ಮೈಸೂರು: ಮೈಸೂರು ವಿಭಾಗವು ಶ್ರೀಗಂಧದ ಉತ್ಪನ್ನಗಳ ಪ್ರಚಾರಕ್ಕಾಗಿ ಇಂದು ಮೈಸೂರು ರೈಲು ನಿಲ್ದಾಣದಲ್ಲಿ ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯನ್ನು ಜಾರಿಗೆ ತಂದಿದೆ. ಈ ಪರಿಕಲ್ಪನೆಯು ಸ್ಥಳೀಯ ಕುಶಲಕರ್ಮಿಗಳು / ಉತ್ಪನ್ನಗಳು / ಕೈಗಾರಿಕೆಗಳಿಗೆ ಸಹಾಯ ಮಾಡುವ ಉದ್ದೇಶದಿಂದ ೨೦೨೨-೨೩ ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಒಂದು ನವೀನ ಉಪಕ್ರಮವಾಗಿದೆ. ಈ ಉಪಕ್ರಮವು ಪ್ರತಿ ರೈಲ್ವೆ ನಿಲ್ದಾಣವನ್ನು, ಆಯಾ ಪ್ರದೇಶದಲ್ಲಿ ವಿಶಿಷ್ಟವಾದ ಒಂದು ನಿರ್ದಿಷ್ಟ ಉತ್ಪನ್ನಕ್ಕೆ ಪ್ರಚಾರ ಮತ್ತು ಮಾರಾಟ ಕೇಂದ್ರವನ್ನಾಗಿ ಮಾಡುವ ಮೂಲಕ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಕರ್ನಾಟಕ ಸರ್ಕಾರದ ಉದ್ಯಮವಾದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿಮಿಟೆಡ್‌ಗೆ ೨೦೨೨ ರ ಏಪ್ರಿಲ್ ೦೮ ರಿಂದ ೨೨ ರವರೆಗೆ ೧೫ ದಿನಗಳ ಅವಧಿಗೆ ತಮ್ಮ ಉತ್ಪನ್ನಗಳನ್ನು ಮೈಸೂರು ರೈಲ್ವೆ ನಿಲ್ದಾಣದ ಆವರಣದಲ್ಲಿ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಪ್ರಚಾರ ಮಾಡಲು ಮತ್ತು ಮಾರಾಟ ಮಾಡಲು ಮಳಿಗೆಯನ್ನು ಒದಗಿಸಲಾಗಿದೆ. ಸಾಬೂನು ಮತ್ತು ಶ್ರೀಗಂಧದ ಎಣ್ಣೆಯ ಹೊರತಾಗಿ, ಕೆಎಸ್‌ಡಿಎಲ್ ಡಿಟರ್ಜೆಂಟ್ (ಮಾರ್ಜಕ), ಸುಗಂಧ ದ್ರವ್ಯಗಳು, ಟಾಲ್ಕಮ್ ಪೌಡರ್, ಹ್ಯಾಂಡ್ ವಾಶ್, ಫೇಸ್ ವಾಶ್, ತೆಂಗಿನ ಎಣ್ಣೆ ಮತ್ತು ಅಗರಬತ್ತಿಗಳನ್ನು ಉತ್ಪಾದಿಸುತ್ತದೆ.
ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪರಾದ ಶ್ರೀ ರಾಹುಲ್ ಅಗರ್ವಾಲ್ ರವರು ಮಾತನಾಡಿ, ಮೈಸೂರು ನಿಲ್ದಾಣವು ವಾರದ ದಿನಗಳಲ್ಲಿ ಸರಾಸರಿ ೩೫,೦೦೦ ಪ್ರಯಾಣಿಕರು ಮತ್ತು ವಾರಾಂತ್ಯದಲ್ಲಿ ೪೦,೦೦೦ ವರೆಗೆ ಪ್ರಯಾಣಿಕರು ಭೇಟಿ ನೀಡುತ್ತಾರೆ. ವಿಭಾಗವು ಭಾರತದಾದ್ಯಂತ ವಿವಿಧ ಸ್ಥಳಗಳನ್ನು ಸಂಪರ್ಕಿಸುವ ಹಲವಾರು ರೈಲುಗಳನ್ನು ಓಡಿಸುತ್ತಿದ್ದೂ ಈ ವಿಶಿಷ್ಟ ಉತ್ಪನ್ನಗಳನ್ನು ಪ್ರಚಾರ ಮಾಡಲು ಮತ್ತು ಮಾರಾಟ ಮಾಡಲು ಮತ್ತು ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡಲು ಇದೊಂದು ಅದ್ಭುತ ಅವಕಾಶವಾಗಿದೆ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ “ಒಂದು ನಿಲ್ದಾಣ ಒಂದು ಉತ್ಪನ್ನ” ಪರಿಕಲ್ಪನೆಯನ್ನು ಕಾರ್ಯಗತಗೊಳಿಸಲು ವಿಭಾಗದ ಇತರ ಜಿಲ್ಲಾ ಕೇಂದ್ರಗಳಲ್ಲಿಯೂ ಹೆಚ್ಚಿನ ನಿಲ್ದಾಣಗಳನ್ನು ಗುರುತಿಸಲಾಗುವುದು ಎಂದು ಶ್ರೀ ಅಗರ್ವಾಲ್ ಹೇಳಿದ್ದಾರೆ.
ತಾತ್ಕಾಲಿಕ ಮಳಿಗೆಯ ಉದ್ಘಾಟನೆ ಸಂದರ್ಭದಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ. ಬುಡಟಿ ಶ್ರೀನಿವಾಸುಲುರವರು, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಶ್ರೀ ಮಂಜುನಾಥ್ ಕನಮಡಿ ಮತ್ತು ವಿಭಾಗದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
