ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಮರಗದಕೆರೆ ಸತತಬೀಳುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಭರ್ತಿಯಾಗಿ ಕೋಡಿಬಿದ್ದಿದ್ದು, ಕ್ಷೇತ್ರದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಗ್ರಾಮಸ್ಥರೊಡಗೂಡಿ ಸಮೀಪದ ಗಣೇಶದೇವಾಲಯಕ್ಕೆ ಪೂಜೆಸಲ್ಲಿಸುವ ಮೂಲಕ ಬಾಗಿನ ಅರ್ಪಿಸಿದರು.
ಇದೇವೇಳೆ ಅವರು ಮಾತನಾಡಿ,ಗ್ರಾಮದ ಕೆರೆ ಭರ್ತಿಯಾಗಿ ೧೮ವರ್ಷಗಳೇ ಸಂದಿತ್ತು. ಒಂದು ತಿಂಗಳಿಂದ ಸತತಮಳೆಯಾದ ಹಿನ್ನೆಲೆಯಲ್ಲಿ ಪುರಾತನ ಕಾಲದ ೧೮ ವರ್ಷದ ನಂತರ ಕೆರೆಸಂಪೂರ್ಣ ಭರ್ತಿಯಾಗಿ ಕೋಡಿಬಿದ್ದಿದೆ. ಮಳೆಯಾಗಿರುವುದು ಶುಭಸೂಚಕವೇ ಆಗಿದೆ. ಮಳೆಯಿಂದ ರೈತರು ಕೃಷಿಚಟುವಟಿಕೆ ನಡೆಸಲು ಪೂರಕವಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಯಶೋಧನಾರಾಯಣಸ್ವಾಮಿ, ಗ್ರಾಪಂ ಸದಸ್ಯರು, ಎಪಿಎಂಸಿ ಸದಸ್ಯ ಸೋಮೇಶ್, ಜಿಪಂ ಮಾಜಿಸದಸ್ಯ ರಮೇಶ್, ತಾಪಂ ಮಾಜಿಸದಸ್ಯ ಎಚ್.ಎಂ.ಮಹದೇವಶೆಟ್ಟಿ ಗ್ರಾಮಸ್ಥರು, ಮುಖಂಡರು ಹಾಜರಿದ್ದರು.
ಇತರೇ ಗ್ರಾಮಗಳಿಗೂ ಭೇಟಿ; ಇದೇವೇಳೆ ಮಳೆಹಾನಿಗೊಳಗಾದ ತಾಲೂಕಿನ ಕೂಡ್ಲೂರು, ಕರಿಯನಕಟ್ಟೆ ಗ್ರಾಮಗಳಿಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿನೀಡಿ, ಸಂತ್ರಸ್ತರ ಅಹವಾಲು ಆಲಿಸಿದರು.
ಕೂಡ್ಲೂರು ಗ್ರಾಮದಲ್ಲಿ ಮಳೆನೀರು ಮನೆಗೆ ನುಗ್ಗಿ ಆಹಾರಪದಾರ್ಥಗಳು ಹಾಳಾದ ಹಿನ್ನೆಲೆಯಲ್ಲಿ ಗ್ರಾಮದ ೧೯ ಕುಟುಂಬಗಳಿಗೆ ಎನ್ಡಿಆರ್ಎಫ್ ವತಿಯಿಂದ ತಲಾ ೧೦ಸಾವಿರ ರೂ. ಪರಿಹಾರ ವಿತರಣೆ ಮಾಡಲಾಯಿತು.
ಕರಿಯನಕಟ್ಟೆ ಗ್ರಾಮದಲ್ಲಿ ಮಳೆಯಿಂದ ಗ್ರಾಮದ ಹಲವಾರು ಮಂದಿಯ ಮನೆಗೋಡೆ ಕುಸಿದಿದ್ದು, ಶಾಸಕರು ವೀಕ್ಷಿಸಿ ಸಂತ್ರಸ್ತರಿಗೆ ವೈಯಕ್ತಿಕಪರಿಹಾರ ವಿತರಿಸಿದರು.
ಕೆರೆಗಳು ತುಂಬಿರುವುದರ ಜತೆ ಕೆಲವೆಡೆ ಕೆರೆಏರಿ ಬಿರುಕುಬಿಡುವ ಸಾಧ್ಯತೆಯಿದೆ. ಅನಾಹುತ ಸಂಭವಿಸದಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.
ರಾಜಸ್ವನಿರೀಕ್ಷಕರು, ಗ್ರಾಮಲೆಕ್ಕಿಗರು, ಗ್ರಾಮಸ್ಥರು ಹಾಜರಿದ್ದರು.