*ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)*
೧೨ ನೇ ಶತಮಾನದ ಸಾಮಾಜಿಕ ಕ್ರಾಂತಿಯಲ್ಲಿ ಮನುಷ್ಯತ್ವದ ಅಸ್ಥಿತ್ವ ಸ್ಥಾಪಿಸುವುದು ಪ್ರಧಾನ ಗುರಿಯಾಗಿತ್ತು.ಇದರ ನೇತಾರರು ಬಸವಣ್ಣನವರು.ಇವರ ಅನುಯಾಯಿಗಳು ಸಮಾಜದ ವಿವಿಧ ಸ್ತರಗಳಲ್ಲಿ ಬದುಕುತ್ತಿದ್ದವರು.ಅನುಭವ ಮಂಟಪ ಮೇಲು ಕೀಲುಗಳಿಂದ ಮಡಿ ಮೈಲಿಗೆಗಳಿಂದ ಮುಕ್ತವಾದ ವಿಶ್ವದ ಮೊದಲ ದೇವಸ್ಥಾನವಾಗಿದೆ.ಅಲ್ಲಿ ಜನ ಸಾಮಾನ್ಯರ ವಚನಗಳೇ ಮಂತ್ರಗಳು.ಅನುಭವ ಮಂಟಪದ ಸಂಸತ್ತಿಗೆ ಯಾವುದೇ ಚುನಾವಣೆ ಇರಲಿಲ್ಲ.ಪ್ರಧಾನ ಹುದ್ದೆಯಂತಿರಲಿಲ್ಲ, ಕಠಿಣಬದ್ಧ ನಿಯಮಗಳಿರಲಿಲ್ಲ,ಯಾವುದೇ ಸಂಬಳವಿಲ್ಲ ಬದಲಾಗಿ ಗೌರವಗಳೇ ಸಮ ಪ್ರಧಾನವಾದ ಹುದ್ದೆಗಳು ಪ್ರೀತಿ ವಿಶ್ವಾಸ ಹೊಂದಾಣಿಕೆಯೇ ಅಲ್ಲಿನ ಸರಳ ಸುಲಭ ನಿಯಮಗಳು.ಕಾಯಕ ಪ್ರೀತಿಯೇ, ಅನ್ನ ದಾಸೋಹವೇ ಸಂಬಳವು.ವಚನ ಕಾಲದಲ್ಲಿ ಮೊದಲು ಕಿತ್ತದ್ದು ಜಾತಿ ಎಂಬ ವಿಷ ಬೀಜವನ್ನು ಆನಂತರ ಬಿತ್ತನೆ ಮಾಡಿದ್ದು ಕಾಯಕ ದುಡಿಮೆಯ ಬಿತ್ತನೆಯನ್ನು.ಕಾಯಕ ಧರ್ಮವು ಹೆಮ್ಮರವಾಗಿ ಬೆಳೆದು  ಆ ಮರದ ನೆರಳಿನಲ್ಲಿ ಅನುಭವ ಮಂಟಪ ಸ್ಥಾಪಿತವಾಗಿ ಹಲವರು ನೆಲೆ ನಿಂತರು.ಚಮ್ಮಾರ ಚಪ್ಪಲಿ ತಯಾರಿಸುವ,ಅಗಸ ಬಟ್ಟೆ ಸೆಣೆಯುವ ,ಕುಂಬಾರ ಮಡಿಕೆ ತಯಾರಿಸುವ ,ಕೆಲಸವನ್ನೇ ಮಾಡಿ, ಇನ್ನೂ ಅನೇಕರು ಅವರವರ ಕಾಯಕದಲ್ಲೇ ನಿರತರಾಗಿದ್ದರೂ ಎಲ್ಲರೂ ಸಮಾನರೆಂಬ ಮನಸ್ಥಿತಿಯನ್ನು ಹೊಂದಿದರು.ಒಬ್ಬರನೊಬ್ಬರು ಪ್ರೀತಿಸಿದರು, ಗೌರವಿಸಿದರು‌.ಇಷ್ಟೇಲ್ಲಾ ಮಹತ್ವ ಇರುವ ವಚನಧರ್ಮವು ನನಗೆ ಈ ಕಾಲದ ಜನ ಸಾಮಾನ್ಯರಲ್ಲಿ ಗುರುತಾಗಿದ್ದು ಹೀಗೆ.ತಿಂಗಳ ಸಂಬಳದ ಜೊತೆಗೆ ಗಿಂಬಳವ ಜೇಬಿಗೆ ಇಳಿಸಿದರೂ ಕಾಯಕ ಕಾರ್ಯದಲ್ಲಿ ನಿಷ್ಠೆಯನ್ನು ತ್ಯಜಿಸಿದ್ದಾರೆ.
ಆದರೆ ರಸ್ತೆ ಶುಚಿಗೊಳಿಸುವ ಪೌರ ಕಾರ್ಮಿಕರು ಯಾವುದೇ ಹಿಂಜರಿಕೆಗಳನ್ನು ಇಟ್ಟುಕೊಳ್ಳದೇ ತಾತ್ಸಾರಗಳನ್ನು ಹೊಂದದೇ ನಾವು ಬೆಳಗ್ಗಿನ ಸಮಯ ಎಚ್ಚರಗೊಳ್ಳುವ ಮುನ್ನವೇ ಮನೆಮುಂದೆ ಬಂದು ನಿಂತಿರುತ್ತಾರೆ.ವಿಜಲ್ ಹೊಡೆಯುತ್ತ ಹಸಿಕಸ ಹೊರಲು ಸಿದ್ಧರಾಗಿರುತ್ತಾರೆ.ರಸ್ತೆ ಶುಚಿಯಲ್ಲಿ ಮಳೆ ಎನ್ನದೇ ಚಳಿ ಎನ್ನದೇ ಬಿಸಿಲೆನ್ನದೇ ಕಾಯಕದಲ್ಲಿ ನಿರತರಾಗಿದ್ದಾರೆ.ಈ ಕರೋನಾ ಮಹಾಮಾರಿ ಸಂಧರ್ಭದಲ್ಲೂ ಜೀವಕ್ಕೆ ಎದುರಾಗುವ ಅಪಾಯವನ್ನು ಲೆಕ್ಕಿಸದೇ ಕಾಯಕದಲ್ಲಿ ತೊಡಗಿದ್ದಾರೆ.ಒಂದು ಚೆನ್ನಾಗಿರುವ ವಸ್ತುವನ್ನು ಮುಟ್ಟಿದರೂ ಸಹ ಆಗಾಗ ಕೈತೊಳೆಯಬೇಕು ಸ್ನಾನ ಮಾಡಬೇಕು ಶುಚಿ ಬಿಸಿ ಆಹಾರ ಸೇವಿಸಬೇಕು ಮನೆಯಿಂದ ಹೊರಗಡೆ ಬರಬಾರದು ಎನ್ನುವ ಸಂಧರ್ಭದಲ್ಲೂ ನಮ್ಮ ನಿಮ್ಮೆಲ್ಲರ ಅಸಹ್ಯಗಳನ್ನು ಪ್ರತಿದಿನ ಮನೆಬಳಿ ಬಂದು ಹೊತ್ತು ಹೋಗಿದ್ದಾರೆ.
ನಾವು ನೀವು ಇರುವ ವಾಸಸ್ಥಳಗಳನ್ನು ಶುಚಿಯಾಗಿ ಇಟ್ಟು ನಮ್ಮ ಆರೋಗ್ಯಕ್ಕಾಗಿ ಶ್ರಮಿಸಿದ್ದಾರೆ.ಇವರ ಕಾಯಕ ನಿಷ್ಠೆಗೆ ಸಮಾಜಸೇವೆಗೆ ಮನೆಯಲ್ಲಿ ಬೆಚ್ಚಗೆ ಇರುವವರಿಗಿಂತಲೂ ಚೆನ್ನಾಗಿಯೇ ಇವರಿದ್ದಾರೆ.ದಿನನಿತ್ಯ ಬ್ಯಾಕ್ಟೀರಿಯಾಗಳ ವಿರುದ್ಧ ಸೆಣೆಸಾಡುತ್ತಲೇ ನಮಗಿಂತ ಹೆಚ್ಚು ಆರೋಗ್ಯವಂತರಾಗಿದ್ದಾರೆ.ಈ ಪೌರ ಕಾರ್ಮಿಕರಲ್ಲಿ ಅವರಿಗೆಯೇ ತಿಳಿಯದ ಹಾಗೆ ವಚನ ಧರ್ಮ ಸುಳಿದಾಡುತ್ತಿರುವುದು ಸಮಾಜದ ಪೋಷಣೆಯಲ್ಲಿ ಅವರು ನಿರತರಾಗಿರುವುದು ಒಂದು ಅದ್ಭುತ ಅವಿಸ್ಮರಣೀಯ.ಆಸ್ಪತ್ರೆಗಳಲ್ಲಿ ರೋಗಿಗಳು ಧರಿಸಿದ ಬಟ್ಟೆಗಳನ್ನು ,ಹೊದ್ದುಕೊಂಡ ರಗ್ಗುಗಳನ್ನು ಮಡಿವಾಳರು ತಂದು ಶುಚಿಗೊಳಿಸಿ ಹಲವು ರೋಗಿಗಳ ಶುಚಿಯಾದ ಬೆಚ್ಚನೆಯ ಹೊದಿಕೆಗೆ ನೆರವಾಗುತ್ತಿದ್ದಾರೆ.ಆರೋಗ್ಯ ಕಾಪಾಡಿಕೊಂಡು ತಮ್ಮ  ಮನೆಗಳಿಗೆ ರೋಗಿಗಳು ಆರೋಗ್ಯವಂತರಾಗಿ ತೆರಳಲು ಅನುವುಮಾಡಿ ಕೊಡುತ್ತಿದ್ದಾರೆ‌.ಕರೋನಾ ಸಂಧರ್ಭದಲ್ಲಿ ವ್ಯಕ್ತಿಗಳನ್ನು ಮುಟ್ಟಬಾರದು ಅವರಿಂದ ದೂರ ಇರಬೇಕು  ಅವರು ಬಳಸಿದ ವಸ್ತುಗಳನ್ನು ಸುಡಬೇಕು ಎನ್ನುವ ಸಂಧರ್ಭದಲ್ಲಿ.ಹಾಗೂ ಆಸ್ಪತ್ರೆಗಳಲ್ಲಿ ಬಳಸಿದ ಕರೋನಾ ಇನ್ನಿತರ ಅಂಟುರೋಗಿಗಳ ಮತ್ತು ಎಲ್ಲ ತೆರನಾದ ರೋಗಿಗಳಾ ಹಾಗೂ ಖಾಯಿಲೆ ಬಿದ್ದವರ ಶುಶ್ರೂಷೆ ಮಾಡಿದ  ವೈದ್ಯರ ಬಟ್ಟೆಗಳನ್ನು ಯಾವುದೇ ಅಂಜಿಕೆ ಇಲ್ಲದೆ ಶುಚಿಗೊಳಿಸುವ ಅವರ ಕಾಯಕ ಧರ್ಮಕ್ಕೆ ಕರೋನಾವೇ ಹೆದರಿ ನಿಂತಿದೆ.
ಈ ಸಂಧರ್ಭದಲ್ಲಿ ಅವರು ಬಟ್ಟೆಗಳನ್ನು ಮಾತ್ರ ಶುಚಿಗೊಳಿಸಿಲ್ಲ ಕರೋನಾ ವೈರಸ್ ಅನ್ನೂ ಕೂಡ ಸಾಯಿಸಿದ್ದಾರೆ ಎಂದರೆ ಪ್ರಮಾದವೇನಿಲ್ಲ.ಸಮಾಜವನ್ನು ಉಳಿಸುವುದು ವಚನಧರ್ಮ, ಕಾಯಕ ಧರ್ಮ ಅದನ್ನು ಮೇಲು ಕೀಳುಗಳಿಗೆ ಭಯಭೀತಗಳಿಗೆ ಅಂಟಿಸದೆ ಮಡಿವಾಳರು ಸಮಾಜಕ್ಕೆ ವಚನಕಾರರಾಗಿದ್ದಾರೆ.ವಚನಧರ್ಮವನ್ನು ಪಾಲಿಸಿದ್ದಾರೆ.ಈ ಕರೋನಾ ಸಂಧರ್ಭಕ್ಕೂ ಹೊರಾತಾಗಿಯೇ ವಚನ ಧರ್ಮದವರನ್ನು ನೋಡುವುದಾದರೆ ಚಮ್ಮಾರಕರು ನಗರದ ಸ್ಥಳಗಳಲ್ಲಿ ಅಥವಾ ಜನನಿಬಿಡ ಸ್ಥಳಗಳಲ್ಲಿ ಚರ್ಮಕಾರಕ ಕುಟೀರಗಳನ್ನು ಇಟ್ಟುಕೊಂಡು ಜನ ಸಾಮಾನ್ಯರ ಕಾಲುಗಳನ್ನೇ ಗಮನಿಸುತ್ತಾ ಹೆಮ್ಮೆಯಿಂದ ದೈರ್ಯದಿಂದ ಬದುಕುತ್ತಿದ್ದಾರೆ.ತಮ್ಮ ಕಾಯಕದ ಮೇಲೆ ಇನ್ನೂ ಯಾವುದೇ ತಾತ್ಸಾರವನ್ನು ಹೊಂದಿಲ್ಲ.ಈ ಆಧುನಿಕ ಜಗತ್ತಿನಲ್ಲಿ ಜನರ ಜೀವನಶೈಲಿಯು ಬದಲಾದಂತೆ ದುಡಿಮೆಯ ವರ್ಗಗಳು ಹಲವಾರು ಸೃಷ್ಟಿಯಾಗಿವೆ.ಹಾಗೂ ಹಲವಾರು ಜನರು ತಮ್ಮ ಮೂಲ ಕುಲ ಕಸುಬಿನ ಮೇಲೆ ಅಸಹ್ಯತಾಳಿ ಕೀಳಿರಿಮೆ ಹೊಂದಿ ಕುಲಕಸುಬಿನ ಹೊರತಾಗಿ ಉದ್ದೇಶಪೂರ್ವಕವಾಗಿಯೇ ಬದುಕಲು ಹೋಗುವಾಗ.
ಈ ಚಮ್ಮಾರಕರು ಹಳೆ ಚಪ್ಪಲಿಗಳ ಹೊಲಿಯುತ ತಮ್ಮ ಬದುಕನ್ನು ಆದಾಯವಿಲ್ಲದ ಕಾಯಕದಲ್ಲಿ ಹೊಲಿದುಕೊಂಡು ತೃಪ್ತಿ ಭಾವದಲ್ಲಿ ಹೋಗುತ್ತಿದ್ದಾರೆ.ನಮ್ಮ ಪಾದಗಳಿಗೆ ಚಪ್ಪಲಿಗಳನ್ನು ಕೊಟ್ಟ ದೊಡ್ಡ ದೊಡ್ಡ ಕಂಪನಿಗಳು ಮಾಡದ ಕೆಲಸವನ್ನು ದೊಡ್ಡದಾಗಿ ಭಾವಿಸಿ ಈ ಚಿಕ್ಕ ಚಿಕ್ಕ ಚರ್ಮಕುಟೀರಗಳ ವಚನಧರ್ಮದವರು ಮಾಡುತ್ತಿದ್ದಾರೆ.ಬಸವಣ್ಣನವರ ಕಾಯಕ ಧರ್ಮವನ್ನು ಜಗತ್ತಿಗೆ ಸಾರಿ ನಿಂತಿದ್ದಾರೆ.ರಸ್ತೆ ಬದಿಯ ತಳ್ಳುಗಾಡಿಯ ವ್ಯಾಪಾರಿಗಳು ನಮ್ಮ ಮನೆ ಮನೆಗೆ ಹಣ್ಣು ತರಕಾರಿ ಅವಶ್ಯಕ ವಸ್ತುಗಳನ್ನು ತಂದು ನೀಡಿ ಅವರ ಬದುಕಿಗೆ ಅವರು ತೃಪ್ತರು ಎನಿಸಿದ್ದಾರೆ.ಮಡಿಕೆ ಮಾಡುವ ಕುಂಬಾರರು ಅತ್ಯಾಧುನಿಕ ಗೃಹಪಯೋಗಿ ಅಡುಗೆ ಸಲಕರಣೆಗಳು ಬಂದರೂ ಅವರಿನ್ನೂ ಕುಲ ಕಸುಬಿನ ಧರ್ಮವ ಬಿಟ್ಟಿಲ್ಲ‌‌.ತಯಾರಿಸಿದ ಮಡಕೆಗಳು ಹಳೆಯದ್ದಾಗಿ ತೂತಿಡಿದು ಮೂಲೆಯಲ್ಲಿದ್ದರೂ ಮಣ್ಣ ತಂದು ಹದಮಾಡುವುದಾ ಬಿಟ್ಟಿಲ್ಲ‌.ಕುಕ್ಕೆ ಎಣಿಯುವ ಏಣಿ ತಯಾರಿಸುವ ಕೊರಮರು, ಕೊರವರು ಇನ್ನೂ ತಮ್ಮ ಜೀವನೋಪಾಯಕ್ಕಾಗಿ ಕೀಳಿರಿಮೆಗೆ ಕುಗ್ಗದೆ ಕುಲ ಕಸುಬಿಗೆ ಶರಣಾಗಿ ಶರಣರೆನಿಸಿ ಬದುಕಿನ ಏಣಿಯನ್ನು ಹತ್ತುತ್ತಿದ್ದಾರೆ.ಕುಕ್ಕೆಯ ಬುತ್ತಿಯನ್ನು ಹೊತ್ತುತ್ತಿದ್ದಾರೆ.ಕುಕ್ಕೆ ಏಣಿಯ ಮಾರಿ ಜೀವನ ಸಾಗಿಸುತ್ತಿದ್ದಾರೆ.ಹೀಗೆ ಹಲವು ಕಾಯಕ ಧರ್ಮವು ಇನ್ನೂ ವಚನ ಶ್ರೇಷ್ಠತೆಯನ್ನು ಸಾರಿ ನಿಂತಿವೆ.ಅಸಮಾನತೆಯನ್ನು ಮೈಗಂಟಿಸಿಕೊಳ್ಳದೇ ಮನಸ್ಸಿಗೆ ಮೈಲಿಗೆ ತಂದುಕೊಳ್ಳದೆ ಪ್ರೀತಿ ಮತ್ತು ವಿಶ್ವಾಸ ಪೂರ್ವಕವಾಗಿ ಕಾಯಕಪ್ರಿಯರಾಗಿದ್ದಾರೆ.ಬಸವಣ್ಣನವರನ್ನು ಕಾಯಕದಲ್ಲಿ ಸದಾ ಅರಿವಿದ್ದೋ ಅರಿವಿಲ್ಲದೆಯೋ ನೆನೆಯುತ್ತಿದ್ದಾರೆ.ಈ ೨೧ ನೇ ಶತಮಾನದ ಶರಣರಿಗೆ ಕಾಯಕ ಧರ್ಮದವರಿಗೆ ಸಮಾಜದ ಎಲ್ಲರೂ ಧನ್ಯತೆಯಲ್ಲಿ ಶರಣೆನ್ನಬೇಕು.ನನಗೆ ಪ್ರತಿದಿನ ಈ ಶರಣರು ಎಲ್ಲೆಡೆ ಕಾಣಿಸುತ್ತಿದ್ದಾರೆ ಬಸವಣ್ಣನವರನ್ನು ನೆನೆಸುತ್ತಿದ್ದಾರೆ.ಕಾಯಕ ಪಾಠವನ್ನು ನನಗೆ ತಿಳಿಹೇಳುತ್ತಿದ್ದಾರೆ.ನನಗೆ ಎಲ್ಲಾ ಕೆಲಸಗಳು ಸಮಾನವೆಂದು ಅರಿವು ಮೂಡಿಸುತ್ತಿದ್ದಾರೆ.ನಿಮಗೂ ಈ ಅರಿವು ಮೂಡಿಸುತ್ತಿದ್ದಾರೆ.ನೀವು ಒಮ್ಮೆ ಗಮನಿಸಬೇಕಷ್ಟೇ.
*ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)*

By admin