ಕಳೆದ ಸಂಚಿಕೆಯಲ್ಲಿ ವಿವರಿಸಿದ್ದ; ಬರಿಗೈಲಿ ಬೆಂಗಳೂರಿಗೆ ಬಂದು ಗಾಂಧಿನಗರ ಸೇರಿಕೊಂಡು ರಾಜ್(ಸಿನಿಮಾಗಳಿಂದ)ರಿಂದ ಉದ್ಧಾರವಾದ ಅಣ್ಣಾತೆ ಗುಂಪಿಗೆ ಜೈನ್,ಲಾಲ್,ಜಗತ್,ಉಲ್ಲಾ, ಮುಂತಾದ ಹತ್ತಾರು ಹಂಚಿಕೆದಾರ-ನಿರ್ಮಾಪಕರೂ ಸೇರಿಕೊಂಡರು?!ದಿ.೨೫.೬.೧೯೫೩ರಂದುಚಿ||ರಾ||ಮುತ್ತುರಾಜ ಸಾಲಿಗ್ರಾಮದ ಶ್ರೀಮತಿಲಕ್ಶ್ಮಮ್ಮ ಶ್ರೀಅಪ್ಪಾಜಿಗೌಡರ ಪುತ್ರಿಚಿ||ಸೌ||ಪಾರ್ವತಿಯನ್ನು ನಂಜನ ಗೂಡಲ್ಲಿ ಕೇವಲ ೪೫೦/-ರೂ.ಖರ್ಚಲ್ಲಿ ಮದುವೆಯಾದ ೧೦ವರ್ಷದ ನಂತರ ‘ಶಿವರಾತ್ರಿಮಹಾತ್ಮೆ’ ಚಿತ್ರೀಕರಣ ವೇಳೆ ಜನಿಸಿದ ಗಂಡು ಮಗುವಿಗೆ ಶಿವ(ಪುಟ್ಟಸ್ವಾಮಿ)ಎಂದು ನಾಮಕರಣ ಮಾಡಲಾಯ್ತು. ‘ಸತ್ಯಹರಿಶ್ಚಂದ್ರ’ ಶೂಟಿಂಗ್ ಸಮಯದಲ್ಲಿ ಜನಿಸಿದ ಲೋಹಿತಾಶ್ವ ಕಂದನು ಬಹುಬೇಗ ಅಸುನೀಗಿತು! ‘ಮಂತ್ರಾಲಯಮಹಾತ್ಮೆ’ ಚಿತ್ರೀಕರಣ ವೇಳೆ ಜನಿಸಿದ ಮಗನಿಗೆ ರಾಘವೇಂದ್ರ ಎಂದು ಕರೆದರು. ಪಾರ್ವತಿಕಲ್ಯಾಣ ಶೂಟಿಂಗ್ ಸಮಯದಲ್ಲಿ ಹುಟ್ಟಿದ ಮಗಳಿಗೆ ಲಕ್ಷ್ಮೀ ಎಂದು, ಜನ್ಮರಹಸ್ಯ ಷೆಡ್ಯೂಲ್‌ನಲ್ಲಿರುವಾಗ ಜನಿಸಿದ ಹೆಣ್ಣು ಮಗುವಿಗೆ ಪೂರ್ಣಿಮ ಎಂದು ಹೆಸರಿಡಲಾಯ್ತು. ಮೈಸೂರು ಅರಮನೆಯಲ್ಲಿ ಚಿತ್ರೀಕರಣಗೊಂಡ ಏಕೈಕ ಫ಼ಿಲಂಮಯೂರ ಚಿತ್ರದ ಸಂದರ್ಭದಲ್ಲಿ ಜನಿಸಿದ ಗಂಡು ಮಗುವಿಗೆ ಲೋಹಿತ್(೧೦ವರ್ಷದ)ನಂತರ ಪುನೀತ್ ಎಂದು ನಾಮಕರಣ ಮಾಡಲಾಯಿತು! ರಾಜ್ ಮದ್ರಾಸಿನ ಕೊಡಂಬಾಕ್ಕಂ-ಟ್ರಸ್ಟ್‌ಪುರಂ ನಿವಾಸಿಯಾದ್ದರಿಂದ ಮಕ್ಕಳ ವಿದ್ಯಾಭ್ಯಾಸವು ತಮಿಳು-ಇಂಗ್ಲಿಷ್ ಕಲಿಯುವುದರಿಂದ ಪ್ರಾರಂಭವಾಯ್ತು.  ಇವರ ಮತದಾರರ ಪಟ್ಟಿಯೂ ಅಲ್ಲಿನ ವಿಧಾನಸಭಾ ಕ್ಷೇತ್ರಕ್ಕೆ ಸೇರಿತ್ತು?! 

 ಮೈಸೂರಿನ ನಂಟು:-೨೧ ವರ್ಷ ಪರ್ಯಂತ ಪ್ರತಿಷ್ಠಿತ ಪ್ರೀಮಿಯರ್ ಸ್ಟುಡಿಯೋ ಮೂಲಕ ೬೭ ಚಿತ್ರಗಳು ತೆರೆಕಂಡವು. ರಾಜ್ ಇಳಿದುಕೊಳ್ಳುತ್ತಿದ್ದ ‘ದಾಸಪ್ರಕಾಶ್ ಹೊಟೇಲ್’ ಮತ್ತು ‘ಸುಜಾತ ಹೊಟೇಲ್’ ಮಾಲೀಕರು ರಾಜ್‌ಗೆಂದೇ ಮೀಸಲಿರಿಸಿದ್ದ ರೂಮನ್ನು ಬೇರೆ ಯಾರಿಗೂ ಯಾವಾಗಲೂ ನೀಡುತ್ತಿರಲಿಲ್ಲ. ಮೈಸೂರು-ಸುತ್ತಮುತ್ತಲ ಪ್ರದೇಶಗಳಲ್ಲಿ ಶೂಟಿಂಗ್ ಇರುವಾಗಲೆಲ್ಲ ನಂಜನಗೂಡು ಶ್ರೀಕಂಠೇಶ್ವರನ ಮತ್ತು ಚಾಮುಂಡಿಬೆಟ್ಟದ ಚಾಮುಂಡೇಶ್ವರಿಯ ದರ್ಶನ ತಪ್ಪದೆ ಮಾಡುತ್ತಿದ್ದರು. ಸರಳ ಸಜ್ಜನಿಕೆಯ ತುಂಬಿದಕೊಡ ರಾಜ್ ತಮ್ಮ ಸಹೋದ್ಯೋಗಿಯಾಗಿ ಅಶ್ವಥ್ ಮನೆಯ ಮಜ್ಜಿಗೆಹುಳಿ, ಸಂಪತ್ ಮನೆಯ ಪುಳಿಯೋಗರೆ, ಎಂ.ಪಿ.ಶಂಕರ್ ಮನೆಯ ಕಡ್ಲೆಹುಳಿ, ಅಂಬರೀಷ್ ಮನೆಯ ನಾಟಿಕೋಳಿ, ರಾಜ್‌ಸಂಘದ ರಾಮೇಗೌಡರ ಮನೆಯ ಮುದ್ದೆ ಬಸ್ಸಾರು ಊಟವನ್ನು ಮಿಸ್ ಮಾಡಿ ಕೊಂಡವರಲ್ಲ. ಹನುಮಂತುಹೋಟೆಲ್ ಪಲಾವ್‌ಚಾಪ್ಸ್‌ಕಾಲ್ಸೂಪ್, ಗುರುಸ್ವೀಟ್ ಮೈಸೂರ್‌ಪಾಕ್, ಮೈಲಾರಿಹೊಟೇಲ್ ಬೆಣ್ಣೆದೋಸೆ, ಇಂದ್ರಭವನ್ ಮಸಾಲೆದೋಸೆ+ಚೌಚೌಬಾತ್, ಮಧುನಿವಾಸ್ ರವಾದೋಸೆ+ಬಜ್ಜಿ, ವಾಹ್…!ಬಾಯಿ ಚಪ್ಪರಿಸಿಕೊಂಡು ಸವಿಯುತ್ತಿದ್ದರು! ಎಲ್ಲಕ್ಕಿಂತ ಮುಖ್ಯವಾಗಿ ಮೈಸೂರಿನ ಪುರಾತನ ದೇಗುಲಗಳಲ್ಲೊಂದಾದ ಸಯ್ಯಾಜಿರಾವ್‌ರಸ್ತೆ ರತನ್‌ಸಿಂಗ್‌ಬೀದಿ ೩ನೇ ಕ್ರಾಸ್‌ನಲ್ಲಿರುವ ‘ಸತ್ಯನಾರಾಯಣಸ್ವಾಮಿ’ ದೇವಸ್ಥಾನಕ್ಕೆ ಪ್ರಾತಃಕಾಲ ಗಂಟೆಯೊಳಗೆ ಭೇಟಿಯಿತ್ತು ಅರ್ಚಕ[ನಾಗಣ್ಣ]ರಿಂದ ಜ್ಯೋತಿಷ್ಯ[ಭವಿಷ್ಯ] ತಿಳಿಯುತ್ತಿದ್ದರು! ರಾಜ್ ಬರುತ್ತಾರೆಂಬ ವಿಷಯ ತಿಳಿದು ಇಡೀ ಬೀದಿಯನ್ನು ಗುಡಿಸಿ ತೊಳೆದು ರಂಗೋಲಿ ಇಟ್ಟು ಹೂವು-ಹಣ್ಣುಗಳಿಂದ ಸಿಂಗರಿಸಿ ಕಾಯುತ್ತಿದ್ದ ಪ್ರತಿಯೊಬ್ಬರನ್ನು ತುಂಬು ಹೃದಯದಿಂದ ಕೊಂಡಾಡುತ್ತಿದ್ದರು.  ಇಂಥ ವರನಟನ ಬಾಯಿಂದ ‘ಅಪ್ಪಾಜಿ’ ಎಂದು ಕರೆಸಿಕೊಳ್ಳುತ್ತಿದ್ದ ಏಕೈಕ ನಟ ‘ಸಂಪತ್’! ರಾಜ್‌ಕುಮಾರ್-ಪಾರ್ವತಮ್ಮ ಮದುವೆಯಾದನಂತರ ಜೊತೆಯಲ್ಲಿ ನೋಡಿದ ಪ್ರಪ್ರಥಮ ಫ಼ಿಲಂ ನ್ಯೂಅಪೇರಾ ಟಾಕೀಸಲ್ಲಿ ಪ್ರದರ್ಶನವಾಗುತ್ತಿದ್ದ ಬೇಡರಕಣ್ಣಪ್ಪ ಸಿನಿಮ ಎಂಬುದು ಮತ್ತೊಂದು ಆಶ್ಚರ್ಯಕರ ಸಂಗತಿ!

 ಮೊಟ್ಟಮೊದಲ ವಿದೇಶ ಪ್ರವಾಸದಲ್ಲೂ ಮೈಸೂರಿಗರ ಭೇಟಿ:- ೧೯೮೦ರ ಆಸುಪಾಸು ರಾಜ್‌ದಂಪತಿಯನ್ನು ಕೆನಡಾ ದೇಶದ ಟೊರಾಂಟೊ ಕನ್ನಡ ಸಂಘದವರು ಆಹ್ವಾನಿಸಿ ರಾಜ್‌ಕುಮಾರ್ ಮ್ಯುಸಿಕಲ್ ನೈಟ್ ಕಾರ್ಯಕ್ರಮ ಆಯೋಜಿಸಿ ಸಂಭ್ರಮಿಸಿದಾಗ ರಾಜ್‌ಕುಟುಂಬ ಉಳಿದುಕೊಂಡಿದ್ದು; ಮೈಸೂರು ಮೂಲದ ಟೊರ್‍ಯಾಂಟೊ ವಿಶ್ವವಿದ್ಯಾಲಯ ಸಂಶೋಧನಾ ಸಂಸ್ಥೆಯ ಪರಿಸರ ವಿಜ್ಞಾನಿ ಡಾ||ಹಾಲಪ್ಪಗೌಡರ ಮನೆಯಲ್ಲಿ. ಸಭೆ ಸಮಾರಂಭ ಸನ್ಮಾನ ಪ್ರವಾಸ ಮುಗಿಸಿ ಭಾರತಕ್ಕೆ ಹಿಂದಿರುಗುವ ಮುನ್ನ ರಾಜ್‌ದಂಪತಿಗಳು ರತ್ನಹಾಲಪ್ಪಗೌಡರನ್ನು ಮದ್ರಾಸಿನ ತಮ್ಮ ಮನೆಗೆ ಆಹ್ವಾನಿಸುತ್ತಾರೆ.  ೧೯೮೩ರಲ್ಲಿ ರತ್ನಹಾಲಪ್ಪಗೌಡ ಇಂಡಿಯಾಗೆ ಬಂದಿದ್ದಾಗ ಮದ್ರಾಸಿನ ರಾಜ್ ನಿವಾಸಕ್ಕೂ ಭೇಟಿ ನೀಡುತ್ತಾರೆ.  ಇವರ ಕಿರಿಯ ಮಗಳು ಚಿತ್ರಾ ಮತ್ತು ಪುನೀತ್ ಒಂದೇ ಓರಗೆಯವರಾಗಿದ್ದು ಒಟ್ಟಿಗೇ ಆಟ ಆಡಿಕೊಳ್ಳುತ್ತಿದ್ದರು ಎಂಬ ಸಂಗತಿಯನ್ನೂ ಶ್ರೀಮತಿ ರತ್ನಹಾಲಪ್ಪಗೌಡರು ವಾಟ್ಸಾಪ್ ಮೂಲಕ ನನಗೆ ಇತ್ತೀಚೆಗೆ ತಿಳಿಸಿದರು.

 ೩೩ ವರ್ಷಕಾಲ ರಣಜಿತ್ ಟಾಕೀಸಲ್ಲಿ ಗೇಟ್‌ಕೀಪರ್ ಆಗಿದ್ದ ಕೃಷ್ಣಣ್ಣ ರಾಜ್ ಬಗ್ಗೆ ತಿಳಿಸಿದ ಸತ್ಯ: ತಮಿಳು ಮಾತೃಭಾಷೆಯ ಈತ ಬಾಲ್ಯದಿಂದಲೂ ತಮಿಳು ಚಿತ್ರಗಳನ್ನು ನೋಡುತ್ತ ಸದಾ ತಮಿಳ್ ಚಿತ್ರಗಳ[ನಟರ]ನ್ನು ಮಾತ್ರ ಹೊಗಳುತ್ತಿದ್ದರು. ರಾಜ್ ಸೇರಿ ಕನ್ನಡದ ಯಾವ ನಟನನ್ನೂ ಇಷ್ಟ ಪಡದ ಈತ ನಮ್ ಶಿವಾಜಿಗಣೇಶನ್, ಎಂಜಿಆರ್, ಜೆಮಿನಿಗಣೇಶನ್ ಮುಂತಾದವರ ಮುಂದೆ ನಿಮ್ ರಾಜಕುಮಾರ್ ಮುಂತಾದವರನ್ನು ನಿವ್ವಾಳಿಸಬೇಕುಎಂದೆಲ್ಲ ಹಿಯಾಳಿಸುತ್ತಿದ್ದ ಅಪ್ಪಟ ತಮಿಳಿಗ ೧೯೭೧ರಿಂದ ನೂರಕ್ಕೆ ನೂರರಷ್ಟು ರಾಜ್ ಭಕ್ತನಾಗಿ ರಾಜ್ ಚಿತ್ರಗಳ ಕಟೌಟ್-ಪೋಸ್ಟರ್‌ಗೆ ಹೂವಿನ ಹಾರಹಾಕಿ ಪೂಜಿಸುವ ಮಟ್ಟ ತಲುಪಿದ್ದೆ ಪವಾಡ! ಹಾಗಾಗಲು ಕಾರಣವಾದ ಒಂದು ಅಪರೂಪದ ಪ್ರಸಂಗ; ಪಂಚಪ್ರಾಣದ ತನ್ನ ಏಕೈಕಪುತ್ರನ ಕಣ್ಣೀರಬೇಡಿಕೆಗೆ ಸೋತು ಕೇವಲ ೧೦ನಿಮಿಷಮಾತ್ರ ನೋಡುವುದಾಗಿ ನಿರ್ಧರಿಸಿ, ಪೂರ್ತಿ ಫ಼ಿಲಂ ನೋಡುವಂತೆ ಮಾಡಿದ ‘ಕಸ್ತೂರಿನಿವಾಸ’ ಅವನ ಜೀವಮಾನದ ಪ್ರಪ್ರಥಮ ಕನ್ನಡ ಚಿತ್ರವಾಗಿತ್ತು! ಬಗ್ಗೆ ಸ್ವಯಂ ಕೃಷ್ಣಣ್ಣ ಹೇಳಿದ ಸತ್ಯ ಹೀಗಿತ್ತು: ಇದೇ ಟಾಕೀಸಲ್ಲಿ ತೆರೆಕಂಡ ಮೂರೂ ಭಾಷೆಯ ಚಿತ್ರಗಳನ್ನು [೧೯೭೧ರಲ್ಲಿ ತೆರೆಕಂಡ ಕಸ್ತೂರಿನಿವಾಸ ಚಿತ್ರದ ರಿಮೇಕ್:-೧೯೭೪ರ ಹಿಂದಿಚಿತ್ರ ‘ಶಾಂದಾರ್’ ಮತ್ತು ೧೯೭೫ರ ತಮಿಳ್‌ಚಿತ್ರ ‘ಅವಂದಾನ್‌ಮನಿದನ್’] ನೋಡಿದಮೇಲೆ ನನಗನಿಸಿತು ನಡಿಗರ್‌ತಿಲಕಂ ಶಿವಾಜಿಗಣೇಶನಾಗಲಿ, ಗ್ರೇಟ್‌ಹೀರೊ ಸಂಜೀವ್‌ಕುಮಾರಾಗಲಿ, ದೇವ್ರಾಣೆಗೂ ರಾಜ್‌ಕುಮಾರ್ ಥರ ಆಕ್ಟ್ ಮಾಡಿಲ್ಲವೆಂದು; ಕಾರಣಕ್ಕೆ ನಾನು ರಾಜ್‌ಗೆ ಫ಼ಿದಾ ಆಗ್ಬಿಟ್ಟೆ.  ಇಷ್ಟುದಿನ ಯಾಕಾದ್ರೂ ರಾಜ ಕುಮಾರ್ ಫ಼ಿಲಂ ನೋಡ್ಲಿಲ್ಲ ನಾನು ಎಂದು ಬಹಳ ನೊಂದುಕೊಂಡರು.  ಆಗ, ನಾನೇ ಸಮಾಧಾನ ಪಡಿಸಬೇಕಾಯ್ತು!

 ಕಸ್ತೂರಿನಿವಾಸ ಚಿತ್ರದ ಬಗ್ಗೆ ಕೇವಲ ರಣಜಿತ್ ಟಾಕೀಸಿನ ಹಿರಿಯ ಉದ್ಯೋಗಿಯೊಬ್ಬರ ಅಭಿಪ್ರಾಯ ಮಾತ್ರವಲ್ಲ.  ಅಂದಿನ ಪ್ರತಿ ಭಾಷೆಯ ಪತ್ರಿಕೆ/ನಿಯತಕಾಲಿಕೆಗಳಲ್ಲಿ ರಾಜ್ ಅಭಿನಯವನ್ನು ಪ್ರಶಂಸಿಸಿ ಭಾರತದ ಅತ್ಯುತ್ತಮ ನಟನೆಂದು ವಿಮರ್ಶೆ ಬರೆದರು!  ವರನಟನ ಬಗ್ಗೆ ಇಂಥ ಇನ್ನಷ್ಟು ರೋಚಕ ಮಾಹಿತಿ ಮುಂದಿನವಾರದ ಚಂದನವನ ಚರಿತ್ರೆಯಲ್ಲಿ ಮುಂದುವರಿಯಲಿದೆ…..!

ಕುಮಾರಕವಿ ನಟರಾಜ್ [೯೦೩೬೯೭೬೪೭೧]

  ಬೆಂಗಳೂರು ೫೬೦೦೭೨