಾನ ಕಂಡುಕೊಳ್ಳುವುದಕ್ಕೆ ಸಾಧ್ಯ. ದೇಶ ವಿದೇಶಗಳಲ್ಲಿ ಕನ್ನಡ ಅಧ್ಯಯನ ಕೇಂದ್ರಗಳು ತೆರೆದುಕೊಳ್ಳುವುದಕ್ಕೆ ಸಾಧ್ಯ. ಇತರ ಭಾಷೆಗಳ ನಡುವಿನಿಂದ ಕನ್ನಡ ತಲೆಯೆತ್ತಿ ನಿಲ್ಲುವುದಕ್ಕೆ ಸಾಧ್ಯ.

ಕೇಂದ್ರ ಸರ್ಕಾರ ತಮಿಳು, ತೆಲುಗುಗಳಂತೆಯೇ ಕನ್ನಡಕ್ಕೂ ಶಾಸ್ತ್ರೀಯ ಸ್ಥಾನಮಾನ ನೀಡಿರುವಾಗ ಅದು ಪ್ರಾಯೋಗಿಕ ಔನ್ನತ್ಯ ಸಾಧಿಸುವಂತಾಗಬೇಕು ಎಂಬ ಇಚ್ಛಾಶಕ್ತಿಯನ್ನು ನಾವು ಕನ್ನಡಿಗರು ತೋರಿಸಬೇಕು. ನಾವೆಲ್ಲಿ ಎಡವಿದ್ದೇವೆ? ತಮಿಳರಿಗಿರುವ ಬದ್ಧತೆ ಕನ್ನಡಿಗರಿಗೆ ಇಲ್ಲವೆ? ನಮ್ಮ ಸಾಹಿತಿಗಳು, ನಮ್ಮ ಕಲಾವಿದರು, ನಮ್ಮ ಸರ್ಕಾರ ನಿಜವಾಗಿ ಎದ್ದೇಳಬೇಕಾಗಿರುವುದು ಇಂಥ ಸಂದರ್ಭಗಳಲ್ಲಿ. ಕೈಗೆ ಬಂದರೂ ಬಾಯಿಗೆ ಬರಲಿಲ್ಲವೆಂಬಂತಾದುದು ಕನ್ನಡಿಗರ ಪಾಲಿಗೆ ದುರಾದೃಷ್ಟವೇ ಸರಿ. ʻಶಾಸ್ತ್ರೀಯ ಕನ್ನಡ ಅತ್ಯುನ್ನತ ಸಂಸ್ಥೆʼ ಎಂಬುದು ಬರಿಯ ಹೆಸರಾಗಬಾರದು. ಮೊದಲನೆಯದಾಗಿ ಸ್ವಾಯತ್ತತೆಯ ಹಾದಿಯಲ್ಲಿ ತನ್ನ ಉದ್ದೇಶಿತಗಳನ್ನು ಬಹುಬೇಗ ಈಡೇರಿಸಿಕೊಳ್ಳಬೇಕು. ಇತರ ಶಾಸ್ತ್ರೀಯ ಭಾಷೆಗಳಿಗೆ ಸಿಗುವ ಅನುದಾನ ಕನ್ನಡಕ್ಕೂ ದೊರಕಬೇಕು. ಸ್ವಂತ ಕಟ್ಟಡದಲ್ಲಿ ಸ್ವತಂತ್ರವಾಗಿ ಕೆಲಸಮಾಡುವಂತಾಗಬೇಕು. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ವಿಶ್ವಕೋಶ ವಿಭಾಗದ ಗೌರವ ಸಂಪಾದಕರಾದ ಡಾ. ಹಾ. ತಿ ಕೃಷ್ಣೇಗೌಡ ಅವರು ಮನತಾಳಿದಂತೆ  “ಶಾಸ್ತ್ರೀಯ ಕನ್ನಡ ಉನ್ನತ ಅಧ್ಯಯನ ಕೇಂದ್ರ ಕನ್ನಡದ ಕಹಳೆಯಾಗಬೇಕು.”

ಮಂಜುನಾಥ ಬಿ.ಆರ್(ಚಿ.ಮ.ಬಿ.ಆರ್)

ಯುವಸಾಹಿತಿ, ಎಚ್.ಡಿ ಕೋಟೆ ಮೈಸೂರು

ದೂರವಾಣಿ ಸಂಖ್ಯೆ :- 8884684726

Gmail I’d:- manjunathabr709@gmail.com