ಮೈಸೂರು, ನವೆಂಬರ್-ನಮಗೆ ದೀಪಾವಳಿ ಎಂದಾಕ್ಷಣ ಮನೆ ಮುಂದೆ ಉರಿಯುವ ಹಣತೆ… ಆಕಾಶದಲ್ಲಿ ಚಿಮ್ಮುವ ಬಾಣಬಿರುಸು… ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು… ಅದಷ್ಟೆ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಈ ಹಬ್ಬದ ಆಚರಣೆಯ ಹಿಂದೆ ಹಲವು ಪುರಾಣ ಕಾಲದ ಬೆಸುಗೆ, ಸಂಪ್ರದಾಯ, ಸಂಸ್ಕೃತಿ, ಇತಿಹಾಸ ಮಿಳಿತಗೊಂಡಿರುವುದು ಕಂಡು ಬರುತ್ತದೆ.
ದೀಪಾವಳಿ ಹಬ್ಬದ ಮೊದಲಿಗೆ ಎಣ್ಣೆ ಸ್ನಾನ ಮಾಡುವ ಸಂಪ್ರದಾಯವೂ ಇದೆ. ಇದಕ್ಕೆ ಕಾರಣ ಸಮುದ್ರಮಥನದ ಸಮಯದಲ್ಲಿ ಶ್ರೀವಿಷ್ಣು ಅಮೃತಕಲಶದೊಡನೆ ಧನ್ವಂತರಿಯಾಗಿ ಅವತಾರವೆತ್ತಿದ ಈ ದಿನ ತುಂಬುವ ಸ್ನಾನದ ನೀರಿನಲ್ಲಿ ಗಂಗೆಯೂ, ಎಣ್ಣೆಯಲ್ಲಿ ಧನಲಕ್ಷ್ಮೀಯೂ ಇರುತ್ತಾಳೆಂಬುದು ನಂಬಿಕೆ. ಈ ನೀರಿನಿಂದ ಸ್ನಾನಮಾಡಿದರೆ ಆಯುರಾರೋಗ್ಯ ಆಯಸ್ಸು ವೃದ್ಧಿಸುವುದೆಂದೂ ಮತ್ತು ಸಕಲ ಪಾಪಗಳೂ ನಿವಾರಣೆಯಾಗುವುದೆಂಬ ನಂಬಿಕೆಯಿದೆ. ನರಕಾಸುರನನ್ನು ಕೊಂದ ಪಾಪ ಪರಿಹಾರಕ್ಕಾಗಿ ಶ್ರೀಕೃಷ್ಣ ಕೂಡ ಈ ದಿನ ಎಣ್ಣೆಸ್ನಾನ ಶಾಸ್ತ್ರ ಮಾಡಿದ್ದನು ಎಂದು ಹೇಳಲಾಗುತ್ತದೆ.
ಹಬ್ಬದ ಮೊದಲ ದಿನ ನರಕಚತುದರ್ಶಿಯಾಗಿದ್ದು, ನರಕ ಚತುರ್ದಶಿಯ ಕೇಂದ್ರಬಿಂದುವೇ ನರಕಾಸುರ. ಮಹಾವಿಷ್ಣು ತನ್ನ ವರಾಹಾವತಾರದಲ್ಲಿದ್ದಾಗ ಅವನ ಶರೀರದಿಂದ ಒಂದು ತೊಟ್ಟು ಬೆವರು ಭೂಮಿಗೆ ಬೀಳಲಾಗಿ ಭೂದೇವಿಯಲ್ಲಿ ನರಕಾಸುರ ಜನಿಸುತ್ತಾನೆ. ಇದರಿಂದಾಗಿ ಅವನಿಗೆ ಭೌಮಾಸುರ, ಭೂಮಿಪುತ್ರ ಎಂಬ ಹೆಸರುಗಳೂ ಉಂಟು. ಭೂದೇವಿ ವಿಷ್ಣುವನ್ನು ಬೇಡಿ ತನ್ನ ಮಗ ನರಕಾಸುರನಿಗೆ ವೈಷ್ಣವಾಸ್ತ್ರವನ್ನು ವರವಾಗಿ ಕೊಡಿಸುತ್ತಾಳೆ. ಇದರಿಂದ ಬಲಿಷ್ಠನಾದ ನರಕಾಸುರ ಲೋಕಕಂಠಕನಾಗುತ್ತಾನೆ. ಇಂದ್ರ ಮತ್ತು ಅವನ ತಾಯಿ ಅಧಿತಿಯನ್ನೂ ಬಿಡದೆ ಕಾಡತೊಡಗಿದಾಗ ಇಂದ್ರ, ಶ್ರೀಕೃಷ್ಣನ ಮೊರೆಹೋಗುತ್ತಾನೆ.
ನರಕಾಸುರ ವಧೆ
ನರಕಾಸುರನ ದುಷ್ಟತನ ತಾಯಿ ಭೂದೇವಿಗೂ ಸಹಿಸದಾದಾಗ ಈ ದುಷ್ಟ ಮಗನನ್ನು ಕೊಂದು ಲೋಕವನ್ನು ಕಾಪಾಡುವಂತೆ ಭೂದೇವಿ ಶ್ರೀಕೃಷ್ಣನಿಗೆ ಹೇಳಿದಾಗ, ಅಶ್ವಯುಜಕೃಷ್ಣ ಚತುರ್ದಶಿಯ ಕಗ್ಗತ್ತಲಿನಲ್ಲಿ ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸುತ್ತಾನೆ. ಆ ದಿನವೇ ನರಕ ಚತುರ್ದಶಿ. ದುಷ್ಟ ಸಂಹಾರದ ಸಂಕೇತವಾಗಿ ಆ ದಿನ ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜಯದ ನಗೆಯಲ್ಲಿ ಎಲ್ಲರೂ ಖುಷಿಪಡುತ್ತಾರೆ. ಹಾಗೆಯೇ ನರಕಾಸುರನನ್ನು ಕೊಂದು ಅವನ ಬಂಧನದಲ್ಲಿದ್ದ ಸಾವಿರಾರು ಕನ್ಯೆಯರನ್ನು ಶ್ರೀಕೃಷ್ಣ ಬಂಧಮುಕ್ತಗೊಳಿಸಿದ್ದರಿಂದಾಗಿ ಕನ್ಯಾಸೆರೆ ಬಿಡಿಸಿದ ಶ್ರೀಕೃಷ್ಣ ಸ್ವರೂಪಿಯಾದ ಅಳಿಯಂದಿರನ್ನು ಕನ್ಯಾಪಿತೃಗಳು ಈ ಹಬ್ಬದಂದು ತಮ್ಮ ಮನೆಗೆ ಆಹ್ವಾನಿಸಿ ವಿಶೇಷವಾಗಿ ಆಧರಿಸಿ ಉಪಚರಿಸುವ ಸಂಪ್ರದಾಯವನ್ನು ಕೂಡ ಕಾಣಬಹುದಾಗಿದೆ.
ಅಮಾವಾಸ್ಯೆಯಂದು ಲಕ್ಷ್ಮಿ ಪೂಜೆ
ನರಕ ಚತುರ್ದಶಿಯ ಮಾರನೆಯ ದಿನ ದೀಪಾವಳಿ ಅಮಾವಾಸ್ಯೆಯಾಗಿದ್ದು, ಅವತ್ತು ಲಕ್ಷ್ಮಿಪೂಜೆ ಮಾಡಲಾಗುತ್ತದೆ. ಮಹಾವಿಷ್ಣುವಿನ ಪತ್ನಿಯೂ ಆದ ಮಹಾಲಕ್ಷ್ಮಿಯನ್ನು ಆರಾಧಿಸುವ ಹಬ್ಬವೇ ಧನಲಕ್ಷ್ಮೀ ಪೂಜೆ. ಸಮುದ್ರ ಮಥನದಿಂದ ಲಕ್ಷ್ಮೀ ಉದಯಿಸಿದ ದಿನವೂ ಹೌದು. ಹೀಗಾಗಿ ಉತ್ತರ ಭಾರತೀಯರಿಗೆ ಹೆಚ್ಚಿನ ಸಂಭ್ರಮ. ಅದರಲ್ಲೂ ವ್ಯಾಪಾರಿಗಳಿಗೆ ದೀಪ ಲಕ್ಷ್ಮೀ ಬೆಳಗಿ ಧನಲಕ್ಷ್ಮೀ ಬರುವ ಭಾಗ್ಯದ ದಿನವೇ ಆಗಿದೆ. ಅವರಿಗೆ ವ್ಯಾಪಾರ ವಹಿವಾಟಿನ ವಾಣಿಜ್ಯದ ನೂತನ ವರ್ಷ ಉದಯಿಸುವುದೇ ಈ ದಿನ. ಹಾಗಾಗಿ ಅತ್ಯಂತ ಸಂತೋಷದಿಂದ ಕಾರ್ತಿಕ ಮಾಸದ ಆರಂಭದ ಈ ಅಮಾವಾಸ್ಯೆಯ ಮಹಾರಾತ್ರಿಯಲ್ಲಿ ಮಹಾಲಕ್ಷ್ಮೀಗೆ ಮಹದಾನಂದದಿಂದ ದೀಪಾರಾಧನೆಯೊಡನೆ ಲಕ್ಷ್ಮೀಪೂಜೆಯನ್ನು ಮಾಡುತ್ತಾರೆ.
ದೀಪಾವಳಿ (ದೀಪಗಳಸಾಲು) ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. ಭಾರತದಲ್ಲಿ ಸಾಂಪ್ರದಾಯಿಕವಾಗಿ ಪಂಚಾಂಗ ಚಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕಮಾಸ ಶುಕ್ಲಪಕ್ಷದ ಪಾಡ್ಯ-ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ.
ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ, ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.
ಹಿಂದೂ ಧರ್ಮದ ಜನರು ಪ್ರತಿ ವರ್ಷವೂ ಪ್ರಪಂಚದ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ.