ಸರಗೂರು ತಾಲೂಕಿನ ಕುಂದೂರು ಗ್ರಾಮದಲ್ಲಿ ಚಿಕ್ಕದೇವಮ್ಮ ಅವರ ರಥೋತ್ಸವ ಸೋಮವಾರ ಚಿಕ್ಕದೇವಮ್ಮನ ಬೆಟ್ಟದ ಕುಂದೂರು ಆರ್ಚಕರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.
ಸರಗೂರು: ತಾಲೂಕಿನ ಕುಂದೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಕುಂದೂರು ಚಿಕ್ಕದೇವಮ್ಮನವರ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ಅಂಗವಾಗಿ ದೇವರ ವಿಗ್ರಹಮೂರ್ತಿಯನ್ನು ನದಿ ಬಳಿದು ಹೋಯ್ದು ಅಮ್ಮನವರ ಮೂರ್ತಿಗೆ ಗಂಗೆ ಪೂಜೆ ಸಲ್ಲಿಸಿ, ವಿವಿಧ ಹೋಮ-ಹವನ ನಡೆಸಿದ ಬಳಿಕ ಚಿಕ್ಕದೇವಮ್ಮನ ಬೆಟ್ಟದ ಕುಂದೂರು ಆರ್ಚಕರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಚಿಕ್ಕದೇವಮ್ಮನಿಗೆ ಹರಕೆ ಹೊತ್ತ ಭಕ್ತರು ಬಾಯಿಬೀಗ- ಹಾಲು ಹರಿವೆ ಸೇವೆ ಮಾಡಿದರು. ಸತ್ತಿಗೆ, ನಂದಿ ಕಂಬ, ಮಂಗಳವಾದ್ಯದೊಂದಿಗೆ ಗ್ರಾಮಕ್ಕೆ ಮೆರವಣಿಗೆ ಮೂಲಕ ಉತ್ಸವ ಮೂರ್ತಿಯನ್ನು ತರಲಾಯಿತು. ನಂತರ ರತೋತ್ಸವದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಭಕ್ತರು ತಮ್ಮ ಹರಕೆ ತಿರಿಸಿ ದೇವರ ಕೃಪೆಗೆ ಪಾತ್ರರಾದರು.
ಕೊರೋನಾ ಹಿನ್ನೆಲೆಯಲ್ಲಿ ರಥೋತ್ಸವ ಎರಡು ವರ್ಷಗಳು ಸ್ಥಗಿತಗೊಂಡಿದ್ದು, ಈ ಬಾರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದೇವರ ಕೃಪೆಗೆ ಪಾತ್ರರಾಗುವ ಭಕ್ತರಿಗೆ ದೇವತೆ ಸಕಲ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ. ಅಲ್ಲದೆ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಲಾಗುವುದು ಎಂದು ಬೆಟ್ಟದ ಪ್ರಧಾನ ಆರ್ಚಕ ಶಿವಕುಮಾರ್ ತಿಳಿಸಿದರು.
ಚಿಕ್ಕದೇವಮ್ಮನ ಬೆಟ್ಟದ ಆರ್ಚಕರಾದ ಕುಂದೂರು ಶಿವಕುಮಾರ್, ವೀರಣ್ಣ, ದೇವಣ್ಣ, ಉಪ್ಪಿ, ಸಿದ್ದಲಿಂಗಸ್ವಾಮಿ, ನಿಂಗರಾಜು, ಮನು ಕುಂದೂರು ಗ್ರಾಮಸ್ಥರು ಹಾಜರಿದ್ದರು.