ಮೈಸೂರು,ಆ.೩:- ಸೈಕಲ್ ಪ್ಯೂರ್ ಅಗರಬತ್ತಿ ಪ್ರಾಯೋಜಕತ್ವದ ಮೈಸೂರು ವಾರಿಯರ್ಸ್ ಕ್ರಿಕೆಟ್ ತಂಡಕ್ಕೆ ಕರುಣ್ ನಾಯರ್ ಅವರನ್ನು ನಾಯಕರನ್ನಾಗಿ ಪ್ರಕಟಿಸಲಾಗಿದ್ದು, ಮಹಾರಾಜ ಟ್ರೋಫಿ ಟಿ೨೦ ಟೂರ್ನಮೆಂಟ್(ಈ ಹಿಂದೆ ಕರ್ನಾಟಕ ಪ್ರೀಮಿಯರ್ ಲೀಗ್)ನಲ್ಲಿ ಕರುಣ್ ಅವರು ಮೈಸೂರು ವಾರಿಯರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.ಆಯ್ಕೆ ಪ್ರಕ್ರಿಯೆ ನಂತರ ಮೈಸೂರು ವಾರಿಯರ್ಸ್ ಆಡಳಿತವು ಕರುಣ್ ನಾಯರ್ ಅವರನ್ನು ತಂಡದ ನಾಯಕರಾಗಿ ಪ್ರಸ್ತಾಪಿಸಿತ್ತು. ಜುಲೈ ೩೦, ೨೦೨೨ರಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ತಂಡದ ಆಯ್ಕೆ ಸಂದರ್ಭದಲ್ಲಿ ಈ ನಿರ್ಧಾರಕ್ಕೆ ಬಂದಿದೆ.

೩೦ ವರ್ಷ ವಯಸ್ಸಿನ ಅತ್ಯುತ್ತಮ ಬ್ಯಾಟ್ಸ್ ಮನ್ ಆದ ಕರುಣ್ ನಾಯರ್ ಅವರು ಜಿಂಬಾಹ್ವೆ  ವಿರುದ್ಧದ ನಿಗದಿತ ಓವರ್ಗಳ ಪಂದ್ಯಗಳ ಪ್ರವಾಸದ ಸಂದರ್ಭದಲ್ಲಿ ಅಂತಾರಾಷ್ಟ್ರೀಯವಾಗಿ ಪಾದಾರ್ಪಣೆ ಮಾಡುವುದರೊಂದಿಗೆ ತಮ್ಮ ಬ್ಯಾಟಿಂಗ್ ವೃತ್ತಿ ಜೀವನವನ್ನು ಆರಂಭಿಸಿದ್ದರು. ಅವರು ಅಲ್ಲಿ ಒಂದೆರಡು ಏಕದಿನ ಪಂದ್ಯಗಳಲ್ಲಿ ಆಡಿದ್ದರು. ವೀರೇಂದ್ರ ಸೆಹ್ವಾಗ್ ಅವರ ನಂತರ ಕರುಣ್ ನಾಯರ್ ಅವರು ಭಾರತದ ಪರ ಟ್ರಿಪಲ್ ಸೆಂಚುರಿ ಬಾರಿಸಿದ ಎರಡನೇ ಆಟಗಾರರಾಗಿ ಹೊರಹೊಮ್ಮಿದ್ದರು. ಅವರು ೨೦೧೬ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು.

ತಂಡದ ನಾಯಕನ ಕುರಿತು, ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕರಾದ ಅರ್ಜುನ್ ರಂಗ ಅವರು ಮಾತನಾಡಿ, ತಂಡದ ತರಬೇತಿಗೆ ಹಾಕುವ ಶ್ರಮದ ಫಲ ಪ್ರಮಾಣ ಅಪಾರವಾಗಿರುತ್ತದೆ. ಅವರು ತಮ್ಮ ದೈಹಿಕ ದೃಢತೆ ಮತ್ತು ಚುರುಕುತನವನ್ನು ಉಳಿಸಿಕೊಳ್ಳಬೇಕು. ಈ ನಾಯಕತ್ವ ನಾಯರ್ ಅವರಿಗೆ ಸವಾಲಿನ ಅವಕಾಶವಾಗಲಿದೆ. ಅವರ ಬದ್ಧತೆ ಮತ್ತು ಪ್ರಯತ್ನಗಳು ತಂಡಕ್ಕೆ ಮೌಲ್ಯವರ್ಧನೆ ನೀಡಲಿವೆ. ಅವರ ನಾಯಕತ್ವ ಪಾತ್ರ ಕ್ರೀಡೆಯಲ್ಲಿ ತಂಡದ ಸ್ಥಾನವನ್ನು ದೃಢಪಡಿಸಲಿದೆ. ಈ ವರ್ಷ ನಾವು ತಂಡದಲ್ಲಿ ಅಪಾರ ಭರವಸೆ ಹೊಂದಿದ್ದು, ಅವರ ನಾಯಕತ್ವ ತಂಡವನ್ನು ನೂತನ ಎತ್ತರಕ್ಕೆ ಒಯ್ಯಲಿದೆ” ಎಂದರು

ಮೈಸೂರು ವಾರಿಯರ್ಸ್ ತಂಡದ ನಾಯಕರಾದ ಕರುಣ್ ನಾಯರ್ ಅವರು ತಮ್ಮ ನಾಯಕತ್ವ ಕುರಿತು ಮಾತನಾಡಿ,ಈ ಜವಾಬ್ಧಾರಿಯನ್ನು ನಾನು ವಿನಮ್ರನಾಗಿ ಸ್ವೀಕರಿಸುತ್ತೇನೆ. ನಾನು ದೇಶಕ್ಕಾಗಿ ಆಡಿದ್ದೇನೆ. ಈಗ ಕೆಲವು ಉತ್ತಮ ಆಟಗಾರರನ್ನು ಪೋಷಿಸಲು ಮತ್ತು ತಂಡಕ್ಕೆ ನನ್ನ ಅನುಭವವನ್ನು ಧಾರೆ ಎರೆಯಲು ಸಮಯ ಬಂದಿದೆ. ಮೈಸೂರು ವಾರಿಯರ್ಸ್ ತಂಡಕ್ಕೆ ಇದು ನನ್ನ ಎರಡನೇ ವರ್ಷದ ನಾಯಕತ್ವವಾಗಿದ್ದು, ಎಲ್ಲರೂ ಹೆಮ್ಮೆ ಪಡುವಂತೆ ನಾವು ಪ್ರದರ್ಶನ ನೀಡುವ ಸಕಾರಾತ್ಮಕ ಮನೋಭಾವವನ್ನು ನಾನು ಹೊಂದಿದ್ದೇನೆ” ಎಂದರು.

ಮೈಸೂರು ವಾರಿಯರ್ಸ್ ತಂಡ ಇಂತಿದೆ ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಪವನ್ ದೇಶಪಾಂಡೆ, ವಿದ್ಯಾಧರ ಪಾಟೀಲ್, ನಿಹಾಲ್ ಉಲ್ಲಾಳ್, ಪ್ರತೀಕ್ ಜೈನ್, ಭರತ್ ಧುರಿ, ಚಿರಂಜೀವಿ, ಶುಭಾಂಗ ಹೆಗ್ಡೆ, ಲೋಚನ್ ಅಪ್ಪಣ್ಣ, ಶಿವರಾಜ್, ಮೋನಿಶ್ ರೆಡ್ಡಿ, ವರುಣ್ ರಾವ್, ರಾಹುಲ್ ಪ್ರಸನ್ನ, ನಿತಿನ್ ಬಿಲ್ಲೆ, ಆದಿತ್ಯ ಗೋಯಲ್, ಅಭಿಷೇಕ್ ಅಲವತ್, ಅರುಣ್ ಕೆ., ತುಷಾರ್ ಹೆಚ್. ಮತ್ತು ನಾಗ ಭರತ್.ಪಿ.ವಿ. ಶಶಿಕಾಂತ್ ಅವರನ್ನು ತಂಡದ ಮುಖ್ಯ ತರಬೇತುದಾರರಾಗಿ ನೇಮಕ ಮಾಡಲಾಗಿದೆ.ತಂಡದಲ್ಲಿ ಸಹಾಯಕ ತರಬೇತುದಾರರಾಗಿ ಕೆ.ಎಲ್. ಅಕ್ಷಯ್, ಆಯ್ಕೆದಾರರಾಗಿ ಕೆ.ಎಲ್ ಅಶ್ವತ್,ಫಿಜಿಯೋಥೆರಪಿಸ್ಟ್ ಆಗಿ ಟಿ. ಮಂಜುನಾಥ್, ಟ್ರೇನರ್ ಆಗಿ ಇರ್ಫಾನ್, ಉಲ್ಲಾ ಖಾನ್ ಮತ್ತು ವಿಡಿಯೋ ವಿಶ್ಲೇಷಕರಾಗಿ ಕಿರಣ್ ಕೆ. ಕಾರ್ಯ ನಿರ್ವಹಿಸಲಿದ್ದಾರೆ.