–
ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ|
ಚಿತ್ತದೊಳು ಬೆಳೆದರಿವು ತರುತಳೆದ ಪುಷ್ಪ||
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ |
ಶಾಸ್ತ್ರಿತನದಿಂದಲ್ಲ- ಮಂಕುತಿಮ್ಮ ||
ಎಷ್ಟು ಓದಿದರೇನಂತೆ ಕೆಲಸ ಸಿಗುತ್ತದೆಯೇ? ಎಷ್ಟು ಓದಿದರೂ ಹೊಲ ಊಳೋದು ತಪ್ಪುತ್ತಾ? ಬಡವರಿಗ್ಯಾಕೆ ಓದೋ ಹುಚ್ಚು, ಕಥೆ, ಕಾದಂಬರಿ, ಕವನಗಳನ್ನು ಓದುವುದರಲ್ಲಿ ಏನಿದೆ ಬದನೇಕಾಯಿ.
ಹೀಗೆಲ್ಲಾ ಲೋಕಾರೂಡಿಯಾಗಿ ಮಾತನಾಡುವುದನ್ನು ನಾವೆಲ್ಲಾ ಕೇಳಿದ್ದೇವೆ. ‘ಓದುವುದು’ ಅಂದರೇನು? ಅದರ ನಿಜವಾದ ಅರ್ಥ ಏನು ಅನ್ನುವುದರ ವಿವೇಚನಾರಹಿತ ಆಲೋಚನೆಗಳು ಹಾಗೂ ಓದಿದವರ ಕೆಲವು ವರ್ತನೆಗಳು ಹೀಗೆಲ್ಲಾ ಸಂಕುಚಿತರನ್ನಾಗಿಸುತ್ತದೆ.
ಇದು ಒಂದು ವರ್ಗವಾದರೆ ಓದುವುದರಿಂದ ನಮ್ಮ ಜ್ಞಾನ ಭಂಡಾರವನ್ನು ವಿಕಾಸವಾಗುತ್ತದೆ. ವ್ಯಕ್ತಿತ್ವ ನಿರ್ಮಾಣವಾಗುತ್ತದೆ, ನಮ್ಮ ಬದುಕಿನ ದಿಕ್ಕನ್ನೇ ಬದಲಿಸುತ್ತದೆ, ಸಮಾಜದಲ್ಲಿ ಸೂಕ್ತ ಮನ್ನಣೆ ದೊರಕುತ್ತದೆ. ಎಂದು ವಾದಿಸುವವರು ಮತ್ತೊಂದು ವರ್ಗ. ಈ ಎರಡೂ ಹೇಳಿಕೆಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ವಾದಿಸುವುದು ನಿರರ್ಥಕ. ಅವರವರ ಜ್ಞಾನ ಮತ್ತು ತಿಳಿವಳಿಕೆಯನ್ನು ಈ ಅಭಿಪ್ರಾಯಗಳು ತಿಳಿಸುತ್ತವೆ.
ಈ ವಿಚಾರದ ಬಗ್ಗೆ ದೃಢವಾದ ವಿವರಣೆಯನ್ನು ನೀಡಿದ್ದು ಖ್ಯಾತ ಇಂಗ್ಲಿಷ್ ಸಾಹಿತಿ ಫ್ರಾನ್ಸಿಸ್ ಬೇಕನ್. ವಕೀಲ, ವಿಜ್ಞಾನಿ, ತತ್ವಜ್ಞಾನಿ, ರಾಜಕಾರಣಿಯಾಗುವುದರ ಜೊತೆಗೆ ಸಾಹಿತಿಯಾಗಿ ಎಲ್ಲ ಸ್ತರಗಳನ್ನು ಮುಟ್ಟಿಬಂದ ಬೆಕನ್ ಓದುವಿಕೆಯ ಸಾಧ್ಯತೆಗಳು ಮತ್ತು ವಿಪರೀತ ಓದಿನ ಪರಿಣಾಮಗಳ ಬಗ್ಗೆ ಅದ್ಭುತ ಮಾತುಗಳನ್ನು ಹೇಳಿದ್ದಾನೆ.
ಬೇಕನ್ ಪ್ರಕಾರ ಓದಿನಿಂದ ಖುಷಿ ಸಿಗುತ್ತದೆ. ಏಕಾಂತ ಮತ್ತು ವಿರಾಮಕ್ಕೊಂದು ಅಪೂರ್ವ ಸಂಗಾತಿಯಾಗುತ್ತದೆ. ಮಾತಿನ ಭಾಷೆಗೊಂದು ಅಲಂಕಾರ ಕೊಟ್ಟು ಇತರರನ್ನು ನಮ್ಮೆಡೆಗೆ ಸೆಳೆಯುವಂತೆ ಮಾಡುತ್ತದೆ. ವ್ಯವಹಾರ ಚಾತುರ್ಯ, ದೃಢ ನಿರ್ಧಾರದಿಂದ ಮುನ್ನಡೆಯಲು ಆತ್ಮಸ್ಥೈರ್ಯ ತುಂಬುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಜೀವನದ ದಾರಿ ಕಂಡುಕೊಳ್ಳಲು ಸಹಕಾರಿ.
ಎಷ್ಟೆಲ್ಲಾ ಅನುಕೂಲಗಳನ್ನು ‘ಓದು’ ಕಲ್ಪಿಸುತ್ತದೆ. ಫ್ರಾನ್ಸಿಸ್ ಬೆಕನ್ ಪ್ರಕಾರ ಓದು ಹದವಾಗಿರಬೇಕು. ಅವನನ್ನು ಅನುಭವಜನ್ಯ ವಿಧಾನ (empiricism)ದ ಜನಕ ಎಂದು ಗುರುತಿಸಲಾಗುತ್ತದೆ. ವಿಪರೀತ ಓದಿನಿಂದ ‘ಓದಿ ಓದಿ ಮರುಳಾದ ಕೂಚು ಭಟ್ಟ’ ಎಂಬಂತಾಗುತ್ತದೆ. ಎಂಬ ಅಭಿಪ್ರಾಯಕ್ಕೆ ಬಂದಿದ್ದಾನೆ.
ಹೌದು ಓದಿಗೆ ವಿಪರೀತ ಸಮಯ ನೀಡುವುದು ಉದಾಸೀನತೆಯನ್ನು ಉಂಟು ಮಾಡುತ್ತದೆ. ಹೆಚ್ಚು ಓದುವುದರಿಂದ ಕೇವಲ ತಾತ್ವಿಕ, ಸೈದ್ಧಾಂತಿಕವಾಗಿ ಯೋಚಿಸುತ್ತಾರೆಯೇ ಹೊರತು ಪ್ರಾಯೋಗಿಕವಾಗಿ ಅಲ್ಲ. ಅದಕ್ಕೇ ಹೇಳೋದು ‘ಓದೋದು ಪುರಾಣ ತಿನ್ನೋದು ಬದನೇಕಾಯಿ’ ಅಂದರೆ ತಿಳಿವಳಿಕೆ ಮತ್ತು ನಡೆವಳಿಕೆ ಎರಡೂ ಬೇರೆ ಬೇರೆಯಾಗಿರುವುದು ಅಂದರ್ಥ.
ಸರ್ವಜ್ಞನ ತ್ರಿಪದಯ ಸಾಲು ‘ಬರೆಯದೇ ಓದುವವನ….’ ಅನ್ನುವುದು ಬಹುಶಃ ‘ಬರಿದೇ ಓದುವವನ’ ಎಂದಿರಬಹುದು. ಅದು ಪ್ರಯೋಜನಕ್ಕೆ ಬಾರದು. ಹೆಚ್ಚು ಓದಿದವರು ಅಗತ್ಯ ಅನಗತ್ಯಗಳ ಕಡೆ ಗಮನ ನೀಡದೆ ಕೇವಲ ಬೌದ್ಧಿಕ ಪಾಂಡಿತ್ಯ ಪ್ರದರ್ಶನಕ್ಕೆ ಮುಂದಾಗುತ್ತಾರೆ. ತಮ್ಮ ಜ್ಞಾನವನ್ನು ಇನ್ನೊಬ್ಬರ ಮುಂದೆ ಪ್ರದರ್ಶಿಸುವುದರಲ್ಲಿಯೇ ಖುಷಿಪಡುತ್ತಾರೆ. ಡಿ.ವಿ.ಜಿ ಯವರ ‘ಸ್ವಸ್ಥಾನ ಪರಿಜ್ಞಾನ’ ದಲ್ಲಿ ವಿಫಲರಾಗುತ್ತಾರೆ. ನಿಜ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವಲ್ಲಿ ಹಿಂದೆ ಬೀಳುತ್ತಾರೆ. ಕೋವಿಡ್ ಮಹಾಮಾರಿ ಜಗತ್ತಿಗೆ ವಕ್ಕರಿಸಿದಾಗ ಲಕ್ಷಾಂತರ ಸಂಬಳ ಪಡೆಯುತ್ತಿದ್ದವರು ಕಂಪೆನಿಗಳು ನಷ್ಟಕ್ಕೆ ಸಿಲುಕಿದಾಗ ದೃತಿಗೆಟ್ಟು ದಿಗ್ಭ್ರಾಂತರಾದರು. ಪ್ರತಿಷ್ಠಿತ ಹುದ್ದೆಗಳಾದ ಐ.ಎ.ಎಸ್, ಕೆ.ಎ.ಎಸ್ ಕೇಡರ್ ನ ಹುದ್ದೆಗಳನ್ನು ಛಲದಿಂದ ಓದಿ ಸಂಪಾದಿಸಿದ್ದ ಎಷ್ಟೋ ಮಂದಿ ಉದ್ಯೋಗದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲಾಗದೆ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗುವ ಘಟನೆಗಳನ್ನು ಮಾಧ್ಯಮಗಳಲ್ಲಿ ಕಾಣುತ್ತಿದ್ದೇವೆ. ರ‍್ಯಾಂಕ್ ನ ಹಿಂದೆ ಬಿದ್ದವರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಆದರೆ ಎಷ್ಟೇ ಸಮಸ್ಯೆಗಳು ಬಂದು ಅಪ್ಪಳಿಸಿದರೂ ಜೀವನವನ್ನು ಗಟ್ಟಿ ಮಾಡಿಕೊಂಡು ದೃಢವಾಗಿ ನಿಂತವರು ನಮ್ಮ ಗ್ರಾಮೀಣ ಜನರು. ಅವರು ವಿಶ್ವವಿದ್ಯಾಲಯ ಕಲಿತವರಲ್ಲ. ಜೀವನ ಕಲಿತವರು. ಅವರ ಅಪಾರ ಅನುಭವಗಳೇ ಅವರ ಪರಿಪಕ್ವತೆಗೆ ಕಾರಣ. ಬದುಕೇ ಅವರ ಉದ್ಗ್ರಂಥ, ಮಹಾಕಾವ್ಯ. ಕಷ್ಟಗಳೇ ಪರೀಕ್ಷೆಗಳು. ಬಂದಿದ್ದೆಲ್ಲವೂ ಅನುಭವವೇ. ಜೀವನ ಪಾಠವೇ….
ಓದು ಜೀವನಾನುಭವ ಆಧಾರಿತ ಜ್ಙಾನವಾಗಿರಬೇಕು. ಓದು ಮತ್ತು ಅನುಭವ ಮಿಕ್ಸ್ ಆಗದಿದ್ದರೆ ಓದಿಗೆ ಅರ್ಥವಿರುವುದಿಲ್ಲ. ಯೂಟ್ಯೂಬ್ ನೋಡಿ ಅಡುಗೆ ಮಾಡಲು ಹೊರಟು ಎಲ್ಲವನ್ನೂ ಪಾತ್ರೆಗೆ ಹಾಕಿದಮೇಲೂ ಅಡುಗೆ ಸಿದ್ದವಾಗಲೇ ಇಲ್ಲ. ಕಾರಣ ಸ್ಟೌ ಹೆಚ್ಚುವಂತೆ ಯೂಟ್ಯೂಬ್ ನಲ್ಲಿ ಆಕೆಯು ತಿಳಿಸಿರಲಿಲ್ಲ!
ಕೇವಲ ಪುಸ್ತಕಾಧರಿತವಾಗಿ ತೀರ್ಮಾನ ಕೈಗೊಳ್ಳುವುದು ಸಾಧ್ಯವಿಲ್ಲ. ನಮ್ಮ ಬೌದ್ಧಿಕ ಜ್ಙಾನವನ್ನು ಅನುಭವದ ಮೂಸೆಗೆ ಹಿಡಿದುಕೊಳ್ಳದಿದ್ದರೆ ಅದು ಹರಿತವಾಗುವುದೂ ಇಲ್ಲ. ಕೆಲವರು ಯಾರ ಜೊತೆಗೋ ವಾದ ಮಾಡಲು, ಯಾರನ್ನೋ ಸೋಲಿಸಲೆಂದು ಓದುತ್ತಾರೆ. ಯಾರೋ ಏನೋ ಬರೆದಿದ್ದರೆ ಅದನ್ನು ವಿವೇಚನೆಯಿಲ್ಲದೆ ಒಪ್ಪಿಕೊಳ್ಳುತ್ತಾರೆ. ತಮ್ಮ ಜಾತಿಯ ಮುಂದಾಳುಗಳು ಏನೇ ಹೇಳಿದರೂ ಸರಿ. ಅದರ ಪೂರ್ವಾಪರದ ಅರಿವಿರಲಿ, ಇಲ್ಲದಿರಲಿ ಒಪ್ಪಿಕೊಳ್ಳುವುದೇ ಸರಿ. ಕೃತಿನಿಷ್ಠ ಓದು ಮರೆಯಾಗಿ ಬಹಳ ದಿನಗಳೇ ಆದವು. ಈಗೇನಿದ್ದರೂ ವ್ಯಕ್ತಿನಿಷ್ಠ, ಜಾತಿನಿಷ್ಠ ಓದು ಮಾತ್ರ ಉಳಿದಿದೆ. ಇದು ಅತ್ಯಂತ ಮೂರ್ಖತನ. ಹಾಗೂ ಅಪಾಯಕಾರಿ. ಮುಕ್ತ ಮನಸ್ಸಿನಿಂದ ಓದಬೇಕು. ಜ್ಞಾನದ ಕಿಟಕಿಗಳನ್ನು ತೆರೆಯಬೇಕು. ಉದಾತ್ತ ಚಿಂತನೆಗಳು ಎಡದಿಂದಲಾದರೂ ಬರಲಿ, ಬಲದಿಂದಲಾದರೂ ಬರಲಿ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಎಲ್ಲಿಂದಲಾದರೂ ಬರಲಿ. ವಿವೇಚಿಸಿ ಸ್ವೀಕರಿಸಿದರಷ್ಟೇ ಸಾಕು. ಇಂತಹ ಧ್ಯೇಯವನ್ನು ವಿಶ್ವವಿದ್ಯಾಲಯಗಳು ಕೇವಲ ಶಿಖರದ ಹಣೆಯಲ್ಲಿ ಬರೆದರಷ್ಟೇ ಸಾಲದು. ವಿದ್ಯಾರ್ಥಿಗಳ ಚಿತ್ತದಲ್ಲಿ ಅಚ್ಚಳಿಯದೆ ಕೆತ್ತಬೇಕು. ರ‍್ಯಾಂಕ್ ಗಳಿಸಿದ ಎಷ್ಟೋ ವಿದ್ಯಾರ್ಥಿಗಳು ಜೀವನದಲ್ಲಿ ವಿಫಲರಾಗಿದ್ದಾರೆ. ಶಾಲೆಯ ಮೆಟ್ಟಿಲನ್ನು ಹತ್ತದ ಎಷ್ಟೋ ಜನ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬದುಕು ಕಂಡುಕೊಂಡಿದ್ದಾರೆ. ಹಾಗೆಂದು ರ‍್ಯಾಂಕ್ ಪಡೆದವರೆಲ್ಲ ಸರಿಯಿಲ್ಲ ಎಂದಾಗಲಿ, ಓದದಿದ್ದರೂ ಪರವಾಗಿಲ್ಲ ಎಂದಾಗಲಿ ತೀರ್ಮಾನಕ್ಕೆ ಬರುವುದು ಶುದ್ಧ ಮೂರ್ಖತನ. ವಿದ್ಯೆಯ ಬೆಳಕಿನಲ್ಲಿ, ಜೀವನದ ದಾರಿಯಲ್ಲಿ, ಅನುಭವದ ನಡೆ ನಮ್ಮದಾಗಬೇಕು. ಪುಸ್ತಕದಿ ದೊರೆತ ಮಣಿಗಳನ್ನು ಕೇವಲ ಮಸ್ತಕದ ಮಣಿಗಳಾಗಿಸದೆ ಚಿತ್ತದಲ್ಲಿ ಬೆಳೆಸಿದರೆ ನಿಜವಾದ ವ್ಯಕ್ತಿ ಸಾಕ್ಷಾತ್ಕಾರ ನಮಗಾಗುತ್ತದೆ.
ಡಾ.ಕಿರಣ್ ಸಿಡ್ಲೇಹಳ್ಳಿ
ಸಾಹಿತಿ ಹಾಗೂ ಸಂಸ್ಕೃತಿ ಚಿಂತಕರು
