
ಚಾಮರಾಜನಗರ: ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿಂದು ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ, ಸಿಬ್ಬಂದಿಗೆ ಗೌರವ ವಂದನೆ ಸಲ್ಲಿಸಲಾಯಿತು.
ಧ್ವಜ ದಿನ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಅವರು ಇಂದು ಧ್ವಜ ದಿನವನ್ನು ಸಂಭ್ರಮದಿಂದ ಎಲ್ಲೆಡೆ ಆಚರಿಸಲಾಗುತ್ತಿದೆ. ೧೯೬೫ರಿಂದ ಈವರೆಗೂ ಏಪ್ರಿಲ್ ೨ರಂದು ಪ್ರತಿವರ್ಷ ರಾಜ್ಯದ ಎಲ್ಲಾ ಪೊಲೀಸ್ ಘಟಕಗಳಲ್ಲಿ ಧ್ವಜ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಇಲಾಖೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತರಾದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸ್ಮರಣೆ ಇಂದು ಅವಶ್ಯವಾಗಿದೆ ಎಂದರು.
ಪೊಲೀಸ್ ಅಧಿಕಾರಿ, ಸಿಬ್ಬಂದಿ ತಮ್ಮ ಕುಟುಂಬ ಹಾಗೂ ಪರಿವಾರದ ಬಗ್ಗೆ ಸಾಕಷ್ಟು ಗಮನ ನೀಡಲಾಗದಿದ್ದರೂ ಹಗಲಿರುಳೆನ್ನದೇ ಜೀವದ ಹಂಗು ತೊರೆದು ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಉತ್ತೇಜನ ನೀಡಲು ಹಾಗೂ ಸೇವೆಯಿಂದ ನಿವೃತ್ತರಾದ ಅಧಿಕಾರಿ, ಸಿಬ್ಬಂದಿಗೆ ಗೌರವ ವಂದನೆ ಸಲ್ಲಿಸಿ ಅವರ ಸೇವೆಕಾರ್ಯವನ್ನು ಸ್ಮರಿಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತೆರಕಣಾಂಬಿ ಪೊಲೀಸ್ ಠಾಣೆಯ ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಿ.ಎಸ್. ನಟರಾಜು ಅವರು ಮಾತನಾಡಿ ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ ಸಾರ್ವಜನಿಕ ಸುರಕ್ಷತೆ ಹಾಗೂ ಆಡಳಿತದಲ್ಲಿ ತಂತ್ರಜ್ಞಾನದ ಅಳವಡಿಕೆಯಿಂದ ಸಾಕಷ್ಟು ಸುಧಾರಣೆಯಾಗಿದೆ. ವಿವಿಧ ಸಂದರ್ಭಗಳಲ್ಲಿ ಬಮದೋಬಸ್ತ್‌ಗಾಗಿ ಜಿಲ್ಲಾಕೇಂದ್ರಕ್ಕೆ ಆಗಮಿಸುವ ಪೊಲೀಸ್ ಅಧಿಕಾರಿ,ಸಿಬ್ಬಂದಿಗೆ ವಿಶ್ರಾಂತಿಗೃಹದ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಿರ್ದೇಶಕರಾದ ಸಂತೋಷ್‌ಕುಮಾರ್ ಅವರು ಭಾರತೀಯ ಸೇನೆಯಲ್ಲಿ ಆಚರಿಸಲಾಗುವ ಮಾದರಿಯಲ್ಲಿ ಧ್ವಜ ದಿನಾಚರಣೆಯನ್ನು ಪೊಲೀಸ್ ಇಲಾಖೆಯಲ್ಲಿಯೂ ಹಮ್ಮಿಕೊಳ್ಳುತ್ತಿರುವುದು ಉತ್ತಮ ಸಂಗತಿ. ಪೊಲೀಸ್ ಧ್ವಜ ಮಾರಾಟ ಮಾಡಿ ಸಂಗ್ರಹಿಸಿದ ನಿಧಿಯನ್ನು ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಆರೋಗ್ಯ ರಕ್ಷಣೆಗಾಗಿ ಹಾಗೂ ಅವರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ತೊಡಗಿಸುವುದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರರಾಜು ಅವರು ಇಲಾಖೆಯಲ್ಲಿ ಪೊಲೀಸ್‌ರಿಂದ ಉನ್ನತ ಅಧಿಕಾರಿಯ ವರೆಗೂ ಸೇವಾನಿವೃತ್ತಿ ಹೊಂದಿದ ಎಲ್ಲರಿಗೂ ಧ್ವಜ ವಂದನೆ ಸಲ್ಲಿಸಿ ಗೌರವ ನೀಡಲಾಗುತ್ತದೆ. ಇದು ಇಲಾಖೆಯ ವಿಶೇಷವಾಗಿದೆ ಎಂದರು.
ಆರಂಭದಲ್ಲಿ ವೇದಿಕೆಯಲ್ಲಿ ಗಣ್ಯರು ಪೊಲೀಸ್ ಧ್ವಜವನ್ನು ಬಿಡುಗಡೆಗೊಳಿಸಿ, ಬಳಿಕ ಸೇವೆಯಿಂದ ನಿವೃತ್ತರಾದ ಅಧಿಕಾರಿ, ಸಿಬ್ಬಂದಿಗೆ ಶಾಲು ಹೊದಿಸಿ, ಫಲತಾಂಬೂಲ ನೀಡಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಆಕರ್ಷಕ ಪೊಲೀಸ್ ಪಥಸಂಚಲನ ಎಲ್ಲರ ಗಮನ ಸೆಳೆಯಿತು.
