ಚಾಮರಾಜನಗರ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಕ್ವಿಟ್ ಇಂಡಿಯಾ ಚಳವಳಿ ಸ್ಮರಣಾರ್ಥವಾಗಿ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಜಿಲ್ಲಾಡಳಿತದ ವತಿಯಿಂದ ಇಂದು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾಧಿಕಾರಿಯವರಾದ ಚಾರುಲತಾ ಸೋಮಲ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಕೆ.ಎಂ. ಗಾಯಿತ್ರಿ ಅವರು ನಗರದ ಇಬ್ಬರು ಹಿರಿಯ ಸ್ವಾತಂತ್ರ ಹೋರಾಟಗಾರರ ಮನೆಗೆ ತೆರಳಿ ಶಾಲು ಹೊದಿಸಿ ಫಲ ತಾಂಬೂಲ ಹಾಗೂ ತ್ರಿವರ್ಣ ಧ್ವಜ ನೀಡಿ ಗೌರವಿಸಿದರು.
ಚಾಮರಾಜನಗರ ಪಟ್ಟಣದಲ್ಲಿ ವಾಸವಿರುವ ಸ್ವಾತಂತ್ರ್ಯ ಹೋರಾಟಗಾರರಾದ ಲಲಿತಾ ಜಿ. ಟಾಗೆಟ್ ಹಾಗೂ ಕರಿನಂಜನಪುರದಲ್ಲಿರುವ ಕೆ.ಎಂ ತೋಟಪ್ಪ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿದರು.
ಸ್ವಾತಂತ್ರ ಚಳವಳಿಯಲ್ಲಿ ಪಾಲ್ಗೊಂಡ ಅನುಭವ ಮತ್ತು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜನರ ಪ್ರತಿಕ್ರಿಯೆ, ಸ್ವಾತಂತ್ರ್ಯ ಸಂಗ್ರಾಮದ ಇನ್ನಿತರ ನೆನಪು ಮತ್ತು ಅನುಭವಗಳನ್ನು ಅಧಿಕಾರಿಗಳೊಂದಿಗೆ ಸ್ವಾತಂತ್ರ್ಯ ಹೋರಾಟಗಾರರು ಈ ಸಂದರ್ಭದಲ್ಲಿ ಹಂಚಿಕೊಂಡರು. ವಿದ್ಯಾರ್ಥಿ ಜೀವನದಲ್ಲೇ ಸ್ವಾತಂತ್ರ್ಯ ಚಳವಳಿಗೆ ತಾವು ಧುಮುಕಿದ ಬಗ್ಗೆ ವಿವರಿಸಿದರು. ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಮಾತನಾಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಜಿಲ್ಲೆಯ ಹೋರಾಟಗಾರರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ನಿಮ್ಮ ಅನುಭವ ಆದರ್ಶಗಳು ಎಲ್ಲರಿಗೂ ಮಾದರಿಯಾಗಲಿ ಎಂದರು.
ತಹಶೀಲ್ದಾರ್ ಬಸವರಾಜು, ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.