ಚಾಮರಾಜನಗರ: ಸರ್ಕಾರ ಜನರ ಆರೋಗ್ಯದ ಕಾಳಜಿಯಿಂದ ಆರೋಗ್ಯ ಮೇಳ ಆಯೋಜಿಸುತ್ತಿದ್ದು ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸಪ್ರಸಾದ್ ಅವರು ತಿಳಿಸಿದರು.
ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಆರೋಗ್ಯ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಬೇಕು. ಎಷ್ಟೋ ಜನರು ಸಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸದೇ ಆರೋಗ್ಯ ತೀರ ಹದಗೆಟ್ಟಾಗ ಆಸ್ಪತ್ರೆಗೆ ಧಾವಿಸುತ್ತಾರೆ. ಇದರಿಂದ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಅವಕಾಶ ನೀಡದೇ ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗುವುದು ಒಳಿತು ಎಂದು ಲೋಕಸಭಾ ಸದಸ್ಯರು ಸಲಹೆ ಮಾಡಿದರು.
ಸರ್ಕಾರವು ಸಹ ಜನರ ಆರೋಗ್ಯದ ಬಗ್ಗೆ ತೀವ್ರ ಕಾಳಜಿ ವಹಿಸಿದ್ದು ಆರೋಗ್ಯ ಮೇಳಗಳನ್ನು ಆಯೋಜಿಸುತ್ತಿದೆ. ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತಿಳಿವಳಿಕೆ ನೀಡುತ್ತಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡುಗಳನ್ನು ವಿತರಿಸಿ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಡುತ್ತಿದೆ. ಈ ಪ್ರಯೋಜನವನ್ನು ಜನತೆ ಬಳಸಿಕೊಳ್ಳಬೇಕೆಂದು ತಿಳಿಸಿದರು.
ತಾಲೂಕುಗಳಲ್ಲಿಯೇ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಸೂಕ್ತ ಕಾಯಿಲೆಗಳಿಗೆ ಔಷದೋಪಚಾರ ಪಡೆಯಲು ಅನುಕೂಲವಾಗುವಂತೆ ಆರೋಗ್ಯ ಶಿಬಿರಗಳನ್ನು ಏರ್ಪಾಡು ಮಾಡಲಾಗಿದೆ. ಜನರ ಸ್ಪಂದನೆ ಸಹಕಾರ ಅತಿಮುಖ್ಯವಾಗಿದೆ. ಕೋವಿಡ್ ಸಂದರ್ಭದಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಶ್ರಮಿಸಲಾಗಿದೆ ತಜ್ಞರು, ವೈದ್ಯರು ಕೊರೊನಾ ಅಲೆಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಅಗತ್ಯ ಮಾರ್ಗದರ್ಶನ ಮಾಡಿದ್ದಾರೆ ಎಂದು ಲೋಕಸಭಾ ಸದಸ್ಯರಾದ ವಿ. ಶ್ರೀನಿವಾಸ ಪ್ರಸಾದ್ ಅವರು ತಿಳಿಸಿದರು.
ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಮಾತನಾಡಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ವ್ಯಾಪಕವಾಗಿ ಆರೋಗ್ಯ ಮೇಳವನ್ನು ತಾಲೂಕುಗಳಲ್ಲಿ ಆಯೋಜನೆ ಮಾಡಲಾಗುತ್ತಿದೆ. ಈ ಮೇಳವನ್ನು ಜನರು ಸದ್ಬಳಕೆ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ ಅವರು ಮಾತನಾಡಿ ಎಲ್ಲರ ಆರೋಗ್ಯ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ನೀಡುವುದು ಆರೋಗ್ಯ ಮೇಳದ ಉದ್ದೇಶವಾಗಿದೆ. ಆಯುಷ್ಮಾನ್ ಕಾರ್ಡ್ ಹೊಂದಿರದೆ ಇರುವ ಕುಟುಂಬಗಳಿಗೆ ಸ್ಥಳದಲ್ಲಿಯೇ ಕಾರ್ಡ್ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಆಯುಷ್ಮಾನ್ ಕಾರ್ಡ್ ಮೂಲಕ ಬಿಪಿಎಲ್ ಕುಟುಂಬಗಳಿಗೆ ೫ ಲಕ್ಷದವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯುವ ವ್ಯವಸ್ಥೆಯಿದೆ. ಎಪಿಎಲ್ ಕುಟುಂಬಗಳಿಗೆ ಶೇ. ೩೦ರಷ್ಟು ವೆಚ್ಚ ಭರಿಸಲು ಅವಕಾಶವಿದೆ. ಜನರು ಆರೋಗ್ಯ ಮೇಳದ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಆರಂಭದಲ್ಲಿಯೇ ಆರೋಗ್ಯ ಮೇಳಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಪ್ರತಿಯೊಂದು ಮಳಿಗೆಗಳಿಗೂ ಭೇಟಿ ನೀಡಿ ಜನರಿಗೆ ಕಲ್ಪಿಸಲಾಗಿರುವ ಆರೋಗ್ಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಜಿಲ್ಲಾ ಪಂಚಾಯತ್‌ನ ಮಾಜಿ ಉಪಾಧ್ಯಕ್ಷರಾದ ಶಿವಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಡಾ. ಕಾಂತರಾಜು, ಡಾ. ಮಹದೇವು, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ನಗರಸಭೆ ಪೌರಾಯುಕ್ತರಾದ ಕರಿಬಸವಯ್ಯ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮಕ್ಕೂ ಮೊದಲು ನಗರದ ಚಾಮರಾಜೇಶ್ವರ ದೇವಾಲಯದ ಬಳಿ ಆರೋಗ್ಯ ಮೇಳದ ಜಾಗೃತಿಗಾಗಿ ಆಯೋಜಿಸಲಾಗಿದ್ದ ಸೈಕಲ್ ಜಾಥಾಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿ ದೇವಿ ಅವರು ಚಾಲನೆ ನೀಡಿದರು.