ಚಾಮರಾಜನಗರ: ಬೆಂಗಳೂರುನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರು ನಾಡಿಗೆ ನೀಡಿದ ಕೊಡುಗೆಯನ್ನು ಮುಂದಿನ ಪೀಳಿಗೆಯವರಿಗೂ ತಿಳಿಸುವ ಕೆಲಸ ಪ್ರಸ್ತುತದಲ್ಲಿ ಆಗಬೇಕಿದೆ ಎಂದು ಮೈಸೂರುವಿವಿ ನಿವೃತ್ತ ಕುಲಪತಿ ಕೆ.ಎಸ್. ರಂಗಪ್ಪ ಹೇಳಿದರು.
ನಗರದ ರೋಟರಿಭವನದಲ್ಲಿ ಅಖಿಲಕರ್ನಾಟಕ ಕನ್ನಡಮಹಾಸಭೆ ರಾಜ್ಯಘಟಕದ ವತಿಯಿಂದ ನಡೆದ’ ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
೫೦೦ ವರ್ಷಗಳ ಹಿಂದೆ ಅಭಿವೃದ್ದಿಯ ದೂರದೃಷ್ಟಿ ಇಟ್ಟುಕೊಂಡು, ಸಾರ್ವಜನಿಕರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಕೆರೆಗಳು, ದೇವಾಲಯಗಳು, ಸಮುದಾಯಗಳು ವ್ಯಾಪಾರವಹಿವಾಟು ನಡೆಸಿ, ಜೀವನಸಾಗಿಸಲು ಹಲವಾರು ಪೇಟೆಗಳನ್ನು ನಿರ್ಮಾಣ ಮಾಡಿದರು.
ಆದರೆ ಇಂದು ಬೆಂಗಳೂರು ನಗರ ಕೆಂಪೇಗೌಡರ ದೂರದೃಷ್ಟಿಯ ನಗರವಾಗಿ ಉಳಿದಿಲ್ಲ. ಎಲ್ಲವೂ ವಾಣಿಜ್ಯಮಯವಾಗಿದ್ದು, ಇಡೀ ನಗರದ ವ್ಯವಸ್ಥೆಯೇ ಕೆಟ್ಟು ದುರವಸ್ಥೆಯ ಹಾದಿಹಿಡಿದಿದೆ ಎಂದು ವಿಷಾಧಿಸಿದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಗಾಂಧಿ, ಸಂವಿಧಾನಶಿಲ್ಪಿ ಅಂಬೇಡ್ಕರ್ ಸೇರಿದಂತೆ ಮಹಾನ್ ದಾರ್ಶನಿಕರನ್ನು ಇಂದಿನಪೀಳಿಗೆಯವರು ಮರೆಯುವ ಹಂತಕ್ಕೆ ತಲುಪಿದ್ದಾರೆ. ಇಂತಹ ವ್ಯವಸ್ಥೆ ಮರುಕಳಿಸದಂತೆ ಎಚ್ಚರವಹಿಸುವ ಮೂಲಕ ಕೆಂಪೇಗೌಡರಂತಹ ಮಹನೀಯರನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ ಎಂದರು.
ಕೊಳ್ಳೇಗಾಲ ಮಾನಸ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಸ್.ದತ್ತೇಶ್ ಕುಮಾರ್‌ಮಾತನಾಡಿ, ಬೆಂಗಳೂರು ಇಂದು ಮಹಾನಗರವಾಗಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಭಿವೃದ್ದಿ ಸಾಧಿಸಿದೆ ಎಂದರೆ ಅದರ ಹಿಂದೆ ಕೆಂಪೇಗೌಡರ ದೂರದೃಷ್ಟಿ ಮುಂದಾಲೋಚನೆ ಅಡಗಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಅಖಿಲಕರ್ನಾಟಕ ಕನ್ನಡಮಹಾಸಭೆ ರಾಜ್ಯಘಟಕದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ’ ರಾಜ್ಯದಲ್ಲಿ ೧೯ ಗಡಿಜಿಲ್ಲೆಗಳಿದ್ದು, ಕೆಲವೆಡೆ ಮರಾಠಿ, ತೆಲುಗು ಸೇರಿದಂತೆ ಇತರೇ ಭಾಷೆಯ ಹೊಡೆತಕ್ಕೆ ಕನ್ನಡ ನಲುಗುತ್ತಿದೆ. ಚಾಮರಾಜನಗರ ತಮಿಳುನಾಡು, ಕೇರಳ ಭಾಗದಲ್ಲಿದ್ದರೂ, ಕನ್ನಡಭಾಷೆ, ನೆಲಜಲಕ್ಕೆ ಯಾವುದೇ ತೊಂದರೆಯಾಗಿಲ್ಲ. ಇದಕ್ಕೆ ಜಿಲ್ಲೆಯ ಕನ್ನಡಪರ ಹೋರಾಟಗಾರರ ಭಾಷಾಪ್ರೇಮವೇ ಕಾರಣ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಅಧ್ಯಕ್ಷತೆವಹಿಸಿ ಮಾತನಾಡಿದರು.
ಮೈಸೂರುವಿವಿ ನಿವೃತ್ತ ಕುಲಪತಿ ಕೆ.ಎಸ್. ರಂಗಪ್ಪ, ಸಿಮ್ಸ್ ಡೀನ್, ನಿರ್ದೇಶಕ ಡಾ.ಬಿ.ಎಂ.ಸಂಜೀವ್, ಒಕ್ಕಲಿಗರಸಂಘದ ಗೌರವಾಧ್ಯಕ್ಷ ಆಲತ್ತೂರುಜಯರಾಂ, ಪ್ರಗತಿಪರಕೃಷಿಕ ಕರಿಯನಕಟ್ಟೆ ಚಿನ್ನಮುತ್ತು, ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ವಡಗೆರೆಕುಮಾರ್ ಅವರನ್ನು ಸನ್ಮಾನಿಸಲಾಯಿತು.
ರೋಟರಿಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ,ಕೆಎಸ್‌ಆರ್‌ಟಿಸಿ ಭದ್ರತೆ, ಜಾಗೃತ ಅಧಿಕಾರಿ ಎನ್.ಎಸ್.ಶಿವರಾಜೇಗೌಡ, ಅಖಿಲಕರ್ನಾಟಕ ಕನ್ನಡಮಹಾಸಭೆ ಪ್ರಧಾನ ಕಾರ್ಯದರ್ಶಿ ಚಾ.ವೆಂ.ರಾಜಗೋಪಾಲ್, ಜಿಲ್ಲಾಧ್ಯಕ್ಷ ಸಾಗರ್ ರಾವತ್, ಗೌರವಾಧ್ಯಕ್ಷ ಶಾ.ಮುರಳಿ, ಸಂಘಟನಾ ಕಾರ್ಯದರ್ಶಿ ಪಣ್ಯದಹುಂಡಿರಾಜು, ಅರುಣ್ ಕುಮಾರ್ ಗೌಡ, ನಿಜಧ್ವನಿಸೇನಾಸಮಿತಿಯ ಗೋವಿಂದರಾಜು, ಗಡಿನಾಡು ಕನ್ನಡ ರಕ್ಷಣಾವೇದಿಕೆ ಅಧ್ಯಕ್ಷ ಚಾ.ರ.ಕುಮಾರ್, ತಾಂಡವಮೂರ್ತಿ, ವೀರಭದ್ರ, ಚಾ.ಸಿ.ಸಿದ್ದರಾಜು, ದೊರೆ, ಸೂರಿ ಸೇರಿದಂತೆ ಇತರರು ಹಾಜರಿದ್ದರು.
