
ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅಗ್ನಿಶಾಮಕದಳ, ರೆಡ್ ಕ್ರಾಸ್ ಸೊಸೈಟಿ, ಗೃಹರಕ್ಷಕ ದಳ ಸಹಯೋಗದೊಂದಿಗೆ ಕೊಳ್ಳೇಗಾಲ ತಾಲೂಕಿನ ದಾಸನಪುರದ ಕಾವೇರಿ ನದಿ ದಂಡೆಯಲ್ಲಿ ಇಂದು ಪ್ರವಾಹ ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಜನರ ರಕ್ಷಣೆಗಾಗಿ ನಡೆಸಲಾಗುವ ಕಾರ್ಯಾಚರಣೆಯ ಅಣಕು ಪ್ರದರ್ಶನ ಗಮನಸೆಳೆಯಿತು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ ಅವರ ಸಮ್ಮುಖದಲ್ಲಿ ಅಗ್ನಿಶಾಮಕದಳ, ಪೊಲೀಸ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೆಡ್‌ಕ್ರಾಸ್ ಸೊಸೈಟಿ, ಅಧಿಕಾರಿ ಸಿಬ್ಬಂದಿ ಪ್ರವಾಹ ಸಂದರ್ಭದಲ್ಲಿ ಎದುರಾಗುವ ವಿಪತ್ತು, ಅಪಾಯಕ್ಕೆ ಸಿಲುಕಿದವರ ರಕ್ಷಣೆ ಮಾಡುವ ಕಾರ್ಯಾಚರಣೆಯ ಅಣಕು ಪ್ರದರ್ಶನವನ್ನು ಯಶಸ್ವಿಯಾಗಿ ನಿರ್ವಹಿಸಿದರು.
ಜಾನುವಾರು ಮೇಯಿಸಲು, ಮೀನು ಹಿಡಿಯಲು ಹೋದ ಸಂದರ್ಭದಲ್ಲಿ ತುರ್ತು ಪ್ರವಾಹದಿಂದ ನದಿಯಲ್ಲಿ ಸಿಲುಕಿಕೊಂಡ ವೇಳೆ ಸಹಾಯಕ್ಕಾಗಿ ಕೋರುವವರ ರಕ್ಷಣೆಗಾಗಿ ಧಾವಿಸಿ ಕಾರ್ಯಾಚರಣೆ ನಡೆಸುವ ಕುರಿತು ನಡೆದ ಪ್ರಾತ್ಯಕ್ಷಿಕೆ ಪ್ರದರ್ಶನ ವಿಶೇಷವಾಗಿ ಎಲ್ಲರ ಗಮನಸೆಳೆಯಿತು.
ಪ್ರವಾಹದಲ್ಲಿ ನದಿಗೆ ವ್ಯಕ್ತಿಯೋರ್ವ ಕೊಚ್ಚಿಕೊಂಡು ಮುಳುಗುತ್ತಿರುವ ಸಮಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ಒ.ಬಿ.ಎಂ ದೋಣಿಯಲ್ಲಿ ರಕ್ಷಣೆ ಮಾಡುವ ಕಾರ್ಯಾಚರಣೆ ಎಲ್ಲರನ್ನು ಚಕಿತಗೊಳಿಸಿತು.
ನದಿಯಲ್ಲಿ ಅಪಾಯಕ್ಕೆ ಸಿಲುಕಿ ನೀರು ಕುಡಿದು ಅರೆ ಪ್ರಜ್ಞಾವಸ್ಥೆಯಲ್ಲಿರುವ ವ್ಯಕ್ತಿಗೆ ನೀಡಲಾಗುವ ಪ್ರಥಮ ಚಿಕಿತ್ಸೆ ಹಾಗೂ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಕರೆದೊಯ್ಯುವ ಕುರಿತ ಅಣಕು ಪ್ರದರ್ಶನ ನೈಜವಾಗಿ ಮೂಡಿಬಂದಿತು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ನವೀನ್ ಕುಮಾರ್, ರೆಡ್‌ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಡಾ. ಮಹೇಶ್ ಅವರು ಜೀವರಕ್ಷಕ ಕವಚ ಧರಿಸಿ ದೋಣಿಯಲ್ಲಿ ಕುಳಿತು ಅಣಕು ಕಾರ್ಯಾಚರಣೆ ವೀಕ್ಷಿಸಿದರು.
ಇದೇ ವೇಳೆ ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಬಳಸಲಾಗುವ ಸಾಮಗ್ರಿಗಳು, ಕೌಶಲ ಉಪಕರಣಗಳ ಪ್ರದರ್ಶನ, ಅದರ ಉಪಯೋಗ ಕುರಿತು ತಿಳಿವಳಿಕೆ ನೀಡಲಾಯಿತು. ಇದಕ್ಕೂ ಮೊದಲು ವಿಪತ್ತು ನಿರ್ವಹಣೆಯ ಅಣಕು ಕಾರ್ಯಾಚರಣೆಯ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ನದಿ ದಂಡೆಯಲ್ಲಿ ಗಿಡನೆಡುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಪ್ರವಾಹ ಉಂಟಾದ ಸಂದರ್ಭದಲ್ಲಿ ಎದುರಾಗಬಹುದಾದ ಎಲ್ಲಾ ಪರಿಹಾರ ಕಾರ್ಯಾಚರಣೆಗೆ ಸನ್ನದ್ದರಾಗಿರಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗುವ ವಿವಿಧ ಇಲಾಖೆಗಳು ತರಬೇತಿ ಪಡೆದುಕೊಂಡಿವೆ. ಅಪಾಯದ ಸನ್ನಿವೇಶದಲ್ಲಿ ಸ್ಪಂದಿಸುವ ಸಂಬಂಧ ಜಾಗೃತಿ ಮೂಡಿಸಲು ಹಾಗೂ ಸಜ್ಜಾಗಿರಲು ಪೂರ್ವ ಸಿದ್ದತೆಯ ಅಣಕು ಕಾರ್ಯಾಚರಣೆ ಅಗತ್ಯವಾಗಿದೆ ಎಂದರು. ಉಪವಿಭಾಗಾಧಿಕಾರಿ ಗೀತಾ, ತಹಶೀಲ್ದಾರ್ ಮಂಜುಳ, ಗೃಹರಕ್ಷಕದಳದ ಜಿಲ್ಲಾ ಕಮಾಡೆಂಟ್ ಬಿ.ಎಸ್. ಬಸವರಾಜು, ತಾಲೂಕು ಆರೋಗ್ಯ ಅಧಿಕಾರಿ ಡಾ. ಗೋಪಾಲ್, ಇನ್ನಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
