
ಡಾ. ಅನಸೂಯ ಎಸ್. ಕೆಂಪನಹಳ್ಳಿ
ಸ್ವಾತಂತ್ರ್ಯಪೂರ್ವ ಭಾರತದಲ್ಲಿ ‘ಸ್ವರಾಜ್ಯ ನಮ್ಮ ಆಜನ್ಮಸಿದ್ಧ ಹಕ್ಕು!’ ಎಂಬ ಘೋಷಣೆ ಅಂದು ಮೊಳಗಿತು. ಇಂದು ನಾವು ಸಾರ್ವತ್ರಿಕವಾಗಿ ಘೋಷಿಸಬೇಕಾದುದು: ‘ಶಿಕ್ಷಣ ನಮ್ಮ ಆಜನ್ಮಸಿದ್ಧ ಹಕ್ಕು!’ ಎಂಬುದು. ಸ್ವಾತಂತ್ರ್ಯ, ಪ್ರಜಾಪ್ರಭುತ್ವಗಳು ವಾಸ್ತವವಾಗಿ ಯಶಸ್ವಿಯಾಗಬೇಕಾದರೆ ಶಿಕ್ಷಣ ಅತ್ಯವಶ್ಯಕ. ಸುಭಾಷಿತಗಳು ಹೇಳುತ್ತವೆ: ‘ನಾಸ್ತಿ ವಿದ್ಯಾ ಸಮಂ ಚಕ್ಷುಃ'(ವಿದ್ಯೆಯಂತಹ ಕಣ್ಣಿಲ್ಲ), ‘ನಾಸ್ತಿ ವಿದ್ಯಾ ಸಮಂ ಮಿತ್ರಂ’ (ವಿದ್ಯೆಯಂತಹ ಸ್ನೇಹಿತನಿಲ್ಲ) ಎಂದು. ಪರಿಪೂರ್ಣ ಮಾನವನಾಗಬೇಕಾದರೆ ವಿದ್ಯೆ ಅತ್ಯಗತ್ಯ.
ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವಪೂರ್ಣ ಬದಲಾವಣೆ ಕಂಡ ವರ್ಷವೇ ೧೮೫೪ರಲ್ಲಿ. ಬ್ರಿಟೀಷ್ ಕಂಪನಿಯೊಂದು ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರಲೆಂದು, ಅಂದಿನ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದ ಸರ್ ಚಾರ್ಲ್ಸ್‌ವುಡ್ ಅವರು ‘ವುಡ್ಸ್ ಡಿಸ್ಪ್ಯಾಚ್’ ಎನ್ನುವ ಘೋಷಣೆಯನ್ನು, ಜುಲೈ ೧೯, ೧೮೫೪ರಲ್ಲಿ ಹೊರಡಿಸಿತು. ಇದರ ಅನ್ವಯ ಶಿಕ್ಷಣದಿಂದ ವಂಚಿತರಾಗಿದ್ದ ಸಾಮಾನ್ಯ ಜನರಿಗೆ ಶಿಕ್ಷಣದ ಸದುಪಯೋಗ ಮತ್ತು ಸಾಮೂಹಿಕ ಶಿಕ್ಷಣವನ್ನು(Mass Education) ವಿಸ್ತರಿಸುವುದು ಇದರ ಬಹುಮುಖ್ಯ ಉದ್ದೇಶವಾಗಿತ್ತು.
ಆದರೆ, ಬ್ರಿಟಿಷ್ ಸರ್ಕಾರದಿಂದ ಇಂಥ ಯತ್ನಗಳು ಆರಂಭಗೊಳ್ಳುವ ಮುನ್ನವೇ ಭಾರತದ ಒಬ್ಬ ಮಹಿಳೆ, ಶೂದ್ರರ, ದಮನಿತರ ಮತ್ತು ಅವಕಾಶವಂಚಿತರ ಬದುಕನ್ನು ಶಿಕ್ಷಣದ ಮೂಲಕ ಬದಲಿಸಲು ಹೊರಟವಳೇ ಸಾವಿತ್ರಿಬಾಯಿ ಫುಲೆ. ಸಮಾಜದ ಸರ್ವತೋಮುಖ ಬದಲಾವಣೆಯ ಕನಸು ಕಾಣುವುದು ಸುಲಭsssss ಆದರೆ, ಕಂಡ ಕನಸನ್ನು ನನಸು ಮಾಡುವುದು ಅಷ್ಟು ಸುಲಭಸಾಧ್ಯವಾದಮಾತಲ್ಲ. ಸಾವಿತ್ರಿಬಾಯಿ ಫುಲೆ ದಂಪತಿಗಳು ೧೭೦ ವರ್ಷಗಳ ಹಿಂದೆ ಕಂಡ ಕನಸು ಇಂದು ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಅಸಮಾನತೆಯ ತೊಟ್ಟಿಲಾಗಿದ್ದ ಸಮಾಜವನ್ನು ಸರಿದಾರಿಗೆ ತರುವಲ್ಲಿ ಸನಾತನ ಸಮಾಜದ ಪ್ರತಿರೋಧಎದುರಾದ ಕಷ್ಟ ನಿಷ್ಠುರಗಳಿಗೆ ಹೆದರದೆ ದಿಟ್ಟ ಹೆಜ್ಜೆಯನ್ನಿಟ್ಟು ಮುನ್ನಡೆದವರು,
ಭಾರತೀಯ ಸಮಾಜದಲ್ಲಿ ವೃತ್ತಿಗೊಂದರಂತೆ ಜಾತಿ ಸೃಷ್ಟಿಯಾಗಿ ನೂರಾರು ವಿಭಾಗಗಳಾಗಿ, ಸಾವಿರ ಸಾವಿರ ತುಂಡುಗಳಾಗಿ ಒಡೆದು ಮೇಲಾಟ, ಕೀಳಾಟ, ಪರಸ್ಪರ ಹಗೆತನ, ಜಾತಿ- ಧರ್ಮಗಳನಡುವಿನ ಅಸಹಿಷ್ಣುತೆ, ಕೋಮುಸೌಹಾರ್ದ, ಶ್ರೇಷ್ಠತೆಯ ಪ್ರತಿಪಾದನೆಯಲ್ಲಿ ತೊಡಗಿದ್ದವು. ಹೀಗೆ ಜಾತಿವ್ಯವಸ್ಥೆ ಸೃಷ್ಟಿಸಿದವರು ಪರಮೋಚ್ಛ ಸ್ಥಾನಮಾನಗಳಲ್ಲಿ ಕುಳಿತು ಸಕಲ ಸಂಪತ್ತನ್ನು ಅನುಭವಿಸುತ್ತಾಜ್ಞಾನ ಹಾಗೂ ಅಧಿಕಾರವೆಂಬ ಎರಡೂ ಸಂಪನ್ಮೂಲಗಳಿಗೆ ನಾವೇ ಹಕ್ಕುದಾರರೆಂದು ಪ್ರತಿಪಾದಿಸುತ್ತಾ, ಹಠಕ್ಕೆ ಬಿದ್ದು ಅಕ್ಷರ ಜ್ಞಾನ ಕಲಿತವರಿಗೆ ಕಠೋರ ಶಿಕ್ಷ ವಿಧಿಸುತ್ತಾ, ಸಾಮಾಜಿಕ ಬಹಿಷ್ಕಾರ, ಕೊನೆಯಲ್ಲಿ ಸಾವಿಗೆ ಶರಣಾಗುವಂತಹ ಪರಿಸ್ಥಿತಿಯ ನಿರ್ಮಾಣವಾಗುತ್ತಿತ್ತು. ಅದರಲ್ಲೂ ಮಹಿಳೆಯರ ಶಿಕ್ಷಣ, ಸ್ವಾತಂತ್ರ್ಯ, ಸಮಾನತೆ, ಸೌಲಭ್ಯಗಳನ್ನುಕುರಿತಂತೆ ಹೇಳುವಂತೆಯೇ ಇಲ್ಲ.

ಇಂತಹ ಪರಿಸ್ಥಿತಿಗಳಿಗೆ ಎದುರಾಗಿ ನಿಂತು ಸಮಾನತೆ, ಸ್ವಾತಂತ್ರ್ಯ, ಶಿಕ್ಷಣ ಸರ್ವರಿಗೂ ತಲುಪುವಂತೆ ಮಾಡಿದ ಪ್ರಯತ್ನ ಸಾವಿತ್ರಿಬಾಯಿ ಫುಲೆ ಯವರದ್ದು. ಭಾರತದ ತಳಸಮುದಾಯದ ಜನಮನದಲ್ಲಿ ಅಕ್ಷರಜ್ಞಾನದ ಕ್ರಾಂತಿಜ್ಯೋತಿಯನ್ನು ಹಚ್ಚಿದ ಮೊಟ್ಟಮೊದಲ ಮಹಿಳೆ ಮತ್ತು ಶಿಕ್ಷಕಿ. ಭಾರತ ಮನುಧರ್ಮಶಾಸ್ತ್ರದ
ಕಂದಾಚಾರದಲ್ಲಿ ಹೂತು ಹೋದ ಕಾಲಘಟ್ಟದಲ್ಲಿ ಮಹಿಳೆಯರು ಒಳಬಾಗಿಲ ಹಿಂದಿನ ನಿಟ್ಟುಸಿರಿನ ವಸ್ತುವಾಗಿದ್ದರು. ಅಂದರೆ, ಗಂಡನ ಚಿತೆಯಲ್ಲಿ ದಹನಗೊಳ್ಳುವ ವಸ್ತು, ಒಂದು ವೇಳೆ ಹೊಸ್ತಿಲು ದಾಟಿದರೆ ಜೀವಂತ ಶವ, ಕೆಳ ಸಮುದಾಯ ಹೆಣ್ಣು ಮಕ್ಕಳು ಬಟ್ಟೆ ಧರಿಸುವುದಕ್ಕೂ ನಿಷೇದs, ತೊಟ್ಟರೂ ಮನುವಾದಿಗಳು ಆಗಮಿಸಿದರೆ ಎದೆಯ ಮೇಲಿನ ಸೆರಗ ಜಾರಿಸಿ ತೋರಿಸುವುದು, ಅವರು ಇಚ್ಚಿಸಿದರೆ ಸುಖ ನೀಡಲು ಸದಾ ಸಿದ್ಧರಿರಬೇಕು, ಅವರು ಆಜ್ಞಾಪಿಸಿದ ಕೆಲಸವನ್ನು ನಿರ್ವಹಿಸಲು ಸದಾ ಸಜ್ಜುಗೊಂಡಿರಬೇಕು ಎಂಬ ಕಟ್ಟುಕಟ್ಟಳೆಗಳನ್ನು ಕಟ್ಟಿಕೊಂಡು ಜೀವಿಸಿದವರು ಸವಣಯರು.
ಕೆಳಸಮುದಾಯದವರು ಎದುರಾದರೆ ಕಲ್ಲಿನಿಂದ ಹೊಡೆದರೂ ದೂರುವಂತಿಲ್ಲ. ಇಂತಹ ಹತ್ತುಹಲವು ವ್ಯವಸ್ಥೆಗಳ ವಿರುದ್ಧ ಧ್ವನಿಯೆತ್ತಿದವರು, ಈ ದಂಪತಿಗಳು. ಆಧುನಿಕತೆ ಮತ್ತು ಶಿಕ್ಷಣ, ಮಹಿಳಾ ಹಕ್ಕುಗಳಿಗಾಗಿ, ಮಹಿಳೆ ಮತ್ತು ತಳ ಸಮುದಾಯಗಳು ನಡೆಸಿದ ನಿರಂತರ ಹೋರಾಟಗಳನ್ನು ನಿರೂಪಿಸುವಾಗ ಕ್ರಾಂತಿಕಾರಿ ಜ್ಯೋತಿಬಾ ಫುಲೆ ಮತ್ತು ಪತ್ನಿ ಸಾವಿತ್ರಿಬಾಯಿ ಫುಲೆ ಯವರು ಹೋರಾಟವನ್ನು ಸ್ಮರಿಸಿಕೊಳ್ಳಲೇಬೇಕು.
ಮುಂದುವರೆಯವುದು….
